Site icon Vistara News

Chocolate Craving: ಚಾಕೋಲೇಟ್‌ ಬಯಕೆ ಹೆಚ್ಚೇ? ಹಾಗಾದರೆ ನಿಮಗೆ ಈ ಪೋಷಕಾಂಶದ ಕೊರತೆಯಿರಬಹುದು!

chocolate craving

ನೀವು ಚಾಕೋಲೇಟ್‌ ಪ್ರಿಯರೇ? ಚಾಕೋಲೇಟ್‌ ಕಂಡರೆ ಮಕ್ಕಳಿಗಿಂತಲೂ ಹೆಚ್ಚು ಆಸೆಪಟ್ಟು ತಿನ್ನುತ್ತೀರೋ? ಸದಾ ನಿಮ್ಮ ಬ್ಯಾಗಿನಲ್ಲಿ, ಪರ್ಸಿನಲ್ಲಿ ಚಾಕೋಲೇಟ್‌ ಇಟ್ಟುಕೊಂಡಿರುತ್ತೀರೋ? ನಿಮ್ಮ ಚಾಕೋಲೇಟನ್ನು ಬೇರೆಯವರೊಂದಿಗೆ ಹಂಚಿಕೊಳ್ಳಲು ಇಷ್ಟಪಡುವುದಿಲ್ಲವೋ? ಹಾಗಿದ್ದರೆ ನೀವು ಚಾಕೋಲೇಟನ್ನು ಅತಿಯಾಗಿ (chocolate craving) ಪ್ರೀತಿಸುತ್ತೀರಿ ಎಂಬುದರಲ್ಲಿ ಡೌಟೇ ಇಲ್ಲ. ಆದರೂ ಈ ಚಾಕೋಲೇಟ್‌ ಪ್ರಿಯತೆ ಒಮ್ಮೊಮ್ಮೆ ಮೇರೆ ಮೀರುವ ಸಂದರ್ಭಗಳನ್ನೂ ನೀವು ಎದುರಿಸಿದ್ದೀರಾ? ಅಂದರೆ, ಇದ್ದಕ್ಕಿದಂತೆ ನಡುರಾತ್ರಿಯಲ್ಲೋ, ಅಥವಾ ಇನ್ನೆಲ್ಲೋ ಭಾಷಣ ಕೇಳುವಾಗಲೋ ಅಥವಾ ಇನ್ಯಾವುದೋ ಕೆಲಸದಲ್ಲಿದ್ದಾಗಲೇ, ಚಾಕೋಲೇಟ್‌ ತಿನ್ನಬೇಕೆಂಬ ಬಯಕೆ ಇದ್ದಕ್ಕಿದ್ದಂತೆ ಮೂಡುವುದು, ಬಹುಶಃ, ಹೀಗೆ ಅನಿಸಬೇಕೆಂದರೆ ನೀವು ಚಾಕೋಲೇಟ್‌ ಪ್ರೇಮಿ ಆಗಿರಲೇಬೇಕಾಗಿಲ್ಲ. ಇಷ್ಟರವರೆಗೆ ಚಾಕೋಲೇಟ್‌ ಇಷ್ಟವಿದ್ದರೂ, ಇದ್ದಕ್ಕಿದ್ದಂತೆ ತಿನ್ನಬೇಕೆಂಬ ಬಯಕೆ ಮೂಡದೆ ಇದ್ದರೂ, ಇತ್ತೀಚೆಗೆ ಯಾಕೋ ಯಾವಾಗಲೂ ಚಾಕೋಲೇಟ್‌ ತಿನ್ನಬೇಕೆಂಬ ಬಯಕೆ ನಿಮ್ಮನ್ನು ಕಾಡುತ್ತಿದ್ದರೆ ಯಾಕೆ ಹೀಗೆ ಎಂದು ತಲೆಕೆಡಿಸಬೇಡಿ. ನಿಮಗೆ ಹೀಗನಿಸುವುದಕ್ಕೆ ನೀವು ಅಂದುಕೊಂಡದ್ದಕ್ಕಿಂತಲೂ ಬೇರೆಯದೇ ಆದ ಕಾರಣಗಳಿರುತ್ತವೆ!

ಹೌದು, ಚಾಕೋಲೇಟ್‌ ಬಯಕೆಯ ನಿಜವಾದ ಕಾರಣ ನಿಮ್ಮಲ್ಲಾಗಿರುವ ಪೋಷಕಾಂಶದ ಕೊರತೆಯೂ ಆಗಿರಬಹುದು. ಕೊಕೋ ಪೌಡರ್‌, ಕೊಕೋ ಬಟರ್‌ ಹಾಗೂ ಸಕ್ಕರೆ ಈ ಮೂರು ಪದಾರ್ಥಗಳು ಹೆಚ್ಚಿರುವ ಚಾಕೋಲೇಟ್‌ನಲ್ಲಿ ಇನ್ನುಳಿದ ಪದಾರ್ಥಗಳು ನೀವು ಯಾವ ಚಾಕೋಲೇಟ್‌ ಇಷ್ಟ ಪಡುತ್ತೀರಿ ಎಂಬುದರ ಮೇಲೆ ನಿರ್ಧರಿತವಾಗಿದೆ. ಮಿಲ್ಕ್‌, ಚಾಕೋಲೇಟ್‌, ಡಾರ್ಕ್‌ ಚಾಕೋಲೇಟ್‌ ಎಕ್ಸ್ಟ್ರಾ ಡಾರ್ಕ್‌ ಚಾಕೋಲೇಟ್‌ ಹೀಗೆ ಬೇರೆ ಬೇರೆ ವಿಧಗಳಿವೆ. ಬಹುತೇಕರು, ಅತಿಯಾದ ಒತ್ತಡ, ಅತಿಯಾದ ಕೆಲಸ, ಹಾರ್ಮೋನಿನ ಏರುಪೇರು ಅಥವಾ ಸಿಹಿ ತಿನ್ನುವ ಬಯಕೆ ಇತ್ಯಾದಿ ಕಾರಣಗಳಿಂದ ಚಾಕೋಲೇಟ್‌ ತಿನ್ನುತ್ತಾರಾದರೂ, ಆರೋಗ್ಯ ತಜ್ಞರು ಈ ಬಯಕೆಗೆ ಕಾರಣ ಕೇವಲ ಇಷ್ಟೇ ಅಲ್ಲ, ಕೆಲವೊಮ್ಮೆ ಮೆಗ್ನೀಷಿಯಂ ಕೊರತೆಯೂ (Magnesium deficiency) ಇರಬಹುದು ಎನ್ನುತ್ತಾರೆ.

ಸಂಶೋಧನೆಗಳ ಪ್ರಕಾರ, ಕೋಕೋ ಪುಡಿಯಲ್ಲಿ ಮೆಗ್ನೀಷಿಯಂ ಅಧಿಕವಾಗಿದೆ. ಹೀಗಾಗಿ ಚಾಕೋಲೇಟ್‌ ಅತಿಯಾಗಿ ಬಯಕೆಯಾಗಲು ಮೆಗ್ನೀಷಿಯಂ ಕೊರತೆಯೇ ಕಾರಣವೂ ಆಗುತ್ತದೆ. ಮೆಗ್ನೀಷಿಯಂ ಕೊರತೆಯಿಂದ ಮಾಂಸಖಂಡಗಳ ದುರ್ಬಲತೆ ಸೇರಿದಂತೆ ಸ್ನಾಯುಗಳಲ್ಲಿ ಸೆಳೆತ ಇತ್ಯಾದಿಗಳೂ ಕಂಡುಬರುತ್ತದೆ. ಮುಖ್ಯವಾಗಿ ಮಹಿಳೆಯರಲ್ಲಿ, ಋತುಚಕ್ರದ (menstruation) ಸಮಯದಲ್ಲಿ ಈ ಸಮಸ್ಯೆಗಳು ಎದುರಾಗುವುದು ಸಾಮಾನ್ಯ. ಆ ಸಂದರ್ಭದಲ್ಲಿ ಚಾಕೋಲೇಟ್‌ ಬಯಕೆ ಹೆಚ್ಚಿರುವುದೂ ಕೂಡಾ ಸಾಮಾನ್ಯವೇ.

ಸಂಶೋಧನೆಗಳ ಪ್ರಕಾರ, ಬಗೆಬಗೆಯ ಚಾಕೋಲೇಟ್‌ಗಳು, ಫ್ಲೇವರ್‌ಗಳಿದ್ದರೂ, ಡಾರ್ಕ್‌ ಚಾಕೋಲೇಟಿನಲ್ಲಿ, ಅದರಲ್ಲೂ 90 ಶೇಕಡಾ ಕೊಕೋ ಪುಡಿ ಹೊಂದಿರುವ ಚಾಕೋಲೇಟ್‌ನಲ್ಲಿ ಅತೀ ಹೆಚ್ಚು ಆರೋಗ್ಯಕರ ಮೆಗ್ನೀಷಿಯಂ ಇದೆ. 100 ಗ್ರಾಂ ಡಾರ್ಕ್‌ ಚಾಕೋಲೇಟಿನಲ್ಲಿ 2522 ಎಂಜಿ ಮೆಗ್ನೀಷಿಯಂ ಇದೆ. ಹಾಗಾಗಿ ಮಹಿಳೆಯರು ಹೆಚ್ಚು ಸಿಹಿ ಇರುವ ಸಾಮಾನ್ಯ ಚಾಕೋಲೇಟ್‌ಗಳಿಗಿಂತ ಈ ಡಾರ್ಕ್‌ ಚಾಕೋಲೇಟ್‌ಗಳ ಸೇವನೆ ಮಾಡುವುದರಿಂದ ಋತುಚಕ್ರದ ಸಮಯದಲ್ಲಿ ಉತ್ತಮ ಫಲ ಕಾಣಬಹುದು. ಹಾಗಂತ ಹೆಚ್ಚು ಸೇವನೆಯೂ ಒಳ್ಳೆಯದಲ್ಲ. ಮಾಂಸಖಂಡಗಳಲ್ಲಿ ನೋವು, ಸ್ನಾಯು ಸೆಳೆತ ಇತ್ಯಾದಿಗಳಿಗೆ ಇದು ಕೊಂಚ ಆರಾಮವನ್ನು ನೀಡಬಹುದು.

ಇದನ್ನೂ ಓದಿ: Food Tips: ಮನೆಯಲ್ಲೇ ಮಿದುವಾದ ಪರ್ಫೆಕ್ಟ್‌ ಇಡ್ಲಿ ಮಾಡಲು ಪಂಚಸೂತ್ರಗಳು!

Exit mobile version