ಮಕ್ಕಳು (International Yoga Day 2024) ಯೋಗಾಭ್ಯಾಸದಲ್ಲಿ (Benefits of Yoga for Kids) ತೊಡಗುವುದರಿಂದ ಬಹಳಷ್ಟು ರೀತಿಯ ಲಾಭಗಳಿವೆ. ದೈಹಿಕ ಆರೋಗ್ಯ ಮತ್ತು ಮಾನಸಿಕ ದೃಢತೆಯನ್ನು ಮಕ್ಕಳು ಸಣ್ಣ ಪ್ರಾಯದಲ್ಲೇ ಹೊಂದುವುದಕ್ಕೆ ಸಾಧ್ಯವಿದೆ. ಇಂಥ ಅಭ್ಯಾಸಗಳನ್ನು ಒಮ್ಮೆ ಮಕ್ಕಳು ಆರಂಭಿಸಿದರೆ ಶಿಸ್ತು, ಆರೋಗ್ಯ, ಆತ್ಮವಿಶ್ವಾಸ ಮುಂತಾದ ಧನಾತ್ಮಕ ಅಂಶಗಳನ್ನು ಮೈಗೂಡಿಸಿಕೊಳ್ಳುತ್ತಾರೆ. ಯೋಗ ಮಾಡುವುದಕ್ಕೆ ವಯಸ್ಸಿನ ಮಿತಿಯಿಲ್ಲ ಎಂಬ ಮಾತಿದೆ. 8-80 ವರ್ಷ ವಯಸ್ಸಿನವರು ಇದನ್ನು ಅಭ್ಯಾಸ ಮಾಡಬಹುದು ಎನ್ನುತ್ತಾರೆ ಯೋಗ ತಜ್ಞರು. ಹಾಗಾಗಿ ಪ್ರಾಥಮಿಕ ಶಾಲೆಯ ದಿನಗಳಲ್ಲೇ ಪುಟಾಣಿಗಳಿಗೆ ಯೋಗಾಭ್ಯಾಸ ಪ್ರಾರಂಭಿಸಬಹುದು. ಎಲ್ಲ ಆಸನಗಳನ್ನೂ ಮಕ್ಕಳು ಮಾಡುವುದು ಆಗದೆ ಇರಬಹುದು. ಆದರೆ ಯೋಗಾಭ್ಯಾಸದ ಆರಂಭದ ದಿನಗಳಿಗೆ ಸೂಕ್ತವಾದಂಥ ಆಸನಗಳು ಬಹಳಷ್ಟಿವೆ. ಎಳವೆಯಲ್ಲೇ ಇದನ್ನು ಪ್ರಾರಂಭಿಸಿದರೆ, ಬೆಳೆಯುತ್ತಾ ಈ ಅಭ್ಯಾಸವನ್ನು ಸರಿಯಾದ ರೀತಿಯಲ್ಲಿ ಮೈಗೂಡಿಸಿಕೊಳ್ಳಬಹುದು.
ಲಾಭಗಳೇನು?
ಮಕ್ಕಳು ಯೋಗಾಭ್ಯಾಸದಲ್ಲಿ ತೊಡಗುವುದರಿಂದ ಬಹಳಷ್ಟು ರೀತಿಯ ಲಾಭಗಳಿವೆ. ದೈಹಿಕ ಆರೋಗ್ಯ ಮತ್ತು ಮಾನಸಿಕ ದೃಢತೆಯನ್ನು ಮಕ್ಕಳು ಸಣ್ಣ ಪ್ರಾಯದಲ್ಲೇ ಹೊಂದುವುದಕ್ಕೆ ಸಾಧ್ಯವಿದೆ. ಸ್ಕ್ರೀನ್ ಟೈಮ್, ಗುಜರಿ ತಿನಿಸುಗಳು ಮುಂತಾದವುಗಳ ಕುರಿತಾಗಿ ಅತಿ ಬೇಗನೇ ಒಲವು ಬೆಳೆಸಿಕೊಳ್ಳುತ್ತಾರೆ ಈಗಿನ ಮಕ್ಕಳು. ಒಳ್ಳೆಯ ಅಭ್ಯಾಸಗಳನ್ನು ಮಾಡಿಸಲು ಪಾಲಕರು ಒದ್ದಾಡಿದರೂ, ಮಕ್ಕಳು ಕಿವಿಗೆ ಹಾಕಿಕೊಳ್ಳುವುದಿಲ್ಲ. ಆದರೆ ಯೋಗಾಭ್ಯಾಸದಂಥವು ಒಮ್ಮೆ ಕೈ ಹಿಡಿದರೆ, ಶಿಸ್ತು, ಆರೋಗ್ಯ, ಆತ್ಮವಿಶ್ವಾಸ ಮುಂತಾದ ಧನಾತ್ಮಕ ಅಂಶಗಳನ್ನು ಮಕ್ಕಳು ಮೈಗೂಡಿಸಿಕೊಳ್ಳುತ್ತಾರೆ. ಗಿಡವನ್ನು ತಿದ್ದದಿದ್ದರೆ, ಮರವನ್ನು ತಿದ್ದುವುದಕ್ಕೆ ಸಾಧ್ಯವೇ? ಮಕ್ಕಳ ಆರೋಗ್ಯಕ್ಕಾಗುವ ಲಾಭಗಳು ಇಂತಿವೆ-
- ಮಕ್ಕಳಲ್ಲಿ ದೈಹಿಕ ಶಕ್ತಿ, ಸಮನ್ವಯತೆ ಮತ್ತು ನಮ್ಯತೆಯನ್ನು ಹೆಚ್ಚಿಸುತ್ತದೆ.
- ದೇಹದ ಭಂಗಿಗಳನ್ನು ಸರಿಪಡಿಸುತ್ತದೆ. ಕುತ್ತಿಗೆ, ಬೆನ್ನು ಮುಂತಾದ ಅತಿಯಾಗಿ ಹಾಳಾಗುವ ಅಂಗಭಂಗಿಗಳನ್ನು ತಿದ್ದುವುದಕ್ಕೆ ಅನುಕೂಲ.
- ಮಾನಸಿನ ದೃಢತೆಯನ್ನು ಹೆಚ್ಚಿಸಿ, ಏಕಾಗ್ರತೆಯನ್ನು ವೃದ್ಧಿಸುತ್ತದೆ.
- ಬೌದ್ಧಿಕ ಬೆಳವಣಿಗೆಗೆ ಇಂಥ ವ್ಯಾಯಾಮಗಳು ಪ್ರೋತ್ಸಾಹ ನೀಡುತ್ತವೆ.
- ಮೆದುಳಿನ ಎಡ ಮತ್ತು ಬಲಭಾಗಗಳನ್ನು ಸಮನ್ವಯಗೊಳಿಸುವುದಕ್ಕೆ ಕೆಲವು ಸಂಕೀರ್ಣ ಯೋಗಾಸನಗಳು ಉಪಯುಕ್ತವಾಗಿವೆ.
- ದೀರ್ಘ ಉಸಿರಾಟ ಮತ್ತು ವಿಶ್ರಾಂತಿಯಂಥವು ಮಕ್ಕಳ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿ, ಪರೀಕ್ಷೆಯ ದಿನಗಳನ್ನು ವಿಶ್ವಾಸದಿಂದ ಎದುರಿಸಲು ನೆರವಾಗುತ್ತವೆ.
ಮಕ್ಕಳಿಗೆ ಆರಂಭ ಮಾಡುವುದಕ್ಕೆ ಕೆಲವು ಸರಳವಾದ ಆಸನಗಳು ಇಲ್ಲಿವೆ:
ತಾಡಾಸನ
ಕೈಗಳನ್ನು ಮೇಲೆತ್ತಿ ಇಡೀ ಶರೀರವನ್ನು ಮೇಲ್ಮುಖವಾಗಿ ಹಿಗ್ಗಿಸುವಂಥ ಆಸನವಿದು. ಇದರಿಂದ ಮಕ್ಕಳ ಶರೀರದ ನಮ್ಯತೆ, ಸಮತೋಲನ ಮತ್ತು ಭಂಗಿ ಸುಧಾರಿಸುತ್ತದೆ.
ಧನುರಾಸನ
ಈ ಆಸನ ಮಾಡುವ ಲಾಭಗಳು ಬಹಳಷ್ಟಿವೆ. ದೇಹದ ಚಯಾಪಚಯವನ್ನು ಹೆಚ್ಚಿಸಿ, ಹೊಟ್ಟೆ ಮತ್ತು ತೊಡೆಗಳು ಬೊಜ್ಜು ನಿವಾರಿಸಿ, ಜೀರ್ಣಾಂಗಗಳ ಆರೋಗ್ಯ ಸುಧಾರಿಸುತ್ತದೆ. ಮೊದಲಿಗೆ, ಮುಖ ಅಡಿಯಾಗುವಂತೆ ಮಲಗಿ, ಕೈಕಾಲುಗಳನ್ನು ನೇರವಾಗಿ ಚಾಚಬೇಕು. ಕಾಲು ಮಡಿಸಿ, ಗಜ್ಜೆ ಹಾಕುವ ಭಾಗವನ್ನು ಕೈಗಳಿಂದ ಹಿಡಿಯಬೇಕು. ಕಾಲುಗಳನ್ನು ದೇಹದ ಅಗಲಕ್ಕಿಂತ ಹೆಚ್ಚು ಅಗಲ ಇರಿಸುವಂತಿಲ್ಲ. ಈಗ ಕೈಗಳಿಂದ ಕಾಲೆಳೆಯುತ್ತಾ, ಕಾಲುಗಳಿಂದ ಕೈ ಎಳೆಯುತ್ತಾ ಎರಡೂ ಕಾಲುಗಳನ್ನು ಮತ್ತು ಮುಖವನ್ನು ಮೇಲಕ್ಕೆತ್ತಬೇಕು. ನೋಡುವುದಕ್ಕೆ ಬಿಲ್ಲಿನಂತೆ ಬಾಗಿರುವಂತೆ ಕಾಣುತ್ತದೆ ದೇಹ.
ವಜ್ರಾಸನ
ಈಗಿನ ಬಹುಪಾಲು ಮಕ್ಕಳಿಗೆ ನೆಲದ ಮೇಲೆ ಕೂರುವ ಅಭ್ಯಾಸವೇ ಇರುವುದಿಲ್ಲ. ಮಂಡಿಗಳೆರಡನ್ನೂ ಮಡಿಸಿ, ಕಾಲುಗಳ ಮೇಲೆಯೇ ಕುಳಿತುಕೊಳ್ಳುವ ಆಸನವಿದು. ಇದು ಮಂಡಿಗಳನ್ನು ಬಲಪಡಿಸಿ, ಜೀರ್ಣಾಂಗಗಳ ಕ್ಷಮತೆ ಹೆಚ್ಚಿಸುತ್ತದೆ.
ಬದ್ಧಕೋನಾಸನ
ಹೆಚ್ಚಿನ ಮಕ್ಕಳಿಗೆ ಇಷ್ಟವಾಗುವ ಆಸನವಿದು. ಯೋಗ ಮ್ಯಾಟ್ ಮೇಲೆ ಕೂತಂತೆಯೇ ಪಾದಗಳೆರಡನ್ನೂ ಒಂದಕ್ಕೊಂದು ಅಭಿಮುಖವಾಗಿ ಜೋಡಿಸಿ. ಕಾಲುಗಳನ್ನು ಚಿಟ್ಟೆಯ ರೆಕ್ಕೆಗಳಂತೆ ನಿಧಾನಕ್ಕೆ ಬಡಿಯಿರಿ. ಇದರಿಂದ ಮಕ್ಕಳ ಕೆಳಬೆನ್ನು, ಪೃಷ್ಠ ಮತ್ತು ಒಳತೊಡೆಯ ಭಾಗಗಳು ಸಡಿಲವಾಗುತ್ತವೆ.
ಇದನ್ನೂ ಓದಿ: International Yoga Day 2024: ಗರ್ಭಿಣಿಯರೂ ಯೋಗ ಮಾಡಬಹುದೇ? ಯಾವ ಆಸನಗಳು ಸೂಕ್ತ?
ಸೇತುಬಂಧಾಸನ
ದೇಹಕ್ಕೆ ಬಲ ನೀಡುವುದು ಮಾತ್ರವಲ್ಲದೆ, ಶರೀರದ ಸಮನ್ವಯವನ್ನೂ ಈ ಆಸನ ಹೆಚ್ಚಿಸುತ್ತದೆ. ಸಾಮಾನ್ಯವಾಗಿ ಯಾವುದೇ ʻಬ್ರಿಜ್ ಪೋಸ್ʼ ಎಂದು ಕರೆಸಿಕೊಳ್ಳುವಂಥ ಆಸನಗಳು ಕಾಲಿನಿಂದ ಹಿಡಿದು ಕುತ್ತಿಗೆಯವರೆಗಿನ ನಾನಾ ಭಾಗಗಳ ಬಲವನ್ನು ಹೆಚ್ಚಿಸುತ್ತವೆ. ಎರಡೂ ಪಾದಗಳನ್ನು ಊರಿ ನೆಲಕ್ಕೆ ಒತ್ತಿ, ಮುಂಡದ ಭಾಗವನ್ನು ಮೇಲಕ್ಕೆತ್ತುವ ಈ ಆಸನ ರಕ್ತಪರಿಚಲನೆಯನ್ನೂ ಸುಧಾರಿಸುತ್ತದೆ.
ಇದಲ್ಲದೆ, ಭುಜಂಗಾಸನ, ವೃಕ್ಷಾಸನ, ಬಾಲಾಸನ ಮುಂತಾದ ಹಲವಾರು ಸರಳ ಆಸನಗಳು ಮಕ್ಕಳಿಗೆ ಸೂಕ್ತವಾದಂಥವು.