ಬೆಳಗ್ಗೆ ಏಳುವುದಕ್ಕೆ ಅಲಾರಾಂ ಇಟ್ಟುಕೊಳ್ಳುವುದೇ ಬೇಡ; ಆರು ಗಂಟೆಗೆ ಸರಿಯಾಗಿ ʻಅ…ಕ್ಷೀʼ ಶುರುವಾಗುತ್ತದೆ- ಇಡೀ ಮನೆಮಂದಿಗೆಲ್ಲಾ ಎಚ್ಚರವಾಗುವಂತೆ. ಎದ್ದ ಮೇಲೆ ಸೀನುಗಳ ಸರಮಾಲೆ- ಐದು, ಹತ್ತರ ಲೆಕ್ಕದಲ್ಲಿ ಅಲ್ಲ, ಐವತ್ತು, ನೂರರ ಲೆಕ್ಕದಲ್ಲಿ. ಕಣ್ಣಿಂದ, ಮೂಗಿನಿಂದ ಒಂದೇ ಸಮನೆ ನೀರು. ಬೆಳಗಿನ ಒಂದೆರಡು ತಾಸುಗಳು ಇನ್ನೇನೂ ಮಾಡಲಾಗುವುದಿಲ್ಲ, ಸೀನುವುದೊಂದೇ ಕೆಲಸ. ಇಂಥ ಹಲವರನ್ನು ನೋಡಿರಬಹುದು ಅಥವಾ ನೀವೂ ಇಂಥವರಾಗಿರಬಹುದು.
ಸೀನುವುದೇನು ರೋಗವೇ ಎಂದರೆ, ಅಲ್ಲ. ಸರಳವಾಗಿ ಹೇಳುವುದಾದರೆ, ದೇಹಕ್ಕೆ ಅಗತ್ಯ ಇಲ್ಲದ ಯಾವುದೋ ವಸ್ತು ದೇಹವನ್ನು ಪ್ರವೇಶಿಸಿದಾಗ ಉಂಟಾಗುವ ಪ್ರತಿಕ್ರಿಯೆಯಿದು. ಹೀಗೆ ಸೀನುವುದರಿಂದ ಆರೋಗ್ಯಕ್ಕೆ ಹಾನಿಯೂ ಆಗುವುದಿಲ್ಲ. ಆದರೆ ಈ ರೀತಿಯಾಗಿ ಸರಣಿಯಲ್ಲಿ ಸೀನುವುದೇಕೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಅಂದರೆ, ಅಲರ್ಜಿಯಿಂದಾಗಿ ಹೀಗಾಗುತ್ತಿದೆಯೋ ಅಥವಾ ಶ್ವಾಸಕೋಶಕ್ಕೆ ಬೇರೇನಾದರೂ ಸಮಸ್ಯೆ ಇದೆಯೋ ಎಂದು ತಿಳಿದುಕೊಳ್ಳುವುದು ಅಗತ್ಯ.
ಬೆಳಗಿನ ಸೀನಿಗೇನು ಕಾರಣ?: ರೈನೈಟಿಸ್, ಸೈನಸೈಟಿಸ್, ಮೈಟ್ಸ್, ಪರಾಗಗಳು, ಧೂಳು, ಬೆಳಗಿನ ಚಳಿ, ಒಣ ಹವೆಯಂಥ ಕಾರಣಗಳು ಹೆಚ್ಚಾಗಿ ಬಾಧಿಸುತ್ತದೆ. ರಾತ್ರಿಡೀ ಹೆಪ್ಪುಗಟ್ಟಿದಂತಿದ್ದ ವಾತಾವರಣದಲ್ಲಿ ಸಾಮಾನ್ಯವಾಗಿ ಬೆಳಗಿನ ಜಾವಕ್ಕೆ ಅಲರ್ಜಿಕಾರಕಗಳ ಸಾಂದ್ರತೆ ಹೆಚ್ಚುತ್ತದೆ. ಇದನ್ನೇ ದೀರ್ಘಕಾಲ ಉಸಿರಾಡುತ್ತಿರುವುದರಿಂದ ಬೆಳಗ್ಗೆ ಎಚ್ಚರವಾಗುತ್ತಿದ್ದಂತೆ, ಇವೆಲ್ಲವನ್ನೂ ಹೊರಗಟ್ಟುವ ಕಾಯಕದಲ್ಲಿ ದೇಹ ವ್ಯಸ್ತವಾಗುತ್ತದೆ.
ಅಲರ್ಜಿಕಾರಕಗಳು ಹಲವಾರು ರೀತಿಯಲ್ಲಿ ಇರಬಹುದು. ರಾಸಾಯನಿಕಗಳು, ಪ್ರಾಣಿಗಳ ಕೂದಲು, ಮರದ ಹೊಟ್ಟು, ಹಾಸಿಗೆ ಅಥವಾ ದಿಂಬಿನ ಧೂಳು- ಇಂಥ ಹಲವಾರು ವಸ್ತುಗಳಿಂದ ಅಲರ್ಜಿ ಉಂಟಾಗಿ ಸೀನುವುದಕ್ಕೆ ಪ್ರಾರಂಭವಾಗುತ್ತದೆ. ಇದಲ್ಲದೆ, ಕೆಲವು ರೀತಿಯ ಆಹಾರಗಳು, ಪಾನೀಯಗಳು, ಔಷಧಿಗಳಿಂದಲೂ ಹೀಗಾಗಬಹುದು. ಅಲರ್ಜಿಕಾರಕಗಳಿಗೆ ದೇಹ ತೋರಿಸುವ ಪ್ರತಿಕ್ರಿಯೆಯನ್ನು ನಿಲ್ಲಿಸುವುದು ಸಾಧ್ಯವಿಲ್ಲ. ಹಾಗೆಂದೇ ಅಲರ್ಜಿಕ್ ರೈನೈಟಿಸ್, ಸೈನಸೈಟಿಸ್‌ಗಳನ್ನು ಸಂಪೂರ್ಣ ಗುಣ ಪಡಿಸಲಾಗದು. ಆದರೆ ಯಾವುದರಿಂದ ಹೀಗಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಂಡರೆ, ಇಂಥ ಲಕ್ಷಣಗಳನ್ನು ಹತೋಟಿಯಲ್ಲಿಡಲು ಸಾಧ್ಯ.
ಏನು ಮಾಡಬಹುದು?: ಮನೆಯನ್ನು ಮೊದಲು ಧೂಳು ಮುಕ್ತಗೊಳಿಸಿ. ನಂತರ ಹ್ಯುಮಿಡಿಫೈಯರ್ ಉಪಯೋಗಿಸಿ. ಅದಿಲ್ಲದಿದ್ದರೆ, ಮನೆಯೆಲ್ಲಾ ಆವಿ ಹರಡುವಂತೆ ಚನ್ನಾಗಿ ನೀರು ಕುದಿಸಿ.
ಮನೆಯೊಳಗೇ ಸಾಕು ಪ್ರಾಣಿಗಳಿದ್ದರೆ ಅವುಗಳ ಕೂದಲು ಸ್ವಚ್ಛಗೊಳಿಸಿ. ಅವುಗಳ ಕೂದಲು ಎಲ್ಲೆಂದರಲ್ಲಿ ಉದುರುತ್ತಿದ್ದರೆ ಅಲರ್ಜಿ ಹೆಚ್ಚುವುದಕ್ಕೆ ಕಾರಣವಾಗುತ್ತದೆ.
ಮನೆಯೊಳಗೆ ಎಲ್ಲಿಯೂ ಫಂಗಸ್ ಬೆಳೆಯದಂತೆ ಎಚ್ಚರ ವಹಿಸಿ. ಹೊರಗಿನ ವಾತಾವರಣದಲ್ಲಿ ಪರಾಗಗಳ ಸಾಂದ್ರತೆ ಹೆಚ್ಚಿದ್ದಾಗ, ಏರ್ ಪ್ಯೂರಿಫಯರ್ ಪ್ರಯೋಜನ ಆಗಬಹುದು.
ಹೈಪೋ ಅಲರ್ಜಿಕ್ ಹಾಸಿಗೆಗಳನ್ನೂ ಪ್ರಯತ್ನಿಸಬಹುದು. ಸಾಮಾನ್ಯ ಹಾಸಿಗೆಗಳು ಧೂಳು, ಪರಾಗದಂಥ ಅಲರ್ಜಿಕಾರಕಗಳನ್ನು ಹಿಡಿದಿಟ್ಟುಕೊಳ್ಳುತ್ತವೆ. ಆದರೆ ಹೈಪೋ ಅಲರ್ಜಿಕ್ ಹಾಸಿಗೆಗಳು ಇಂಥ ಯಾವುದನ್ನೂ ಅಂಟಿಸಿಕೊಳ್ಳುವುದಿಲ್ಲ.
ಮಲಗುವ ಮುನ್ನ ಮೂಗಿನ ಹೊಳ್ಳೆಗಳ ಸುತ್ತ ಕೊಬ್ಬರಿ ಎಣ್ಣೆ ಅಥವಾ ಸ್ವಲ್ಪ ಪ್ರಮಾಣದ ಪೆಟ್ರೋಲಿಯಂ ಜೆಲ್ಲಿ ಹಚ್ಚಿಯೂ ಪ್ರಯತ್ನಿಸಬಹುದು. ಇದರಿಂದ ಅಲರ್ಜಿಕಾರಕಗಳು ಮೂಗಿನೊಳಗೆ ಪ್ರವೇಶ ಮಾಡುವ ಪ್ರಮಾಣ ಕಡಿಮೆಯಾಗುತ್ತದೆ.
ಇದನ್ನೂ ಓದಿ| Winter Health Care | ಚಳಿಗಾಲದಲ್ಲಿ ಅಜೀರ್ಣ? ಇವು ನೆರವಾಗಬಹುದು!