ನಿದ್ದೆ ಎಂದರೆ ಮೈ-ಮೆದುಳಿಗೆಲ್ಲ (International Yoga day 2024) ಒಳ್ಳೆಯ ವಿಶ್ರಾಂತಿ ದೊರೆತಂತೆ. ಆದರೆ ಯೋಗ ನಿದ್ರೆ ಇದಕ್ಕಿಂತ ಸ್ವಲ್ಪ ಭಿನ್ನ. ಮೈಮರೆತು ನಿದ್ದೆ ಮಾಡದೆಯೇ, ಮೈ-ಮನಗಳಿಗೆ ಆಳವಾದ ವಿಶ್ರಾಂತಿಯನ್ನು ನೀಡುವಂಥ ಕ್ರಮವಿದು. ನರಗಳಿಗೆಲ್ಲ ಪುನಶ್ಚೇತನ ನೀಡಿ, ಚೈತನ್ಯವನ್ನು ಹೆಚ್ಚಿಸುವ ಸಾಮರ್ಥ್ಯ ಯೋಗನಿದ್ರೆಗಿದೆ ಎನ್ನುವುದು ವೈಜ್ಞಾನಿಕ ಪ್ರಯೋಗಗಳಿಂದ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ, ಎಚ್ಚರ ಇದ್ದಂತೆಯೇ ನಿದ್ದೆಗೆ ಜಾರುವ ಇದೆಂಥ ಯೋಗ ಎಂಬುದನ್ನು ಅರ್ಥ ಮಾಡಿಕೊಳ್ಳೋಣ. ದೆಹೆಲಿಯ ಐಐಟಿ, ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆ ಸಹಿತ ಕೆಲವು ವೈದ್ಯಕೀಯ ಸಂಸ್ಥೆಗಳು ಯೋಗ ನಿದ್ರೆಯಿಂದ ಮೆದುಳಿನ ಮೇಲಾಗುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಿವೆ. ಈ ಅಧ್ಯಯನಗಳ ಪ್ರಕಾರ, ಯೋಗನಿದ್ರೆಯನ್ನು ಸರಿಯಾದ ರೀತಿಯಲ್ಲಿ ಅಭ್ಯಾಸ ಮಾಡುವುದರಿಂದ ಮೆದುಳು ಗಾಢವಾದ ವಿಶ್ರಾಂತಿಗೆ ಜಾರುತ್ತದೆ ಮತ್ತು ಯೋಗನಿದ್ರೆಯ ನಂತರ, ಪ್ರಖರವಾದ ಜಾಗೃತ ಸ್ಥಿತಿಯಲ್ಲಿ ಇರುತ್ತದೆ. “ಭಾವನೆಗಳನ್ನು ಸಂಸ್ಕರಿಸುವ ಮೆದುಳಿನ ಭಾಗವೇ ಜಾಗೃತಗೊಳ್ಳುವುದನ್ನು ಯೋಗನಿದ್ರೆ ಮಾಡುವಾಗ ಗುರುತಿಸಲಾಗಿದೆ. ಈ ನಿಟ್ಟಿನಲ್ಲಿ ಇಡೀ ಅಧ್ಯಯನ ಕುತೂಹಲ ಕೆರಳಿಸಿದೆ” ಎನ್ನುತ್ತಾರೆ ಅಧ್ಯಯನಕಾರರು. ಕೇವಲ ಇದೊಂದೇ ಅಲ್ಲ, ಈವರೆಗೆ ನಡೆಸಲಾದ ಬಹಳಷ್ಟು ವೈಜ್ಞಾನಿಕ ಅಧ್ಯಯನಗಳು ಯೋಗನಿದ್ರೆಯು ಮೆದುಳಿನ ಮೇಲೆ, ಭಾವನಾತ್ಮಕ ಆರೋಗ್ಯದ ಮೇಲೆ ಹಾಗೂ ಈ ಮೂಲಕ ದೇಹಾರೋಗ್ಯದ ಮೇಲೆ ಬೀರುವ ಧನಾತ್ಮಕ ಪರಿಣಾಮಗಳನ್ನು ಸ್ಪಷ್ಟವಾಗಿ ಗುರುತಿಸಿವೆ.
ಏನಿದು ಯೋಗನಿದ್ರೆ?
ಯೋಗನಿದ್ರೆ ಎಂದರೆ ನಿದ್ರೆ ಹಾಗೂ ಎಚ್ಚರಗಳ ನಡುವಿನ ಒಂದು ಸ್ಥಿತಿ. ಅಂದರೆ ಜಾಗೃತ ಕನಸಿನಂತೆ ಎಂದು ಭಾವಿಸಬೇಡಿ, ಹಾಗಲ್ಲ. ದೇಹ ಮತ್ತು ಮನಸ್ಸಿಗೆ ನಮ್ಮೊಳಗಿನದೇ ಪ್ರಜ್ಞೆಯೊಂದು ವಿಶ್ರಾಂತಿಯನ್ನು ಒದಗಿಸುತ್ತದೆ. ಸುಖನಿದ್ರೆಯ ಅನುಭವವನ್ನು ನೀಡಿದರೂ, ನಿದ್ರೆಗೆ ಜಾರಿರುವುದಿಲ್ಲ. ಪ್ರಪಂಚದ ವ್ಯವಹಾರಗಳಿಂದ ದೂರವಾಗಿ, ಮಾನಸಿಕ ಗೋಜಲುಗಳೆಲ್ಲ ಮಾಯವಾಗಿ, ಸುಪ್ತ ಚೈತನ್ಯವೊಂದು ಎಚ್ಚರಗೊಳ್ಳುವ ಸ್ಥಿತಿಯಿದು. ಅಭ್ಯಾಸದ ಮೂಲಕ ಈ ಅಂಶಗಳು ನಮ್ಮ ಅರಿವಿಗೆ ಬರುವುದಕ್ಕೆ ಸಾಧ್ಯ.
ಯೋಗನಿದ್ರೆಯ ಬಗ್ಗೆ ವೈಜ್ಞಾನಿಕ ಅಧ್ಯಯನಗಳು ಹೇಳುವುದು ಹೀಗಾದರೆ, ಪ್ರಾಚೀನ ಯೋಗ ಗ್ರಂಥಗಳು ಹೇಳುವುದು ಬೇರೆ. ಯೋಗನಿದ್ರೆಯನ್ನು ನಿಯಮಿತವಾಗಿ ಮಾಡುವುದರಿಂದ, ನಮ್ಮ ಸುಪ್ತ ಮನದಲ್ಲಿ ಹುದುಗಿ ಹೋದ ವಿಷಯಗಳನ್ನು ಮೇಲೆತ್ತಿ ತಂದು, ಅದರಲ್ಲಿ ಬೇಕಾದ್ದನ್ನು ಇರಿಸಿಕೊಂಡು ಬೇಡದ್ದನ್ನು ಹೊರಗೆಸೆಯಲು ಸಾಧ್ಯವಿದೆ. ಈ ಮೂಲಕ ಗಾಢವಾದ ಚಿಕಿತ್ಸಕ ಗುಣವನ್ನಿದು ಹೊಂದಿದೆ. ನಿದ್ರೆಗೆ ಜಾರದೆಯೇ ಗಾಢವಾದ ವಿಶ್ರಾಂತಿಗೆ ಜಾರುವುದು ಅಭ್ಯಾಸದಿಂದಲೇ ಸಿದ್ಧಿಸಬೇಕು. ಆದರೆ ಸೂಕ್ತ ಮಾರ್ಗದರ್ಶನದಿಂದ ಇದನ್ನು ಸುಲಭವಾಗಿಯೇ ಅಭ್ಯಾಸ ಮಾಡಬಹುದು.
ಇದನ್ನೂ ಓದಿ: International Yoga Day 2024: ಯೋಗ ಮಾಡುವ ಮ್ಯಾಟ್ ಹೇಗಿದ್ದರೆ ಅನುಕೂಲ?
ಹೇಗೆ ನಡೆಯಿತು?
ಈ ಅಧ್ಯಯನಕ್ಕಾಗಿ, ಎರಡು ಪ್ರತ್ಯೇಕ ಗುಂಪುಗಳನ್ನು ಇರಿಸಿಕೊಳ್ಳಲಾಗಿತ್ತು. ಒಂದು ಗುಂಪಿನಲ್ಲಿ ಧ್ಯಾನ ಮತ್ತು ಯೋಗನಿದ್ರೆಯಂಥ ಕ್ರಮಗಳ ಅಭ್ಯಾಸವೇ ಇಲ್ಲದವರಿದ್ದರು. ಇನ್ನೊಂದು ಗುಂಪಿನಲ್ಲಿ ಧ್ಯಾನ ಮತ್ತು ಯೋಗಾಭ್ಯಾಸದಲ್ಲಿ ಸುಮಾರು 3000 ತಾಸುಗಳಷ್ಟು ಸರಾಸರಿ ಅನುಭವ ಹೊಂದಿದವರಿದ್ದರು. ಇವರುಗಳ ಮೆದುಳು ಮತ್ತು ನರಮಂಡಲಗಳನ್ನು ಅಧ್ಯಯನ ನಡೆಸಿದಾಗ, ಯೋಗನಿದ್ರೆಯ ಅಭ್ಯಾಸದಿಂದ ದೇಹ ಮತ್ತು ಮೆದುಳಿನ ಮೇಲಾಗುವ ಪೂರಕ ಪರಿಣಾಮಗಳು ಸ್ಪಷ್ಟವಾದವು. ಯೋಗನಿದ್ರೆಯನ್ನು ಹೆಚ್ಚು ನಿಯಮಿತವಾಗಿ ಮತ್ತು ದೀರ್ಘವಾಗಿ ಅಭ್ಯಾಸ ಮಾಡುವವರಲ್ಲಿ, ಮೆದುಳಿನ ಹಿನ್ನೆಲೆಯ ಚಟುವಟಿಕೆಗಳು ಅಂದರೆ ಬೇಡದ ಯೋಚನೆಗಳು, ಚಿಂತೆಯ ಗೋಜಲುಗಳು- ಇಂಥವೆಲ್ಲ ಕಡಿಮೆಯಿದ್ದವು. ಮಾತ್ರವಲ್ಲ, ಮೆದುಳಿನೊಳಗೆ ಒಂದಕ್ಕೊಂದು ಭಾಗಗಳ ಸಂವಹನ ಉಳಿದವರಿಗಿಂತ ಚೆನ್ನಾಗಿತ್ತು.
ಯೋಗ ನಿದ್ರೆಗಾಗಿ ಈ ಎರಡೂ ಗುಂಪುಗಳ ಸದಸ್ಯರಿಗೆ ನಿರ್ದೇಶಿತ ಧ್ಯಾನ ಅಥವಾ ಯೋಗನಿದ್ರೆಯ ಆಡಿಯೊಗಳನ್ನು ಕೇಳಿಸಲಾಗುತ್ತಿತ್ತು. ಇವೆಲ್ಲ ಅಭ್ಯಾಸವಿಲ್ಲದ ಗುಂಪು ಕ್ರಮೇಣ ಇದಕ್ಕೆ ಹೊಂದಿಕೊಂಡು, ಕೆಲವು ಬದಲಾವಣೆಗಳಿಗೆ ಸ್ಪಂದಿಸುತಿತ್ತು. ಆದರೆ ಈ ಎರಡೂ ಗುಂಪುಗಳಲ್ಲಿ ಭಾಷೆ, ಸಂವಹನ ಮತ್ತು ಭಾವನೆಗಳಿಗೆ ಸಂಬಂಧಿಸಿದ ಮೆದುಳಿನ ಭಾಗಗಳು ಯೋಗನಿದ್ರೆಯ ಸಮಯದಲ್ಲಿ ಹೆಚ್ಚು ಚಟುವಟಿಕೆಯಿಂದ ಇದ್ದಿದ್ದನ್ನು ಅಧ್ಯಯನ ದಾಖಲಿಸಿದೆ.