Site icon Vistara News

Running Benefits: ಬೆಳ್‌ಬೆಳಗ್ಗೆದ್ದು ಓಡುವುದರಿಂದ ಏನೆಲ್ಲ ಲಾಭಗಳಿವೆ ಗೊತ್ತೇ?

jogging girl

ಬೆಳ್‌ಬೆಳಗ್ಗೆ ಏಳೋದು ಕೆಲವರಿಗೆ ಖುಷಿ, ಆದರೆ ಬಹುತೇಕರಿಗೆ ಅದೊಂದು ದೊಡ್ಡ ಟಾಸ್ಕ್‌. ಮುನ್ನಾದಿನದ ಸುಸ್ತಿನಿಂದಲೋ, ಏಳಲು ಸಾಧ್ಯವಾಗದ ಜಡತ್ವದಿಂದಲೋ, ಹಾಸಿಗೆಗೆ ಅಂಟಿಕೊಂಡು ಬೆಳಗ್ಗಿನ ನಿದ್ದೆಯನ್ನು ಸವಿಯುವ ಮನಸ್ಥಿತಿಯುಳ್ಳ ಒಂದಿಷ್ಟು ಮಂದಿ ನಿಧಾನಕ್ಕೆದ್ದು, ಚಹಾ ಹೀರಿ ಎಂದಿನಂತೆ ಭಾನುವಾರಕ್ಕೆ ಕಾಯುತ್ತಾ ಆಫೀಸಿಗೆ ಹೋಗುತ್ತಾರೆ. ಇನ್ನೂ ಕೆಲವರು, ಆರೋಗ್ಯದ ಕಾಳಜಿಯಿಂದ (health awareness) ಏಳುವ ಅಭ್ಯಾಸವನ್ನು ಪ್ರಯತ್ನಪೂರ್ವಕವಾಗಿ ಮಾಡಿಕೊಂಡಿರುತ್ತಾರೆ. ಬೆಳಗ್ಗೆ ಬೇಗನೆದ್ದು ಜಾಗಿಂಗೋ, ವಾಕಿಂಗೋ, ಜಿಮ್ಮೋ, ಯೋಗವೋ, ಸೈಕ್ಲಿಂಗೋ ಹೀಗೆ ಏನಾದರೊಂದು ಚಟುವಟಿಕೆಯಿಂದ ಶರೀರವನ್ನೂ, ಮನಸ್ಸನ್ನೂ ಉಲ್ಲಾಸಗೊಳಿಸಿ, ಇಡೀ ದಿನಕ್ಕೆ ಬೇಕಾದಷ್ಟು ಶಕ್ತಿಯನ್ನೂ, ಮುಖ್ಯವಾಗಿ ಪಾಸಿಟಿವಿಟಿಯನ್ನೋ ತುಂಬಿಸಿಕೊಂಡು ಜೀವನೋತ್ಸಾಹ ಬೆಳೆಸಿಕೊಳ್ಳುತ್ತಾರೆ. ಇಂಥ ಗುಂಪಿನಲ್ಲಿ ಒಂದಿಷ್ಟು ಮಂದಿ ದಿನವೂ ಬೆಳಗ್ಗೆದ್ದು ಓಡುವ (morning jogging) ಹುಮ್ಮಸ್ಸಿನವರು. ಚುರುಕಾಗಿ ಎದ್ದು, ಶೂ ಮೆಟ್ಟಿಕೊಂಡು ಇವರು ಓಡಲು ಹೊರಟರೆ ನೋಡುವವರಿಗೂ ಉತ್ಸಾಹ ಚಿಮ್ಮುತ್ತದೆ. ಎಲ್ಲರಿಗೂ ಓಡಲು ಸಾಧ್ಯವಾಗುವುದಿಲ್ಲ ಎಂಬುದು ನಿಜವಾದರೂ, ಓಡುವುದರಿಂದ ಸಿಗುವ ಆರೋಗ್ಯ ಲಾಭಗಳು (running health Benefits) ಅನೇಕ. ಹಾಗಾದರೆ ಬನ್ನಿ, ಬೆಳಗ್ಗೆದ್ದು ಓಡುವುದರಿಂದ ಆಗುವ ಲಾಭಗಳೇನು (runniing Benefits) ಎಂಬುದನ್ನು ನೋಡೋಣ.

1. ಬೆಳಗ್ಗೆ ಎದ್ದು ಓಡುವುದರಿಂದ ದೇಹದ ಚಯಾಪಚಯ ಕ್ರಿಯೆ ಚುರುಕಾಗುವುದೂ ಅಲ್ಲದೆ, ಇದು ನಿತ್ಯವೂ ಕರಗಿಸಬಲ್ಲ ಕ್ಯಾಲರಿಗಳ ಪ್ರಮಾಣವನ್ನು ಏರಿಸುತ್ತದೆ. ಮುಖ್ಯವಾಗಿ ನೀವು ತೂಕ ಇಳಿಸುವ ಇರಾದೆಯನ್ನು ಹೊಂದಿರುವವರಾದರೆ ಇದು ಬಹಳ ಸಹಾಯ ಮಾಡುತ್ತದೆ.

2. ಓಡುವುದು ದೇಹದಲ್ಲಿ ಎಂಡೋರ್ಫಿನ್‌ ಹಾರ್ಮೋನನ್ನು ಬಿಡುಗಡೆ ಮಾಡುವಂತೆ ಮಾಡುವ ವ್ಯಾಯಾಮಗಳಲ್ಲಿ ಒಂದು. ಈ ಹಾರ್ಮೋನು ಸಹಜವಾಗಿಯೇ ನಮ್ಮ ಮೂಡನ್ನು ಉತ್ತಮವಾಗಿಸಿ, ಸಂತೋಷವಾಗಿಯೂ, ಉಲ್ಲಾಸದಾಯಕವನ್ನಾಗಿಯೂ ಮಾಡುತ್ತದೆ. ಬೆಳಗ್ಗೆ ಎದ್ದ ಕೂಡಲೇ ಓಡುವುದರಿಂದ ಒತ್ತಡವು ಕಡಿಮೆಯಾಗಿ ದಿನವಿಡೀ ನಿಮ್ಮನ್ನು ಹೆಚ್ಚು ಖುಷಿಯಿಂದ ಇರಿಸುತ್ತದೆ.

3. ಬೆಳಗ್ಗೆ ಎದ್ದ ಕೂಡಲೇ ಓಡುವುದು ಇತ್ಯಾದಿ ವರ್ಕೌಟ್‌ ಮುಗಿಸಿಬಿಟ್ಟರೆ ನಿಮ್ಮ ಫಿಟ್‌ನೆಸ್‌ ಗುರಿಯನ್ನು ಬೇಗ ತಲುಪಲು ನಿಮಗೆ ಸಾಧ್ಯವಾಗುತ್ತದೆ. ಸಂಜೆಯ ವೇಳೆಗೋ ಅಥವಾ ದಿನದ ಬೇರೆ ಹೊತ್ತಿನಲ್ಲಿ ಯಾವುದೇ ವ್ಯಾಯಾಮ ಮಾಡುವ ಅಭ್ಯಾಸ ನಿಮಗಿದ್ದರೆ ಬಹಳ ಸಾರಿ ಯಾವುದೋ ಕೆಲಸದೊತ್ತಡದಿಂದಲೋ, ಅಥವಾ ಇನ್ಯಾವುದೋ ದಿಢೀರ್‌ ಯೋಜನೆಯಿಂದಲೋ ನಿಮಗೆ ಆ ದಿನದ ವರ್ಕೌಟ್‌ ಸಾಧ್ಯವಾಗುವುದಿಲ್ಲ. ಇದರಿಂದ ಶಿಸ್ತು ಸಾಧ್ಯವಾಗದೆ, ನಿಗದಿತ ಗುರಿ ತಲುಪಲಾಗುವುದಿಲ್ಲ.

4. ಬೆಳಗ್ಗೆ ಎದ್ದ ಕೂಡಲೇ ಓಡುವುದರಿಂದ ಸಿಗುವ ಇನ್ನೊಂದು ಬಹುದೊಡ್ಡ ಲಾಭವೆಂದರೆ ಅದು ರಾತ್ರಿಯ ಚಂದದ ನಿದ್ದೆ. ಬೆಳಗ್ಗಿನ ಚಂದನೆಯ ಬಿಸಿಲು ದೇಹಕ್ಕೆ ಸಿಗುವುದಲ್ಲದೆ, ಇದರಿಂದ ದೇಹಕ್ಕೆ ಅಗತ್ಯವಿರುವ ಎಲ್ಲವೂ ಪೂರೈಕೆಯಾಗಿ ರಾತ್ರಿ ಬಹುಬೇಗನೆ ಸೊಂಪಾದ ನಿದ್ದೆ ಬರುತ್ತದೆ. ಬೆಳಗ್ಗೆ ಮತ್ತೆ ಉಲ್ಲಸಿತವಾಗಿ ಸರಿಯಾದ ಸಮಯಕ್ಕೆ ಏಳಲು ಸಾಧ್ಯವಾಗುತ್ತದೆ. ಆರೋಗ್ಯವಾಗಿರಲು ಇದಕ್ಕಿಂತ ಹೆಚ್ಚೇನು ಬೇಕು ಹೇಳಿ!

ಇದನ್ನೂ ಓದಿ: Benefits Of Walking: ಪ್ರತಿದಿನ ತಪ್ಪದೆ ವಾಕಿಂಗ್‌ ಮಾಡಿ, ಲಾಭಗಳೇನಿವೆ ನೋಡಿ!

5. ಬೆಳಗ್ಗಿನ ತಾಜಾ ಗಾಳಿಯನ್ನು ಉಸಿರಾಡಲು ಸಿಗುವುದಲ್ಲದೆ, ಹಕ್ಕಿಗಳಿಂಚರ, ಮುಂಜಾನೆಯ ಮಂಜು, ಸೂರ್ಯನ ಮಂದ ಬಿಸಿಲು ಎಲ್ಲದರ ಲಾಭವನ್ನೂ ಇಲ್ಲಿ ಪಡೆಯಬಹುದು. ಪ್ರಕೃತಿಯೊಳಗೊಂದಾಗುವ ಎಲ್ಲ ಅವಕಾಶ ಇದರಲ್ಲಿದೆ.

6. ಬೆಳಗ್ಗೆ ಚೆನ್ನಾಗಿ ಓಡಿ ಬಂದ ದೇಹಕ್ಕೆ ಒಳ್ಳೆಯ ಉಪಾಹಾರ ಸಿಕ್ಕರೆ, ದೇಹವು ಉಲ್ಲಸಿತಗೊಂಡು ಇಡೀ ದಿನದ ಕೆಲಸಗಗಳಿಗೆ ಪಾಸಿಟಿವಿಟಿಯಿಂದ ತಯಾರಾಗುತ್ತದೆ. ಕೆಲಸದಲ್ಲಿ ಶ್ರದ್ಧೆ, ಏಕಾಗ್ರತೆ ಹೆಚ್ಚುತ್ತದೆ.

7. ಬೆಳಗ್ಗೆದ್ದು ಓಡುವುದರಿಂದ ದೊರಕುವ ಇನ್ನೊಂದು ದೊಡ್ಡ ಲಾಭ ಎಂದರೆ, ನೀವು ಸಮಯ ಉಳಿಸಬಹುದು. ಬೆಳಗ್ಗೆ, ಯಾರ ತೊಂದರೆಯೂ ಇಲ್ಲದೆ, ಕೆಲಸದ ಒತ್ತಡವಿಲ್ಲದೆ ನೀವು ಈ ವ್ಯಾಯಾಮ ಮುಗಿಸಬಹುದು. ದಿನವಿಡೀ, ನಿಮ್ಮ ಇತರ ಕೆಲಸಗಳಿಗೆ ಸಮಯ ಹೊಂದಿಸಬಹುದು.

ಇದನ್ನೂ ಓದಿ: Tips to Keep Joints Healthy: ಹೀಗೆ ಮಾಡಿ, ಕೀಲುಗಳ ಸ್ವಾಸ್ಥ್ಯ ಕಾಪಾಡಿ

Exit mobile version