Site icon Vistara News

Monsoon Health Tips: ಮಳೆಗಾಲದ ರೋಗಗಳಿಂದ ಪಾರಾಗುವುದು ಹೇಗೆ?

Monsoon Health Tips

ಮಳೆಗಾಲ ಆರಂಭವಾಗುತ್ತಿದ್ದಂತೆ ಸೆಕೆಯಲ್ಲಿ ಬೇಯುತ್ತಿದ್ದವರೆಲ್ಲ ನೆಮ್ಮದಿಯ ಉಸಿರು ಬಿಡುವುದು ಸಹಜ. ಆದರೆ ವಾತಾವರಣದಲ್ಲಿ ತೇವ ಹೆಚ್ಚುತ್ತಿದ್ದಂತೆ ಹಲವು ಆರೋಗ್ಯ ಸಮಸ್ಯೆಗಳೂ ರಂಗಪ್ರವೇಶ ಮಾಡುತ್ತವೆ. ಅದರಲ್ಲೂ ಶ್ವಾಸಕೋಶ ಸಂಬಂಧಿ ತೊಂದರೆಗಳದ್ದೇ ಮೇಲುಗೈ. ಒದ್ದೆ ವಾತಾವರಣದಲ್ಲಿ ಬ್ಯಾಕ್ಟೀರಿಯ, ಫಂಗಸ್‌ ಮತ್ತು ವೈರಸ್‌ಗಳು ಸೊಂಪಾಗಿ ದ್ವಿಗುಣಗೊಂಡು, ದಾಳಿ ಮಾಡುತ್ತವೆ. ಈಗಾಗಲೇ ಅಲರ್ಜಿ ಸಮಸ್ಯೆ ಇರುವವರಿಗೆ ಮೋಡ, ಮಳೆ ಮತ್ತು ಶೀತದ ಹವಾಮಾನದಿಂದಾಗಿ ಉಸಿರಾಡುವುದೇ ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಪುಪ್ಪುಸಗಳ ಆರೋಗ್ಯ ಕಾಪಾಡಿಕೊಂಡು, ಈ ಮಳೆಯಲ್ಲಿ ಶೀತ, ಕೆಮ್ಮು, ಗಂಟಲು ನೋವು, ಜ್ವರ ಮುಂತಾದ ಹಲವು ಬಗೆಯ ತೊಂದರೆಗಳಿಂದ ದೂರ ಇರುವುದು ನಮ್ಮ ಆದ್ಯತೆಯಾಗಿರಲಿ. ಇದಕ್ಕೆ ಬೇಕಾದ (Monsoon Health Tips) ಸಲಹೆಗಳು ಇಲ್ಲಿವೆ.

Family Medicine and Clinic. Children's Doctor. Pediatrics. Healthcare and Prevention

ಸ್ವಚ್ಛತೆ

ಮಳೆ ಹೆಚ್ಚಾಗಿ ಬೀಳುವ ಪ್ರದೇಶಗಳಲ್ಲಿ ಇಡೀ ಲೋಕವೇ ದೊಡ್ಡದೊಂದು ಜಲಪಾತದಡಿ ನಿಂತ ಅನುಭವ. ತೊಡುವ ಬಟ್ಟೆಗಳೂ ಒಣಗುವುದಕ್ಕೆ ನಾಲ್ಕೈದು ದಿನಗಳು ತೆಗೆದುಕೊಂಡು, ಮನೆಯೆಲ್ಲಾ ರಾಡಿಯೆದ್ದು, ಮನೆಗೊಳಗೆ ಪ್ರಾಣಸಂಕಟ, ಹೊರಬಿದ್ದರೆ ಜೀವಸಂಕಟ ಎಂಬ ಸ್ಥಿತಿ ನಿರ್ಮಾಣವಾಗುತ್ತದೆ. ತೇವ ಹೆಚ್ಚಾದಷ್ಟೂ ಮುಗ್ಗಲು ಸಮಸ್ಯೆ ಕಾಡುತ್ತದೆ. ಮನೆಯ ಗೋಡೆ, ಕಪಾಟು, ಬಟ್ಟೆಗಳು ಎಲ್ಲವೂ ಒಂಥರಾ ಹಸಿ ವಾಸನೆ ಸೂಸುತ್ತವೆ. ಇಂಥ ಸಂದರ್ಭದಲ್ಲಿ ಸ್ವಚ್ಛತೆಯ ಬಗ್ಗೆ ಅತಿ ಹೆಚ್ಚಿನ ಗಮನ ಇರಬೇಕು. ಮುಗ್ಗಲಿನಿಂದಾಗಿಯೇ ಶ್ವಾಸಕೋಶದ ಅಲರ್ಜಿ ಹೆಚ್ಚಬಹುದು. ಶೀತ-ಕೆಮ್ಮಿನಿಂದ ಪಾರಾಗುವುದಕ್ಕೆ ದೇಹವನ್ನು ಬೆಚ್ಚಗಿರಿಸಿಕೊಳ್ಳಿ.

ಪ್ರತಿರೋಧಕತೆ

ಜೋರು ಮಳೆಯ ದಿನಗಳಲ್ಲಿ ದೇಹದ ರೋಗ ನಿರೋಧಕ ಶಕ್ತಿ ಎಷ್ಟಿದ್ದರೂ ಬೇಕು. ಹಾಗಾಗಿ ಮಳೆಗಾಲದ ಹಣ್ಣುಗಳನ್ನು ತಿನ್ನಿ. ಆಹಾರ ತಾಜಾ ಮತ್ತು ಬಿಸಿಯಾಗಿರುವಾಗಲೇ ಊಟ ಮಾಡಿ. ಆರಿದ ಆಹಾರದಲ್ಲಿ ಬ್ಯಾಕ್ಟೀರಿಯಗಳ ಹಾವಳಿ ಹೆಚ್ಚು. ಬಿಸಿ ನೀರು, ಕಷಾಯ, ಸೂಪ್‌, ಕಟ್ಟಿನ ಸಾರುಗಳು ದೇಹವನ್ನು ಬೆಚ್ಚಗಿರಿಸಿ, ಶೀತದಿಂದ ರಕ್ಷಿಸುತ್ತವೆ. ಈ ದಿನಗಳಲ್ಲಿ ಕುದಿಸಿದ ನೀರು ಕುಡಿಯುವುದು ಎಲ್ಲ ದೃಷ್ಟಿಯಿಂದಲೂ ಕ್ಷೇಮ. ಇಡೀ ಧಾನ್ಯಗಳು ಜೀರ್ಣಾಂಗಗಳನ್ನು ಸುಸ್ಥಿತಿಯಲ್ಲಿ ಇರಿಸಿ, ಈ ಮೂಲಕ ಪ್ರತಿರೋಧತೆ ತಗ್ಗದಂತೆ ನೋಡಿಕೊಳ್ಳುತ್ತವೆ. ಜನಜಂಗುಳಿಯಿಂದ ದೂರವಿದ್ದರೆ, ಗಾಳಿಯಿಂದ ಹರಡುವ ವೈರಸ್‌ ಸೋಂಕುಗಳು ಬರುವುದು ಕಡಿಮೆ.

ಒಳಾಂಗಣದ ಗಾಳಿ

ಮನೆಯೊಳಗೆ ತೇವ ತೀರಾ ಹೆಚ್ಚಿದೆ ಎನಿಸಿದರೆ ಏರ್‌ ಪ್ಯೂರಿಫಯರ್‌ ಅಥವ ಡ್ರೈಯರ್‌ಗಳನ್ನು ಉಪಯೋಗಿಸಿ. ಧೂಳು ತೆಗೆಯುವಾಗ ಒದ್ದೆ ವಸ್ತ್ರಗಳಿಂದಲೇ ಒರೆಸಿ ಸ್ವಚ್ಛ ಮಾಡಿ. ಕೆಲವು ಒಳಾಂಗಣದ ಗಿಡಗಳು ಗಾಳಿ ಶುದ್ಧೀಕರಣಕ್ಕೆ ಸಹಾಯ ಮಾಡುತ್ತವೆ. ಅವುಗಳನ್ನು ಇರಿಸಿಕೊಳ್ಳಲು ಸಾಧ್ಯವೇ ಎಂಬುದನ್ನು ಪ್ರಯತ್ನಿಸಿ.

ಬೆಚ್ಚಗಿನ ವಸ್ತ್ರಗಳು

ಸಣ್ಣ ಕೆಲಸಕ್ಕೆಂದು ಮನೆಯಿಂದ ಹೊರಹೋದಾಗಲೇ ಹತ್ತು ನಿಮಿಷಗಳ ಮಳೆಯೊಂದು ಜಡಿಯುತ್ತದೆ. ಸ್ವಲ್ಪ ಸೋನೆಯೊ ತುಂತುರೊ ಬರುತ್ತದೆ. ಏನಾಗುವುದಿಲ್ಲ ಎಂದು ಒದ್ದೆ ವಸ್ತ್ರಗಳಲ್ಲೇ ಇರಬೇಡಿ. ಶೀತ ಅಂಟಿಕೊಳ್ಳುವುದಕ್ಕೆ ಕೆಲವೊಮ್ಮೆ ಇಷ್ಟೇ ಸಾಕಾಗುತ್ತದೆ. ಮಳೆ ತಡೆಯುವಂಥ ಜಾಕೆಟ್‌ ಅಥವಾ ಛತ್ರಿಗಳನ್ನು ಹಿಡಿದೇ ಹೊರಗೆ ಅಡಿಯಿಡಿ.

Family Medicine and Clinic. Children's Doctor. Pediatrics. Healthcare and Prevention

ವ್ಯಾಯಾಮ

ʻಅಯ್ಯೋ, ಮಳೇ!ʼ ಎನ್ನುವ ನೆವ ಹೇಳಿ ನಿತ್ಯದ ವ್ಯಾಯಾಮ ತಪ್ಪಿಸಬೇಡಿ. ಹೊರಗೆ ಹೋಗಿ ವಾಕಿಂಗ್‌ ಮಾಡಲಾಗದಿದ್ದರೆ, ಮನೆಯೊಳಗೆ ಯೋಗ ಮಾಡಿ ಅಥವಾ ಏರೋಬಿಕ್‌, ಜುಂಬಾ, ಪಿಲಾಟೆ ಮುಂತಾದ ಯಾವುದನ್ನಾದರೂ ಮಾಡಿ. ಅಂಥದ್ದಕ್ಕೆಲ್ಲ ಬೇಕಾದಷ್ಟು ಆನ್‌ಲೈನ್‌ ತರಗತಿಗಳು ಲಭ್ಯವಿವೆ. ಜಿಮ್‌ಗೆ ಹೋಗದೆಯೇ ಮನೆಯಲ್ಲಿ ಬೆಚ್ಚಗೆ ಇರುವಾಗ ಇವುಗಳನ್ನು ಮಾಡಬಹುದು.

Family Medicine and Clinic. Children's Doctor. Pediatrics. Healthcare and Prevention

ತಪಾಸಣೆಗಳು

ಆರೋಗ್ಯ ತಪಾಸಣೆಗಳನ್ನು ನಿಯಮಿತವಾಗಿ ಮಾಡಿಸಿಕೊಳ್ಳಿ. ಅದರಲ್ಲೂ ಅಸ್ತಮಾ ಅಥವಾ ಇನ್ನಾವುದಾದರೂ ಅಲರ್ಜಿಯ ತೊಂದರೆಗಳಿದ್ದರೆ ಕಾಲಕಾಲಕ್ಕೆ ವೈದ್ಯರು ಹೇಳಿದ ಔಷಧಿಯನ್ನು ಮರೆಯದೆ ತೆಗೆದುಕೊಳ್ಳಿ. ಪಫ್‌, ನೆಬ್ಯುಲೈಸೇಷನ್‌ ಮುಂತಾದವುಗಳ ಬಳಿಕವೂ ಉಸಿರಾಡಲು ಕಷ್ಟವಾಗುವುದು, ಕೆಮ್ಮು-ದಮ್ಮು ಕಾಡುತ್ತಿದ್ದರೆ ತಜ್ಞ ಪಲ್ಮನಾಲಜಿಸ್ಟ್‌ ಸಲಹೆ ಪಡೆಯಿರಿ.

Exit mobile version