ಮುಟ್ಟಿನ ದಿನಗಳೆಂದರೆ ನೋವು, ಸುಸ್ತು, ಆಯಾಸದ ದಿನಗಳೆಂದೇ ಲೆಕ್ಕ. ಇದರೊಂದಿಗೆ ಮೈಗ್ರೇನ್ (migraine problem) ಸಮಸ್ಯೆಯೂ ಸೇರಿಬಿಟ್ಟರೆ, ದುರ್ಭಿಕ್ಷದಲ್ಲಿ ಅಧಿಕಮಾಸ! ತಲೆ ಸಿಡಿಯುವ ನೋವು, ಹೊಟ್ಟೆ ತೊಳೆಸುವುದು-ವಾಂತಿ, ಬೆಳಕು-ಧ್ವನಿಗೆ ಸಿಕ್ಕಾಪಟ್ಟೆ ಕಿರಿಕಿರಿ- ಅಂತೂ ಮುಗಿಯದ ಗೋಳು.
ದೇಹದಲ್ಲಿ ಈಸ್ಟ್ರೋಜನ್ ಚೋದಕಗಳು ಕಡಿಮೆಯಾಗುತ್ತಿದ್ದಂತೆ, ಅಂದರೆ ಮುಟ್ಟಿನ ಆಚೀಚೆಯ ದಿನಗಳಲ್ಲಿ ಹಾರ್ಮೋನ್ ಏರುಪೇರಾಗುವುದರಿಂದ ತಲೆಶೂಲೆ ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ತಜ್ಞರು. ಒಮ್ಮೆ ಹಾರ್ಮೋನುಗಳ ಮಟ್ಟ ಸಾಮಾನ್ಯವಾಗುತ್ತಿದ್ದಂತೆ ತಲೆನೋವೂ ಕಡಿಮೆಯಾಗುತ್ತದೆ. ಪ್ರಜನನ ಸಾಮರ್ಥ್ಯವಿರುವ ವಯಸ್ಕ ಮಹಿಳೆಯರಲ್ಲಿ ಶೇ. ೪೦ರಷ್ಟು ಮಂದಿಗೆ ಮುಟ್ಟಿನ ಸಮಯದಲ್ಲಿ ತಲೆನೋವು ಕಾಡುತ್ತದೆ ಎನ್ನುವುದು ರಾಷ್ಟ್ರೀಯ ಮೈಗ್ರೇನ್ ಕೇಂದ್ರದ ಮಾಹಿತಿ.
ತಲೆನೋವು ಬಂದಾಗ…
ಮೈಗ್ರೇನ್ ತಲೆನೋವು ಊಟದ ರುಚಿಯಂತೆಯೇ– ಒಬ್ಬರಿಗೆ ಒಂದೊಂದು ಥರ! ಎಲ್ಲರಿಗೂ ಒಂದೇ ರೀತಿಯ ಆರೈಕೆಯಿಂದ ಆರಾಮವಾಗುತ್ತದೆ ಎಂಬ ಖಾತ್ರಿಯಿಲ್ಲ. ಆದರೂ ಕೆಲವು ಕ್ರಮಗಳನ್ನು ಪ್ರಯತ್ನಿಸಬಹುದು. ತಲೆ ಯಾವ ಭಾಗಕ್ಕೆ ನೋವಿದೆಯೋ ಅಲ್ಲಿಗೆ ತಣ್ಣನೆಯ ಬಟ್ಟೆಯನ್ನು ಒತ್ತಿಕೊಳ್ಳುವುದರಿಂದ ಅಥವಾ ಕೋಲ್ಡ್ ಪ್ಯಾಕ್‌ನಿಂದ ಉಪಶಮನಕ್ಕೆ ಯತ್ನಿಸಬಹುದು. ಅಕ್ಯುಪ್ರೆಷರ್ ಅಥವಾ ಅಕ್ಯುಪಂಕ್ಚರ್ ಚಿಕಿತ್ಸೆಗಳು ಕೆಲವರಿಗೆ ಪರಿಣಾಮಕಾರಿ ಎನಿಸುತ್ತವೆ. ವಿಪರೀತ ನೀರು ಕುಡಿದು ವಾಂತಿ ಮಾಡಿ, ಆರಾಮ ಪಡೆಯುವವರ ಸಂಖ್ಯೆಯೂ ಸಾಕಷ್ಟಿದೆ!
ಒತ್ತಡ ಕಡಿಮೆ ಮಾಡುವ ಯಾವುದೇ ತಂತ್ರಗಳು ಸ್ವಲ್ಪವಾದರೂ ಪರಿಣಾಮ ಬೀರುವುದು ಖಚಿತ. ದೀರ್ಘ ಉಸಿರಾಟ, ಯೋಗ, ಪ್ರಾಣಾಯಾಮ, ಧ್ಯಾನ, ತಂಗಾಳಿಯಲ್ಲಿ ಲಘು ನಡಿಗೆ, ಮನಸ್ಸಿಗೆ ಹಿತವಾಗುವ ಸಂಗೀತ ಕೇಳುವುದು- ಇಂಥವೆಲ್ಲಾ ನಿಯಮಿತವಾಗಿ ಜಾರಿಯಲ್ಲಿದ್ದರೆ ದೀರ್ಘಕಾಲದಲ್ಲಿ ಸಕಾರಾತ್ಮಕ ಪರಿಣಾಮ ಬೀರುತ್ತವೆ. ತಲೆನೋವು ವಿಪರೀತ ಹೆಚ್ಚುತ್ತಿದ್ದರೆ ವೈದ್ಯರಲ್ಲಿ ಹೋಗಬೇಕಾಗಬಹುದು. ಇದಕ್ಕೆ ತಾತ್ಕಾಲಿಕ ಶಮನದ ಔಷಧಿಗಳನ್ನೂ ಅವರು ನೀಡುತ್ತಾರೆ.
ತಲೆನೋವು ಬಾರದಂತೆ…
ಪ್ರತಿದಿನ ನಿಯಮಿತವಾಗಿ, ಹದವರಿತು ವ್ಯಾಯಾಮ ಮಾಡಿ. ಇದರಿಂದ ಮೈಗ್ರೇನ್ ತಡೆಗಟ್ಟಲು ಆಗದಿದ್ದರೂ ನಿಯಂತ್ರಣ ಸಾಧ್ಯ. ಅತಿಯಾದ ತಲೆಶೂಲೆ ಬಾರದಂತೆ ಕಡಿವಾಣ ಹಾಕಬಹುದು. ಹಾಗೆಂದು ಸಿಕ್ಕಾಪಟ್ಟೆ ವ್ಯಾಯಾಮ ಮಾಡುವುದು ಪ್ರತಿಕೂಲ ಪರಿಣಾಮ ಬೀರಬಹುದು. ದಿನಾ ಏಳೆಂಟು ತಾಸಿನ ನಿದ್ದೆ ಅತ್ಯಗತ್ಯ. ನಿದ್ದೆ ಗಾಢ ಮತ್ತು ದೀರ್ಘವಾದಷ್ಟೂ ಮಾನಸಿಕ ಒತ್ತಡ ಮತ್ತು ದೈಹಿಕ ಆಯಾಸ ಕಡಿಮೆಯಾಗುತ್ತದೆ. ಇದೂ ಸಹ ತಲೆಶೂಲೆ ನಿಯಂತ್ರಣಕ್ಕೆ ಸಹಕಾರಿ.
ಕೆಲವೊಮ್ಮೆ ಆಹಾರಗಳಿಂದ ಮೈಗ್ರೇನ್ ಬರಬಹುದು. ಉದಾ, ಚಾಕಲೇಟ್, ಕೆಫೇನ್, ವೈನ್, ಚೀಸ್, ಸಂಸ್ಕರಿತ ಆಹಾರಗಳು ಮುಂತಾದವುಗಳ ಸೇವನೆಯಿಂದ ತಲೆನೋವು ಪ್ರಾರಂಭವಾಗುತ್ತದೆ. ಇಂಥ ಯಾವ ಆಹಾರ ತೊಂದರೆ ಕೊಡುತ್ತಿದೆ ಎಂಬುದನ್ನು ನಾವೇ ತಿಳಿದುಕೊಳ್ಳುವುದು ಮುಖ್ಯ. ಮೂರು ದೊಡ್ಡ ಊಟ-ತಿಂಡಿಗಳ ಬದಲು ಅದನ್ನೇ ವಿಭಜಿಸಿ ಇನ್ನೊಂದೆರಡು ಹೆಚ್ಚು ಮಾಡುವುದು ಸಹ ಪೂರಕ ಪರಿಣಾಮ ಬೀರಬಹುದು. ಇದರಿಂದ ಹೆಚ್ಚಿನ ಆಹಾರದ ಹೊರೆಯನ್ನು ಹೊಟ್ಟೆಗೆ ಹಾಕದೆ, ಹಸಿವೆಯನ್ನು ನಿರ್ವಹಿಸಬಹುದು.
ಇದನ್ನೂ ಓದಿ: Health Benefits of Red Chilli: ದಿನಬಳಕೆಯ ಕೆಂಪು ಮೆಣಸಿನಕಾಯಿ ಖಾರಕ್ಕಷ್ಟೇ ಅಲ್ಲ, ದೇಹಕ್ಕೂ ಅಗತ್ಯ!