Site icon Vistara News

International Yoga Day 2024: ಯೋಗ ಮಾಡುವ ಮ್ಯಾಟ್‌ ಹೇಗಿದ್ದರೆ ಅನುಕೂಲ?

International Yoga Day 2024

ಯೋಗಾಭ್ಯಾಸಿಗಳಿಗೆ (International Yoga Day 2024) ಪ್ರಮುಖವಾಗಿ ಬೇಕಾದಂಥದ್ದು ಯೋಗ ಮ್ಯಾಟ್‌. ಯೋಗಾಭ್ಯಾಸಕ್ಕೆ ಬಳಸುವ ಪ್ರಮುಖ ಸಾಧನವಾದ ಈ ಮ್ಯಾಟ್‌ ಹೀಗೆಯೇ ಇರಬೇಕು ಎಂಬ ನಿಯಮವನ್ನು ಯೋಗ ಕಲಿಸುವ ಗುರುಗಳು ವಿಧಿಸುವುದು ಅಪರೂಪ. ಆದರೆ ಅದು ಹೇಗಿದ್ದರೆ ಅಭ್ಯಾಸಿಗಳಿಗೆ ಅನುಕೂಲ? ಅತಿ ಕಡಿಮೆ ಖರ್ಚಿನಲ್ಲಿ ಮಾಡಬಹುದಾದ, ಅತಿ ಸುಸ್ಥಿರವಾದ ವ್ಯಾಯಾಮಗಳ ಪೈಕಿ ಯೋಗ ಮೊದಲ ಸಾಲಿನಲ್ಲಿದೆ. ಇದನ್ನು ಕೇವಲ ವ್ಯಾಯಾಮವೆಂದು ಪರಿಗಣಿಸುವುದು ಸರಿಯಲ್ಲವಾದರೂ, ವ್ಯಾಯಾಮವೂ ಹೌದಲ್ಲವೇ. ದೇಹ-ಮನಸ್ಸುಗಳನ್ನು ಆರೋಗ್ಯಪೂರ್ಣವಾಗಿ ಇರಿಸುವಲ್ಲಿ ಮಹತ್ತರ ಪಾತ್ರ ವಹಿಸುವ ಯೋಗವನ್ನು ಅಭ್ಯಾಸ ಮಾಡುವುದಕ್ಕೆ ನಮಗೆ ಬೇಕಾದ ಪ್ರಮುಖ ಸಾಧನವೆಂದರೆ ಯೋಗ ಮ್ಯಾಟ್‌. ಯೋಗಾಭ್ಯಾಸಕ್ಕೆ ಬಳಸುವ ಪ್ರಮುಖ ಸಾಧನವಾದ ಈ ಮ್ಯಾಟ್‌ ಹೀಗೆಯೇ ಇರಬೇಕು ಎಂಬ ನಿಯಮವನ್ನು ಯೋಗ ಕಲಿಸುವ ಗುರುಗಳು ವಿಧಿಸುವುದು ಅಪರೂಪ. ಆದರೆ ಅದು ಹೇಗಿದ್ದರೆ ಅಭ್ಯಾಸಿಗಳಿಗೆ ಅನುಕೂಲ? ಅದರ ಅಳತೆ ಎಷ್ಟಿದ್ದರೆ ಸಾಕು ಮತ್ತು ಎಷ್ಟಿರಬೇಕು ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ. ಯೋಗ ಮ್ಯಾಟ್‌ ಎನ್ನುವ ಕಲ್ಪನೆ ಇತ್ತೀಚಿನದ್ದು. ಪರಂಪರಾಗತವಾಗಿ ಯೋಗ ಅಭ್ಯಾಸದಲ್ಲಿದ್ದರೂ ಆಗೆಲ್ಲ ಉಪಯೋಗ ಮಾಡುತ್ತಿದ್ದುದು ಜಮಖಾನೆಯನ್ನು. ಅದಕ್ಕಿಂತಲೂ ಹಿಂದೆ ಬೇರೇನಾದರೂ ಇದ್ದಿರಬಹುದು. ಕಳೆದ ಹತ್ತಿಪ್ಪತ್ತು ವರ್ಷಗಳಿಂದ ಯೋಗ ಮ್ಯಾಟ್‌ ಪ್ರಚಲಿತದಲ್ಲಿದೆ. ಜಮಖಾನೆಯಂತೆ ನೆಲದ ಮೇಲೆ ತನ್ನಷ್ಟಕ್ಕೆ ಜಾರದೆ, ಅಭ್ಯಾಸಿಗಳಿಗೆ ಭದ್ರ ತಳವನ್ನು ಒದಗಿಸಿಕೊಡುತ್ತದೆ ಈ ಮ್ಯಾಟ್‌. ಮಾತ್ರವಲ್ಲ, ಮಂಡಿ. ಮೊಣಕೈ ಮುಂತಾದ ಅಂಗಗಳನ್ನು ಊರಿ ಕುಳಿತುಕೊಳ್ಳುವಾಗ ಮೆತ್ತನೆಯ ಹಾಸನ್ನು ಒದಗಿಸಿ, ಪೆಟ್ಟಾಗದಂತೆ ತಡೆಯುತ್ತದೆ. ಈ ಮ್ಯಾಟ್‌ಗಳಲ್ಲೂ ಹಲವು ಬಗೆಗಳಿವೆ. ಖರೀದಿಗೆಂದು ಹೋದರೆ ಯಾವುದನ್ನು ತೆಗೆದುಕೊಳ್ಳುವುದೆಂಬ ಗೊಂದಲ ಮೂಡಿದರೆ ಸಹಜ.

ಎಷ್ಟು ದಪ್ಪ ಇರಬೇಕು?

ಪ್ರಯಾಣಕ್ಕೆ ಅನುಕೂಲಕರವಾದ ಹಗುರವಾದ ಮ್ಯಾಟ್‌ಗಳಿಂದ ಹಿಡಿದು, ಮೆತ್ತಗಿನ ಕುಷನ್‌ ನೀಡುವಂಥ ದಪ್ಪನೆಯ ಮ್ಯಾಟ್‌ಗಳವರೆಗೆ ಹಲವು ರೀತಿಯವು ಲಭ್ಯವಿವೆ. ಆದರೆ ಸಾಮಾನ್ಯ ಯೋಗಾಭ್ಯಾಸಕ್ಕೆ 1/8 ಇಂಚು ದಪ್ಪನೆಯ ಮ್ಯಾಟ್‌ ಸಾಕಾಗಬಹುದು. ಆದರೆ ಮಂಡಿಯಲ್ಲಿ, ಬೆನ್ನಿನಲ್ಲಿ ಅಥವಾ ದೇಹದ ಇನ್ನಾವುದೇ ಭಾಗದಲ್ಲಿ ನೋವಿದೆ, ಅವುಗಳ ಉಪಶಮನಕ್ಕಾಗಿಯೇ ಕೆಲವು ವ್ಯಾಯಾಮಗಳನ್ನು ಮಾಡುವುದಿದ್ದರೆ, ಕೊಂಚ ದಪ್ಪನೆಯ ಮ್ಯಾಟ್‌ ಉಪಯೋಗಿಸುವುದು ಒಳಿತು. ಇದು ನೀಡುವಂಥ ಮೆತ್ತನೆಯ ಕುಷನಿಂಗ್‌ ನೋವಿರುವ ಭಾಗಗಳಿಗೆ ಆರಾಮ ಒದಗಿಸುತ್ತದೆ. ತೆಳ್ಳನೆಯ ಮ್ಯಾಟ್‌ಗಳು, ನೆಲಕ್ಕೆ ಕಚ್ಚಿಕೊಂಡು ಹೆಚ್ಚಿನ ಭದ್ರತೆಯನ್ನು ನೀಡಬಲ್ಲವು. ಆಸನಗಳನ್ನು ಬದಲಿಸುವಾಗ ಜಾರದಂತೆ ತಡೆಯಬಲ್ಲವು. ಹಾಗಾಗಿ ಅಭ್ಯಾಸಿಗಳ ಅಗತ್ಯವೇನು ಎಂಬುದರ ಮೇಲೆ ಎಷ್ಟು ದಪ್ಪನೆಯ ಮ್ಯಾಟ್‌ ಬೇಕು ಎಂಬುದನ್ನು ನಿರ್ಧರಿಸಬಹುದು.

ಯಾವುದರಿಂದ ಮಾಡಿದ್ದು?

ಮ್ಯಾಟ್‌ ಯಾವ ವಸ್ತುವಿನಿಂದ ಸಿದ್ಧಗೊಂಡಿದ್ದು ಎನ್ನುವುದರ ಮೇಲೆ ಅದರ ತಾಳಿಕೆ, ಬಾಳಿಕೆ, ಸ್ಥಿರತೆಯೆಲ್ಲ ನಿರ್ಧಾರವಾಗುತ್ತದೆ. ಪಿವಿಸಿ ವಸ್ತುವಿನಿಂದ ಮಾಡಿದ ಮ್ಯಾಟ್‌ಗಳ ತಾಳಿಕೆ-ಬಾಳಿಕೆ ಹೆಚ್ಚು. ಇವುಗಳ ಸ್ವಚ್ಛತೆಯೂ ಕಷ್ಟವಲ್ಲ. ಜೊತೆಗೆ, ನೆಲದ ಮೇಲೆ ಜಾರದಂತೆ ಸ್ಥಿರವಾಗಿಯೂ ನಿಲ್ಲುತ್ತವೆ. ಆದರೆ ಉಪಯೋಗಿಸಿ ಹಳೆಯದಾದ ಮೇಲೆ ಪರಿಸರಕ್ಕೆ ಹಾನಿ, ಅಂದರೆ ಮಣ್ಣಾಗುವುದಿಲ್ಲ ಈ ವಸ್ತುಗಳು. ಟಿಪಿಇ ಮ್ಯಾಟ್‌ಗಳು ರಬ್ಬರ್‌ ಮತ್ತು ಪ್ಲಾಸ್ಟಿಕ್‌ಗಳ ಮಿಶ್ರಣದಿಂದ ತಯಾರಾದಂಥವು. ಇವುಗಳು ಪರಿಸರಕ್ಕೆ ಪಿವಿಸಿ ಮ್ಯಾಟ್‌ಗಳಷ್ಟು ತೊಂದರೆಯನ್ನೂ ಕೊಡುವುದಿಲ್ಲ. ನೆಲದ ಮೇಲೆ ಅಷ್ಟಾಗಿ ಜಾರುವುದೂ ಇಲ್ಲ. ಇವುಗಳ ಗೊಡವೆಯೇ ಬೇಡ ಎನಿಸಿದರೆ, ಪರಿಸರ-ಸ್ನೇಹಿ ಮ್ಯಾಟ್‌ಗಳು ಲಭ್ಯವಿವೆ. ಇವುಗಳನ್ನು ರಬ್ಬರ್‌, ಸೆಣಬು, ಬಟ್ಟೆ ಮುಂತಾದ ನಿಸರ್ಗ-ಜನ್ಯ ವಸ್ತುಗಳಿಂದ ತಯಾರಿಸಲಾಗುತ್ತದೆ. ಆದರೆ ಇವುಗಳು ನೆಲದ ಮೇಲೆ ಕಚ್ಚಿಕೊಂಡು ಕೂರುವುದಿಲ್ಲ. ಹಳೆಯ ಕಾಲದ ಜಮಖಾನೆಯಂತೆ ಕೊಂಚ ಜಾರಬಹುದು.

ಇದನ್ನೂ ಓದಿ: International Yoga Day 2024: ದೇಹ ತೂಕ ಇಳಿಕೆಗೆ ಈ 5 ಆಸನಗಳು ಸೂಕ್ತ

ಎಷ್ಟು ದೊಡ್ಡದು?

ಹಿಂದೆಲ್ಲ ದೊಡ್ಡ ಜಮಖಾನೆಯನ್ನು ಮಡಿಸಿ, ಬೇಕಾದ ಆಕೃತಿಗೆ ತಗ್ಗಿಸಿ, ಯೋಗ ಮಾಡುವುದಕ್ಕೆ ಉಪಯೋಗಿಸುತ್ತಿದ್ದರು. ಈಗ ಮ್ಯಾಟ್‌ಗಳ ಕಾಲ, ಅವೆಲ್ಲ ಗೋಜಿಲ್ಲ. ಆದರೆ ಎಷ್ಟು ಅಗಲ-ಉದ್ದದ ಮ್ಯಾಟ್‌ ಬೇಕು ನಮಗೆ? ಸಾಮಾನ್ಯವಾಗಿ 6 ಅಡಿ ಉದ್ದ, ೨ ಅಡಿ ಅಗಲದ ಮ್ಯಾಟ್‌ಗಳು ಎಲ್ಲರಿಗೂ ಸಾಕಾಗುತ್ತವೆ. ಆದರೆ ನಿಮ್ಮ ಉದ್ದಗಲಗಳು ಹೆಚ್ಚು ಎಂದಾದರೆ 7 ಅಡಿ ಉದ್ದು, 2.5 ಅಡಿ ಅಗಲದ ಮ್ಯಾಟ್‌ಗಳು ಲಭ್ಯವಿವೆ. ಪ್ರಯಾಣಕ್ಕೆ ಸಣ್ಣ ಮ್ಯಾಟ್‌ ಸಾಕು ಎನಿಸಿದರೆ, ಅದೂ ಲಭ್ಯವಿದೆ.
ಈಗಿನ್ನೂ ಯೋಗಾಭ್ಯಾಸ ಪ್ರಾರಂಭಿಸುತ್ತಿದ್ದೀರಿ ಎಂದಾದರೆ, ಕೊಂಚ ದಪ್ಪನೆಯ ಮ್ಯಾಟ್‌ಗಳನ್ನು ಆಯ್ದುಕೊಳ್ಳುವುದು ಸೂಕ್ತ. ಕಾರಣ, ಸರಳವಾದ ಆಸನಗಳು ಮತ್ತು ಕೂತು, ಮಲಗಿ ಮಾಡುವಂಥ ವ್ಯಾಯಾಮಗಳಲ್ಲಿ ಮೈ-ಕೈ ನೋವಾಗಬಾರದೆಂಬ ಉದ್ದೇಶ ಇದರದ್ದು. ಈಗಾಗಲೇ ಹಲವು ಕಾಲದಿಂದ ಯೋಗಾಭ್ಯಾಸ ಮಾಡುತ್ತಿರುವವರು ಕೊಂಚ ತೆಳ್ಳನೆಯ, ಆದರೆ ನೆಲಕ್ಕೆ ಕಚ್ಚಿಕೊಳ್ಳುವಂಥ ಮ್ಯಾಟ್‌ಗಳನ್ನು ಆಯ್ದುಕೊಳ್ಳಿ. ಸಂಕೀರ್ಣ ಆಸನಗಳನ್ನು ಮಾಡುವಾಗ ಮ್ಯಾಟ್‌ ನೆಲದ ಮೇಲೆ ಸ್ಥಿರವಾಗಿ ನಿಲ್ಲಬೇಕಲ್ಲವೇ?

Exit mobile version