Site icon Vistara News

National nutrition week | ತಿನ್ನುವ ವ್ಯಸನ ನಿಮಗಿದೆಯಾ? ಇಲ್ಲಿ ಪರೀಕ್ಷಿಸಿಕೊಳ್ಳಿ

unhealthy eating habit

ವ್ಯಸನ ಎನ್ನುತ್ತಿದ್ದಂತೆ ನಮ್ಮ ಕಣ್ಮುಂದೆ ಬರುವ ಚಿತ್ರಗಳು ಹಲವು. ಆದರೆ ತೂರಾಡುವವರು, ಗಟಾರಕ್ಕೆ ಬೀಳುವವರು ಮಾತ್ರವೇ ವ್ಯಸನಿಗಳು ಎಂದಾಗಬೇಕಿಲ್ಲ. ತಿನ್ನುವ ವ್ಯಸನಿಗಳೂ ಇದ್ದಾರೆ ಎಂದರೆ ಹುಬ್ಬೇರಿಸಬೇಡಿ. ಹೌದು, ಅನಾರೋಗ್ಯಕರ ಆಹಾರ ಪದ್ಧತಿಯನ್ನು ರೂಢಿಸಿಕೊಂಡಲ್ಲಿ ಆಗುವ ಅನಾಹುತಗಳಲ್ಲಿ ಇದೂ ಒಂದು- ತಿನ್ನುವುದೇ ವ್ಯಸನವಾಗುವುದು. ತಿನ್ನುವ ವ್ಯಸನಿಗಳು ಎಂದು ಕರೆಸಿಕೊಳ್ಳುವವರು ಹೇಗಿರುತ್ತಾರೆಂಬ ಬಗ್ಗೆ ತಜ್ಞರು ಈ ಲಕ್ಷಣಗಳನ್ನು ಪಟ್ಟಿಮಾಡಿದ್ದಾರೆ. ಬೇಕಿದ್ದರೆ ಪರೀಕ್ಷಿಸಿಕೊಳ್ಳಿ.

ಹೊಟ್ಟೆ ತುಂಬಿದ್ದರೂ ತಿನ್ನುವಾಸೆ: ತಿನ್ನುವ ಬಯಕೆ ಎಲ್ಲರಿಗೂ ಇದ್ದಿದ್ದೇ. ಊಟವಾದ ಮೇಲೆ ಏನಾದರೂ ಸಿಹಿ ಬಾಯಾಡುವುದು, ಚಹಾದ ಜೊತೆ ಏನಾದರೂ ಕುರುಕಲು ಚಪ್ಪರಿಸುವಂಥ ಬಯಕೆಗಳು ಬಹಳ ಜನರಲ್ಲಿ ಇರುತ್ತವೆ. ಆದರೆ ಈ ಚೂರು ಬಾಯಾಡುವ ಬಯಕೆ ಚೂರುಚೂರಾಗೇ ಹೆಚ್ಚಾಗಿ, ದೊಡ್ಡ ಪ್ರಮಾಣದಲ್ಲಿ ಜಿಡ್ಡು, ಸಿಹಿ, ಉಪ್ಪು, ಕುರುಕಲು ತಿನ್ನುವಂತಾದರೆ ಎಚ್ಚರಿಕೆ ಅಗತ್ಯ. ಪ್ರತಿದಿನ ಅದೊಂದು ಹೊತ್ತಿಗೆ ಅಂಥದ್ದನ್ನು ತಿನ್ನಲೇಬೇಕು ಎನ್ನುವುದು ಅಥವಾ ಹೊಟ್ಟೆ ತುಂಬಿದ ಮೇಲೂ ಮತ್ತೆ ಮತ್ತೆ ತಿನ್ನುವ ಚಪಲ ಇದ್ದರೆ ಅದನ್ನು ವ್ಯಸನದ ಲಕ್ಷಣ ಎನ್ನಬಹುದು.

ಮಿತಿಮೀರಿ ತಿನ್ನುವುದು: ಇಷ್ಟವಾದ ಆಹಾರವೆಂದರೆ ಒಂತುತ್ತು ಹೆಚ್ಚೇ ತಿನ್ನುವುದು ಸಾಮಾನ್ಯ. ಹಾಗಂತ ಅದನ್ನೇ ಗಡದ್ದಾಗಿ ಬಾರಿಸುವುದು ಅಭ್ಯಾಸ ಎಂದಾದರೆ, ಇಂಥ ಅಭ್ಯಾಸಗಳೂ ವ್ಯಸನದ ಸಾಲಿಗೇ ಸೇರಿಯಾವು. ಕೆಲವರಿಗೆ ಹೀಗೂ ಅಭ್ಯಾಸವಿರುತ್ತದೆ- ಹೊಟ್ಟೆ ತುಂಬುವುದು ಎಂದರೆ ಉಸಿರಾಡಲೂ ಜಾಗವಿಲ್ಲದಂತೆ ತುಂಬುವುದು. ತಜ್ಞರು ಇಂಥ ಅಭ್ಯಾಸಗಳ ಮೇಲೂ ಕೆಂಗಣ್ಣು ಬೀರಿದ್ದಾರೆ.

ತಿಂದು ಪರಿತಪಿಸುವುದು: ತಿನ್ನುವ ಆಸೆಯನ್ನು ನಿಯಂತ್ರಿಸಲಾರದೆ ಯದ್ವಾತದ್ವಾ ತಿಂದು, ನಂತರ ʻತಿಂದಿದ್ದು ಹೆಚ್ಚಾಯ್ತು, ಛೇ! ತಿನ್ನಬಾರದಿತ್ತುʼ ಎಂದು ಪರಿತಪಿಸುವವರು ಇವರು. ಮಾತ್ರವಲ್ಲ, ಮತ್ತೆಮತ್ತೆ ಇದನ್ನೇ ಮಾಡುವವರು ವ್ಯಸನಿಗಳ ಸಾಲಿಗೆ ಸೇರುತ್ತಾರಂತೆ.

ನಿಯಂತ್ರಣಕ್ಕೆ ಒಳಪಡದವರು: ಆರೋಗ್ಯಕರ ಆಹಾರ ಪದ್ಧತಿ ಜಂಕ್‌ ತಿನ್ನುವ ಬಯಕೆಯನ್ನು ಹತ್ತಿಕ್ಕಲು ನೆರವಾಗುತ್ತದೆ. ಈ ನಿಟ್ಟಿನಲ್ಲಿ ಪೌಷ್ಟಿಕ ಆಹಾರದ ಪಟ್ಟಿಯನ್ನು ನೀಡಿದರೂ, ಅದರಲ್ಲಿ ಕಣ್ಣಾಮುಚ್ಚಾಲೆಯಾಡುವ ಕುರುಕಲು ಗಿರಾಕಿಗಳು ಸುಲಭಕ್ಕೆ ಬಗ್ಗುವವರಲ್ಲ. ಮಾತ್ರವಲ್ಲ, ನಾಲಿಗೆಯ ಬಯಕೆಗಾಗಿ ಕದ್ದು ತಿನ್ನುವುದೂ ಇವರಿಗೆ ಬಾಹಿರವಲ್ಲ. ಇಂಥವರನ್ನು ದಾಕ್ಷಿಣ್ಯವಿಲ್ಲದೆ ವ್ಯಸನಿಗಳು ಎನ್ನಬಹುದು.

ಇದನ್ನೂ ಓದಿ | National Nutrition week | ಹೊಟ್ಟೆಯಲ್ಲಿದೆ ನಿಮ್ಮ ಆರೋಗ್ಯದ ಗುಟ್ಟಿನ ಮೊಟ್ಟೆ

ಸಮಸ್ಯೆಯಾದರೂ ಬಿಡುವವರಲ್ಲ: ಕುರುಕಲು ಮತ್ತು ಇತರ ಜಂಕ್‌ ಆಹಾರಗಳು ಚರ್ಮದ ಸಮಸ್ಯೆ, ಬಾಯಿಯ ದುರ್ಗಂಧ ಮುಂತಾದ ಅಲ್ಪಕಾಲೀನ ಸಮಸ್ಯೆಗೆ ಮೊದಲಿಗೆ ಕಾರಣವಾಗುತ್ತವೆ. ಇದನ್ನೆಲ್ಲ ಅರಿತೂ ಅನಾರೋಗ್ಯಕರ ಆಹಾರ ಶೈಲಿಯನ್ನು ತೊರೆಯದಿದ್ದರೆ, ದೀರ್ಘಕಾಲದಲ್ಲಿ ಮಧುಮೇಹ, ಹೃದ್ರೋಗ, ಬೊಜ್ಜು, ಅಲ್ಜೈಮರ್ಸ್ ಮತ್ತು ಕ್ಯಾನ್ಸರ್‌ಗೂ ಕಾರಣವಾಗಬಹುದು. ಇಷ್ಟು ಎಚ್ಚರಿಕೆಗೂ ಹೆದರದವರು ವ್ಯಸನಿಗಳಲ್ಲದೇ ಮತ್ತೇನು?

ಇವೆಲ್ಲದಕ್ಕೂ ತಜ್ಞರು ಹೇಳುವುದು ಆರೋಗ್ಯಕರ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಿ ಎಂಬುದಾಗಿ. ಆಹಾರದಲ್ಲಿ ಉತ್ತಮ ಕೊಬ್ಬು, ನಾರು ಮತ್ತು ಪ್ರೊಟೀನ್‌ ಅಂಶ ಹೇರಳವಾಗಿರಲಿ. ಒಂದು ದೊಡ್ಡ ಊಟವನ್ನು ಮಾಡುವ ಬದಲು, ಅದನ್ನು ಸಣ್ಣ ಸರ್ವಿಂಗ್‌ಗಳಾಗಿ ವಿಂಗಡಿಸಿ. ಜೊತೆಗೆ, ಇವೆಲ್ಲವನ್ನೂ ಮಾಡುತ್ತಿರುವುದು ಯಾರನ್ನೋ ಮೆಚ್ಚಿಸುವುದಕ್ಕಲ್ಲ, ನನ್ನದೇ ಒಳ್ಳೆಯದಕ್ಕೆ ಎಂಬ ಪ್ರಾಮಾಣಿಕ ಪ್ರಯತ್ನ ನಿಮ್ಮದಾಗಿರಲಿ. ಬದುಕಿಗೆ ಪೂರಕವಾಗಿ ತಿನ್ನುವುದು, ತಿನ್ನುವುದಕ್ಕಾಗಿ ಇರುವುದಲ್ಲ ಬದುಕು.

ಇದನ್ನೂ ಓದಿ | National nutrition week | ಕಣ್ಣಿನ ಆರೋಗ್ಯಕ್ಕಾಗಿ ಈ ಆಹಾರ ನಿಮ್ಮ ಕಣ್ಣಿಗೆ ಬೀಳಲಿ!

Exit mobile version