Site icon Vistara News

Mango Benefits: ಮಾವಿನಹಣ್ಣು ತಿನ್ನುವ ಮೊದಲು ಒಂದೆರಡು ಗಂಟೆ ನೀರಲ್ಲಿ ನೆನೆಹಾಕಲೇ ಬೇಕು!

mango

ಬೇಸಿಗೆ ಬಂದಾಕ್ಷಣ ಅಯ್ಯೋ ಸೆಖೆ ಎಂದು ಬೇಸಿಗೆಯನ್ನು ಬೈದುಕೊಂಡರೂ ಖುಷಿಪಡಲು ನೂರು ಕಾರಣಗಳು ನಮ್ಮ ಕಣ್ಣ ಮುಂದಿವೆ. ಅವುಗಳಲ್ಲಿ ಮುಖ್ಯವಾದ ಕಾರಣ ಮಾವಿನಹಣ್ಣು. ಬೇಸಿಗೆ ಎಂದರೆ ಮಾವಿನಹಣ್ಣು, ಮಾವಿನಹಣ್ಣು ಎಂದರೆ ಬೇಸಿಗೆ ಎಂಬಷ್ಟು ನಂಟು ಇವೆರಡಕ್ಕೂ ಇದೆ. ಹಣ್ಣುಗಳ ರಾಜನೆಂಬ ಅರ್ಹ ಪಟ್ಟ ಗಳಿಸಿರುವ ಮಾವಿನಹಣ್ಣು ಹೆಚ್ಚು ತಿಂದರೆ ಏನಾದರೊಂದು ಸಮಸ್ಯೆ ಎದುರಾಗುತ್ತದೆ ಎಂದು ಭಯವಿರುವ ಮಾವು ಪ್ರಿಯ ಮಂದಿಯೆಲ್ಲ ಅನಾದಿಕಾಲದಿಂದಲೂ ನಮ್ಮ ಹಿರಿಯಲು ಪಾಲಿಸಿಕೊಂಡು ಬಂದ ಈ ಒಂದು ತಂತ್ರವನ್ನು ಹಣ್ಣು ತಿನ್ನುವ ಮೊದಲು (soak mangoes) ನೆನಪಿಟ್ಟುಕೊಳ್ಳಬೇಕು.

ಹೊಂಬಣ್ಣಕ್ಕೆ ತಿರುಗಿ ಮಾರುಕಟ್ಟೆಯಲ್ಲಿ ಕಣ್ಣು ಕುಕ್ಕುವ ಮಾವಿನಹಣ್ಣನ್ನು ಮನೆಗೆ ತಂದ ಕೂಡಲೇ ತೊಳೆದುಕೊಂಡು ಕತ್ತರಿಸಿ ಕೆಲವೊಮ್ಮ ಸಿಪ್ಪೆ ತೆಗೆದು ಸ್ವಾಹಾ ಮಾಡುತ್ತೇವಲ್ಲವೇ, ಇದಕ್ಕೂ ಮೊದಲು ನಾವು ಪಾಲಿಸಲೇಬೇಕಾದ ಒಂದು ಹಂತವಿದೆ ಎಂದರೆ ನಂಬುತ್ತೀರಾ? ಹೌದು. ಮಾವಿನಹಣ್ಣು ತಿನ್ನುವ ಮೊದಲು ನೀರಿನಲ್ಲಿ ಒಂದೆರಡು ಗಂಟೆ ನೆನೆಸಬೇಕಂತೆ! ಒಂದೆರಡು ಗಂಟೆ ನೆನೆಸಲು ಪುರುಸೊತ್ತಿಲ್ಲ, ಅರ್ಜೆಂಟಾಗಿ ಬಾಯಿಗಿಳಿಸಬೇಕು ಎಂಬ ಉತ್ತರ ನಿಮ್ಮದಾಗಿದ್ದರೆ ಕನಿಷ್ಟ ಅರ್ಧ ಗಂಟೆಯಾದರೂ ನೆನೆಸುವುದು ಒಳ್ಳೆಯದಂತೆ.

ಹೌದು. ಮಾವಿನಹಣ್ಣನ್ನು ನೆನೆಸಿ ತಿನ್ನುವುದು ಒಳ್ಳೆಯದು ಎಂದು ಹಿರಿಯರಷ್ಟೇ ಅಲ್ಲ, ಆಹಾರ ತಜ್ಞರೂ ಹೇಳುತ್ತಾರೆ. ಹಾಗಾದರೆ, ಹೀಗೆ ನೆನೆಹಾಕುವುದರಿಂದ ಇರುವ ಲಾಭವಾದರೂ ಏನು ಎಂಬುದಕ್ಕೆ ಇಲ್ಲಿ ಉತ್ತರವಿದೆ. ನೆನೆ ಹಾಕುವುದರಿಂದ ಮಾವಿನಹಣ್ಣಿನಲ್ಲಿರುವ ಹೆಚ್ಚಿನ ಫೈಟಿಕ್‌ ಆಸಿಡ್‌ ಅನ್ನು ತೆಗೆದು ಹಾಕಬಹುದು. ಫೈಟಿಕ್‌ ಆಸಿಡ್‌ ಒಂದು ಆಂಟಿ ನ್ಯೂಟ್ರಿಯೆಂಟ್‌ ಆಗಿದ್ದು, ಇದು ದೇಹದಲ್ಲಿ ಕಬ್ಬಿಣಾಂಶ, ಕ್ಯಾಲ್ಶಿಯಂ ಮತ್ತಿತರ ಖನಿಜಾಂಶಗಳನ್ನು ದೇಹ ಹೀರಿಕೊಳ್ಳುವಲ್ಲಿ ತಡೆಯನ್ನು ಉಂಟು ಮಾಡುತ್ತದೆ. ಇದರಿಂದ ದೇಹದಲ್ಲಿ ಖನಿಜಾಂಶ ಕಡಿಮೆಯಾಗಿ ನಿಶಃಕ್ತಿ ಬರುತ್ತದೆ. ನೀರಿನಲ್ಲಿ ಮಾವಿನಹಣ್ಣನ್ನು ನೆನೆಸುವುದರಿಂದ ಅದರಲ್ಲಿರುವ ಫೈಟಿಕ್‌ ಆಸಿಡ್‌ ಅಂಶವು ಕಡಿಮೆಯಾಗಿ ದೇಹ ಹೆಚ್ಚಿನ ಪೋಷಕಾಂಶಗಳನ್ನು ಹಾಗೂ ಖನಿಜಾಂಶಗಳನ್ನು ಹೀರಿಕೊಳ್ಳಲು ಅವಕಾಶ ಮಾಡಿಕೊಡಬಹುದು. ತೆಗೆದುಕೊಂಡ ಆಹಾರದಲ್ಲಿರುವ, ಮಾವಿನಹಣ್ಣಿನಲ್ಲಿರುವ ಎಲ್ಲ ಪೋಷಕಾಂಶಗಳು ದೇಹದಲ್ಲಿ ಸಮರ್ಪಕವಾಗಿ ಬಳಕೆಯಾಗುತ್ತದೆ. ಅಷ್ಟೇ ಅಲ್ಲ, ಹೀಗೆ ನೆನೆಸುವುದರಿಂದ ನೀವು ಮೊಡವೆ, ಕಜ್ಜಿ, ತುರಿಕೆಗಳಂತಹ ಚರ್ಮದ ತೊಂದರೆಗಳು, ತಲೆನೋವು, ಮಲಬದ್ಧತೆ ಹಾಗೂ ಜೀರ್ಣಕ್ರಿಯೆ ಸಮಸ್ಯೆಗಳಿಂದ ತೊಂದರೆ ಪಡುತ್ತಿದ್ದರೆ, ಅವೂ ಕೂಡಾ ಕಡಿಮೆಯಾಗುತ್ತದೆ.

ಇದನ್ನೂ ಓದಿ: Mango Diet: ತೂಕ ಇಳಿಸುವ ಮಂದಿಯೂ ಚಿಂತೆಯಿಲ್ಲದೆ ಮಾವಿನಹಣ್ಣು ತಿನ್ನಿ: ಇಲ್ಲಿವೆ ಟಿಪ್ಸ್!

ಇನ್ನು ಮಾವಿನಹಣ್ಣಿನ ಕಾಲದಲ್ಲಿ ಮಾವಿನಹಣ್ಣನ್ನು ಹಾಗೆಯೇ ತಿನ್ನುವುದರಿಂದ ಸಿಗುವ ಪ್ರಯೋಜನದಷ್ಟು ಬೇರೆ ರೂಪದಲ್ಲಿ ತಿಂದರೆ ಸಿಗುವುದಿಲ್ಲ ಎಂದೂ ಹೇಳುತ್ತಾರೆ ತಜ್ಞರು. ಮಾವಿನಹಣ್ಣಿನ ಶೇಕ್‌, ಆಮ್‌ರಸ್‌ ಇವನ್ನು ಮಾಡಿ ಕುಡಿಯುವ ಮಂದಿಯೇ ಅಧಿಕ. ಆದರೆ, ನೆನಪಿಡಿ, ಹುಳಿಯಾದ ಮಾವಿನಹಣ್ಣನ್ನೂ ಹಾಲನ್ನೂ ಬೆರೆಸುವುದು ಒಳ್ಳೆಯ ಅಭ್ಯಾಸವಲ್ಲ ಎನ್ನುತ್ತದೆ ಆಯುರ್ವೇದ. ಎರಡು ವಿರುದ್ಧ ಗುಣಗಳ ಆಹಾರವನ್ನು ಬೆರೆಸುವುದರಿಂದ ಜೀರ್ಣಕ್ರಿಯೆ, ಅಸಿಡಿಟಿ ಮತ್ತಿತರ ಸಮಸ್ಯೆಗಳೇ ಹೆಚ್ಚಾಗುತ್ತದೆಯಂತೆ. ಹಾಗಾಗಿ ಹುಳಿಯ ಮಾವಿನಹಣ್ಣಿಗೆ ಸಾಕಷ್ಟು ಸಕ್ಕರೆ ಸುರಿದು ಶೇಕ್‌ ಮಾಡುವ ಮೊದಲು ನಿಮ್ಮ ಆರೋಗ್ಯದ ಬಗ್ಗೆ ನಿಗಾ ವಹಿಸಿ.

ಸಿಹಿಯಾದ ಮಾವಿನಹಣ್ಣು ಸಿಕ್ಕಿದರೆ ನೆಮ್ಮದಿಯಿಂದ ಶೇಕ್‌ ಮಾಡಿ ಹೀರಿ. ಇದು ವಾತ ಹಾಗೂ ಪಿತ್ತವನ್ನು ಶಮನಗೊಳಿಸುತ್ತದಂತೆ. ಮುಖ್ಯವಾಗಿ ನಮ್ಮ ಚರ್ಮವನ್ನು ಇನ್ನೂ ತಿಳಿಗೊಳಿಸಿ ಕಾಂತಿ ತರುತ್ತದೆ. ಹಾಗೂ ಇದು ದೇಹಕ್ಕೆ ಬೇಸಿಗೆಯಲ್ಲಿ ತಂಪುಕಾರಕವಾಗಿಯೂ ಸಹಾಯ ಮಾಡುತ್ತದೆ. ಯಾವ ಚಿಂತೆಯೂ ಇಲ್ಲದೆ ಇಂತಹ ಸಿಹಿ ಮಾವಿನ ಹಣ್ಣಿನ ಶೇಕ್‌ಗಳನ್ನು ತಂಪಾಗಿ ಹೀರಿಕೊಂಡು ಬೇಸಿಗೆಯ ಮಜಾವನ್ನು ಅನುಭವಿಸಬಹುದು.

ಇದನ್ನೂ ಓದಿ: Is Mango Good For Diabetes: ಮಧುಮೇಹಿಗಳು ಮಾವಿನಹಣ್ಣು ತಿನ್ನಬಹುದೇ?

Exit mobile version