ಕೊರೋನೋತ್ತರ ಕಾಲಘಟ್ಟದಲ್ಲಿ ಹೆಚ್ಚಿದ ಆರೋಗ್ಯ ಸಮಸ್ಯೆಗಳ ಪೈಕಿ ಸಂತಾನೋತ್ಪತ್ತಿ ಸಾಮರ್ಥ್ಯದ ಕೊರತೆಯೂ (Fertility Issue) ಒಂದು. ಹಲವರು ಇಂದು ಸರಿಯಾದ ಸಮಯಕ್ಕೆ ಅಂದುಕೊಂಡ ಹಾಗೆ ಮಕ್ಕಳನ್ನು ಹೊಂದಲಾಗದ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಮುಖ್ಯವಾಗಿ ಪುರುಷರ ಸಂತಾನೋತ್ಪತ್ತಿಯ (Male Fertility) ವಿಚಾರಕ್ಕೆ ಬಂದರೆ ಬಹುಮುಖ್ಯವಾಗಿ ಪುರುಷರನ್ನು ಹೈರಾಣಾಗಿಸುವುದು ವೀರ್ಯದ ಸಂಖ್ಯೆ (sperm count) ಕಡಿಮೆ ಇರುವುದು ಅಥವಾ ಸಾಮರ್ಥ್ಯ ಕುಗ್ಗಿರುವುದು! ಇದಕ್ಕೆ ಇಂಥದ್ದೇ ಎಂಬ ಕಾರಣಗಳನ್ನು ನೀಡಲಾಗದಿದ್ದರೂ, ಇಂದಿನ ಜೀವನಶೈಲಿಯೂ (lifestyle problems) ಕೂಡಾ ಪ್ರಮುಖ ಕಾರಣಗಳಲ್ಲಿ ಒಂದು ಆಗಿರುತ್ತದೆ ಎಂಬುದರಲ್ಲಿ ಸಂಶಯವೇ ಇಲ್ಲ.
ಬಹಳಷ್ಟು ಮಂದಿಗೆ ಲ್ಯಾಪ್‌ಟಾಪನ್ನು ತಮ್ಮ ತೊಡೆಯ ಮೇಲಿರಿಸಿಕೊಂಡೇ ಕೆಲಸ ಮಾಡಿ ಅಭ್ಯಾಸ. ಕೊರೋನಾ ನಂತರದ ಕಾಲಘಟ್ಟದಲ್ಲಿ ಹಲವರ ವೃತ್ತಿ ವರ್ಕ್ ಫ್ರಂ ಹೋಂ ಆದ ನಂತರವಂತೂ ತಮ್ಮ ತಮ್ಮ ಮನೆಗಳಲ್ಲಿ, ಹಾಸಿಗೆಯ ಮೇಲೆ ಆರಾಮ ಭಂಗಿಯಲ್ಲಿ ಕುಳಿತುಕೊಂಡು ಲ್ಯಾಪ್‌ಟಾಪ್ ತೊಡೆಯ ಮೇಲಿರಿಸುವುದು ಬಹುತೇಕರಿಗೆ ಅಭ್ಯಾಸವಾಗಿಬಿಟ್ಟಿದೆ. ಆದರೆ, ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಮುಖ್ಯವಾಗಿ ಪುರುಷರ ಹಾಗೂ ಮಹಿಳೆಯರ ಸಂತಾನೋತ್ಪತ್ತಿಯ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಲ್ಯಾಪ್‌ಟಾಪ್‌ನ ಬಿಸಿ ತೊಡೆಸಂದಿಯ ಭಾಗಕ್ಕೆ ನೇರವಾಗಿ ತಲುಪುದರಿಂದ ಪುರುಷರಲ್ಲಿ ವೀರ್ಯ ಸಂಬಂಧೀ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು.
ನಮಗೆಲ್ಲರಿಗೂ ಈಗ ಸ್ಮಾರ್ಟ್ ಫೋನ್ ಕೈಯಲ್ಲಿ, ನಮ್ಮ ಕಿಸೆಯಲ್ಲಿ ಒಂದೈದು ನಿಮಿಷ ಕಾಣೆಯಾದರೂ ಚಡಪಡಿಕೆ ಶುರುವಾಗುತ್ತದೆ. ಫೋನ್ ಇಲ್ಲದೇ ಜೀವನವೇ ಮುಂದೆ ಸಾಗದು ಎಂಬ ಪರಿಸ್ಥಿತಿ ಎಲ್ಲರದ್ದು. ಆದರೆ, ಒಮ್ಮೆಯಾದರೂ ಈ ಫೋನ್‌ಗಳು ನಮ್ಮ ಆರೋಗ್ಯಕ್ಕೆ ಮಾಡುವ ಹಾನಿಯನ್ನು ಗಮನಿಸಿದ್ದೀರಾ? ಫೋನ್ ನಮ್ಮ ಕಿಸೆಯ ಭಾಗದಲ್ಲೇ ಹೆಚ್ಚು ಹೊತ್ತು ಇಟ್ಟುಕೊಳ್ಳುವುದರಿಂದ ಅದರ ಮೂಲಕ ಬರುವ ವೈಫೈ ಸಿಗ್ನಲ್‌ಗಳು ಇಲೆಕ್ಟ್ರೋ ಮ್ಯಾಗ್ನೆಟಿಕ್ ರೇಡಿಯೇಷನ್ ಪುರುಷರ ವೀರ್ಯದ ಸಂಖ್ಯೆ ಹಾಗೂ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಇವೆಲ್ಲವೂ ಪರೋಕ್ಷವಾಗಿ ಸಂತಾನೋತ್ಪತ್ತಿಯ ಮೇಲೆ ಪರಿಣಾಮ ಬೀರುವ ಜೀವನಕ್ರಮದ ಬದಲಾವಣೆಗಳು.
ಜೀವನಕ್ರಮದಲ್ಲಿ ಕೊಂಚವಾದರೂ ಮಾರ್ಪಾಡು ಮಾಡಿಕೊಳ್ಳದ ಹೊರತು ಈ ಸಮಸ್ಯೆಗೆ ಪರಿಹಾರವಿಲ್ಲ. ಆರೋಗ್ಯಕರ ಆಹಾರ ಸೇವನೆ, ಒತ್ತಡ ರಹಿತ ಜೀವನ, ವಿತ್ಯವೂ ವ್ಯಾಯಾಮ ಇವು ಪ್ರತಿಯೊಬ್ಬನೂ ಗಮನಿಸಬೇಖಾದ ಮುಖ್ಯ ನಿತ್ಯಜೀವನದ ಅಂಶಗಳು. ಅಷ್ಟೇ ಅಲ್ಲ, ವೀರ್ಯವೃದ್ಧಿಗೆ ಎಂಥಾ ಆಹಾರ ಸೇವನೆ ಮಾಡಬೇಕು ಎಂಬುದನ್ನೂ ಗಮನಿಸಬೇಕು. ಪುರುಷರು ತಮ್ಮ ವೀರ್ಯವೃದ್ಧಿಗೆ ಹಾಗೂ ವೀರ್ಯ ಸಾಮರ್ಥ್ಯ ವೃದ್ಧಿಗೆ, ನೆಲ್ಲಿಕಾಯಿ, ಕಪ್ಪು ಒಣ ದ್ರಾಕ್ಷಿ, ಸಿಹಿಯಾದ ಕಲ್ಲಂಗಡಿ ಹಾಗೂ ಖರ್ಬೂಜಾ ಹಣ್ಣುಗಳು, ಎಳನೀರು, ಬಾರ್ಲಿ ನೀರು ಇತ್ಯಾದಿಗಳನ್ನು ಕುಡಿಯಬಹುದು. ಮೊಟ್ಟೆ, ಬಸಳೆ, ಬಾಳೆಹಣ್ಣು, ವಾಲ್ನಟ್, ಕುಂಬಳಕಾಯಿ ಬೀಜ ಇತ್ಯಾದಿಗಳೂ ಕೂಡಾ ವೀರ್ಯ ವೃದ್ಧಿಗೆ ಸಹಾಯ ಮಾಡುತ್ತವೆ. ಝಿಂಕ್ ಹೆಚ್ಚಿರುವ ಆಹಾರಗಳು ವೀರ್ಯ ಉತ್ಪಾದನೆಗೆ ಉತ್ತೇಜನ ನೀಡುವಲ್ಲಿ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ವಿಟಮಿನ್ ಎ, ಬಿ೧ ಹಾಗೂ ಸಿ ಇರುವ ಆಹಾರವನ್ನು ಸೇವಿಸಿದರೆ ವೀರ್ಯದ ಸಾಮರ್ಥ್ಯ ಹಾಗೂ ವೃದ್ಧಿ ಎರಡಕ್ಕೂ ಸಹಾಯವಾಗುತ್ತದೆ.
ಮುಖ್ಯವಾಗಿ ಜಂಕ್ ಫುಡ್‌ನಿಂದ ದೂರವಿರಬೇಕು. ಮನೆಯ ಶುಚಿಯಾದ ದೇಸೀ ಆಹಾರ ಸೇವನೆ ಅಗತ್ಯ. ಆಹಾರದಲ್ಲಿ ಎಲ್ಲ ಪೋಷಕಾಂಶಗಳೂ ಇರುವಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಸಂಸ್ಕರಿಸಿದ ಆಹಾರ, ಅತಿಯಾದ ಸಕ್ಕರೆ ಉಪ್ಪಿರುವ ಪದಾರ್ಥಗಳು, ಕುರುಕಲು ಇತ್ಯಾದಿಗಳಿಂದ ದೂರವಿರುವುದು ಒಳ್ಳೆಯದು.
ಎಲ್ಲಕ್ಕಿಂತ ಮುಖ್ಯವಾಗಿ, ಬೆಳಗ್ಗಿನಿಂದ ರಾತ್ರಿಯವರೆಗೆ ಕೂತು ಕೆಲಸ ಮಾಡುವ ಮಂದಿಗೆ ಸರಿಯಾದ ವ್ಯಾಯಾಮ ಕೂಡಾ ಅತ್ಯಗತ್ಯ. ಅತಿಯಾದ ಒತ್ತಡದಿಂದ ದೂರವಿರುವುದರ ಜೊತೆಗೆ ಮಾನಸಿಕ ಹಾಗೂ ದೈಹಿಕವಾಗಿ ಚುರುಕಾಗಿರುವುದು ಅಗತ್ಯ. ಎಷ್ಟೇ ಒತ್ತಡವಿದ್ದರೂ, ಎಷ್ಟೇ ಕೆಲಸವಿದ್ದರೂ ನಮಗೆ ಮಾನಸಿಕ ನೆಮ್ಮದಿಯನ್ನು ಕೊಡುವ ಹವ್ಯಾಸಗಳನ್ನು, ಗೆಳೆಯರ, ಪ್ರೀತಿಪಾತ್ರರ ಜೊತೆಗಿನ ಉಲ್ಲಾಸದಾಯಕ ಸಮಯವನ್ನು ಕಳೆಯುವುದಕ್ಕೂ ಮೀಸಲಿಡಿ. ಯಾವುದರಿಂದ ಸಂತೋಷ ಸಿಗುತ್ತದೆಯೋ ಅಂಥದ್ದಕ್ಕೆ ಪ್ರತಿಯೊಬ್ಬರೂ ಕೊಂಚ ಕಾಲ ಇಟ್ಟುಕೊಳ್ಳುವುದು ಅತ್ಯಗತ್ಯ. ಅಷ್ಟೇ ಅಲ್ಲ, ನಿತ್ಯದ ವ್ಯಾಯಾಮಕ್ಕೂ ದಿನದಲ್ಲಿ ಅರ್ಧ ಗಂಟೆಯಾದರೂ ಇಡುವುದು ಒಳ್ಳೆಯದು. ಅಷ್ಟೇ ಅಲ್ಲ, ಸಮಸ್ಯೆ ಬಗ್ಗೆ ಅರಿವು ಬಂದಾಗ, ವೈದ್ಯರ ಸಲಹೆ ಸೂಚನೆಗಳ ಪಾಲನೆ, ಸಮಯಕ್ಕೆ ಸರಿಯಾದ ಔಷಧಿ ಸೇವನೆಯೂ ಮುಖ್ಯ.
ಇದನ್ನೂ ಓದಿ: ಗಂಡು-ಹೆಣ್ಣು ಕೂಡದೇ ಮಗು ಹುಟ್ಟುತ್ತೆ! ವೀರ್ಯ, ಅಂಡಾಣು ಇಲ್ಲದೇ ಸಿಂಥೆಟೆಕ್ ಸೆಲ್‌ನಿಂದ ಮಾನವ ಪಿಂಡ ಸೃಷ್ಟಿ