ಬೇಸಿಗೆಯಲ್ಲಿ ತಣ್ಣನೆಯ ಪಾನೀಯಗಳನ್ನು ಹೀರುತ್ತಾ, ದೇಹ ತಂಪು ಮಾಡುತ್ತಿದ್ದ ನಮಗೀಗ, ಮಳೆಗಾಲ ಎಚ್ಚರಿಸಿದೆ. ತಂಪು ಪಾನೀಯಗಳನ್ನು ಬಿಟ್ಟು ಜಿಟಿಜಿಟಿ ಮಳೆ ಸುರಿವಾಗ ಬಿಸಿ ಬಿಸಿ ಹೀರುವ ಮನಸ್ಸು ಎಲ್ಲರದ್ದು. ಹೊರಗೆ ಮಳೆ ಸುರಿಯುತ್ತಿರಲು, ಬಿಸಿ ಬಿಸಿ ಕಾಫಿಯೋ, ಚಹಾವನ್ನೋ ಮಾಡಿ ಕಿಟಿಕಿಯಿಂದಲೋ, ಬಾಲ್ಕನಿಯಲ್ಲೋ ಕೂತು ಮಳೆ ನೋಡುವ ಸುಖ ಯಾರಿಗೆ ಬೇಡ ಹೇಳಿ. ಆದರೆ, ಬಿಸಿಲ ಧಗೆಗೆ ಬೆಂದು ಹೋಗಿದ್ದ ಮೈ ಇದ್ದಕ್ಕಿದ್ದ ಹಾಗೆ ಮಳೆರಾಯನ ಬರವಿನಿಂದ ನೆಗಡಿಗೋ, ಶೀತಕ್ಕೋ ಕೆಲವೊಮ್ಮೆ ಜ್ವರವನ್ನೋ ಬರಮಾಡಿಕೊಳ್ಳುವುದುಂಟು. ಒದ್ದೆಯಾದ ಮೈಗೆ ಚಳಿ ಹತ್ತಿಕೊಂಡು ಮಳೆಗಾಲದ ಆರಂಭದಲ್ಲಿ ಇಂಥದ್ದೆಲ್ಲ ಆಗಿಬಿಡುವುದುಂಟು. ಹಾಗಾಗಿ, ಮಳೆಗಾಲದ ಆರಂಭದಲ್ಲೇ ನಮ್ಮಲ್ಲಿ ರೋಗ ನಿರೋಧಕತೆಯನ್ನು ಹೆಚ್ಚು ಮಾಡಿಕೊಳ್ಳಲು, ಗಾಳಿ ಮಳೆಗೆ ಕೇವಲ ಚಹಾ ಕಾಫಿಯನ್ನಷ್ಟೇ ಅಲ್ಲದೆ, ನಿಸರ್ಗ ನಮಗೆ ಕೊಟ್ಟ ಮೂಲಿಕೆಗಳಿಂದ ಮನೆಮದ್ದುಗಳನ್ನೂ, ಕಷಾಯಗಳನ್ನೂ (monsoon drinks) ಹೀರಿಕೊಂಡು ರೋಗಮುಕ್ತ ಮಳೆಗಾಲವನ್ನು ಅನುಭವಿಸಲು ನಾವು ನಮ್ಮನ್ನು ತಯಾರು ಮಾಡಿಕೊಳ್ಳಬೇಕು. ಬನ್ನಿ, ಮಳೆಗಾಲದಲ್ಲಿ ಯಾವೆಲ್ಲ ಕಷಾಯಗಳನ್ನು ಕುಡಿಯಬಹುದು ಎಂಬುದನ್ನು ನೋಡೋಣ.
1. ಚುಕ್ಕು ಕಾಫಿ: ಕೇರಳ ಹಾಗೂ ತಮಿಳುನಾಡಿನಲ್ಲಿ ಪ್ರಸಿದ್ಧವಾಗಿರುವ ಸಾಂಪ್ರದಾಯಿಕ ಶೈಲಿಯ ಕಾಫಿ ಇದಾಗಿದ್ದು, ಇದು ಮಳೆಗಾಲಕ್ಕೆ ಪರ್ಫೆಕ್ಟ್ ಕಾಫಿಯಾಗಿದೆ. ಒಣಶುಂಠಿ, ಜೀರಿಗೆ ಹಾಗೂ ಕೊತ್ತಂಬರಿಯನ್ನು ಹುರಿದು ಪುಡಿ ಮಾಡಿಟ್ಟುಕೊಂಡರೆ, ಈ ಪುಡಿಯನ್ನು ನೀರಿನಲ್ಲಿ ಕುದಿಸಿ, ರುಚಿಗೆ ತಕ್ಕಷ್ಟು ಬೆಲ್ಲ ಸೇರಿಸಿ ಕುಡಿಯಬಹುದು. ಬಿಸಿಬಿಸಿಯಾಗಿ ಗಂಟಲೊಳಕ್ಕೆ ಇಳಿಯುವ ಈ ಕಾಫಿಯಿಂದ ಶೀತ, ನೆಗಡಿ, ಕೆಮ್ಮು ಮತ್ತಿತರ ಸಮಸ್ಯೆಗಳು ಕಡಿಮೆಯಾಗುತ್ತದೆ. ಜ್ವರಕ್ಕೂ ಒಳ್ಳೆಯದು. ಕಫ ಕಟ್ಟಿದಂತಾಗುವುದು, ಮೂಗು ಕಟ್ಟಿರುವುದರಿಂದ ಉಸಿರಾಡಲು ಕಷ್ಟವಾಗುವುದು ಇತ್ಯಾದಿಗಳಿಗೆ ಇದು ಬೆಸ್ಟ್ ಡ್ರಿಂಕ್. ದಿನವೂ ಕುಡಿಯುವುದರಿಂದ ರೋಗನಿರೋಧಕತೆ ಹೆಚ್ಚುತ್ತದೆ. ಹಾಲಿಲ್ಲದೆ, ಅಥವಾ ಕೊಂಚ ಹಾಲು ಸೇರಿಸಿಯೂ ಇದನ್ನು ಕುಡಿಯಬಹುದು.
2. ಕಾಶ್ಮೀರಿ ಖಾವಾ: ಕಾಶ್ಮೀರದ ಮಂದಿಯ ನಿತ್ಯದ ಪೇಯ ಇದಾಗಿದ್ದರೂ, ನಾವೂ ಕೂಡಾ ಇದನ್ನು ನಮ್ಮ ಮನೆಗಳಲ್ಲಿ ಮಳೆಗಾಲದಲ್ಲಿ ಟ್ರೈ ಮಾಡಬಹುದು. ಗಂಟಲಿಗೆ ಹಿತಕರವಾಗಿರುವ ಇದು ಮಳೆಗಾಲಕ್ಕೆ ಹೇಳಿ ಮಾಡಿಸಿದ ಡ್ರಿಂಕ್. ಲವಂಗ, ಚೆಕ್ಕೆ, ಕೇಸಿರಿ ದಳಗಳು, ಬಾದಾಮಿ ಇತ್ಯಾದಿಗಳನ್ನು ಕುಟ್ಟಿ ಪುಡಿ ಮಾಡಿ ಆ ಪುಡಿಯನ್ನು ನೀರಿಗೆ ಹಾಕಿ ಕುದಿಸಿ ಸೋಸಿ ಮಾಡುವ ಈ ಪೇಯರೋಗ ನಿರೋಧಕತೆಯನ್ನು ಹೆಚ್ಚು ಮಾಡುತ್ತದೆ.
3. ಅರಿಶಿನ ಹಾಲು: ಹೊಂಬಣ್ಣದ ಹಾಲು ಅಥವಾ ಅರಿಶಿನ ಹಾಲು ಮಳೆಗಾಲಕ್ಕೆ ಬೆಸ್ಟ್. ಅರಿಶಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವ ಪ್ರಕೃತಿದತ್ತ ಮೂಲಿಕೆ. ಹಾಲನ್ನು ಬಿಸಿ ಮಾಡುವಾಗ ಚಿಟಿಕೆ ಅರಿಶಿನ ಪುಡಿ ಹಾಕಿ ಕುದಿಸಿ ಕುಡಿಯುವುದರಿಂದ ಮಳೆಗಾಲದಲ್ಲಿ ಆಗಾಗ ಶೀತ, ನೆಗಡಿಯಂತ ಸಮಸ್ಯೆ ಬರುವುದು ತಪ್ಪುತ್ತದೆ. ಮಕ್ಕಳಿಗೂ ಈ ಹಾಲು ನಿತ್ಯವೂ ಕುಡಿಯಲು ಕೊಡುವುದರಿಂದ ಮಕ್ಕಳ ಆರೋಗ್ಯವೂ ಮಳೆಗಾಲದಲ್ಲಿ ಆಗಾಗ ಹದಗೆಡುವುದು ಕಡಿಮೆಯಾಗುತ್ತದೆ.
4. ಲೆಮೆನ್ ಟೀ: ನಿಂಬೆಹಣ್ಣಿನ ಟೀ ಕೂಡಾ ಮಳೆಗಾಲಕ್ಕೆ ಬೆಸ್ಟ್. ಟೀ ಪುಡಿಯನ್ನು ನೀರಿಗೆ ಹಾಕಿ ಕುದಿಸಿ ಹಾಲು ಹಾಕದೆ, ಸೋಸಿಕೊಂಡು ಅದಕ್ಕೆ ಆಮೇಲೆ ನಿಂಬೆಹಣ್ಣು ಹಿಂಡಿಕೊಂಡು ಅದಕ್ಕೆ ಜೇನುತುಪ್ಪ ಸೇರಿಸಿಕೊಂಡು ಕುಡಿಯಬಹುದು. ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಇರುವುದರಿಂದ ಶೀತ ನೆಗಡಿಗೆ ಇದು ಒಳ್ಳೆಯದು. ಚಹಾಪುಡಿಯಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಇರುವುದರಿಂದ ರೋಗನಿರೋಧಕತೆಯೂ ಹೆಚ್ಚುತ್ತದೆ.
5. ಶುಂಠಿ ಹಾಗೂ ತುಳಸಿ ಚಹಾ: ಶೀತ ನೆಗಡಿಗೆ ಅತ್ಯಂತ ಒಳ್ಳೆಯ ಮನೆಮದ್ದು ಅಂದರೆ ಅದು ಶುಂಠಿ ಹಾಗೂ ತುಳಸಿ. ಶುಂಠಿಯನ್ನು ತುರಿದು, ನಾಳ್ಕೈದು ತುಳಸೀ ಎಲೆಯನ್ನು ಸೇರಿಸಿ ನೀರಿಗೆ ಹಾಕಿ ಕುದಿಸಿ, ಬೇಕಿದ್ದರೆ ನಿಂಬೆರಸ ಜೇನುತುಪ್ಪ ಸೇರಿಸಿಕೊಂಡು ಬಿಸಿಬಿಸಿಯಾಗಿ ಹೀರಬಹುದು. ಗಂಟಲಿಗೆ ಹಿತಕರವೂ ಹೌದು.
ಇದನ್ನೂ ಓದಿ: Monsoon Food: ಮಳೆಗಾಲದಲ್ಲಿ ಕರಾವಳಿಯ ಜಡಿಮಳೆಗೆ ಅಲ್ಲಿನ ಈ ಆಹಾರಗಳನ್ನು ಸವಿಯಲೇಬೇಕು!