ಹೇಳಿ ಕೇಳಿ ಬೇಸಿಗೆ ಕಾಲ. ಬೇಸಿಗೆ ಬಂತೆಂದರೆ ಎಲ್ಲರೂ ಖುಷಿ ಪಡುವುದು ಹಣ್ಣುಗಳ ರಾಜ ಮಾವಿನ ಹಣ್ಣಿನ (Mango For Diabetes) ಆಗಮನಕ್ಕೆ. ಬೇಸಿಗೆಯ ಬರವಿಗಾಗಿ ಜಾತಕ ಪಕ್ಷಿಯಂತೆ ಕಾದು ಕೂರುವವರ ಹಿಂದಿನ ಆಸಕ್ತಿಯ ಕಾರಣಗಳಲ್ಲಿ ಪ್ರಮುಖವಾದದ್ದು ಇದೇ. ಮಾವಿನ ಹಣ್ಣಿನ ಸುಗ್ಗಿಯ ಕಾಲ. ನಾನಾ ಬಗೆಯ, ರುಚಿರುಚಿಯಾದ, ಅಮೃತದಂತಹ ಮಾವಿನ ಹಣ್ಣಿನ ರುಚಿಗೆ, ಅದರ ಘಮಕ್ಕೆ ಮನಸೋಲದವರು ಯಾರು ಹೇಳಿ! ಸಾಕಷ್ಟು ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಬಿ6, ವಿಟಮಿನ್ ಕೆ ಸೇರಿದಂತೆ ಖನಿಜಾಂಶಗಳಾದ ತಾಮ್ರ, ಫೋಲೇಟ್, ಮೆಗ್ನೀಶಿಯಂ, ಪೊಟಾಶಿಯಂ ಇತ್ಯಾದಿಗಳನ್ನೂ ಹೊಂದಿರುವ ಹಣ್ಣು ಮಾವಿನಹಣ್ಣು. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ರಕ್ತದೊತ್ತಡದ ಸಮತೋಲನಕ್ಕೂ ಸಹಾಯ ಮಾಡುವ ಈ ಹಣ್ಣಿನಿಂದ ಸಾಕಷ್ಟು ಆರೋಗ್ಯಕರ ಲಾಭಗಳಿವೆ. ಆದರೆ, ಈ ಹಣ್ಣಿನ ಬಗ್ಗೆ ಇರುವ ಒಂದೇ ದೂರೆಂದರೆ, ಸಾಕಷ್ಟು ಸಕ್ಕರೆಯ ಅಂಶ ಇದರಲ್ಲಿ ಇರುವುದರಿಂದ ಮಧುಮೇಹಿಗಳು ಮಾವಿನಹಣ್ಣಿನಿಂದ ದೂರವಿರಬೇಕು ಎಂಬ ಸತ್ಯ.
ಹೌದು. ಮಧುಮೇಹಿಗಳಿಗೆ ಮಾವಿನಹಣ್ಣು ಎಷ್ಟೇ ಪ್ರಿಯವೇ ಆಗಿದ್ದರೂ, ವೈದ್ಯರು ಹೇಳುವ ಮಾತು ಎಂದರೆ, ಮಾವಿನಹಣ್ಣು ಸೇರಿದಂತೆ ಕೆಲವು ಹೆಚ್ಚು ಸಕ್ಕರೆ, ಕ್ಯಾಲರಿ ಇರುವ ಹಣ್ಣುಗಳಿಂದ ದೂರವಿರಿ ಎಂಬುದು. ಆದರೆ ಮಾರುಕಟ್ಟೆಯಲ್ಲಿ ಬಿದ್ದಿರುವ ಮಾವಿನ ಹಣ್ಣಿನ ರಾಶಿಯನ್ನು ನೋಡಿದರೆ ದೂರವಿರಲು ಯಾರಿಗೆ ತಾನೇ ಸಾಧ್ಯವಾಗುತ್ತದೆ ಹೇಳಿ. ಬೇಸಿಗೆಯಲ್ಲಿ ಮಾವಿನ ಹಣ್ಣಿನಿಂದ ದೂರವಿರಲು ತಪಸ್ಸನ್ನೇ ಮಾಡಬೇಕಾಗುತ್ತದೆ ಎಂದು ಮಧುಮೇಹಿಗಳು ನಿರಾಶರಾಗಬೇಕಿಲ್ಲ. ಮಾವಿನಹಣ್ಣನ್ನು ಅವರೂ ತಿನ್ನಬಹುದು. ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರದಂತೆ ಮಾವಿನಹಣ್ಣನ್ನು ಹೇಗೆ ತಿನ್ನಬಹುದು (Mango For Diabetes) ಎಂಬುದನ್ನು ನೋಡೋಣ ಬನ್ನಿ.
ಹೇಗೆ ಸವಿಯಬೇಕು ಅನ್ನೋದು ಮುಖ್ಯ
ನಿಮಗೆ ಮಾವಿನಹಣ್ಣು ತಿನ್ನಲಾಗುತ್ತಿಲ್ಲ ಎಂಬ ಬೇಸರ ಬೇಡ. ನೀವೂ ಎಲ್ಲರಂತೆ ಬೇಸಿಗೆಯಲ್ಲಿ ಮಾವನ್ನು ಸವಿಯಬಹುದು. ಆದರೆ, ಹೇಗೆ ಸವಿಯಬೇಕು ಎಂಬುದನ್ನು ಮಾತ್ರ ಕೊಂಚ ಎಚ್ಚರಿಕೆಯಿಂದ ತಿಳಿದುಕೊಳ್ಳಬೇಕು. ತಜ್ವರ ಪ್ರಕಾರ ಸಾಮಾನ್ಯ ಗಾತ್ರದ ಒಂದು ಮಾವಿನ ಹಣ್ಣನ್ನು ದಿನಕ್ಕೆ ಒಂದು ತಿನ್ನಬಹುದು. ಸಾಮಾನ್ಯ ಗಾತ್ರದ ಒಂದು ಮಾವಿನಹಣ್ಣಿನಲ್ಲಿ ೫೦ ಗ್ರಾಂ ಕಾರ್ಬೋಹೈಡ್ರೇಟ್ ಇರುತ್ತದೆ. ಹಾಗಾಗಿ ದಿನಕ್ಕೆ ಅರ್ಧ ಅಥವಾ ಒಂದು ಮಾವಿನ ಹಣ್ಣಿಗಿಂತ ಹೆಚ್ಚು ತಿನ್ನುವ ಹಠಕ್ಕೆ ಬೀಳಬೇಡಿ.
ಬೇರೆ ಆಹಾರದ ಜತೆ ತಿನ್ನಿ
ಮಾವಿನ ಹಣ್ಣನ್ನು ಬೇರೆ ಆಹಾರದ ಜೊತೆಗೆ ತಿನ್ನಿ. ಒಳ್ಳೆಯ ಕೊಬ್ಬಿರುವ, ನಾರಿನಂಶವಿರುವ ಆಹಾರವನ್ನು ಮಾವಿನ ಹಣ್ಣಿನ ಜೊತೆಜೊತೆಗೇ ತಿನ್ನುವುದು ಒಳ್ಳೆಯದು. ಬಾದಾಮಿ, ವಾಲ್ನಟ್, ನಿಂಬೆ ಹಣ್ಣು ಹಿಂಡಿದ ನೀರಿನಲ್ಲಿ ನೆನೆಸಿದ ಚಿಯಾ ಬೀಜಗಳು ಇತ್ಯಾದಿಗಳನ್ನು ಮಾವಿನ ಹಣ್ಣು ತಿನ್ನುವಾಗಲೇ ತಿಂದರೆ ಮಾವಿನ ಹಣ್ಣಿನಿಂದಾಗಿ ನಿಮ್ಮ ದೇಹದ ಗ್ಲುಕೋಸ್ ಒಡನೆಯೇ ಏರುವುದಿಲ್ಲ.
ತಿನ್ನುವ ಸಮಯ ಮುಖ್ಯ
ಮಾವಿನ ಹಣ್ಣನ್ನು ತಿನ್ನುವ ಸಮಯ ಬಹಳ ಮುಖ್ಯ. ರಾತ್ರಿ ತಿನ್ನಬೇಡಿ. ನೀವು ಅತ್ಯಂತ ಚುರುಕಾಗಿರುವ, ಕ್ರಿಯಾಶೀಲರಾಗಿರುವ ಸಮಯದಲ್ಲಿ ಮಾವಿನಹಣ್ಣು ಸೇವಿಸಿ. ನೀವು ಹೆಚ್ಚು ಓಡಾಡಿಕೊಂಡಿರುವ, ವಾಕಿಂಗ್ ಮಾಡುವ ಮೊದಲು, ವರ್ಕೌಟ್ ಮಾಡುವ ಮೊದಲು, ಅಥವಾ ಯಾವುದಾದರೂ ದೈಹಿಕವಾದ ಕೆಲಸ ಮಾಡುವ, ಶ್ರಮ ವಹಿಸುವ ಮೊದಲು ಮಾವು ತಿನ್ನಿ.
ಇದನ್ನೂ ಓದಿ: Cooking In An Iron Pot: ಕಬ್ಬಿಣದ ಪಾತ್ರೆಯಲ್ಲಿ ಅಡುಗೆ ಮಾಡುವುದು ಒಳ್ಳೆಯದು! ಯಾಕೆ ಗೊತ್ತೇ?
ತಿನ್ನುವ ಪ್ರಮಾಣ ಮಹತ್ವದ್ದು
ನೀವು ಮಾವಿನಹಣ್ಣನ್ನು ಹೇಗೆ ತಿನ್ನುತ್ತೀರಿ ಎಂಬುದೂ ಮುಖ್ಯ. ಮಾವಿನಹಣ್ಣನ್ನು ಹಾಗೆಯೇ, ತಿಂದರೆ ಅತ್ಯಂತ ಒಳ್ಳೆಯದು. ಬದಲಾಗಿ ಮಾವಿನ ಹಣ್ಣಿನ ಶೇಕ್ ಅಥವಾ ಇನ್ನೂ ಏನೇನೋ ಸಿಹಿತಿನಿಸು, ಡೆಸರ್ಟ್ ಅಥವಾ ಖಾದ್ಯಗಳ ರೂಪದಲ್ಲಿ ತಿನ್ನುವುದರಿಂದ ಪರಿಣಾಮ ಹೆಚ್ಚೇ ಆಗಬಹುದು. ಮಾವಿನಹಣ್ಣನ್ನು ಹಾಗೆಯೇ ತಿನ್ನುವುದರಿಂದ ಪರಿಣಾಮ ಕಡಿಮೆ. ಮಧುಮೇಹಿಗಳು ಹಣ್ಣು ತಿನ್ನಲೇಬಾರದು ಎಂಬ ನಿಯಮವಿಲ್ಲ. ಹೇಗೆ, ಯಾವಾಗ ಮತ್ತು ಎಷ್ಟು ತಿನ್ನುತ್ತಾರೆ ಎಂಬುದು ಮುಖ್ಯ. ಸರಿಯಾದ ಸಮಯದಲ್ಲಿ ಸರಿಯಾದ ಪ್ರಮಾಣದಲ್ಲಿ ಹಣ್ಣು ತಿಂದರೆ ದೇಹಕ್ಕೆ ಒಳ್ಳೆಯದೇ ಆಗುತ್ತದೆ ಎಂಬುದು ನೆನಪಿರಲಿ.