Site icon Vistara News

Monsoon Health Tips: ಮಳೆಗಾಲದಲ್ಲಿ ಹರಡುವ ಕಾಯಿಲೆಗಳಿಂದ ದೂರವಿರಲು ಸುಲಭ ಸೂತ್ರಗಳು!

monsoon diet

ಮಳೆಗಾಲ ಹೆಸರು ಕೇಳುವುದಕ್ಕೇನೋ ಸೊಗಸು ಹೌದಾದರೂ, ಈ ಸಂದರ್ಭದಲ್ಲೇ ನಮ್ಮ ದೇಹ ಸುಲಭವಾಗಿ ಆರೋಗ್ಯ ಸಮಸ್ಯೆಗಳಿಗೆ ಈಡಾಗುತ್ತದೆ. ಬಹುಬೇಗನೆ ಶೀತ, ನೆಗಡಿ, ಜ್ವರದಂತಹ ಸಮಸ್ಯೆಗಳು ಬರುವುದಲ್ಲದೆ, ನೀರಿನಿಂದ ಹರಡುವಂಥ ಇನ್ನೂ ಅನೇಕ ರೋಗಗಳೂ ಬರುವ ಸಂಭವ ಹೆಚ್ಚು. ಮಳೆಗಾಲದಲ್ಲಿ ತಗ್ಗು ಪ್ರದೇಶಗಳಲ್ಲಿ ಬಹಳ ದಿನಗಳ ಕಾಲ ನೀರು ನಿಲ್ಲುವುದರಿಂದ, ಅವುಗಳಲ್ಲಿ ಸೊಳ್ಳೆಗಳ ಸಂತತಿ ವೃದ್ಧಿಯಾಗಿ ಬರುವ ರೋಗಗಳು ಒಂದೆಡೆಯಾದರೆ, ಮಲಿನ ನೀರಿನ ಮೂಲಕ ಹರಡುವ ರೋಗಗಳು (Monsoon disease) ಇನ್ನೊಂದೆಡೆ. ಹಾಗಾಗಿ, ಆಡುವ ಮಕ್ಕಳೂ ಸೇರಿದಂತೆ, ಹೊರಗೆ ತಿರುಗಾಡುವ ಮಂದಿ ಮಳೆಗಾಲದಲ್ಲಿ ಈ ಕೆಳಗಿನ ರೋಗಗಳ ಬಗ್ಗೆ (Monsoon health tips) ಜಾಗರೂಕರಾಗಿರಿ.

1. ಟೈಫಾಯ್ಡ್‌: ಟೈಫಾಯ್ಡ್‌ ಭಾರತದಲ್ಲಿ ಅತ್ಯಂತ ಸಾಮಾನ್ಯವಾದ ಜ್ವರ. ಳೆಗಾಲದಲ್ಲಿ ಬಹುಬೇಗನೆ ಕಲುಷಿತಗೊಂಡ ನೀರು ಅಥವಾ ಆಹಾರದ ಮೂಲಕ ಟೈಫಾಯ್ಡ್‌ ಸುಲಭವಾಗಿ ಬರಬಹುದು.

2. ಕಾಲರಾ: ನೀರಿನಿಂದ ಹರಡಬಹುದಾದ ಇನ್ನೊಂದು ಕಾಯಿಲೆ ಇದು. ಮಳೆಗಾಲದಲ್ಲಿ ಸಾಮಾನ್ಯ. ಹಾಗಾಗಿ ಶುದ್ಧವಾದ ನೀರು ಕುಡಿಯುವುದು ಮಳೆಗಾಲದಲ್ಲಿ ಬಹಳ ಮುಖ್ಯ. ಬಹಳಷ್ಟು ಸಾರಿ, ನೆರೆ ಮತ್ತಿತರ ಸಮಸ್ಯೆಗಳಿಂದ ಕಲುಷಿತ ನೀರು ಕುಡಿಯುವ ನೀರಿನ ಜೊತೆ ಸಂಪರ್ಕ ಹೊಂದುವ ಮೂಲಕವೂ ಈ ರೋಗ ಬರಬಹುದು. ಹಾಗಾಗಿ ಕುಡಿಸಿ ಆರಿಸಿ ನೀರು ಕುಡಿಯುವುದು ಉತ್ತಮ.

3. ಹೆಪಟೈಟಿಸ್‌ ಎ: ಹೆಪಟೈಟಿಸ್‌ ಎ ಕೂಡಾ ನೀರಿನಿಂದ ಬರಬಹುದಾದ ಕಾಯಿಲೆ. ಇದು ಪಿತ್ತಕೋಶದ ಆರೋಗ್ಯವನ್ನು ಹಾಳು ಮಾಡುವುದರಿಂದ ಈ ಬಗ್ಗೆಯೂ ಮಳೆಗಾಲದಲ್ಲಿ ಸಾಕಷ್ಟು ಜಾಗ್ರತೆ ವಹಿಸಬೇಕು. ಹೆಪಟೈಟಿಸ್‌ ಎ ವ್ಯಕ್ತಿಯಿಂದ ವ್ಯಕ್ತಿ ಹರಡುವ ಕಾಯಿಲೆಯೂ ಹೌದು. ಇದು ಅರಿಶಿನ ಕಾಮಾಲೆ, ವಾಂತಿ, ಜ್ವರ ಇತ್ಯಾದಿಗಳನ್ನೂ ಉಂಟು ಮಾಡಬಲ್ಲುದು.

ಹಾಗಾದರೆ ಈ ಎಲ್ಲ ಕಾಯಿಲೆಗಳು ಮಳೆಗಾಲದಲ್ಲಿ ಬರದಂತೆ ನಮ್ಮನ್ನು ಹಾಗೂ ನಮ್ಮ ಮಕ್ಕಳನ್ನು ಕಾಪಾಡಲು ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದನ್ನು ನೋಡೋಣ.

1. ಮಳೆಯಲ್ಲಿ ನೆನೆದಿದ್ದರೆ ಅಥವಾ ಹೊರಗೆ ಹೋಗಿ ಬಂದ ನಂತರ, ಮನೆಗೆ ಬಂದ ತಕ್ಷಣ ನಿಮ್ಮ ಮುಖ, ಕೈಕಾಲುಗಳನ್ನು ಚೆನ್ನಾಗಿ ಸೋಪು ಹಾಕಿ ತೊಳೆದುಕೊಳ್ಳಿ. ಏನೇ ತಿಂದು ಕುಡಿದು ಮಾಡುವ ಮೊದಲು ಕೈಗಳನ್ನು ಸರಿಯಾಗಿ ತೊಳೆದುಕೊಳ್ಳುವುದು ಬಹಳ ಮುಖ್ಯ.

2. ನಿಂತ ನೀರಿನಿಂದ ಯಾವತ್ತಿಗೂ ದೂರ ಇರಿ. ಹರಿದು ಹೋಗದ, ಮಳೆಬಂದು ಹಾಗೆಯೇ ನಿಲ್ಲುವ ನೀರಿನ ಸುತ್ತಮುತ್ತ ನೀವಿದ್ದರೆ ಜಾಗ್ರತೆ ವಹಿಸಿ. ಸೊಳ್ಳೆಗಳು ಈ ನೀರಿನಲ್ಲಿ ಮೊಟ್ಟೆ ಇಟ್ಟು ಮಾಡುವುದರಿಂದ ಅವುಗಳ ಸಂತತಿ ವೃದ್ಧಿಯಾಗುವ ಸಂಭವ ಇಂಥ ಜಾಗದಲ್ಲಿ ಹೆಚ್ಚಿರುತ್ತದೆ. ಸೊಳ್ಳೆಯ ಮೂಲಕ ಹರಡುವ ರೋಗಗಳು ಬರುವ ಸಂಭವ ಹೆಚ್ಚು.

3. ಮಳೆಗಾಲದಲ್ಲಿ ನೀವು ಅಥವಾ ನಿಮ್ಮ ಮಕ್ಕಳು ಹೊರಗೆ ಹೋಗುವ, ಅಥವಾ ಆಟವಾಡುವ ಸಂದರ್ಭಗಳಲ್ಲಿ ಪೂರ್ತಿ ಅಂದರೆ ಕೈಕಾಲುಗಳನ್ನು ಮುಚ್ಚುವಂಥ ಬಟ್ಟೆ ಹಾಕಿ. ಹೀಗೆ ಮಾಡುವುದರಿಂದ ಸೊಳ್ಳೆ ಕೈಕಾಲುಗಳಿಗೆ ಕಚ್ಚುವುದನ್ನು ತಪ್ಪಿಸಬಹುದು.

4. ನಿಮ್ಮ ಸುತ್ತಮುತ್ತಲ ಪರಿಸರವನ್ನು ಮಳೆಗಾಲದಲ್ಲಿ ಶುಚಿಯಾಗಿ ಇಟ್ಟುಕೊಳ್ಳಿ. ಸಾನಿಟೈಜ್‌ ಮಾಡಿಟ್ಟುಕೊಳ್ಳಿ.

5. ಮಳೆಗಾಲದಲ್ಲಿ ಸರಿಯಾಗಿ ಫಿಲ್ಟರ್‌ ಆದ ನೀರನ್ನೇ ಕುಡಿಯಿರಿ. ನೇರವಾಗಿ ನಳ್ಳಿಯಿಂದ ಅಥವಾ ತೆರೆದ ಪ್ರದೇಶದ ನೀರು ಕುಡಿಯಬೇಡಿ. ಕುದಿಸಿ ಆರಿಸಿ ನೀರು ಕುಡಿದರೆ ಒಳ್ಳೆಯದು.

6. ಮಳೆಗಾಲದಲ್ಲಿ ಹಸಿ ತರಕಾರಿಗಳಿಗಿಂತ ಸರಿಯಾಗಿ ಬೇಯಿಸಿದ ತರಕಾರಿಗಳನ್ನು ತಿನ್ನುವುದು ಒಳ್ಳೆಯದು. ಸೊಪ್ಪು, ಮೊಳಕೆ ಕಾಳುಗಳನ್ನು ಸೇವಿಸುತ್ತಿದ್ದರೆ, ಚೆನ್ನಾಗಿ ತೊಳೆದುಕೊಳ್ಳಲು ಮರೆಯಬೇಡಿ. ಆದಷ್ಟು ಬೇಯಿಸಿ ತಿನ್ನುವುದೇ ಒಳ್ಳೆಯದು.

7. ಸೊಳ್ಳೆ ಇದೆ ಅಂದರೆ ರಿಪಲೆಂಟ್‌, ಸೊಳ್ಳೆಬತ್ತಿ ಬಳಸಿ. ನಿಮ್ಮನ್ನು ಸೊಳ್ಳೆಯ ಕಡಿತದಿಂದ ರಕ್ಷಿಸಿಕೊಳ್ಳಲು ಸಾಧ್ಯವಿರುವ ಉಪಾಯಗಳನ್ನೆಲ್ಲ ಮಾಡಿ.

8. ತಾಜಾ ಇರುವ ಆಹಾರಗಳನ್ನೇ ಸೇವಿಸಿ. ಆಹಾರವನ್ನು ತಂಪಾದ ಹಾಗೂ ಒಣ ಜಾಗದಲ್ಲಿರಿ. ಉಳಿದ ಆಹಾರಗಳನ್ನು ದಿನಗಟ್ಟಲೆ ತಿನ್ನುತ್ತಾ ಕೂರಬೇಡಿ. ಶುಚಿರುಚಿಯಾಗಿ ಆಗಾಗ ಅಡುಗೆ ಮಾಡಿ.

9. ಮಳೆಗಾಲದಲ್ಲಿ ನಮ್ಮ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಹಾಗಾಗಿ ಆದಷ್ಟು ಲಘು ಆಹಾರ ತಿನ್ನಿ. ಅತಿಯಾದ ಮಸಾಲೆಯುಕ್ತ, ಎಣ್ಣೆಯುಕ್ತ, ಕರಿದ ಆಹಾರಗಳಿಂದ ದೂರವಿರಿ.

ಇದನ್ನೂ ಓದಿ: Healthy Monsoon Drinks: ಜಿಟಿಜಿಟಿ ಮಳೆಯಲ್ಲಿ ನಿಮ್ಮನ್ನು ಬೆಚ್ಚಗಿಟ್ಟು ರೋಗನಿರೋಧಕತೆ ಹೆಚ್ಚಿಸುವ ಪೇಯಗಳಿವು!

Exit mobile version