Site icon Vistara News

Lemon benefits: ನಿಂಬೆಹಣ್ಣು ಒಳ್ಳೆಯದೆಂದು ಹೆಚ್ಚು ಸೇವಿಸಿದರೆ ಏನಾಗಬಹುದು ಗೊತ್ತೇ?

lemon

ನಿಂಬೆಹಣ್ಣು ಆರೋಗ್ಯಕ್ಕೆ ಒಳ್ಳೆಯದು, ತೂಕ ಕಡಿಮೆಯಾಗಿಸ ಬಯಸುವ ಎಲ್ಲರೂ ಬೆಳಗ್ಗೆ ನಿಂಬೆಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ಬಿಸಿನೀರಿಗೆ ಹಿಂಡಿ ಜೇನುತುಪ್ಪ ಹಾಕಿ ಕುಡಿಯುವವರೇ. ಮಧ್ಯ ಮಧ್ಯ ಗ್ರೀನ್‌ ಟೀ ಕುಡಿಯುವವರೂ ಆಗಾಗ ಮತ್ತೆ ನಿಂಬೆಹಣ್ಣನ್ನು ಚಹಾಕ್ಕೆ ಹಿಂಡಿ ಬಳಸುವವರೇ. ನಿಂಬೆಹಣ್ಣು ಹಿಂಡಿದ ಗ್ರೀನ್‌ ಟೀ, ಬ್ಲ್ಯಾಕ್‌ ಟೀ, ಲೆಮೆನ್‌ ಟೀ ಸ್ವಾದಕ್ಕೆ ಸೋಲದವರ್ಯಾರು ಹೇಳಿ! ಇನ್ನು ಲೆಮನೇಡ್‌, ಬೇರೆ ಜ್ಯೂಸ್‌ಗಳ ಜೊತೆಗೆ ನಿಂಬೆಹಣ್ಣನ್ನು ನಿತ್ಯ ಸೇವಿಸುವ ಮಂದಿ ಅನೇಕ. ಹಾಗಾದರೆ, ಇಷ್ಟೆಲ್ಲಾ ಒಳ್ಳೆಯದನ್ನು ಮಾಡುವ ನಿಂಬೆಹಣ್ಣಿಗೆ ಕೆಟ್ಟ ಗುಣಗಳು ಯಾವುದೂ ಇಲ್ಲವೇ ಎಂದು ಆಶ್ಚರ್ಯವಾದರೆ ಇಲ್ಲಿ ಕೇಳಿ. ನಿಂಬೆಹಣ್ಣೂ ಕೂಡಾ ಅತಿಯಾದರೆ ಒಳ್ಳೆಯದಲ್ಲ. ಅದರಿಂದಲೂ ಸಾಕಷ್ಟು ತೊಂದರೆಗಳು ಕಟ್ಟಿಟ್ಟ ಬುತ್ತಿ. ಹಾಗಾದರೆ, ನಿಂಬೆಹಣ್ಣಿನಿಂದ ಏನೆಲ್ಲ ಅಡ್ಡ ಪರಿಣಾಮಗಳ ಭೀತಿಯೂ ಇದೆ ಎಂಬುದನ್ನು ನೋಡೋಣ.

೧. ಹಲ್ಲು ಸವೆತ: ನಿಂಬೆಹಣ್ಣಿನ ಅತಿಯಾದ ಸೇವನೆಯಿಂದ ಕಾಡುವ ಸಾಮಾನ್ಯ ತೊಂದರೆ ಎಂದರೆ ಹಲ್ಲಿನ ಸವಕಳಿ. ನಿಂಬೆಹಣ್ಣಿನಲ್ಲಿ ಸಿಟ್ರಿಕ್‌ ಆಸಿಡ್‌ ಇರುವುದರಿಂದ ಈ ಆಸಿಡ್‌ ಹಲ್ಲಿನ ಎನಾಮೆಲ್‌ ಪದರಕ್ಕೆ ಘಾಸಿಯುಂಟು ಮಾಡುತ್ತದೆ. ಹಾಗಾಗಿ ನಿಂಬೆಹಣ್ಣಿನ ಜ್ಯೂಸ್‌, ಟೀ ಮತ್ತಿತರ ಏನೇ ಸೇವಿಸಿದರೂ, ಕೂಡಲೇ ಹಲ್ಲುಜ್ಜುವುದು ಒಳ್ಳೆಯದು. ಆಮೂಲಕ ಹಲ್ಲು ಸವೆಯುವುದನ್ನು ತಪ್ಪಿಸಬಹುದು.

೨. ಸನ್‌ಬರ್ನ್:‌ ನಿಂಬೆಹಣ್ಣು ಚರ್ಮಕ್ಕೆ ಒಳ್ಳೆಯದೆಂದು ಚರ್ಮದ ಸಮಸ್ಯೆ ಇದ್ದವರು ಆಗಾಗ ಹಚ್ಚಿಕೊಳ್ಳುವ ಅಭ್ಯಾಸ ಹೊಂದಿದ್ದರೆ ಇಲ್ಲಿ ಕೇಳಿ. ಅತಿಯಾಗಿ ಹೀಗೆ ಮಾಡುವುದರಿಂದ ಹಾಗೂ ಇದನ್ನು ಹಚ್ಚಿದ ಮೇಲೆ ಬಿಸಿಲಿಗೆ ಹೋಗುವುದರಿಂದ ಫೈಟೋಫೋಟೋಡರ್ಮಟಾಟಿಸ್‌ ಎಂಬ ಚರ್ಮದ ಸಮಸ್ಯೆ ಉಂಟಾಗಬಹುದು. ಇದು ತೀವ್ರತರದ ಸನ್‌ಬರ್ನ್‌ ತೊಂದರೆಯಾಗಿದ್ದು, ಚರ್ಮ ಇದರಿಂದ ಇನ್ನಷ್ಟು ಸಮಸ್ಯೆಗೆ ತುತ್ತಾಗುತ್ತದೆ.

೩. ಬಾಯಿಹುಣ್ಣು: ಕೆಲವು ಸಂಶೋಧನೆಗಳ ಪ್ರಕಾರ ಸಿಟ್ರಿಕ್‌ ಆಸಿಡ್‌ ಅತಿಯಾಗಿ ಸೇವಿಸಿದಾಗ ಬಾಯಿಹುಣ್ಣು ಉಂಟಾಗಬಹುದು. ತುಟಿಯ ಒಳಭಾಗದಲ್ಲಿ, ನಾಲಿಗೆಯ ಸಂದಿಯಲ್ಲಿ ಹುಣ್ಣುಗಳಾಗಿ, ನಿಮ್ಮನ್ನು ಕಾಡಬಹುದು. ಮೊದಲೇ ಬಾಯಿಹುಣ್ಣು ಇದ್ದಾಗ ನಿಂಬೆಹಣ್ಣು ಸೇವಿಸುವುದರಿಂದ ಈ ಸಮಸ್ಯೆ ಇನ್ನಷ್ಟು ಬಿಗಡಾಯಿಸಬಹುದು. ಹಾಗಾಗಿ ಇಂಥ ಸಮಸ್ಯೆ ಇದ್ದಾಗ ಸಮಸ್ಯೆಯನ್ನು ಉದ್ದೀಪಿಸುವ ಆಹಾರಗಳಿಂದ ದೂರವಿರುವುದು ಒಳ್ಳೆಯದು.

೪. ಎದೆಯುರಿ: ನಿಂಬೆಹಣ್ಣಿನ ಜ್ಯೂಸ್‌ ಸೇವನೆಯಿಂದ ಎದೆಯುರಿ ಹೆಚ್ಚೂ ಆಗಬಹುದು, ಕಡಿಮೆಯೂ ಆಗಬಹುದು. ಈ ಬಗ್ಗೆ ಮಿಶ್ರ ಅಭಿಪ್ರಾಯಗಳಿವೆ. ಯಾಕೆಂದರೆ, ನಿಂಬೆಹಣ್ಣಿನ ರಸ ಕುಡಿಯುವುದರಿಂದ ಎದೆಯುರಿ ಕಡಿಮೆ ಮಾಡುತ್ತದೆ ಎಂಬ ನಂಬಿಕೆ ಹಲವು ಕಾಲದಿಂದ ಚಾಲ್ತಿಯಲ್ಲಿದೆ. ಆದರೆ, ಬಹಳ ಸಲ ಇದು ವಿರುದ್ಧವಾಗಿಯೂ ವರ್ತಿಸಬಹುದು. ಯಾಕೆಂದರೆ, ನಿಂಬೆಹಣ್ಣು ನಮ್ಮ ಗಂಟಲು ಹಾಗೂ ಅನ್ನನಾಳದಲ್ಲಿರುವ ಪೆಪ್ಸಿನ್‌ ಎಂಬ ರಸವನ್ನು ಕ್ರಿಯಾಶೀಲಗೊಳಿಸುವ ಶಕ್ತಿ ಹೊಂದಿದೆ. ಇದರಿಂದ ಎದೆಯುರಿ ಉಂಟಾಗುವ ಸಾಧ್ಯತೆಯೂ ಇದೆ. ಹಾಗಾಗಿ, ಆಗಾಗ ಈ ಸಮಸ್ಯೆ ಇರುವ ಮಂದಿ ಇದಕ್ಕೆ ಪರಿಹಾರವನ್ನು ವೈದ್ಯರ ಬಳಿ ತಿಳಿದುಕೊಳ್ಳುವುದು ಉತ್ತಮ.

ಇದನ್ನೂ ಓದಿ: Winter Care Tips | ಚಳಿಗಾಲದಲ್ಲಿ ಬಿಸಿ ಚಹಾ ಹೀರುವುದು ಇಷ್ಟವೇ? ನಿಂಬೆಹುಲ್ಲಿನ ಚಹಾ ಪ್ರಯತ್ನಿಸಿ

೫. ಮೈಗ್ರೇನ್‌: ಮೈಗ್ರೇನ್‌ ತಲೆನೋವಿನ ಸಮಸ್ಯೆ ಇರುವ ಮಂದಿ ಸಿಟ್ರಿಕ್‌ ಆಸಿಡ್‌ ಇರುವ ಹಣ್ಣುಗಳಿಂದ ದೂರವಿರುವುದು ಒಳ್ಳೆಯದು. ಯಾಕೆಂದರೆ ಇದು ಈ ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸಬಲ್ಲದು. ಸಿಟ್ರಿಕ್‌ ಆಸಿಡ್‌ ಹಣ್ಣುಗಳಲ್ಲಿರುವ ಟೈರಮಿನ್‌ ಎಂಬ ರಾಸಾಯನಿಕವೇ ಮೈಗ್ರೇನ್‌ ತೊಂದರೆಯ ಮಂದಿಗೆ ಅಲರ್ಜಿ ತರುತ್ತದೆ.

೬. ಅತಿಯಾದ ಮೂತ್ರ ವಿಸರ್ಜನೆ: ನಿಂಬೆಹಣ್ಣಿನ ಜ್ಯೂಸ್‌ ಹೆಚ್ಚು ಕುಡಿದರೆ, ಹೆಚ್ಚು ಮೂತ್ರವಿಸರ್ಜನೆಯಾಗುತ್ತದೆ ಎಂಬ ನಂಬಿಕೆ ಇದ್ದರೂ ಇದನ್ನು ಪುಷ್ಠೀಕರಿಸುವ ಸಂಶೋಧನೆಗಳಿಲ್ಲ. ಆದರೂ, ನಿಂಬೆಹಣ್ಣನ್ನು ಬಿಸಿನೀರಿನೊಂದಿಗೆ ಸೇವಿಸಿದಾಗ ಇದು ಡೈಯುರೇಟಿಕ್‌ ಆಗಿ ವರ್ತಿಸುವ ಕಾರಣ ಮೂತ್ರ ವಿಸರ್ಜನೆ ಹೆಚ್ಚಾಗಬಹುದು ಎನ್ನಲಾಗುತ್ತದೆ. ಇದು ದೇಹದಲ್ಲಿರುವ ಹೆಚ್ಚಿನ ನೀರು, ಎಲೆಕ್ಟ್ರೋಲೈಟ್‌ ಹಾಗೂ ಸೋಡಿಯಂ ಅಂಶವನ್ನು ಹೊರಹಾಕಿಸುವುದರಿಂದ ನಿರ್ಜಲೀಕರಣ ಅಂದರೆ ಡಿಹೈಡ್ರೇಶನ್‌ ಸ್ಥಿತಿಯೂ ಉಂಟಾಗುವ ಸಂಭವವಿದೆ. ಆದರೆ ಈ ಬಗ್ಗೆ ಪೂರಕ ಸಂಶೋಧನೆಗಳು ನಡೆದಿಲ್ಲ.

ಹಾಗಾದರೆ, ದಿನಕ್ಕೆ ಎಷ್ಟು ನಿಂಬೆಹಣ್ಣು ಸೇವಿಸಬಹುದು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುವುದು ಸಹಜ. ಈ ಬಗ್ಗೆ ಇಷ್ಟೇ ಎಂದು ಹೇಳುವ ಯಾವ ಸಂಶೋಧನೆಗಳು ನಡೆದಿಲ್ಲವಾದರೂ, ದಿನಕ್ಕೆ ಎರಡು ಲೋಟಕ್ಕಿಂತ ಹೆಚ್ಚು ಪ್ರಮಾಣದ ನಿಂಬೆ ಜ್ಯೂಸ್‌ ಅಥವಾ ನಿಂಬೆ ಟೀ ಒಳ್ಳೆಯದಲ್ಲ.

ಇದನ್ನೂ ಓದಿ: Winter Arthritis | ಸಂಧಿವಾತ ಚಳಿಗಾಲದಲ್ಲೇ ಹೆಚ್ಚು ಕಾಡುವುದ್ಯಾಕೆ? ಇಲ್ಲಿದೆ ಪರಿಹಾರೋಪಾಯಗಳು

Exit mobile version