ನಮಗೆ ಅಗತ್ಯವಾಗಿ ಬೇಕಾದ ಕೆಲವು ಪೋಷಕಾಂಶಗಳು ಕೊರತೆಯಾದರೆ, ಅದನ್ನು ನಮ್ಮ ದೇಹ ಸ್ಪಷ್ಟವಾಗಿ ಸೂಚಿಸುತ್ತದೆ. ಆದರೆ ಅದನ್ನು ನಾವು ಅರ್ಥಮಾಡಿಕೊಳ್ಳುವುದು ಮುಖ್ಯ. ದೇಹದಲ್ಲಿ ಹಿಮೋಗ್ಲೋಬಿನ್ ಉತ್ಪತ್ತಿಗೆ ಕಾರಣವಾಗುವ ಕಬ್ಬಿಣದ ಅಂಶ ಕಡಿಮೆಯಾಗಿ, ಅನೀಮಿಯಕ್ಕೆ ತುತ್ತಾದರೆ ಹಲವು ಲಕ್ಷಣಗಳ ಮೂಲಕ ನಮ್ಮ ದೇಹ ಅದನ್ನು ಹೇಳುತ್ತದೆ.
ವಯಸ್ಸು ಮತ್ತು ಲಿಂಗದ ತಾರತಮ್ಯವಿಲ್ಲದಂತೆ ಯಾರಿಗಾದರೂ ಕಬ್ಬಿಣದ ಕೊರತೆ ಎದುರಾಗಬಹುದು. ಅದರಲ್ಲೂ ಶೇ. ೫೦ರಷ್ಟು ಗರ್ಭಿಣಿಯರು ಕಬ್ಬಿಣದ ಕೊರತೆಯಿಂದ ಬಳಲುತ್ತಾರೆ ಮತ್ತು ಇದರಿಂದ ಮುಂದೆ ತಾಯಿ-ಮಗುವಿಗೆ ಸಮಸ್ಯೆಗಳೂ ಎದುರಾಗುತ್ತವೆ ಎನ್ನುತ್ತದೆ ವೈದ್ಯಲೋಕ. “ಕಬ್ಬಿಣದ ಕೊರತೆ ಎದುರಾಗುವುದಕ್ಕೆ ಹಲವಾರು ಕಾರಣಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿದ್ದು, ಆಹಾರದಲ್ಲಿ ಕಬ್ಬಿಣದಂಶ ಕಡಿಮೆಯಿರುವುದು. ಇದಲ್ಲದೆ, ಕೆಲವು ಕಾರಣಗಳಿಂದ ಕಬ್ಬಿಣಾಂಶವನ್ನು ದೇಹ ಸರಿಯಾಗಿ ಹೀರಿಕೊಳ್ಳದೇ ಇರುವುದು ಮತ್ತು ಅತಿಯಾದ ರಕ್ತಸ್ರಾವದಿಂದಲೂ ಈ ಕೊರತೆ ಎದುರಾಗಬಹುದು. ಇದರಿಂದ ಆಯಾಸ, ಸುಸ್ತು, ತಲೆನೋವು, ಉಸಿರಾಟದ ತೊಂದರೆ, ಹೃದಯ ಬಡಿತ ಹೆಚ್ಚಾಗುವಂಥ ಲಕ್ಷಣಗಳು ಕಾಣಿಸಿಕೊಳ್ಳಬಹುದು” ಎನ್ನುತ್ತಾರೆ ತಜ್ಞರು. ಇದಲ್ಲದೆ ಕೂದಲು, ಚರ್ಮ ಮತ್ತು ಉಗುರುಗಳಲ್ಲಿ ಇದರ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತವೆ.
ಕೂದಲು: ದಿನಂಪ್ರತಿ ಕೂದಲುದುರುವುದು ಸಾಮಾನ್ಯ. ಆದರೆ ಕೂದಲು ಅತಿಯಾಗಿ ಉದುರುತ್ತಿದ್ದರೆ, ದೇಹದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸ್ಪಷ್ಟ. ದೇಹಕ್ಕೆಲ್ಲಾ ಆಮ್ಲಜನಕ ಪೂರೈಕೆ ಮಾಡುವ ಹಿಮೋಗ್ಲೋಬಿನ್ ಕಡಿಮೆಯಾದರೆ, ಪ್ರಾಶಸ್ತ್ಯದ ಪ್ರಕಾರ ಕೂದಲಿಗೆ ಕಡಿಮೆ ಆಮ್ಲಜನಕ ಪೂರೈಕೆಯಾಗುತ್ತದೆ. ದೇಹದ ಮುಖ್ಯ ಅಂಗಗಳಿಗೆ ಹೆಚ್ಚಿನ ಪೂರೈಕೆ ಬೇಕಾಗುತ್ತದೆ. ಆಗ ಸಹಜವಾಗಿ ಕೂದಲು ಒಣಗುವುದು, ಉದುರುವುದು ಹೆಚ್ಚುತ್ತದೆ. ಕಬ್ಬಿಣದ ಕೊರತೆ ತೀವ್ರವಾದಂತೆ ಕೂದಲು ಉದುರುವುದು ಮತ್ತೂ ಹೆಚ್ಚುತ್ತದೆ. ಅದರಲ್ಲೂ ಕೂದಲು ತುಂಡಾಗದೆ, ಬುಡದಿಂದಲೇ ಕಳಚಿ ಉದುರಿದರೆ, ಕಬ್ಬಿಣದ ಅಂಶ ಕಡಿಮೆಯಿರುವ ಎಲ್ಲಾ ಸಾಧ್ಯತೆಯಿರುತ್ತದೆ.
ಇದನ್ನೂ ಓದಿ | National nutrition week | ಕಣ್ಣಿನ ಆರೋಗ್ಯಕ್ಕಾಗಿ ಈ ಆಹಾರ ನಿಮ್ಮ ಕಣ್ಣಿಗೆ ಬೀಳಲಿ!
ಕಣ್ಣು: ಕಣ್ಣಿನ ಕೆಳಭಾಗದ ರೆಪ್ಪೆಯನ್ನು ಎಳೆದು ನೋಡುವುದು ಹಳೆಯ ಕಾಲದಿಂದ ವೈದ್ಯರು ಅನುಸರಿಸುತ್ತಿರುವ ಕ್ರಮಗಳಲ್ಲಿ ಒಂದು. ಈ ಭಾಗ ಅಚ್ಚಕೆಂಪು ಬಣ್ಣದಲ್ಲಿದ್ದರೆ ದೇಹದಲ್ಲಿ ಕಬ್ಬಿಣದ ಕೊರತೆ ಇಲ್ಲವೆಂಬುದು ಸೂಚನೆ. ಬೆಳ್ಳಗೆ ಬಿಳುಚಿಕೊಂಡಿದ್ದರೆ ಕಬ್ಬಿಣದ ಅಂಶ ಎಷ್ಟು ಕಡಿಮೆಯಾಗಿದೆ ಎಂಬುದನ್ನು ವೈದ್ಯರು ತಪಾಸಣೆ ಮಾಡಿಸಬಹುದು. ಕೊರತೆ ಹೆಚ್ಚಿದಂತೆ ಕಣ್ಣೊಳಗಿನ ಈ ಭಾಗ ತೀವ್ರವಾಗಿ ಬಿಳಿ ಬಣ್ಣ ತೋರಿಸುತ್ತದೆ.
ಚರ್ಮ: ಉಳಿದಂತೆ ಎಷ್ಟೇ ಆರೋಗ್ಯವಾಗಿದ್ದರೂ, ದೇಹದಲ್ಲಿ ಕೆಂಪು ರಕ್ತ ಕಣಗಳು ಸಾಕಷ್ಟಿದ್ದರೆ ಮಾತ್ರ ʻಕೆಂಪ್ಕೆಂಪ್ಗೆʼ ಇರುವುದಕ್ಕೆ ಸಾಧ್ಯ. ಅನೀಮಿಯ ಇರುವವರ ಚರ್ಮ ಪೇಲವವಾಗಿ ಬಿಳುಚಿದಂತೆಯೇ ಕಾಣುತ್ತದೆ. ಚರ್ಮದ ಕಾಂತಿಯೂ ನಶಿಸುತ್ತದೆ..
ಉಗುರು: ಉಗುರು ಯಾವುದೇ ಆಘಾತವಿಲ್ಲದೆಯೂ ತನ್ನಷ್ಟಕ್ಕೆ ತುಂಡಾಗುವುದು ಕಬ್ಬಿಣದ ಕೊರತೆಯ ಮತ್ತೊಂದು ಲಕ್ಷಣ. ಉಗುರು ಬಿರುಕು ಬಂದಂತೆ ಆಗುವುದು ಅಥವಾ ಯಾವುದೋ ಒಂದು ಭಾಗ ತುಂಡಾಗುವುದು ಪ್ರಾರಂಭದಲ್ಲಿರುತ್ತದೆ. ಈ ಹಂತದಲ್ಲಿ ಕಬ್ಬಿಣದ ಕೊರತೆಯನ್ನು ಸರಿಪಡಿಸಿಕೊಳ್ಳದೆ ಇದು ತೀವ್ರವಾದರೆ, ಉಗುರಿನ ಆಕೃತಿ ಬದಲಾಗಿ ಚಮಚದಂತೆ ಕಾಣುತ್ತದೆ. ಅಂದರೆ ಉಗುರಿನ ನಡುಭಾಗ ಒಳಹೋಗಿ, ಸುತ್ತಲಿನ ಭಾಗ ಮೇಲೆ ಬಂದಂತೆ ಕಾಣುತ್ತದೆ. ಆದರೆ ಈ ಲಕ್ಷಣ ಎಲ್ಲರಲ್ಲೂ ಸಾಮಾನ್ಯವಾಗಿ ಕಾಣುವಂಥದ್ದಲ್ಲ.
ಬಾಯಿ: ಬಾಯಲ್ಲಿ ಹುಣ್ಣಾಗುವುದು, ನಾಲಿಗೆಯಲ್ಲಿ ನೋವು-ಊತ ಕಾಣಬಹುದು. ಸದಾ ಬಾಯೊಣಗಿದ, ಒಡೆದ ಅನುಭವ, ಕೆಲವೊಮ್ಮೆ ದಂತಗಳ ಬಣ್ಣವೂ ಬಿಳುಚಿಕೊಳ್ಳುವುದಿದೆ.
ಇದನ್ನೂ ಓದಿ | Beauty awareness | ಟೀನೇಜ್ ಸುಕೋಮಲ ತ್ವಚೆಯ ಬ್ಲೀಚ್‌ಗೆ ನೋ ಎನ್ನಿ!