ನಾವು ಉಸಿರಾಡುವ ಗಾಳಿ ಇಂದು ಎಲ್ಲೆಲ್ಲೂ ಕಲುಷಿತವಾಗಿದೆ. ವಾಯು ಮಾಲಿನ್ಯದಿಂದ, ಕೊರೋನಾದ ಕಾರಣದಿಂದ, ಧೂಮಪಾನದ ಚಟದಿಂದ ಹೀಗೆ ನಾನಾ ಕಾರಣಗಳಿಂದ ಇಂದು ಶ್ವಾಸಕೋಶದ ಆರೋಗ್ಯ ಹಲವರಲ್ಲಿ ಕ್ಷೀಣಿಸಿದೆ. ನಗರಗಳಲ್ಲಿ ಶುದ್ಧ ಗಾಳಿಯ ಕೊರತೆಯೂ ಇದರ ಕಾರಣಗಳಲ್ಲೊಂದು. ಹಾಗಾಗಿ ನಾವು ಸೇವಿಸುವ ಆಹಾರದ ವಿಚಾರದಲ್ಲಿ ನಾವು ಸಾಕಷ್ಟು ಜಾಗರೂಕರಾಗಿರಬೇಕು. ಶ್ವಾಸಕೋಶದ ಆರೋಗ್ಯಕ್ಕೆ ಪೂರಕವಾದ, ಜೀವಸತ್ವ, ಖನಿಜಾಂಶ ಹಾಗೂ ಆಂಟಿ ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಯಾವೆಲ್ಲ ಆಹಾರದ ಸೇವನೆ ಒಳ್ಳೆಯದು (lung food) ಎಂಬುದನ್ನು ನೋಡೋಣ.
1. ಬಸಳೆ: ಬಸಳೆಯಲ್ಲಿ ಹೆಚ್ಚು ಆಂಟಿ ಆಕ್ಸಿಡೆಂಟ್‌ಗಳಿರುವುದರಿಂದ ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ) ಹಾಗೂ ಶ್ವಾಸಕೋಶ ಸಂಬಂಧೀ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಬಸಳೆಯಲ್ಲಿ ಅತ್ಯಂತ ಹೆಚ್ಚು ವಿಟಮಿನ್ ಸಿ ಇದ್ದು ಇದು ಶ್ವಾಸಕೋಶದ ಕ್ರಿಯಾಶೀಲತೆಯನ್ನು ಚುರುಕುಗೊಳಿಸುತ್ತದೆ.
2. ಬ್ರೊಕೋಲಿ: ಬ್ರೊಕೋಲಿ ಎಂಬ ಹೂವಿನಂತಹ ತರಕಾರಿಯಲ್ಲಿ ವಿಟಮಿನ್ ಸಿ ಹೇರಳವಾಗಿದ್ದು ಶ್ವಾಸಕೋಶದ ಆರೋಗ್ಯಕ್ಕೆ ಪೂರಕ. ಬ್ರೊಕೋಲಿ ಸೇವಿಸುತ್ತಿದ್ದರೆ ಶ್ವಾಸಕೋಶದ ಕ್ಯಾನ್ಸರ್‌ನಿಂದ ದೂರವಿರಬಹುದು.
3. ಬೆರ್ರಿ ಹಣ್ಣುಗಳು: ಆಂಟಿ ಆಕ್ಸಿಡೆಂಟ್‌ಗಳು ಬೇಕಾದಷ್ಟಿರುವ ಬೆರ್ರಿ ಹಣ್ಣಿನಲ್ಲಿ ವಾತಾವರಣದಲ್ಲಿರುವ ಕಲುಶಿತಗಾಳಿಯಿಂದ ಶ್ವಾಸಕೋಶಕ್ಕೆ ಹಾನಿಯಾಗುವುದನ್ನು ತಪ್ಪಿಸುತ್ತದೆ. ನಿತ್ಯವೂ ಬೆರ್ರಿ ಸೇವಿಸುತ್ತಿದ್ದರೆ ಶ್ವಾಸಕೋಶ ಹೆಚ್ಚು ಚುರುಕಾಗುವುದಲ್ಲದೆ, ಅಸ್ತಮಾದಂತಹ ತೊಂದರೆ ಇರುವ ಮಂದಿಗೂ ಕೊಂಚ ಪರಿಹಾರ ದೊರೆಯುತ್ತದೆ.
4. ಬೆಳ್ಳುಳ್ಳಿ: ಬೆಳ್ಳುಳ್ಳಿಯಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವ ಶಕ್ತಿಯೂ ಸೇರಿದಂತೆ ದೇಹದಲ್ಲಿರುವ ಉರಿಯೂತನ್ನು ಕಡಿಮೆಗೊಳಿಸುವ ತಾಕತ್ತಿದೆ. ಶ್ವಾಸಕೋಶದ ಆರೋಗ್ಯಕ್ಕೆ ಬೆಳ್ಳುಳ್ಳಿ ಬಹಳ ಒಳ್ಳೆಯದು. ಬೆಳ್ಳುಳ್ಳಿಯ ನಿತ್ಯ ಸೇವನೆಯಿಂದ ಶ್ವಾಸಕೋಶದ ಇನ್‌ಫೆಕ್ಷನ್‌ನಂತಹ ಸಮಸ್ಯೆಗಳೂ ದೂರಾಗುತ್ತದೆ.
5. ಅರಿಶಿನ: ಅರಿಶಿನದಲ್ಲಿ ದೇಹದ ಉರಿಯೂತವನ್ನು ಕಡಿಮೆ ಮಾಡುವ ಕರ್‌ಕ್ಯುಮಿನ್ ಎಂಬ ಅಂಶವು ಇದೆ. ಹಾಗಾದಿ ಶ್ವಾಸಕೋಶದಲ್ಲಿರುವ ಶೀತ, ಕಫದಂತಹ ಸಮಸ್ಯೆಗೂ ಉರಿಗೂ ಇದು ಉತ್ತಮ ಪರಿಹಾರ ನೀಡುವುದಲ್ಲದೆ ಶ್ವಾಸಕೋಶದ ಕಾರ್ಯವನ್ನು ಚುರುಕುಗೊಳಿಸುತ್ತದೆ.
6. ಶುಂಠಿ: ಅರಿಶಿನದಂತೆಯೇ ಶ್ವಾಸಕೋಶಕ್ಕೆ ರಕ್ಷಣೆ ಒದಗಿಸುವ, ಶ್ವಾಸಕೋಶದ ಕೆಲಸವನ್ನು ಚುರುಕಾಗಿಸುವ, ಉರಿಯೂತವನ್ನು ಕಡಿಮೆಗೊಳಿಸುವ ಇನ್ನೊಂದು ಆಹಾರ ಶುಂಠಿ. ಶುಂಠಿ ಟೀ ಅಥವಾ ಶುಂಠಿಯನ್ನು ನಿತ್ಯ ಬಳಸುವಿಕೆಯಿಂದ ಶ್ವಾಸಕೋಶದ ಕೆಲಸವನ್ನು ಚುರುಕಾಗಿಸಬಹುದು.
ಶ್ವಾಸಕೋಶದ ಆರೋಗ್ಯಕ್ಕೆ ಕೆಲವು ಸಲಹೆಗಳು:
1. ಧೂಮಪಾನವು ಇಂದು ಶ್ವಾಸಕೋಶದ ಕ್ಯಾನ್ಸರ್ ಹಾಗೂ ರೋಗಗಳಿಗೆ ಪ್ರಮುಖ ಕಾರಣ. ಶ್ವಾಸಕೋಶವನ್ನು ಆರೋಗ್ಯವಾಗಿ ಇರಿಸಿಕೊಳ್ಳಬೇಕೆಂದರಂತೆ ಮೊದಲು ಧೂಮಪಾನದಂತಹ ಕೆಟ್ಟ್ ಚಟಗಳಿದ್ದರೆ ಅದನ್ನು ಬಿಡುವುದು ಅತ್ಯಗತ್ಯ.
ಇದನ್ನೂ ಓದಿ: Health Tips: ನಾರು ಒಳ್ಳೆಯದು; ಆದರೂ ಅತಿಯಾಗಿ ತಿನ್ನಬೇಡಿ!
2. ಶ್ವಾಸಕೋಶ ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡಲು ನಿತ್ಯ ವ್ಯಾಯಾಮ ಅತ್ಯಗತ್ಯ. ಪ್ರತಿನಿತ್ಯ ೩೦ ನಿಮಿಷದ ವ್ಯಾಯಾಮ, ನಡಿಗೆ ಶ್ವಾಸಕೋಶವನ್ನು ಚುರುಕಾಗಿರಿಸುತ್ತದೆ.
3. ವಾಯು ಮಾಲಿನ್ಯ ಅತಿಯಾಗಿದ್ದಾಗ ಹೊರಗಡೆ ವ್ಯಾಯಾಮ, ನಡಿಗೆ ಇತ್ಯಾದಿಗಳನ್ನು ಮಾಡಬೇಡಿ.
4. ಕೈಗಳನ್ನು ಯಾವಾಗಲೂ ಆಗಾಗ ತೊಳೆಯುತ್ತಿರಿ. ಕೈಗಳನ್ನು ಮುಖಕ್ಕೆ ಆಗಾಗ ಸ್ಪರ್ಶಿಸುತ್ತಿರುವುದರಿಂದ ಕೈಗಳ ಮೂಲಕ ಮೂಗಿನಿಂದ ಶ್ವಾಸಕೋಶಕ್ಕೆ ಇನ್‌ಫೆಕ್ಷನ್ ರವಾನೆಯಾಗಬಹುದು. ಶ್ವಾಸಕೋಶದ ಸಮಸ್ಯೆ ಇರುವ ವ್ಯಕ್ತಿಗಳು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು.
5. ಅಗತ್ಯವಿದ್ದರೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ, ಫ್ಲೂ, ನ್ಯುಮೋನಿಯಾ ಹಾಗೂ ಇತರ ಶ್ವಾಸಕೋಶ ಸಂಬಂಧೀ ರೋಗಗಳಿಗೆ ವ್ಯಾಕ್ಸಿನ್ ಹಾಕಿಸಿಕೊಳ್ಳಿ.
ಉತ್ತಮ ಆಹಾರ, ವ್ಯಾಯಾಮದಂತಹ ಚಟುವಟಿಕೆಗಳು ಹಾಗೂ ಶ್ವಾಸಕೋಶಕ್ಕೆ ಪೂರಕ ಆಹಾರ ಸೇವನೆಯಿಂದ ಶ್ವಾಸಕೋಶವನ್ನು ಆರೋಗ್ಯವಾಗಿಟ್ಟುಕೊಳ್ಳಬಹುದು. ಕೆಟ್ಟ ಚಟಗಳಿಂದ ದೂರವಿರುವುದು ಹಾಗೂ ಶಿಸ್ತಿನ ಜೀವನ ರೂಢಿಸಿಕೊಳ್ಳುವುದರಿಂದ ನಿಯಮಿತವಾಗಿ ಉಸಿರಾಟದ ವ್ಯಾಯಾಮ, ಪ್ರಾಣಾಯಾಮಗಳನ್ನು ಮಾಡುವುದರಿಂದ ಶ್ವಾಸಕೋಶವನ್ನು ಚುರುಕಾಗಿಟ್ಟುಕೊಳ್ಳಬಹುದು.
ಇದನ್ನೂ ಓದಿ: Is Mango Good For Diabetes: ಮಧುಮೇಹಿಗಳು ಮಾವಿನಹಣ್ಣು ತಿನ್ನಬಹುದೇ?