ಪಾತ್ರೆಯನ್ನು ಫಳಫಳನೆ ಹೊಳೆಯುವಂತೆ ಮಾಡುತ್ತೇವೆ. ಆದರೆ ಪಾತ್ರೆ ತೊಳೆಯುವ ಸ್ಪಾಂಜನ್ನು? (Kitchen Care) ಈ ಬಗ್ಗೆ ಯಾರಾದರೂ ಒಮ್ಮೆಯಾದರೂ ಯೋಚಿಸಿದ್ದೀರಾ? ನಿಮ್ಮ ಸ್ಪಾಂಜ್ ಯಾಕೆ ಕೊಳೆತು ನಾರುವ ಹಾಗೆ ವಾಸನೆ ಬೀರುತ್ತದೆ ಎಂದು ಒಮ್ಮೆಯಾದರೂ ತಲೆಕೆಡಿಸಿಕೊಂಡಿದ್ದೀರಾ? ಕಿಚನ್ ಒರೆಸುವ ಬಟ್ಟೆಯಿಂದ ಕೊಳೆ, ಜಿಡ್ಡನ್ನು ತೆಗೆಯುವುದು ಹೇಗೆ ಎಂದು ಯೋಚನೆ ಮಾಡಿದ್ದೀರಾ? ಮಾಡಿಲ್ಲ ಎಂದಾದರೆ, ಯೋಚನೆ ಮಾಡುವ ಸಮಯ ಈಗ ಬಂದಿದೆ.
ಕಿಚನ್ ಸ್ಪಾಂಜ್ ಹಾಗೂ ಒರೆಸುವ ಬಟ್ಟೆಗಳು ಹೆಚ್ಚು ಉಪಯೋಗಿಸುವ, ಹೆಚ್ಚು ಕೊಳೆಯನ್ನು ತೆಗೆಯಲು ಆಗಾಗ ಬಳಸಲ್ಪಡುವುದರಿಂದ ಇದರಲ್ಲಿ ಅತ್ಯಂತ ಹೆಚ್ಚು ಬ್ಯಾಕ್ಟೀರಿಯಾ ಸಂಗ್ರಹವಾಗುತ್ತದೆ. ಒಂದು ಅಧ್ಯಯನ ಪ್ರಕಾರ ಅಡುಗೆ ಮನೆಯಲ್ಲಿ ಬಳಸುವ ಸ್ಪಾಂಜ್ ಹಾಗೂ ಬಟ್ಟೆಗಳಲ್ಲಿ 362 ಬಗೆಯ ಕೆಟ್ಟ ಬ್ಯಾಕ್ಟೀರಿಯಾಗಳು ಇರುವುದೂ ಕೂಡಾ ಪತ್ತೆಯಾಗಿದೆಯಂತೆ. ಇವು ಕೆಟ್ಟ್ ವಾಸನೆ ಬೀರುವ ಪಾತ್ರೆ ತಳೆಯುವ ಸ್ಪಾಂಜ್ ಹಾಗೂ ಕಿಚನ್ ಕ್ಲೀನ್ ಮಾಡುವ ಬಟ್ಟೆಯಲ್ಲಿರಬಹುದಾದ ಸಾಧ್ಯತೆಗಳು. ಬಹಳಷ್ಟು ಸಾರಿ ನಾವು, ಇದು ಸೋಪಿನ ಜೊತೆಗೇ ಇರುವುದರಿಂದ ಇದನ್ನು ತೊಳೆಯುವ ಪ್ರಸಂಗ ಎಲ್ಲಿ ಬಂದೀತು ಎಂಬ ವಾದ ಮಾಡಿದರೆ ಇಲ್ಲಿ ಉತ್ತರವಿಲ್ಲ. ಆದರೆ, ಅಡುಗೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಂಡರೆ ರೋಗರುಜಿನಗಳಿಂದ ನಾವು ದೂರವಿರಬಹುದು ಎಂಬುದಂತೂ ಸತ್ಯ. ಹಾಗಾಗಿ. ಅಡುಗೆ ಮನೆಯನ್ನು ಸ್ವಚ್ಛ ಮಾಡುವ ವಸ್ತುಗಳನ್ನೂ ನಾವು ಸ್ವಚ್ಛವಾಗಿಯೇ ಇಡಬೇಕಾಗುತ್ತದೆ. ಹಾಗಾದರೆ ಬನ್ನಿ, ಆಗಾಗ ಕಿಚನ್ ಸ್ಪಾಂಜ್ ಹಾಗೂ ಬಟ್ಟೆಗಳನ್ನು ಹೇಗೆ ಸ್ವಚ್ಛಗೊಳಿಸಬಹುದು, ಕೆಟ್ಟ ವಾಸನೆಯಿಂದ ಮುಕ್ತಿ ಹೇಗೆ ಎಂಬುದನ್ನು ನೋಡೋಣ ಬನ್ನಿ.
ಬಿಸಿ ನೀರಿನಲ್ಲಿ ಕುದಿಸಿ
ಪಾತ್ರೆ ತೊಳೆಯುವ ಸ್ಪಾಂಜು ಅಥವಾ ಅಡುಗೆ ಮನೆಯಲ್ಲಿ ಒರೆಸುವ ಬಟ್ಟೆ ಕೆಟ್ಟ ವಾಸನೆ ಬರುತ್ತಿದ್ದರೆ ಅದರಿಂದ ಮುಕ್ತಿ ಪಡೆಯಲು ಸ್ಪಾಂಜನ್ನು, ಅಥವಾ ಬಟ್ಟೆಯಲ್ಲಿ ಬಿಸಿನೀರಿನಲ್ಲಿ ಹಾಕಿ ಸ್ಪಲ್ಪ ಹೊತ್ತು ಕುದಿಸಬೇಕು. ಇದಕ್ಕೇ ಸ್ವಲ್ಪ ಪಾತ್ರೆ ತೊಳೆವ ಸೋಪು ಅಥವಾ ಲಿಕ್ಚಿಡ್ ಅನ್ನು ಹಾಕಿ. ಕೆಟ್ಟ ವಾಸನೆ ದೂರವಾಗುತ್ತದೆ.
ಮೈಕ್ರೋವೇವ್‌ನಲ್ಲಿ ಇಡಿ
ಮೈಕ್ರೋವೇವ್ ಓವನ್ ಅನ್ನು ಪ್ರಿಹೀಟ್ ಮಾಡಿ ಒಂದೆರಡು ನಿಮಿಷಗಳ ಕಾಲ ಸ್ಪಾಂಜ್ ಇಟ್ಟು ಹೀಟ್ ಮಾಡಿ. ನಂತರ ತಣ್ಣಗಾದ ಮೇಲೆ ತೆಗೆಯಿರಿ. ಒದ್ದೆಯಾದ ಸ್ಪಾಂಜ್ ಅನ್ನೇ ಇಡಬೇಕು ಎಂಬುದನ್ನು ನೆನಪಿಡಿ.
ಬ್ಲೀಚ್ ಮಾಡಿ
ಕಿಚನ್ ಸ್ಪಾಂಜ್ ಹಾಗೂ ಬಟ್ಟೆಗಳು ವಾಸನೆ ಬರುತ್ತಿದ್ದರೆ ಅವನ್ನು ಕ್ಲೀನ್ ಮಾಡುವ ಅತ್ಯುತ್ತಮ ತಂತ್ರ ಎಂದರೆ ಬ್ಲೀಚ್ ಮಾಡುವುದು. ಐದರಿಂದ ಏಳು ನಿಮಿಷಗಳ ಕಾಲ ನೆನೆಸಿ ಮತ್ತೆ ಹಿಂಡಿ ಒಣಗಲು ಹಾಕಿ.
ವಿನೆಗರ್ ಬಳಸಿ
ಉಪ್ಪು ಹಾಗೂ ವಿನೆಗರ್ ಅನ್ನು ಬಿಸಿ ನೀರಿಗೆ ಹಾಕಿ ಅದರಲ್ಲಿ ಈ ಸ್ಪಾಂಜ್ ಅಥವಾ ಕಿಚನ್ ಒರೆಸುವ ಬಟ್ಟೆಯನ್ನು ರಾತ್ರಿಯೇ ನೆನೆ ಹಾಕಿ ಬೆಳಗ್ಗೆ ಎದ್ದು ತೊಳೆಯಿರಿ. ಅದರಲ್ಲಿ ಅಂಟಿಕೊಂಡಿರುವ ಜಿಡ್ಡು ಹಾಗೂ ಹಳೆಯ ಉಳಿಕೆಗಳ ಕೊಳೆಯೆಲ್ಲವೂ ಬಿಟ್ಟುಕೊಂಡು ಕ್ಲೀನಾಗುತ್ತದೆ ಹಾಗೂ ವಾಸನೆ ಮುಕ್ತವಾಗುತ್ತದೆ. ನಂತರ ಉತ್ತಮ ಬಿಸಿಲಿನಲ್ಲಿ ಒಣಗಿಸಿ.
ಡಿಸ್ ಇನ್ಫೆಕ್ಟೆಂಟ್ ಬಳಸಿ
ಮನೆಯಲ್ಲಿ ಯಾವುದಾದರೂ ಡಿಸ್‌ಇನ್ಫೆಕ್ಟೆಂಟ್ ಇದ್ದರೆ ಅದನ್ನು ಬಳಸಿ ಸ್ಪಾಂಜ್ ಕ್ಲೀನ್ ಮಾಡಿ. ಇದು ಅದರಲ್ಲಿರುವ ಕೊಳೆಯಲ್ಲಿ ಇರಬಹುದಾದ ಎಲ್ಲ ಕ್ರಿಮಿಗಳನ್ನೂ ತೊಳೆದುಹಾಕಿ ಶುದ್ಧಮಾಡುತ್ತದೆ. ವಾಸನೆಯೂ ಮಾಯವಾಗುತ್ತದೆ.
ಈ ಎಲ್ಲ ಬಗೆಯ ತೊಳೆಯುವ ಕ್ರಮಗಳಿಂದ ಕಿಚನ್‌ನಲ್ಲಿ ನಿತ್ಯವೂ ಬಳಸುವ ಸ್ಪಾಂಜ್ ಹಾಗೂ ಒರೆಸುವ ಬಟ್ಟೆಗಳು ಜಿಡ್ಡು ಜಿಡ್ಡಾಗಿ, ಕೊಳೆಕೊಳೆಯಾಗಿ ಯಾವಾಗಲೂ ಇರುವುದು ತಪ್ಪುತ್ತದೆ. ವಾರಕ್ಕೊಮ್ಮೆಯಾದರೂ ಈ ಬಗೆಯ ಯಾವುದಾದರೊಂದು ತಂತ್ರವನ್ನು ಬಳಸಿ ಕ್ಲೀನ್ ಮಾಡಿತ್ತಿದ್ದರೆ, ಸ್ಪಾಂಜ್ ಬಾಳಿಕೆಯೂ ಹೆಚ್ಚಾಗುತ್ತದೆ. ಕೊಳೆಯೂ ಇಲ್ಲವಾಗಿ, ನಿತ್ಯವೂ ಉಣ್ಣುವ ತಿನ್ನುವ ಪಾತ್ರೆಗಳನ್ನು ತೊಳೆಯುವ ಸ್ಪಾಂಜ್ ಕೂಡ ಶುದ್ಧತೆಯನ್ನು ಕಾಯ್ದುಕೊಂಡಿರುತ್ತದೆ.
ಇದನ್ನೂ ಓದಿ: Health Tips: ಮಲಬದ್ಧತೆ ಎಂಬ ಯಾತನೆ: ನಿತ್ಯ ಜೀವನದಲ್ಲಿದೆ ಸರಳ ಪರಿಹಾರ!