ಹಸಿ ಮೊಟ್ಟೆಯನ್ನು ಉಪಯೋಗಿಸಿ ಮೆಯೋನೀಸ್ ತಯಾರಿಸುವುದನ್ನು ಇತ್ತೀಚೆಗೆ ಕೇರಳ ಸರಕಾರ ನಿಷೇಧಿಸಿದೆ. ವಿಷಾಹಾರದಿಂದ ಆರೋಗ್ಯ ಏರುಪೇರಾದ ಹಲವಾರು ಪ್ರಕರಣಗಳು ರಾಜ್ಯದಲ್ಲಿ ವರದಿಯಾದ ಬೆನ್ನಿಗೆ, ಹಸಿ ಮೊಟ್ಟೆ ಬಳಸಿ ಮೆಯೋನೀಸ್ ತಯಾರಿಕೆ, ದಾಸ್ತಾನು ಮತ್ತು ಮಾರಾಟವನ್ನು ಸರಕಾರ ನಿಷೇಧಿಸಿದೆ. ಹಸಿ ಮೊಟ್ಟೆಯ ಮೆಯೋನೀಸ್ ಬದಲು ಸಸ್ಯಜನ್ಯ ಅಥವಾ ಪ್ಯಾಶ್ಚರೀಕರಿಸಿದ ಮೆಯೋನೀಸ್ ಬಳಸಲು ಹೊಟೇಲ್, ರೆಸ್ಟೋರೆಂಟ್‌ಗಳು ಸೇರಿದಂತೆ ಆಹಾರ ಉದ್ದಿಮೆಗಳಿಗೆ ಸೂಚಿಸಲಾಗಿದೆ.
ಮೆಯೋನೀಸ್ ಅನಾರೋಗ್ಯಕರವೇ?: ಇಲ್ಲ ಎನ್ನಲಾಗದು. ಕಾರಣ, ಅದರ ಬಳಕೆಯಲ್ಲಿ ಮೊಟ್ಟೆಯ ಹಳದಿ ಭಾಗವನ್ನು ಹಸಿಯಾಗಿಯೇ ಸೇರಿಸಲಾಗುತ್ತದೆ. ಇದರ ಹೊರತಾಗಿ, ʻಮೆಯೋʼ ಎಂದೇ ಕರೆಯಲ್ಪಡುವ ಈ ವಸ್ತುವಿನಲ್ಲಿರುವುದು ಎಣ್ಣೆ, ಸಾಸಿವೆ ಮತ್ತು ಆಮ್ಲೀಯ ದ್ರವ (ವಿನೇಗರ್ ಅಥವಾ ನಿಂಬೆಹಣ್ಣಿನ ರಸ). ಇವೆಲ್ಲವನ್ನೂ ಒಟ್ಟಿಗೆ ಮಿಶ್ರ ಮಾಡಿದಾಗ ಮಂದವಾದ, ಕೊಬ್ಬಿನಿಂದ ಸಾಂದ್ರವಾದ ಮೆಯೋನೀಸ್ ಸಿದ್ಧವಾಗುತ್ತದೆ. ಸ್ಯಾಂಡ್‌ವಿಚ್, ಬರ್ಗರ್ ಮುಂತಾದ ತಿನಿಸುಗಳಿಗೆ ಒಂದಿಷ್ಟು ಮೆಯೋ ಸುರಿದುಕೊಂಡರೆ- ಸ್ವರ್ಗಕ್ಕೆ ಕಿಚ್ಚು!
ಈ ಮೆಯೋ ಬಗ್ಗೆ ಅಪಸ್ವರ ಇರುವುದು ಎರಡು ಕಾರಣಗಳಿಗೆ. ಮೊದಲನೇದಾಗಿ, ಇದರಲ್ಲಿ ಮೊಟ್ಟೆಯ ಹಸಿಯಾದ ಹಳದಿ ಭಾಗ ಉಪಯೋಗಿಸಲಾಗುತ್ತದೆ. ಇದರಲ್ಲಿ ಸಾಲ್ಮೊನೆಲ್ಲಾನಂಥ ಹಾನಿಕಾರಕ ಬ್ಯಾಕ್ಟೀರಿಯಾಗಳಿದ್ದರೆ, ನೇರವಾಗಿ ಉದರಕ್ಕೇ ಸೇರುತ್ತವೆ. ಅದರಲ್ಲೂ ಮೊಟ್ಟೆಯಲ್ಲಿ ಇನ್ನೇನಾದರೂ ಅನಾರೋಗ್ಯಕರ ಅಂಶಗಳು ಸೇರಿದ್ದು, ಅಂಥವೆಲ್ಲಾ ಕೂಡಿರುವ ಮೆಯೋನೀಸ್ ತಿಂದರೆ- ಕಿಚ್ಚು ಹಚ್ಚಿಕೊಂಡೇ ಸ್ವರ್ಗಕ್ಕೆ ಹೋಗಬೇಕು!
ಇನ್ನೊಂದು ಕಾರಣ, ಇದರಲ್ಲಿ ವಿಪರೀತ ಹೆಚ್ಚಿರುವ ಕೊಬ್ಬಿನ ಅಂಶ. ಮುಖ್ಯವಾಗಿ, ಸ್ಯಾಚುರೇಟೆಡ್ ಕೊಬ್ಬು. ಒಂದು ಟೇಬಲ್ ಚಮಚದಲ್ಲಿ (ಅಂದಾಜು, ೧೫ ಗ್ರಾಂ) ಸುಮಾರು ೯೪ ಕ್ಯಾಲರಿಯನ್ನು ನಮ್ಮ ದೇಹಕ್ಕೆ ಸೇರಿಸುವ ಈ ಮೆಯೋ, ಪ್ರತಿ ಗ್ರಾಂನಲ್ಲಿ ೧೦ ಗ್ರಾಂನಷ್ಟು ಕೊಬ್ಬನ್ನು ತುಂಬಿಸಿಕೊಂಡಿರುತ್ತದೆ. ಲೋ ಫ್ಯಾಟ್ ಮೆಯೋನೀಸ್ ನಲ್ಲಿ ಇದರ ಅರ್ಧದಷ್ಟು ಕ್ಯಾಲರಿ ಇರುತ್ತದೆ. ನಾವು ನಿತ್ಯ ತಿನ್ನುವ ಆಹಾರದಲ್ಲಿ ಇದೇನು ಸಿಕ್ಕಾಪಟ್ಟೆ ಕ್ಯಾಲರಿ ಆಗಲಿಲ್ಲ ಎನ್ನುವುದು ನಿಜವೇ. ಆದರೆ ಇದಿಷ್ಟೂ ಕೊಬ್ಬು ನಮ್ಮ ದೇಹ ಸೇರುವುದು ಕೇವಲ ಒಂದು ಚಮಚ ಮೆಯೋನೀಸ್‌ನಿಂದ! ಉಳಿದಂತೆ ಹೇಳುವಂಥ ಪೋಷಕಾಂಶಗಳೇನೂ ಮೆಯೋನೀಸ್‌ನಿಂದ ದೊರೆಯುವುದಿಲ್ಲ. ಇದು ನಾಲಿಗೆಯನ್ನಷ್ಟೇ ತಣಿಸುತ್ತದೆ.
ಏನಾಗುತ್ತದೆ?: ಈ ಎಲ್ಲಾ ಕಾರಣಗಳಿಗಾಗಿ, ಅಪರೂಪಕ್ಕೆ ಮೆಯೋನೀಸ್ ತಿನ್ನಬಹುದೇ ಹೊರತು ದಿನಂಪ್ರತಿ ಇದನ್ನು ಬಳಸುವುದು ಯೋಗ್ಯವಲ್ಲ. ಇದರ ಬಳಕೆ ಹೆಚ್ಚಾದರೆ ತೂಕ ಏರುವ, ರಕ್ತದೊತ್ತಡ ಹೆಚ್ಚುವ, ಮಧುಮೇಹ ಬರುವ, ಹೃದಯದ ಸಮಸ್ಯೆ ಉಂಟಾಗುವ ಸಂಭವಗಳು ಇವೆ ಎನ್ನುತ್ತಾರೆ ಆಹಾರ ಪರಿಣಿತರು. ಇವೆಲ್ಲವುಗಳ ಜೊತೆಗೆ, ಹಾನಿಕಾರಕ ಬ್ಯಾಕ್ಟೀರಿಯಾ ಹೊಟ್ಟೆಗಿಳಿಸುವ ಹೆದರಿಕೆಯಂತೂ ಇದ್ದೇ ಇದೆ. ಹಾಗೆ ಮೆಯೋ ಬಳಸಲೇಬೇಕೆಂದಾಗ, ಅದರ ಪ್ಯಾಕ್ ತೆರೆದ ಮೇಲೆ ಅದನ್ನು ಕಡ್ಡಾಯವಾಗಿ ಫ್ರಿಜ್‌ನಲ್ಲೇ ಇಡಿ. ಮೆಯೋ ಬಳಸಿದ ಆಹಾರವನ್ನು ಹೆಚ್ಚು ಸಮಯ ಇಡದೆ ಒಂದು ತಾಸಿನೊಳಗೇ ತಿಂದು ಮುಗಿಸಿ. ಮೆಯೋ ಎಕ್ಸ್‌ಪೈರಿ ಆಗಿದೆ ಎಂದಾದರೆ ಯಾವುದೇ ಕಾರಣಕ್ಕೂ ಬಳಸಬೇಡಿ, ಬಿಸಾಡಿ.
ಬದಲಿ ಆಯ್ಕೆಗಳಿಲ್ಲವೇ?: ಖಂಡಿತ ಇದೆ. ಮೆಯೋ ಬದಲಿಗೆ ಆರೋಗ್ಯಕರ ಆಯ್ಕೆಗಳು ಇದ್ದೇ ಇವೆ. ಗ್ರೀಕ್ ಯೋಗರ್ಟ್, ಸೌರ್ ಕ್ರೀಮ್, ಚೀಸ್, ಅವಕಾಡೊ ಮುಂತಾದ ಆರೋಗ್ಯಕರ ಆಯ್ಕೆಗಳು ಇವೆ. ಮೆಯೋದಲ್ಲಿ ಬಳಸಲಾಗುವ ವಸ್ತುಗಳನ್ನು ಒಂದೊಂದಾಗಿ ನೋಡಿದರೆ- ಯಾವುದೂ ಅನಾರೋಗ್ಯಕರವಲ್ಲ. ಆದರೆ ಅವು ಬಳಕೆಯಾಗುವ ರೀತಿ ಮತ್ತು ಒಟ್ಟಾರೆ ಮಿಶ್ರಣ ಆರೋಗ್ಯಕ್ಕೆ ಹೇಳಿಸಿದ್ದಲ್ಲ.
ಇದನ್ನೂ ಓದಿ| Winter Health Care | ಚಳಿಗಾಲದಲ್ಲಿ ಅಜೀರ್ಣ? ಇವು ನೆರವಾಗಬಹುದು!