Site icon Vistara News

Methi seeds benefits | ಅಡುಗೆಮನೆಯ ಕಾಯಂ ನಿವಾಸಿ ಮೆಂತ್ಯ ಕಾಳಿನ ಬಹುಪಯೋಗಗಳು!

methi seeds

ಭಾರತೀಯ ಅಡುಗೆಯಲ್ಲಿ ಮೆಂತ್ಯದ ಉಪಯೋಗ ಬಹಳ. ತನ್ನದೇ ಆದ ವಿಚಿತ್ರ ಆದರೂ ವಿಶಿಷ್ಟ ಘಮವಿರುವ ಮೆಂತ್ಯದ ಹಸಿ ಸೊಪ್ಪೂ, ಒಣ ಸೊಪ್ಪೂ, ಕಾಳೂ ಎಲ್ಲವೂ ದಿನನಿತ್ಯದ ಬಳಕೆಯಲ್ಲಿ ವರ್ಷಪೂರ್ತಿ ಅಡುಗೆಯಲ್ಲಿ ತನ್ನದೇ ಆದ ಸ್ಥಾನ ಗಿಟ್ಟಿಸಿಕೊಳ್ಳುತ್ತಲೇ ಇರುತ್ತದೆ. ಚಳಿಗಾಲ ಹತ್ತಿರ ಬರುತ್ತಿದ್ದಂತೆ ಭರಪೂರ ಹಸಿರು ಸೊಪ್ಪಿನ ಕಾಲವಾದರೆ, ಬೇಸಗೆಯಲ್ಲಿ ಒಣಗಿಸಿದ ಸೊಪ್ಪೂ ಬಳಕೆಯಾಗುವುದು ಸಹಜ. ಇಂತಹ ಮೆಂತೆಕಾಳು ಕಹಿಯಾದರೂ, ಕೇವಲ ಆಹಾರವಾಗಿ ಮಾತ್ರವಲ್ಲ ಆರೋಗ್ಯಕರ ಜೀವನಶೈಲಿಯಲ್ಲೂ ಯಥೇಚ್ಛವಾಗಿ ಬಳಕೆಯಾಗುವ ಮೂಲಕ ತನ್ನ ಮಹತ್ವವನ್ನು ಕಂಡುಕೊಂಡಿದೆ.

ಔಷಧಿಯ ತಯಾರಿಕೆಯಲ್ಲಿ ಬಳಕೆಯಾದ ಸಸ್ಯಗಳ ಪೈಕಿ ಅತ್ಯಂತ ಹಳೆಯ ಕಾಲದಿಂದ ಬಳಕೆಯಾದ ಸಸ್ಯವೆಂದರೆ ಇದು. ಕೇವಲ ಭಾರತ ಮಾತ್ರವಲ್ಲ, ಚೀನಾದ ವೈದ್ಯಕೀಯ ಪದ್ಧತಿಯಲ್ಲೂ ಅತ್ಯಂತ ಹೆಚ್ಚು ಬಳಕೆಯಾದ ಸಸ್ಯವಿದು.

ಅತ್ಯಧಿಕ ಪೋಷಕಾಂಶಗಳಿರುವ ಈ ಮೆಂತ್ಯಕಾಳಿನ ದಿನನಿತ್ಯದ ಉಪಯೋಗದಿಂದ ನಾವು ಯಾವೆಲ್ಲ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ನೋಡೋಣ. ಇದರಲ್ಲಿರುವ ಅತ್ಯಪೂರ್ವ ಔಷಧೀಯ ಗುಣಗಳಿಂದಾಗಿಯೇ ಇದನ್ನು ಸೌಂದರ್ಯ ವರ್ಧಕಗಳಲ್ಲೂ, ಔಷಧೀ ಕ್ಷೇತ್ರದಲ್ಲಿಯೂ ಬಳಕೆಯಾಗುತ್ತದೆ. ಸೋಪು ಕ್ರೀಮು, ಕಾಸ್ಮೆಟಿಕ್‌ಗಳು, ಟೀ, ಗರಂ ಮಸಾಲೆ, ಕಾಂಡಿಮೆಂಟ್‌ಗಳು ಹೀಗೆ ಹಲವು ಬಗೆಗಳಲ್ಲಿ ಬಳಕೆಯಾಗುವ ಮೆಂತ್ಯಕಾಳುಗಳಲ್ಲಿ ಹೇರಳವಾಗಿ ಕಬ್ಬಿಣಾಂಶ, ನಾರಿನಂಶ, ವಿಟಮಿನ್‌ ಡಿ, ವಿಟಮಿನ್‌ ಬಿ, ಎಗಳೂ ಧಾರಾಳವಾಗಿವೆ. ಇದರಿಂದಾಗಿಯೇ ಮೆಂತ್ಯವಿಲ್ಲದ ಆಹಾರ, ಆರೋಗ್ಯ ಕಲ್ಪನೆಯೂ ಬಲುಕಷ್ಟ. ಇಂತಹ ಮೆಂತ್ಯದ ಆರೋಗ್ಯಕರ ಉಪಯೋಗಗಳು ಇಲ್ಲಿವೆ.

೧. ಕೂದಲಿನ ಆರೋಗ್ಯಕ್ಕೆ ಮೆಂತ್ಯ ಅತ್ಯಂತ ಉಪಯೋಗಕಾರಿ. ಇದರಲ್ಲಿರುವ ಕಬ್ಬಿಣಾಂಶ ಹಾಗೈ ಪ್ರೊಟೀನ್‌ ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದರಲ್ಲಿರುವ ಫ್ಲೇವನಾಯ್ಡ್‌ಗಳು ಹಾಗೂ ಸಪೋನಿನ್‌ಗಳು ಕೂದಲಿನ ಆರೋಗ್ಯಕ್ಕೆ ಹೇಳಿ ಮಾಡಿಸಿದವುಗಳು.

೨. ಚರ್ಮದ ಆರೋಗ್ಯಕ್ಕೆ ಮೆಂತ್ಯ ಅತ್ಯುತ್ತಮ. ಮುಖದ ಮೇಲಿನ ಕಲೆಯನ್ನು ಕಡಿಮೆ ಮಾಡುತ್ತದೆ. ಇದನ್ನು ನೇರವಾಗಿ ಮುಖಕ್ಕೆ ಬಳಸಿದರೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು.

೩.ತೂಕ ಕಡಿಮೆ ಮಾಡುವಲ್ಲಿ ಸಹಕಾರಿ. ಸಂಶೋಧನೆಗಳ ಪ್ರಕಾರ ಹಸಿವೆಯನ್ನು ಕಡಿಮೆ ಮಾಡಿ, ದೇಹಕ್ಕೆ ಸಂತೃಪ್ತ ಭಾವನೆಯನ್ನು ಮೂಡಿಸುವಲ್ಲಿ ಇದು ಸಹಾಯ ಮಾಡುತ್ತದೆ. ಪಚನಕ್ರಿಯೆಯನ್ನು ಸಮತೋಲನಗೊಳಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ಬೆಳಗ್ಗೆ ನೆನೆಹಾಕಿದ ಮೆಂತ್ಯಕಾಳನ್ನು ಸೇವಿಸುವುದು ತೂಕ ಇಳಿಕೆ ಸೇರಿದಂತೆ ದೇಹದ ಒಟ್ಟು ಆರೋಗ್ಯದ ಮೇಳೆ ಒಳ್ಳೆಯ ಪರಿಣಾಮ ಬೀರುತ್ತದೆ.

೪. ಮಧುಮೇಹಕ್ಕೂ ಇದು ಒಳ್ಳೆಯದು. ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ಸಮತೋಲನಕ್ಕೆ ತರುವಲ್ಲಿ ಇದು ಸಹಾಯ ಮಾಡುತ್ತದೆ.

೫. ಮಗುವಿಗೆ ಜನ್ಮನೀಡಿದ ಹೊಸ ತಾಯಂದಿರಿಗೆ ಮೆಂತ್ಯಕಾಳು ಒಳ್ಳೆಯದು. ಇದು ಹಾಲುಣಿಸುವ ತಾಯಂದಿರಲ್ಲಿ ಕಾಣುವ ಮಾನಸಿಕ ಒತ್ತಡದಂತಹ ಸಮಸ್ಯೆಗಳಿಗೆ ಉತ್ತಮ ಪರಿಹಾರ ನೀಡುತ್ತದೆ. ಅಷ್ಟೇ ಅಲ್ಲ, ಹಾಲಿನ ಸಮಸ್ಯೆ ಇರುವ ತಾಯಂದಿರಿಗೂ ಹಾಲು ಹೆಚ್ಚಾಗಲು ಮೆಂತ್ಯ ಸೇವಿಸಬಹುದು.

ಇದನ್ನೂ ಓದಿ | Health Tips | ಹಣ್ಣುಗಳನ್ನೇಕೆ ತಿನ್ನಬೇಕು? ಇಲ್ಲಿವೆ ಸರಳ ಕಾರಣಗಳು!

೬. ಪಚನಕ್ರಿಯೆಯನ್ನು ಉತ್ತೇಜಿಸುತ್ತದೆ. ಇದರಲ್ಲಿರುವ ನಾರಿನಂಶ ಹಾಗೂ ಆಂಟಿ ಆಕ್ಸಿಡೆಂಟ್‌ಗಳು ಪಚನಕ್ರಿಯೆಯ ಸಮಸ್ಯೆಗಳನ್ನು ನೀಗಿಸುತ್ತವೆ. ಅರೀರ್ಣ, ಹೊಟ್ಟೆಯುಬ್ಬರವೂ ಇದರಿಂದ ಕಡಿಮೆಯಾಗುತ್ತದೆ.

೭. ಪುರುಷರ ಸೆಕ್ಸ್‌ ಹಾರ್ಮೋನು ಟೆಸ್ಟೋಸ್ಟೀರಾನ್‌ ಹೆಚ್ಚು ಉತ್ಪತ್ತಿಯಾಗುವಂತೆ ಮಾಡುವಲ್ಲಿಯೂ ಮೆಂತ್ಯ ಸಹಕಾರಿ. ಇದರಿಂದ ಲೈಂಗಿಕಾಸಕ್ತಿ ವೃದ್ಧಿ, ಶಕ್ತಿವರ್ಧನೆಗೂ ಇದರ ಬಳಕೆಯಿಂದ ಪ್ರಯೋಜನ ಪಡೆಯಬಹುದು. ಮಹಿಳೆಯರು ಹಾಗೂ ಪುರುಷರಿಬ್ಬರಲ್ಲೂ ಲೈಂಗಿಕಾಸಕ್ತಿಗೆ ಇದು ಉಪಯುಕ್ತವಾದರೂ, ಪುರುಷರಿಗೆ ನೀಡುವ ಫಲ ಹೆಚ್ಚು.

೮. ಮಹಿಳೆಯರಲ್ಲಿ ಮುಟ್ಟಿನ ಸಂದರ್ಭದ ಹೊಟ್ಟೆನೋವು, ಸೆಳೆತ ಮತ್ತಿತರ ತೊಂದರೆಗಳಿಗೂ ಇದು ಶಮನಕಾರಿಯಾಗಿ ಕೆಲಸ ಮಾಡುತ್ತದೆ.

೯. ರಕ್ತದಲ್ಲಿರುವ ಕೊಲೆಸ್ಟೆರಾಲ್‌ನ ಮಟ್ಟವನ್ನು ತಗ್ಗಿಸುವಲ್ಲಿಯೂ ಇದು ಮುಖ್ಯ ಪಾತ್ರ ವಹಿಸುತ್ತದೆ. ಹೃದಯದ ಆರೋಗ್ಯಕ್ಕೆ ಇದು ಒಳ್ಳೆಯದು.

೧೦. ಇದರಲ್ಲಿರುವ ಫ್ಲೇವನಾಯ್ಡ್‌ ಆಂಟಿಆಕ್ಸಿಡೆಂಟ್‌ಗಳ ಕಾರಣದಿಂದ ಇದು ಎಲ್ಲ ಬಗೆಯ ಉರಿಯೂತದಿಂದ ರಕ್ಷಿಸುತ್ತದೆ. ಅಸ್ತಮಾಕ್ಕೂ ಮೆಂತ್ಯ ಬಹಳ ಒಳ್ಳೆಯದು.

ಇದನ್ನೂ ಓದಿ | Avocado benefits | ಹಲವು ಕ್ಯಾನ್ಸರ್‌ಗಳಿಗೆ ಮದ್ದು ಈ ಬೆಣ್ಣೆ ಹಣ್ಣು

Exit mobile version