Site icon Vistara News

Winter Health Tips: ಚಳಿಗಾಲದಲ್ಲಿ ದೇಹದಂತೆಯೇ ಮೆದುಳೂ ಬೆಚ್ಚಗಿರಲಿ

Winter Health Tips

ಕೆಲವು ಆಹಾರಗಳನ್ನು ನಾವು ಹೇಗೆ ಹಾಗೂ ಯಾವಾಗ ತಿನ್ನುತ್ತೇವೆ ಎಂಬುದೂ ಮುಖ್ಯವಾಗುತ್ತದೆ. ಕೆಲವು ಆಹಾರಗಳನ್ನು ನಾವು ಚಳಿಗಾಲದಲ್ಲೇ ತಿಂದರೆ ಹೆಚ್ಚು ಫಲ. ದೇಹದಲ್ಲಿರುವ ಪ್ರಮುಖ ಅಂಗಗಳ ಪೈಕಿ ಹೃದಯದಷ್ಟೇ ಸ್ಥಾನ ಇರುವುದು ಮೆದುಳಿಗೆ. ಆರೋಗ್ಯಕರ ಮಿದುಳು ಇಲ್ಲದಿದ್ದರೆ ಅಥವಾ ಮಿದುಳು ಸರಿಯಾಗಿ ಕೆಲಸ ಮಾಡದಿದ್ದರೆ ಅದರಿಂದ ಜೀವಕ್ಕೆ ತೊಂದರೆಯಿರುವಂಥ ಸಮಸ್ಯೆಗಳಿಂದ ಮೊದಲ್ಗೊಂಡು ಅನೇಕ ಸವಾಲುಗಳು ಎದುರಾಗುತ್ತವೆ. ಹಾಗಾಗಿ ಮೆದುಳಿಗೂ ಒಳ್ಳೆಯದೆಂಬ ಆರೋಗ್ಯಕರ ಆಹಾರಗಳನ್ನು (Winter Health Tips) ನಾವು ಸೇವಿಸುವುದು ಬಹಳ ಮುಖ್ಯ.

ಕಾರಣ ಏನೇ ಇರಲಿ, ಆರೋಗ್ಯಕರ ಆಹಾರ ಸೇವನೆ ಬಹಳ ಮುಖ್ಯ. ನಮ್ಮ ಆರೋಗ್ಯಕ್ಕಾಗಿ ನಾವು ಮಾಡಿಕೊಂಡ ಪ್ರತಿಜ್ಞೆಗಳು, ಬದಲಾವಣೆಗಳು ಎಂದಿಗೂ ನಮ್ಮ ಕೈಬಿಡದು. ಅದರಲ್ಲೂ ಚಳಿಗಾಲದಲ್ಲಿ ಪೋಷಕಾಂಶಯುಕ್ತ ಆಹಾರ ಸೇವನೆ, ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುವುದು ಅತ್ಯಂತ ಅಗತ್ಯವಾದ ಅಂಶ. ಮಿದುಳಿಗೆ ಪೂರಕವಾದ ಪೋಷಕಾಂಶಗಳ ಸೇವನೆ ಮಾಡಿದರೆ, ಮರೆವಿನ ಕಾಯಿಲೆ ಅಲ್ಝೀಮರ್‌ನಂತಹ ಸಮಸ್ಯೆಗಳಿಂದಲೂ ದೂರ ಉಳಿಯಬಹುದು. ಹಾಗಾಗಿ ಚಳಿಗಾಲದಲ್ಲಿ ನಮ್ಮ ಮೆದುಳಿನ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳುವ ಯಾವ ಆಹಾರವನ್ನು ನಾವು ತಿನ್ನುವುದು ಉತ್ತಮ ಎಂಬುದನ್ನು ಇಲ್ಲಿ ನೋಡೋಣ.

ಮೊಟ್ಟೆ

ಮೊಟ್ಟೆಯನ್ನು ವರ್ಷಪೂರ್ತಿ ತಿನ್ನಬಹುದು ಎಂಬ ಸತ್ಯ ಎಲ್ಲರಿಗೂ ತಿಳಿದದ್ದೇ. ಮೊಟ್ಟೆಯ ಉಪಯೋಗಗಳೂ ಗೊತ್ತು. ಮೊಟ್ಟೆಯಿಂದ ಸಿಗುವ ಪೋಷಕಾಂಶಗಳ ಬಗೆಗೆ ಎಲ್ಲರಿಗೂ ಸರಿಯಾದ ಅರಿವಿದೆ. ಆದರೆ, ಮೊಟ್ಟೆಯನ್ನು ಚಳಿಗಾಲದಲ್ಲಿ ತಿನ್ನುವುದರಿಂದ ಸಾಮಾನ್ಯಕ್ಕಿಂತ ಭಿನ್ನವಾದ ಪ್ರಯೋಜನವನ್ನೂ ಪಡೆಯಬಹುದು ಎಂಬ ವಿಚಾರ ನಿಮಗೆ ಗೊತ್ತೇ? ಹೌದು. ತಂಪಾದ ಹವೆಯಲ್ಲಿರುವ ಮೊಟ್ಟೆಯ ಪ್ರಯೋಜನಗಳು ಯಾವಾಗಲೂ ಹೆಚ್ಚು. ಇದು ಮಿದುಳಿಗೆ ಸಂಬಂಧಿಸಿದ ಎಲ್ಲ ಸಮಸ್ಯೆ, ಗಾಯ, ಪಾರ್ಶ್ವವಾಯುವಿನಂತಹ ತೊಂದರೆಗಳನ್ನು ದೂರ ಇಡುತ್ತದೆ. ಹೃದಯ, ತೂಕ ಸಮತೋಲನದಲ್ಲಿಟ್ಟುಕೊಳ್ಳುವುದಕ್ಕೂ ಮೊಟ್ಟೆಯನ್ನು ಚಳಿಗಾಲದಲ್ಲಿ ನೆಮ್ಮದಿಯಿಂದ ಸೇವಿಸಬಹುದು.

ಮೀನು

ಮೀನು ಚುರುಕಾದ ಮಿದುಳಿಗೆ ಆರೋಗ್ಯಪೂರ್ಣ ಆಹಾರ. ಕೇವಲ ಮಿದುಳಿಗಷ್ಟೇ ಅಲ್ಲ, ಹೃದಯ, ಎಲುಬು, ಮಾಂಸಖಂಡಗಳ ಆರೋಗ್ಯಕ್ಕೂ ಮೀನು ಒಳ್ಳೆಯದು. ಡಿಮೆನ್ಶಿಯಾ, ಅಲ್ಝೀಮರ್ಸ್‌ ಮತ್ತಿತರ ಮರೆವಿನ ಕಾಯಿಲೆ ಬರದಂತೆ ತಡೆಗಟ್ಟಲು ಮೀನಿನಲ್ಲಿರುವ ಎಸೆನ್ಶಿಯಲ್‌ ಫ್ಯಾಟಿ ಆಸಿಡ್‌ ಒಳ್ಳೆಯದನ್ನೇ ಮಾಡುತ್ತದೆ.

ಮೊಸರು

ಮೊಸರು ಹೊಟ್ಟೆಗೆ ಬಹಳ ಒಳ್ಳೆಯದು. ಪಚನಕ್ರಿಯೆಯನ್ನು ಚುರುಕಾಗಿಸಲು, ಹಾಗೂ ಮಿದುಳನ್ನು ಆರೋಗ್ಯವಾಗಿಡಲು ಮೊಸರು ಒಳ್ಳೆಯದು. ಮೊಸರು, ನಮ್ಮ ಸಂತೋಷದ ಹಾರ್ಮೋನು ಸೆರೆಟೋನಿನ್‌ ಉತ್ಪಾದನೆಯನ್ನು ಉತ್ತೇಜಿಸುವುದರಿಂದ ಮಾನಸಿಕವಾಗಿ ಸಂತೋಷವಾಗಿರುವುದು ಇದನ್ನು ತಿನ್ನುವುದರಿಂದ ಸಾಧ್ಯವಿದೆ. ಮೊಸರಿನಲ್ಲಿರುವ ಮೆಗ್ನೀಶಿಯಂ, ಪೊಟಾಶಿಯಂ ಮಿದುಳಿಗೆ ಹೆಚ್ಚಿನ ಆಮ್ಲಜನಕ ಪೂರೈಕೆ ಮಾಡುವಲ್ಲಿ ನೆರವಾಗುತ್ತದೆ.

ಬಸಳೆ

ಬಸಳೆಯಲ್ಲಿ ಹೇರಳವಾಗಿರುವ ಪೋಷಕಾಂಶಗಳು ಚಳಿಗಾಲದ ಪರ್ಫೆಕ್ಟ್‌ ಆಯ್ಕೆ. ಇದರಲ್ಲಿ, ಪ್ರೊಟೀನ್‌, ಮೆಗ್ನೀಶಿಯಂ, ವಿಟಮಿನ್‌ ಬಿ ಹಾಗೂ ಸಿ, ಖನಿಜಾಂಶಗಳು ಸಾಕಷ್ಟಿದೆ. ಮಿದುಳಿಗೆ ಸಂಬಂಧಿಸಿದ ತೊಂದರೆಗಳನ್ನು ಕಡಿಮೆಗೊಳಿಸುವಲ್ಲಿ ಬಸಳೆಯ ಪಾತ್ರ ದೊಡ್ಡದು. ಹಾಗಾಗಿ ಚಳಿಗಾಲದಲ್ಲಿ ಸಿಗುವ ತಾಜಾ ಬಸಳೆಯನ್ನು ಅವಗಣನೆ ಮಾಡಬೇಡಿ.

ಟೊಮೇಟೋ

ಡಿಮೆನ್ಶಿಯಾ ಹಾಗೂ ಅಲ್ಝೀಮರ್‌ಗಳಂತಹ ಮರೆವಿನ ಕಾಯಿಲೆಗೆ ಟೊಮೇಟೋ ಒಳ್ಳೆಯ ಮದ್ದು. ಆಲಿವ್‌ ಎಣ್ಣೆಯೊಂದಿಗೆ ಬೇಯಿಸಿಸದ ಟೊಮೇಟೋದಿಂದ ಮಾಡಿದ ತಿನಿಸುಗಳು ದೇಹಕ್ಕೆ ಒಳ್ಳೆಯ ಸಾರವನ್ನು ನೀಡುತ್ತದೆ.

ಕುಂಬಳಕಾಯಿ

ಒಮೆಗಾ 3 ಫ್ಯಾಟಿ ಆಸಿಡ್‌, ವಿಟಮಿನ್‌ ಎ, ಬಿ ಹಾಗೂ ಸಿ, ಪೊಟಾಶಿಯಂ, ಮೆಗ್ನೀಶಿಯಂ ಕುಂಬಳಕಾಯಿಯಲ್ಲಿ ಹೇರಳವಾಗಿರುವುದರಿಂದ ಇದನ್ನು ಚಳಿಗಾಲದಲ್ಲಿ ಬಳಸುವುದು ಅತ್ಯಂತ ಒಳ್ಳೆಯದು. ಮಿದುಳಿಗೆ ಬೀಳುವ ಒತ್ತಡ, ಖಿನ್ನತೆಯಂತಹ ತೊಂದರೆಗಳಿಗೂ ಇದು ಒಳ್ಳೆಯದು. ಇದರ ಬೀಜದ ಸೇವನೆಯಿಂದಲೂ ಅತ್ಯಂತ ಹೆಚ್ಚು ಪ್ರಯೋಜನ ಪಡೆಯಬಹುದು.

ಇದನ್ನೂ ಓದಿ: Health Tips for Winter: ಚಳಿಗಾಲದಲ್ಲಿ ನ್ಯುಮೋನಿಯಾ, ಶ್ವಾಸಕೋಶದ ಸಮಸ್ಯೆಗಳಿಂದ ದೂರ ಇರಲು ಹೀಗೆ ಮಾಡಿ…

Exit mobile version