Site icon Vistara News

Hemoglobin Food: ಹಿಮೋಗ್ಲೋಬಿನ್‌ ಕೊರತೆಯೇ? ದೇಹದಲ್ಲಿ ರಕ್ತ ಹೆಚ್ಚಿಸಿಕೊಳ್ಳಲು ಇವನ್ನು ತಿನ್ನಿ!

iron difficiency1

ನಾವು ಏನು ತಿನ್ನುತ್ತಿದ್ದೇವೆ ಎಂಬುದರ ಮೇಲೆ ನಮ್ಮ ಆರೋಗ್ಯ ನಿಂತಿದೆ ಎಂಬ ಬಗ್ಗೆ ಎರಡು ಮಾತಿಲ್ಲ. ನಾವು ದಿನನಿತ್ಯ ಏನು ತಿನ್ನುತ್ತೇವೆ, ಕುಡಿಯುತ್ತೇವೆ ಎಂಬುದರ ಮೇಲೆ ನಮ್ಮ ಆರೋಗ್ಯದ ಏರುಪೇರು ನಿರ್ಧಾರವಾಗುತ್ತದೆ. ಕೆಲವೊಮ್ಮೆ ನಮ್ಮ ದೇಹಕ್ಕೆ ಯಾವುದಾದರೊಂದು ಪೋಷಕಾಂಶದ ಕೊರತೆಯಾಗುತ್ತದೆ. ಈ ಕೊರತೆಯು ಸಂಬಂಧಿಸಿ ಆಹಾರ ಸೇವನೆಯಿಂದ ಸರಿ ಹೋಗುತ್ತದೆ. ಕೆಲವರಿಗೆ ರಕ್ತದಲ್ಲಿ ಹಿಮೋಗ್ಲೋಬಿನ್ ಕೊರತೆ ಕಾಡುತ್ತದೆ. ಇದರಿಂದ ಅನೀಮಿಯಾ ಎಂಬ ರಕ್ತಹೀನತೆಯ ತೊಂದರೆ ಕಾಡುತ್ತದೆ. ರಕ್ತದಲ್ಲಿ ಕೆಂಪು ರಕ್ತ ಕಣಗಳ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾದರೂ ಹಲವಾರು ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡಬಹುದು. ತಲೆಸುತ್ತು, ನಿಃಶಕ್ತಿ, ತಲೆನೋವು, ಅತಿಯಾದ ಹೃದಯ ಬಡಿತ, ಕಳಾಹೀನ ಚರ್ಮ ಇತ್ಯಾದಿಗಳು ಬಾಧಿಸಬಹುದು. ಹಾಗಾಗಿ, ರಕ್ತದಲ್ಲಿ ಕೆಂಪುರಕ್ತಕಣಗಳು ಕಡಿಮೆಯಾದರೆ, ಅದನ್ನು ನೈಸರ್ಗಿಕವಾಗಿ ಹೆಚ್ಚುಮಾಡಲು ಯಾವ ಆಹಾರ ಸೇವಿಸಬೇಕು ಎಂಬುದನ್ನು ನೋಡೋಣ.

1. ಬೀಟ್‌ರೂಟ್‌: ರಕ್ತದಲ್ಲಿ ಹಿಮೋಗ್ಲೋಬಿನ್‌ ಹೆಚ್ಚು ಮಾಡಲು ಅತ್ಯಂತ ಶಕ್ತಿಶಾಲಿ ತರಕಾರಿ ಎಂದರೆ ಅದು ಬೀಟ್‌ರೂಟ್‌. ಬೀಟ್‌ರೂಟ್‌ನ ಬಣ್ಣವೇ ಹೇಳುವಂತೆ ಅದು ರಕ್ತವರ್ಧಕ. ಇದರಲ್ಲಿ ಅತ್ಯಂತ ಹೆಚ್ಚು ಕಬ್ಬಿಣಾಂಶ, ಫೋಲಿಕ್‌ ಆಸಿಡ್‌, ಪೊಟಾಶಿಯಂ ಹಾಗೂ ನಾರಿನಂಶ ಇದೆ. ಬೀಟ್‌ರೂಟ್‌ ಜ್ಯೂಸ್‌ ಅಥವಾ ಬೀಟ್‌ರೂಟ್‌ನ ಪಲ್ಯ ಇತ್ಯಾದಿಗಳನ್ನು ಮಾಡಿ ಸೇವಿಸುವುದರಿಂದ ರಕ್ತದಲ್ಲಿ ಹಿಮೋಗ್ಲೋಬಿನ್‌ ಹೆಚ್ಚಿಸಿಕೊಳ್ಳಬಹುದು.

2. ದಾಳಿಂಬೆ: ಕೆಂಬಣ್ಣದಲ್ಲಿರುವ ದಾಳಿಂಬೆಯೂ ಕೂಡಾ ಅತ್ಯಂತ ಆರೋಗ್ಯಕರವಾದ ಹಣ್ಣು. ಇದು ಕಬ್ಬಿಣಾಂಶ ಹಾಗೂ ಕ್ಯಾಲ್ಶಿಯಂನಿಂದ ಸಮೃದ್ಧವಾಗಿದೆ. ಇದರಲ್ಲಿ ಪ್ರೊಟೀನ್‌, ಕಾರ್ಬೋಹೈಡ್ರೇಟ್‌ಗಳೂ ಇದ್ದು ರಕ್ತದಲ್ಲಿ ಹಿಮೋಗ್ಲೋಬಿನ್‌ ಹೆಚ್ಚು ಮಾಡುವಲ್ಲಿ ಸಹಾಯ ಮಾಡುತ್ತವೆ. ದಿನವೂ ದಾಳಿಂಬೆ ಜ್ಯೂಸ್‌ ಕುಡಿಯುವ ಮೂಲಕ ಈ ತೊಂದರೆಗೆ ಪರಿಹಾರ ಕಂಡುಕೊಳ್ಳಬಹುದು.

3. ಹಸಿರು ಸೊಪ್ಪು ತರಕಾರಿಗಳು: ಹಿಮೋಗ್ಲೋಬಿನ್‌ ಪ್ರಮಾಣ ಕಡಿಮೆಯಾದಾಗ ಕಬ್ಬಿಣಾಂಶದ ಆಹಾರವನ್ನು ಹೆಚ್ಚು ಮಾಡಬೇಕು. ಬಸಳೆ, ಪಾಲಕ್‌ನಂತಹ ಹಸಿರು ಸೊಪ್ಪುಗಳಲ್ಲಿ ಕಬ್ಬಿಣಾಂಶ ಹಾಗೂ ಬಿ ಕಾಂಪ್ಲೆಕ್ಸ್‌ ಹೇರಳವಾಗಿರುತ್ತದೆ. ಇವು ದೇಹದಲ್ಲಿ ಹಿಮೋಗ್ಲೋಬಿನ್‌ ಮಟ್ಟವನ್ನು ಸರಿದೂಗಿಸುವಲ್ಲಿ ನೆರವಾಗುತ್ತವೆ.

4. ಖರ್ಜೂರ ಹಾಗೂ ಒಣ ಹಣ್ಣುಗಳು: ಖರ್ಜೂರದಲ್ಲಿ ಸಾಕಷ್ಟು ಆಂಟಿ ಆಕ್ಸಿಡೆಂಟ್‌ಗಳಿವೆ. ಇದು ಕಬ್ಬಿಣಾಂಶವನ್ನೂ ತನ್ನಲ್ಲಿ ಹೇರಳವಾಗಿ ಹುದುಗಿಸಿಟ್ಟುಕೊಂಡಿದೆ. ಒಣ ಹಣ್ಣುಗಳು ನಾರಿನಂಶದಿಂದಲೂ ವಿಟಮಿನ್‌ ಹಾಗೂ ಖನಿಜಾಂಶಗಳಿಂದಲೂ ಸಮೃದ್ಧವಾಗಿರುವುದರಿಂದ ಅವುಗಳನ್ನು ನಿತ್ಯಾಹಾರದಲ್ಲಿ ಸೇವಿಸಬಹುದು. ಬಾದಾಮಿ, ಒಣ ಪ್ಲಮ್‌, ಆಪ್ರಿಕಾಟ್‌, ವಾಲ್‌ನಟ್‌ ಇತ್ಯಾದಿಗಳನ್ನು ತಿನ್ನಬೇಕು. ನಿತ್ಯವೂ ೫-೬ ಬಾದಾಮಿಗಳನ್ನು ರಾತ್ರಿ ನೆನೆ ಹಾಕಿ ಮರುದಿನ ತಿನ್ನುವುದರಿಂದ ಆರೋಗ್ಯದಲ್ಲಿ ಉತ್ತಮ ಫಲಿತಾಂಶ ಕಾಣಬಹುದು.

5. ಮಾಂಸ ಹಾಗೂ ಮೊಟ್ಟೆ: ಮಾಂಸಾಹಾರಿಗಳು ತಮ್ಮ ಆಹಾರದಲ್ಲಿ ಮೊಟ್ಟೆ, ಮೀನು ಹಾಗೂ ಚಿಕನ್‌ ಇತ್ಯಾದಿಗಳನ್ನೂ ಸೇರಿಸುವುದರಿಂದ ಹಿಮೋಗ್ಲೋಬಿನ್‌ ಮಟ್ಟ್‌ ಏರಿಸಿಕೊಳ್ಳಬಹುದು. ಮೊಟ್ಟೆಯಲ್ಲಿ ಕಬ್ಬಿಣಾಂಶ, ಪೊಟೀನ್‌ ಹಾಗೂ ಆಂಟಿ ಆಕ್ಸಿಡೆಂಟ್‌ ಹೇರಳವಾಗಿದ್ದು ಇದರ ಸೇವನೆಯ ಮೂಲಕವೂ ಪ್ರಯೋಜನ ಪಡೆಯಬಹುದು.

ಇದನ್ನೂ ಓದಿ: Health Tips: ಬಾಯಿಹುಣ್ಣು ಬೇಗ ಗುಣವಾಗಬೇಕೇ? ಈ ಆಹಾರಗಳನ್ನು ಬಿಡಿ!

Exit mobile version