Site icon Vistara News

National nutrition week | ಕಣ್ಣಿನ ಆರೋಗ್ಯಕ್ಕಾಗಿ ಈ ಆಹಾರ ನಿಮ್ಮ ಕಣ್ಣಿಗೆ ಬೀಳಲಿ!

eye health food

ಕಣ್ಣಿನ ಸಮಸ್ಯೆ ಎಂದಾಕ್ಷಣ ನಮ್ಮ ಕಣ್ಮುಂದೆ ಬರುವುದು ವಯಸ್ಸಾದವರ ಅಥವಾ ಸಿಕ್ಕಾಪಟ್ಟೆ ಮೊಬೈಲ್/ಕಂಪ್ಯೂಟರ್‌ ಬಳಸುವವರ ಭಿತ್ತಿಗಳು. ಕಣ್ಣಿನ ಸಮಸ್ಯೆಗೆ ಈ ಕಾರಣಗಳು ಹೌದಾದರೂ ಆಹಾರದಲ್ಲಿ ಸಮತೋಲನ ಇಲ್ಲದಿದ್ದರೂ ದೃಷ್ಟಿದೋಷ ಉಂಟಾಗಬಹುದು. ಹಾಗಾಗಿ ಕಣ್ಣಿನ ಆರೋಗ್ಯ ಉತ್ತಮಗೊಳಿಸುವಂಥ ಕೆಲವು ಆಹಾರಗಳನ್ನು ಇಲ್ಲಿ ನೀಡಲಾಗಿದ್ದು, ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಲು ಇವು ಸೂಕ್ತವಾಗಿವೆ.

ವಿಟಮಿನ್‌ ಎ ಸಮೃದ್ಧವಾಗಿರುವ ಆಹಾರಗಳು ಕಣ್ಣಿನ ಆರೋಗ್ಯಕ್ಕೆ ಪೂರಕ. ಮಕ್ಕಳಲ್ಲಿ ಉಂಟಾಗುವ ದೃಷ್ಟಿದೋಷ ನಿವಾರಣೆಗೆ, ವೈದ್ಯರ ಚಿಕಿತ್ಸೆಯ ಜೊತೆಜೊತೆಗೆ ಇಂಥ ಆಹಾರಗಳೂ ನೆರವಾಗುತ್ತವೆ. ಬೀಟಾ ಕ್ಯಾರೋಟಿನ್‌ ಹೇರಳವಾಗಿರುವ ಕ್ಯಾರೆಟ್‌, ಸಿಹಿ ಗೆಣಸು, ಕ್ಯಾಪ್ಸಿಕಂ, ಹೂಕೋಸು ಮುಂತಾದ ತರಕಾರಿಗಳು, ಪಪ್ಪಾಯಿ, ಸ್ಟ್ರಾಬೆರಿಯಂಥ ಹಣ್ಣುಗಳು ನಮ್ಮ ಆಹಾರದ ಭಾಗವಾಗಿರಲಿ.

ವಿಟಮಿನ್‌ ಇ ಕೊರತೆಯಿಂದ ಕ್ಯಾಟರಾಕ್ಟ್‌ನಂಥ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಈ ಪೋಷಕಾಂಶ ಹೇರಳವಾಗಿರುವ ಬಾದಾಮಿ, ಸೂರ್ಯಕಾಂತಿ ಬೀಜಗಳು, ಶೇಂಗಾ ಮುಂತಾದ ಎಣ್ಣೆಕಾಳುಗಳು, ಮೆಂತೆ, ಪಾಲಕ್‌ನಂಥ ಸೊಪ್ಪುಗಳು ಕಣ್ಣಿನ ಆಹಾರಕ್ಕೆ ಪೂರಕವಾಗಿ ಕೆಲಸ ಮಾಡುತ್ತವೆ.

ಒಮೇಗ ೩ ಫ್ಯಾಟಿ ಆಮ್ಲಗಳು ನಮ್ಮ ಕಣ್ಣಿನ ರೆಟಿನಾ ರಕ್ಷಣೆಗೆ ಅಗತ್ಯ. ಇದಕ್ಕಾಗಿ ಬಾದಾಮಿ, ಅಗಸೆ ಬೀಜ, ಸೋಯಾ ಕಾಳುಗಳು, ವಾಲ್‌ನಟ್‌, ಅವಕಾಡೊ, ಮೊಟ್ಟೆ, ಕೆಲವು ಜಾತಿಯ ಮೀನುಗಳಲ್ಲಿ ಈ ಪೋಷಕಾಂಶ ವಿಫುಲವಾಗಿದೆ. ನಮ್ಮ ಆಹಾರ ಪದ್ಧತಿಗೆ ಸೂಕ್ತವಾಗಿದ್ದನ್ನು ಆಯ್ದುಕೊಂಡು, ಕಣ್ಣಿನ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು.

ಇದನ್ನೂ ಓದಿ | National nutrition week | ಊಟ, ತಿಂಡಿಗೆ ಮೊದಲು ಅರಗಿಸಿಕೊಳ್ಳಿ ಈ ಸಂಗತಿ!

ವಿಟಮಿನ್‌ ಸಿ ಸಹ ನಮ್ಮ ದೃಷ್ಟಿ ರಕ್ಷಣೆಗೆ ಅತ್ಯಗತ್ಯ. ಕಿತ್ತಳೆ ಹಣ್ಣು, ಕಿವಿ ಹಣ್ಣು, ದಾಳಿಂಬೆ, ಬ್ರೊಕೋಲಿ ಮುಂತಾದ ಆಹಾರಗಳಲ್ಲಿ ಈ ಪೌಷ್ಟಿಕಾಂಶ ಹೇರಳವಾಗಿದೆ. ಮಾತ್ರವಲ್ಲ, ಸಿಟ್ರಸ್‌ ಅಂಶವಿರುವ ಹಲವಾರು ಹಣ್ಣುಗಳಲ್ಲಿ ಈ ಜೀವಸತ್ವ ನಮಗೆ ದೊರೆಯುತ್ತದೆ. ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ವಿಟಮಿನ್‌ ಸಿ, ಕಣ್ಣಿನ ಉರಿಯೂತವನ್ನೂ ಶಮನಗೊಳಿಸುತ್ತದೆ.

ಜಿಂಕ್‌ ಸಹ ಸಮ್ಮ ನೇತ್ರ ರಕ್ಷಣೆಯ ಸೇನಾನಿಯೇ. ಮೊಟ್ಟೆ, ಶೇಂಗಾ, ಕಡಲೆಕಾಳು, ಹೆಸರು ಕಾಳಿನಂಥ ದ್ವಿದಳ ಧಾನ್ಯಗಳಲ್ಲಿ ಈ ಅಂಶ ವಿಫುಲವಾಗಿದೆ. ನಮ್ಮ ಕಣ್ಣುಗಳ ದೃಷ್ಟಿ ಮಸುಕಾಗದಂತೆ ಕಾಪಾಡಿಕೊಳ್ಳಲು ಇಂಥ ಆಹಾರಗಳು ಬೇಕೆಬೇಕು.

ಇವಿಷ್ಟೇ ಎಂದಲ್ಲ. ವರ್ಷವಿಡೀ ದೊರೆಯುವ ಹಣ್ಣು-ತರಕಾರಿಗಳು ಮತ್ತು ಕೆಲವು ಋತುಗಳಲ್ಲಿ ಮಾತ್ರವೇ ದೊರೆಯುವ ಪೀಚ್‌ ಹಣ್ಣು, ಕಲ್ಲಂಗಡಿ, ಚೆರ್ರಿ, ಮಾವಿನಂಥ ಹಣ್ಣುಗಳು ನಮ್ಮ ಆಹಾರದ ಭಾಗವಾಗಿದ್ದರೆ ಕಣ್ಣಿನ ಆರೋಗ್ಯಕ್ಕೆ ಮಾತ್ರವೇ ಅಲ್ಲ, ಒಟ್ಟಾರೆಯಾಗಿ ದೇಹಾರೋಗ್ಯಕ್ಕೆ ಬಹಳಷ್ಟು ಲಾಭವಿದೆ.

ಇದನ್ನೂ ಓದಿ | National Nutrition week | ಹೊಟ್ಟೆಯಲ್ಲಿದೆ ನಿಮ್ಮ ಆರೋಗ್ಯದ ಗುಟ್ಟಿನ ಮೊಟ್ಟೆ

Exit mobile version