Site icon Vistara News

Monsoon Hair care: ಮಳೆಗಾಲದ ಕೂದಲುದುರುವ ಸಮಸ್ಯೆಗೆ ಹೀಗೆ ಕಾಳಜಿ ಮಾಡಿ!

monsoon hair

ಮಳೆಗಾಲವೆಂದರೆ ಖುಷಿ. ಪ್ರಕೃತಿ ಮಳೆಯಲ್ಲಿ ಮಿಂದೆದ್ದು ತನುಮನಕ್ಕೆ ತಾಜಾ ಅನುಭೂತಿ ನೀಡುವುದು ನಿಜವೇ ಆದರೂ ಮಳೆಗಾಲದಲ್ಲಿ ಎಲ್ಲರನ್ನು ಕಾಡುವ ಸಮಸ್ಯೆ ಎಂದರೆ ಅದು ಕೂದಲು ಉದುರುವುದು. ಚಂದದ ಮಳೆಗಾಲಕ್ಕೆ ಕಾದು ಕಾದು ಕೂದಲುರಿಸಿಕೊಳ್ಳುವುದು ಎಂದರೆ ಖಂಡಿತ ಅದು ಮಹಿಳೆಯರಿಗೂ ಪುರುಷರಿಗೂ ನುಂಗಲಾರದ ತುತ್ತು. ಯಾಕೆಂದರೆ ಕೂದಲುದುರುವ ವಿಷಯಕ್ಕೆ ಬಂದರೆ (Monsoon Hair care) ಮಹಿಳೆಯರಂತೆಯೇ ಪುರುಷರೂ ಕಂಗಾಲಾಗುತ್ತಾರೆ. ಆದರೆ, ಮಳೆಯನ್ನೇ ಬರಬೇಡ ಎನ್ನಲಾಗುತ್ತದೆಯೇ ಹೇಳಿ? ಹಾಗಾಗಿ, ಈ ಸಮಸ್ಯೆಯಿಂದ ತಪ್ಪಿಸುವ ಉಪಾಯಗಳನ್ನು ಮಾತ್ರ ಹುಡುಕಿಕೊಳ್ಳಬೇಕು ಅಷ್ಟೇ.

ವಾತಾವರಣದಲ್ಲಿ ತೇವಾಂಶ ಈ ಕಾಲದಲ್ಲಿ ಹೆಚ್ಚಿರುವುದರಿಂದ ಕೂದಲು ವಾತಾವರಣದಿಂದ ಹೈಡ್ರೋಜನ್‌ ಅಂಶವನ್ನು ಹೆಚ್ಚು ಹೀರಿಕೊಳ್ಳುತ್ತದೆ. ಕೂದಲು ಹೈಡ್ರೋಜನ್‌ನಂತಹುಗಳ ನಿರಂತರ ದಾಳಿಯಿಂದ ಘಾಸಿಗೊಳಗಾಗುತ್ತದೆ, ಇದರಿಂದ ಮಳೆಗಾಲದಲ್ಲಿ ಕೂದಲುದುರುವ ಸಮಸ್ಯೆ ಹೆಚ್ಚಾಗುತ್ತದೆ. ಹಾಗಾದರೆ ಬನ್ನಿ ಕೂದಲ ಸಮಸ್ಯೆಗಳಿಗೆ ಈ ಮಳೆಗಾಲದಲ್ಲಿ ಪರಿಹಾರಗಳನ್ನು (Monsoon Hair care tips) ಹುಡುಕೋಣ.

1. ಮಳೆಗಾಲದಲ್ಲಿ ಮಳೆಯಲ್ಲಿ ನೆನೆಯುವ ಆಸೆ ಸಹಜವೇ. ಆದರೆ ಮಳೆಯಲ್ಲಿ ನೆನೆದು ಬಂದ ತಕ್ಷಣ, ನೆಗಡಿ, ಥಂಡಿಯಾಗುವ ಜೊತೆಗೆ ಸರ್ವರನ್ನೂ ಕಾಡುವ ಇನ್ನೊಂದು ಸಮಸ್ಯೆ ಎಂದರೆ ಅದು ಕೂದಲುದುರುವುದು. ಹಾಗಾಗಿ, ಕೂದಲ ಮೇಲೆ ಕಾಳಜಿ ಇದ್ದರೆ ಮಳೆಯಲ್ಲಿ ನೆನೆಯುವ ಮೊದಲು ಕೂದಲನ್ನು ಮುಚ್ಚಿಕೊಳ್ಳಿ. ಟೋಪಿ, ರೇನ್‌ಕೋಟ್‌ ಅಥವಾ ಛತ್ರಿಯಾದರೂ ಇರಲಿ. ಆಗ ಕೂದಲ ಮೇಲೆ ನೀರು ಬೀಳುವುದಿಲ್ಲ.

2. ಮಳೆಗಾಲದಲ್ಲಿ ಕನಿಷ್ಠ ಮೂರು ಬಾರಿಯಾದರೂ ತಲೆಗೆ ಸ್ನಾನ ಮಾಡಿ. ಅರ್ಥಾತ್‌ ಕೂದಲು ತೊಳೆಯಿರಿ. ಯಾಕೆಂದರೆ ಮಳೆಗಾಲದಲ್ಲಿ ಬಹುಬೇಗನೆ ಕೂದಲು ಜಿಡ್ಡಾಗುತ್ತದೆ. ಹಾಗಾಗಿ ಕೂದಲನ್ನು ಸ್ವಚ್ಛವಾಗಿಟ್ಟುಕೊಂಡಷ್ಟು ಸಮಸ್ಯೆಗಳು ನಿಮ್ಮ ಹತ್ತಿರ ಸುಳಿಯದು. ಯಾವುದಾದರೂ ಒಳ್ಳೆಯ ರಾಸಾಯನಿಕ ಮುಕ್ತವಾದ ಆಂಟಿ ಫಂಗಲ್‌ ಶಾಂಪೂವಿನಿಂದ ಕೂದಲು ತೊಳೆಯಿರಿ.

3. ಮಳೆಗಾಲದಲ್ಲಿ ಕೂದಲಿಗೆ ಎಣ್ಣೆ ಹಚ್ಚುವುದನ್ನು ಕಡಿಮೆ ಮಾಡಿ. ಯಾಕೆಂದರೆ ಈ ಕಾಲದಲ್ಲಿ ಕೂದಲ ಬುಡದಲ್ಲಿ ಎಣ್ನೆ ತಾನೇತಾನಾಗಿ ಉತ್ಪತ್ತಿಯಾಗುವುದರಿಂದ ಜಿಡ್ಡು ಜಿಡ್ಡಾಗುತ್ತಿರುತ್ತದೆ. ಇನ್ನೂ ಹೆಚ್ಚಿನ ಎಣ್ಣೆ ಹೊರಗಿನಿಂದ ಹಚ್ಚಿಕೊಂಡರೆ ಇದು ಹೆಚ್ಚಾಗುತ್ತದೆ. ಹಾಗಾಗಿ ಮತ್ತೆ ಎಣ್ಣೆ ಹಚ್ಚಿಕೊಳ್ಳುವ ಅಭ್ಯಾಸ ಇದ್ದರೆ ಮಳೆಗಾಲದಲ್ಲಿ ಕಡಿಮೆ ಮಾಡಿ. ಅಥವಾ ಎಣ್ನೆ ಹಚ್ಚಿಕೊಂಡರೂ ತಲೆಗೆ ಸ್ನಾನ ಮಾಡುವ ಒಂದು ಗಂಟೆ ಮೊದಲು ಹಚ್ಚಿಕೊಂಡು ಜಿಡ್ಡೆಲ್ಲ ಹೋಗುವಂತೆ ಶಾಂಪೂವಿನಿಂದ ತೊಳೆದುಕೊಳ್ಳಿ.

monsoon hair care

4. ಕೂದಲು ಹೆಚ್ಚಾಗಿ ಉದುರುವ ಸಮಸ್ಯೆ ಇದ್ದರೆ ಕೇವಲ ಮಳೆಗಾಲವನ್ನು ದೂರಬೇಡಿ. ನಿಮ್ಮ ಆಹಾರಶೈಲಿಯನ್ನು ಗಮನಿಸಿ. ಯಾಕೆಂದರೆ ಉತ್ತಮ ಪೋಷಕಾಂಶಯುಕ್ತ ಆಹಾರ ನೀವು ಸೇವಿಸುತ್ತಿದ್ದರೆ ಕೂದಲ ಸಮಸ್ಯೆ ಬರಲಾರದು. ಕೂದಲನ್ನು ಹೊರಗೆ ಕಾಳಜಿ ವಹಿಸಿದರೆ ಸಾಲದು. ಒಳಗಿನಿಂದಲೂ ಕಾಳಜಿ ಬೇಕು. ಕೂದಲ ಆರೋಗ್ಯಕ್ಕೆ ಬಾದಾಮಿ, ಮೊಳಕೆ ಕಾಳುಗಳು, ಒಣ ಬೀಜಗಳು, ಇತ್ಯಾದಿಗಳನ್ನು ಸೇವಿಸುತ್ತಿರಬೇಕು. ಚೀಸ್‌, ಹೆಚ್ಚು ಸಕ್ಕರೆಯ ಅಂಶವಿರುವ ಆಹಾರಗಳು, ಮಯೋನೀಸ್‌ ಇಂತಹುಗಳಿಂದ ದೂರವಿರಿ. ಇವುಗಳು ಕೂದಲ ಅರೋಗ್ಯಕ್ಕೆ ಒಳ್ಳೆಯದಲ್ಲ.

5. ಕೂದಲು ಸರಿಯಾಗಿ ಕೂರದೆ ಇದ್ದಾಗ ಬಳಸುವ ಸ್ಪ್ರೇ, ಸೆಟ್‌ಮಾಡುವ ಸಾಧನಗಳು, ಹೇರ್‌ ಡ್ರೈಯರ್‌ಗಳು, ಸ್ಟ್ರೈಟನರ್‌ಗಳು ಇತ್ಯಾದಿಗಳನ್ನು ಮಳೆಗಾಲದಲ್ಲಿ ಬಳಸದೆ ಇರುವುದು ಒಳ್ಳೆಯದು. ಯಾಕೆಂದರೆ ಇವು ಕೂದಲನ್ನೂ ಇನ್ನೂ ಒಣಗಿಸವಂತೆ ಮಾಡುತ್ತದೆ. ಆಗ ಕೂದಲು ಉದುರುವುದು ಹೆಚ್ಚಾಗುತ್ತದೆ.

6. ಆಲ್ಕೋಹಾಲ್‌, ಧೂಮಪಾನ ಇತ್ಯಾದಿ ಅಭ್ಯಾಸಗಳಿದ್ದರೆ ಅವನ್ನು ಕಡಿಮೆ ಮಾಡಿ ಅಥವಾ ಬಿಡಲು ಪ್ರಯತ್ನಿಸಿ. ಇದರಿಂದ ಹಾರ್ಮೋನಿನಲ್ಲಿ ಏರುಪೇರಾಗಿ ಒತ್ತಡ ಹೆಚ್ಚುತ್ತದೆ. ಪರಿಣಾಮ ಕೂದಲು ಉದುರುವ ಸಮಸ್ಯೆಯೂ ಹೆಚ್ಚಾಗುತ್ತದೆ.

ಇದನ್ನೂ ಓದಿ: Monsoon Health Tips: ಮಳೆಗಾಲದಲ್ಲಿ ಹರಡುವ ಕಾಯಿಲೆಗಳಿಂದ ದೂರವಿರಲು ಸುಲಭ ಸೂತ್ರಗಳು!

Exit mobile version