Site icon Vistara News

International Yoga Day 2024: ಹಿರಿಯರಿಗೆ ಸೂಕ್ತವಾದ ಯೋಗಾಸನಗಳಿವು

International Yoga Day 2024

ವಯಸ್ಸಾಗುವುದು ದೇಹಕ್ಕೆ (International Yoga Day 2024) ಮಾತ್ರ, ಮನಸ್ಸಿಗಲ್ಲ ಎನ್ನುವವರು ಬೇಕಷ್ಟು ಜನರಿದ್ದಾರೆ. ಆದರೆ ಅದನ್ನು ಸರಿಯಾಗಿ ಆಚರಣೆಗೆ ತರುವವರು ಕಡಿಮೆ. ಅಂದರೆ, ಹಿರಿಯ ನಾಗರಿಕರು ಎನಿಸಿಕೊಂಡ ಮೇಲೆ, ʻಇನ್ನೇನು ವ್ಯಾಯಾಮ ಮಾಡೋದು!ʼ ಎಂಬ ಮನಸ್ಥಿತಿ ಹಲವರದ್ದಿರುತ್ತದೆ. ಆದರೆ ದೈಹಿಕ ಚಟುವಟಿಕೆ ಎಂಬುದು ಯಾವುದೇ ವಯಸ್ಸಿನಲ್ಲೂ ಆರೋಗ್ಯವನ್ನು ಮೇಲ್ದರ್ಜೆಗೆ ಏರಿಸಬಲ್ಲದು. ನೆಮ್ಮದಿಯ ದಿನಗಳನ್ನು ಕಳೆಯಲು ನೆರವಾಗಬಲ್ಲದು. ಹಾಗಾಗಿ ಹಿರಿಯರಿಗೂ ಸರಳ ಯೋಗಾಭ್ಯಾಸಗಳು ಸೂಕ್ತವೇ. ಆದರೆ ಅವರವರ ದೇಹಧರ್ಮಕ್ಕೆ ಅನುಗುಣವಾಗಿ ವೈದ್ಯರಲ್ಲಿ ಕೇಳಿ ತಿಳಿದುಕೊಂಡರೆ, ಎಲ್ಲ ದೃಷ್ಟಿಯಲ್ಲೂ ಸೂಕ್ತ.
ವಯಸ್ಸಾಗುತ್ತಿದ್ದಂತೆ ರೋಗನಿರೋಧಕ ಶಕ್ತಿ ಸಹಜವಾಗಿ ಕುಂದುತ್ತದೆ. ಯೋಗದಿಂದ ದೇಹ ಮತ್ತು ಮನಸ್ಸನ್ನು ಸುದೃಢಗೊಳಿಸಿ, ಈ ಮೂಲಕ ಪ್ರತಿರೋಧಕ ಶಕ್ತಿಯನ್ನೂ ಹೆಚ್ಚಿಸಬಹುದು. ಮನಸ್ಸು, ದೇಹಗಳನ್ನು ಉಲ್ಲಾಸ ಮತ್ತು ಉತ್ಸಾಹದಿಂದ ಇರಿಸಿಕೊಳ್ಳಬಹುದು. ಯೋಗ ಎಂದರೆ ಕೈ-ಕಾಲು ತಿರುಚಿಕೊಂಡೇ ಮಾಡಬೇಕೆಂದಿಲ್ಲ. ಬೆನ್ನು ನೋವಿದ್ದರೆ, ಮಂಡಿಯ ತೊಂದರೆಯಿದ್ದರೆ ಅಥವಾ ಅವರವರ ಆರೋಗ್ಯಕ್ಕೆ ಅನುಗುಣವಾಗಿ ನಿಂತು, ಕುಳಿತು, ಮಲಗಿ ಅಥವಾ ಕುರ್ಚಿಯಲ್ಲಿ ಕುಳಿತು ಮಾಡುವಂಥ ಹಲವು ಆಸನಗಳು ಹಿರಿಯರಿಗೆ ಸೂಕ್ತ.

ನಿಂತಲ್ಲೇ ಮಾಡುವಂಥ ಆಸನಗಳು

ತ್ರಿಕೋನಾಸನ

ಬೆನ್ನಿನ ಕೆಳಭಾಗ ಮತ್ತು ಪೃಷ್ಠದ ಭಾಗಗಳಲ್ಲಿ ನೋವು, ಅಸ್ಥಿರತೆ ವಯಸ್ಸು ಹೆಚ್ಚಿದಂತೆ ಸಾಮಾನ್ಯ. ತ್ರಿಕೋಣಾಸನದಿಂದ ದೇಹದ ಈ ಭಾಗಗಳನ್ನು ಸುದೃಢ ಮಾಡಬಹುದು. ರಕ್ತಸಂಚಾರವನ್ನೂ ಸರಾಗ ಮಾಡಿ, ಬಿಪಿ ನಿಯಂತ್ರಣಕ್ಕೆ ಈ ಆಸನ ನೆರವಾಗುತ್ತದೆ.

ಕಟಿಚಕ್ರಾಸನ

ಬೆನ್ನುಹುರಿಯನ್ನು ನೇರ ಮತ್ತು ಸಬಲವಾಗಿ ಇರಿಸಿಕೊಳ್ಳಲು ಈ ಆಸನ ಸಹಾಯ ಮಾಡುತ್ತದೆ. ಮಾತ್ರವಲ್ಲ, ತೋಳು ಮತ್ತು ಕಾಲಿನ ಮೂಳೆಗಳನ್ನು ದೃಢಗೊಳಿಸಿ, ತಮ್ಮ ಕಾಲಿನ ಮೇಲೆ ನಿಲ್ಲುವುದಕ್ಕೆ ಬಲ ನೀಡುತ್ತದೆ.

ಕುಳಿತ ಭಂಗಿಗಳ ಆಸನಗಳು

ಬದ್ಧಕೋನಾಸನ

ಪಚನ ಕ್ರಿಯೆಯನ್ನು ಸರಾಗ ಮಾಡಿ, ಹೊಟ್ಟೆ ಖಾಲಿ ಮಾಡುವುದನ್ನು ಸುಲಭ ಮಾಡುವ ಆಸನವಿದು. ತೊಡೆ ಮತ್ತು ಮಂಡಿಯ ಕೀಲುಗಳನ್ನು ಸಡಿಲ ಮಾಡಿ, ಈ ಭಾಗಗಳ ನೋವು ಕಡಿಮೆ ಮಾಡುತ್ತದೆ.

ಬಾಲಾಸನ

ನರಮಂಡಲದಿಂದ ಆಯಾಸ ಶಮನ ಮಾಡುತ್ತದೆ. ಬೆನ್ನಿನ ಭಾಗಗಳಲ್ಲಿ ಇರಬಹುದಾದ ನೋವುಗಳ ಶಮನಕ್ಕೆ ಇದು ಸಹಕಾರಿ.

ಮಾರ್ಜರಿಯಾಸನ

ಬೆಕ್ಕಿನಂತೆ ಬೆನ್ನುಹುರಿಯನ್ನು ಹೊರಳಿಸುವ ಆಸನವಿದು. ಇದನ್ನು ಮಾಡುವುದರಿಂದ ಬೆನ್ನು ನೋವಿಗೆ ಉಪಶಮನವಾಗುತ್ತದೆ. ಜೀರ್ಣಾಂಗಗಳಿಗೆ ವ್ಯಾಯಾಮ ನೀಡಿ, ಪಚನ ಕ್ರಿಯೆಯನ್ನು ಸುಸೂತ್ರ ಮಾಡುತ್ತದೆ. ಕಿಬ್ಬೊಟ್ಟೆಯ ಸ್ನಾಯುಗಳಿಗೆ ವ್ಯಾಯಾಮ ದೊರೆಯುತ್ತದೆ. ರಕ್ತಪರಿಚಲನೆಯನ್ನು ಹೆಚ್ಚಿಸಿ, ಮನಸ್ಸನ್ನು ಶಾಂತಗೊಳಿಸುತ್ತದೆ

ಹೊಟ್ಟೆ/ಬೆನ್ನಿನ ಮೇಲೆ ಮಲಗಿ ಮಾಡುವ ಆಸನಗಳು

ಭುಜಂಗಾಸನ

ದೇಹದ ರಕ್ತ ಪರಿಚಲನೆಯನ್ನು ಚುರುಕುಗೊಳಿಸುತ್ತದೆ. ಬೆನ್ನು, ಭುಜದ ಸ್ನಾಯುಗಳನ್ನು ಸಶಕ್ತಗೊಳಿಸಿ ವೃದ್ಧರಿಗೆ ಅಗತ್ಯವಾದ ಅನ್ಯರ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.

ಶಲಭಾಸನ

ಕುತ್ತಿಗೆ ಮತ್ತು ಬೆನ್ನಿನ ಸ್ನಾಯುಗಳಿಗೆ ಸೂಕ್ತ ಬಲ ತುಂಬುವ ಆಸನವಿದು. ಶರೀರದ ಈ ಭಾಗಗಳನ್ನು ಸಡಿಲವಾಗಿಡುತ್ತದೆ. ಕಿಬ್ಬೊಟ್ಟೆ ಮತ್ತು ತೊಡೆಯ ಸ್ನಾಯುಗಳಿಗೆ ಬಲ ನೀಡುತ್ತದೆ.

ಪವನಮುಕ್ತಾಸನ

ಹೆಸರೇ ಸೂಚಿಸುವಂತೆ ಶರೀರವನ್ನು ವಾಯು ಮುಕ್ತ ಮಾಡುವ ಆಸನವಿದು. ಪೃಷ್ಠದ ಕೀಲುಗಳಿಗೆ ರಕ್ತದ ಹರಿವನ್ನು ಹೆಚ್ಚಿಸಿ, ಒತ್ತಡ ನಿವಾರಿಸುತ್ತದೆ.

ಇದನ್ನೂ ಓದಿ: International Yoga Day 2024: ಗರ್ಭಿಣಿಯರೂ ಯೋಗ ಮಾಡಬಹುದೇ? ಯಾವ ಆಸನಗಳು ಸೂಕ್ತ?

ಕುರ್ಚಿಯ ಮೇಲೆ ಕುಳಿತು ಮಾಡುವ ಆಸನಗಳು

ಕುತ್ತಿಗೆ, ಕೈ, ಮಂಡಿ ಮುಂತಾದ ಭಾಗಗಳಿಗೆ ಸೂಕ್ತವಾಗುವಂಥ, ಆದರೆ ಬೆನ್ನು ಮತ್ತು ಸೊಂಟದ ತೊಂದರೆ ಇರುವವರಿಗೆ ಕಷ್ಟವಾಗದೆ ಮಾಡುವಂಥ ಭಂಗಿಗಳಿವು. ಕುರ್ಚಿಯ ಮೇಲೆ ಕುಳಿತು ಮಾಡುವ ಸೂರ್ಯನಮಸ್ಕಾರದ ಭಂಗಿಗಳೂ ಈಗ ಜನಪ್ರಿಯ.
ಕುತ್ತಿಗೆ ಮತ್ತು ಬೆನ್ನಿನ ಮೇಲಿರುವ ಒತ್ತಡವನ್ನು ಈ ಮೂಲಕ ನಿವಾರಿಸಲು ಸಾಧ್ಯವಿದೆ. ಹಾಗಾಗಿ ಈ ಭಂಗಿಗಳು ವಯಸ್ಸಾದವರಿಗೆ ಮಾತ್ರವಲ್ಲ, ದೀರ್ಘ ಸಮಯ ಕುಳಿತು ಕೆಲಸ ಮಾಡುವವರಿಗೂ ಅನುಕೂಲಕರ. ಜೊತೆಗೆ, ಈ ಭಂಗಿಗಳು ದೇಹದ ಒಟ್ಟಾರೆ ಬಲವನ್ನು ವೃದ್ಧಿಸುತ್ತದೆ. ಮಾತ್ರವಲ್ಲ, ವೃದ್ಧಾಪ್ಯದಲ್ಲಿ ಕಾಡುವ ಬಲಹೀನತೆ ಮತ್ತು ಅಂಗಗಳ ನಡುವಿನ ಸಮನ್ವಯದ ಕೊರತೆಯನ್ನು ಸರಿದೂಗಿಸಬಹುದು.

Exit mobile version