Site icon Vistara News

Nutmeg Health benefits: ಜಾಯಿಕಾಯಿ ಮಸಾಲೆ ಪದಾರ್ಥವಷ್ಟೇ ಅಲ್ಲ, ಆರೋಗ್ಯಕ್ಕೂ ಸಂಜೀವಿನಿ!

nutmeg

ಅಡುಗೆ ಮನೆ ಡಬ್ಬದಲ್ಲಿ ನೀವು ಜಾಯಿಕಾಯಿಯನ್ನು (Nutmeg) ನೋಡಿರಬಹುದು; ಅದನ್ನು ಮಸಾಲೆ ಪದಾರ್ಥವಾಗಿ ಬಿರಿಯಾನಿ, ಪಲಾವ್‌ನಂಥ ಪದಾರ್ಥಗಳಲ್ಲಿ ಉಪಯೋಗಿಸುವುದು (Nutmeg benefits) ಸಾಮಾನ್ಯ. ಜಾಯಿಕಾಯಿಯಲ್ಲಿ ಎರಡು ಭಾಗಗಳಿವೆ. ಮೊದಲನೆಯದು ಜಾಯಿಕಾಯಿಯ ಬೀಜ, ಮತ್ತೊಂದು ಜಾಯಿಕಾಯಿಯನ್ನು ಸುತ್ತುವರೆದಿರುವ ತಿಳಿಗೆಂಪು ಬಣ್ಣದ ನಾರಿನ ಪದಾರ್ಥ. ಈ ನಾರಿನ ಪದಾರ್ಥಗಳನ್ನು ಹಲವು ಅಡುಗೆಗಳಲ್ಲಿ ಬಳಸುತ್ತಾರೆ. ಇದೊಂದು ವಿದೇಶಿ ತಳಿಯ ಪದಾರ್ಥವಾದರೂ ಕೂಡ ಇದನ್ನು ಒಂದು ಕಾಮೋತ್ತೇಜಕ ವಸ್ತುವಾಗಿಯೂ, ಅಡುಗೆಗಳಲ್ಲಿ ಕೊಂಚಮಟ್ಟಿಗೆ ಸೂಪ್, ಮಾಂಸಾಹಾರಗಳು, ಸಿಹಿತಿಂಡಿಗಳಲ್ಲಿಯೂ ಬಳಸಲಾಗುತ್ತದೆ. ಕೇರಳದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ ಮತ್ತು ಅಲ್ಲಿನವರು ತಮ್ಮ ಮಾಂಸಾಹಾರ, ಸಿಹಿಗಳಲ್ಲಿ, ಉಪ್ಪಿನಕಾಯಿಗಳಲ್ಲಿ ಇದನ್ನು ಬಳಸುತ್ತಾರೆ. ಮೊಗಲರ ಅಡುಗೆ ಪದಾರ್ಥಗಳಲ್ಲಿ ಇದು ಸರ್ವೇಸಾಮಾನ್ಯ.

ಸಾಮಾನ್ಯವಾಗಿ ಇಂಡೋನೇಷ್ಯಾ, ವೆಸ್ಟ್ ಇಂಡೀಸ್, ಮಲೇಶಿಯಾ, ಕ್ಯಾರಿಬಿಯನ್ ದೇಶಗಳಲ್ಲಿ ಹಾಗೂ ಈಗ ದಕ್ಷಿಣ ಭಾರತದಲ್ಲೂ ಕೂಡ ಬೆಳೆಯಲಾಗುತ್ತಿದೆ. ಈ ಮಸಾಲ ಪದಾರ್ಥ ತನ್ನ ಖಾರವಾದ ಘಾಟಿನಂತಹ ವಾಸನೆಗೆ ಹಾಗೂ ತಿಂದಾಗ ಸ್ವಲ್ಪ ಸಿಹಿಯಾದ ರುಚಿಗೆ ಹೆಸರುವಾಸಿ. ಬಹಳ ಹಿಂದೆ ರೋಮನ್ ಜನರು ಇದನ್ನು ತಮ್ಮ ಕೋಣೆಯ ಪರಿಮಳಕ್ಕಾಗಿ ಉಪಯೋಗಿಸುತ್ತಿದ್ದರು. ಈಗ ಇದರ ಆರೋಗ್ಯಕಾರಿ (Nutmeg Health benefits) ಹಾಗೂ ಔಷಧೀಯ (Nutmeg medicinal benefits) ಗುಣಗಳನ್ನು ತಿಳಿಯೋಣ ಬನ್ನಿ.

ಪೌಷ್ಟಿಕಾಂಶಗಳ ಆಗರ

ಜಾಯಿಕಾಯಿಯ ಮರವು ಕೂಡ ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಈ ಮರದ ಎಲೆಗಳು, ಚಕ್ಕೆಗಳನ್ನು ಹಲವಾರು ರೀತಿಯ ಎಣ್ಣೆಗಳನ್ನು ಬಳಸಲು ಉಪಯೋಗಿಸುತ್ತಾರೆ. ಇದು ಸೌಂದರ್ಯವರ್ಧಕವೂ ಹೌದು. ಜಾಯಿಕಾಯಿಯನ್ನು ಪೋಷಕಾಂಶಗಳ ಆಗರ ಎಂದು ಕರೆಯುತ್ತಾರೆ. ಏಕೆಂದರೆ ಇದರಲ್ಲಿ ಮೆಗ್ನೀಷಿಯಂ, ಮ್ಯಾಂಗನೀಸ್, ಕಾಪರ್, ವಿಟಮಿನ್ ಬಿ1, ವಿಟಮಿನ್ ಬಿ6 ಮುಂತಾದ ಅಪರೂಪದ ಪೌಷ್ಟಿಕಾಂಶಗಳಿವೆ.

ನ್ಯಾಚುರಲ್‌ ಪೇನ್‌ ಕಿಲ್ಲರ್

ಜಾಯಿಕಾಯಿಯಲ್ಲಿ ನೋವು ನಿವಾರಿಸುವ ಗುಣಗಳಿವೆ. ಅದರ ಮಿರಿಸ್ಟಿಸಿನ್, ಎಲಿಮಿಸಿನ್, ಯುಗೆನೊಲ್ ಹಾಗೂ ಸಾಫೊರಾಲ್ ಎಂಬ ಅಂಶಗಳು ಇದಕ್ಕೆ ಕಾರಣವಾಗಿವೆ. ಜಾಯಿಕಾಯಿಯಲ್ಲಿರುವ ಎಣ್ಣೆಯ ಅಂಶವು ಉರಿಯೂತವನ್ನು ಶಮನ ಮಾಡುವ ಗುಣವುಳ್ಳದ್ದಾಗಿದೆ. ಕೆಲವೇ ಹನಿಗಳು ಉರಿಯೂತ, ಕೀಲುನೋವುಗಳು, ಮಾಂಸಖಂಡಗಳ ನೋವು ಹಾಗೂ ಗಾಯಗಳನ್ನು ವಾಸಿ ಮಾಡಬಲ್ಲವು.

​ನಿದ್ರಾಹೀನತೆಗೆ ಮದ್ದು

ಜಾಯಿಕಾಯಿಯನ್ನು ಸಣ್ಣ ಪ್ರಮಾಣದಲ್ಲಿ ಸೇವಿಸಿದಾಗ ಮನಸ್ಸಿಗೆ ಶಾಂತಿ ನೀಡುತ್ತದೆ. ಹಲವು ಪುರಾತನ ಔಷಧೀಯ ಅಭ್ಯಾಸಗಳ ಪ್ರಕಾರ ಜಾಯಿಕಾಯಿ ನಿಮ್ಮನ್ನು ಆತಂಕದಿಂದ ದೂರ ಮಾಡಿ ನಿಮಗೆ ನಿದ್ದೆಯನ್ನು ತರಿಸಬಲ್ಲದು. ಆಯುರ್ವೇದದಲ್ಲಿ ಹೇಳುವಂತೆ ಒಂದು ಚಿಟಿಕೆ ಜಾಯಿಕಾಯಿ ಪುಡಿಯನ್ನು ಒಂದು ಲೋಟ ಬೆಚ್ಚನೆಯ ಹಾಲಿಗೆ ಹಾಕಿ ಮಲಗುವ ಮುನ್ನ ಕುಡಿಯಬೇಕು. ಇದರ ಜೊತೆಗೆ 1 ಚಿಟಿಕೆ ಏಲಕ್ಕಿ ಹಾಗೂ ಕೆಲವೇ ಬಾದಾಮಿಗಳನ್ನು ಹಾಕಿ ಕೂಡ ಕುಡಿಯಬಹುದು.

​ಜೀರ್ಣಕ್ರಿಯೆಗೆ ಸಹಕಾರಿ

ಜಾಯಿಕಾಯಿಯಲ್ಲಿರುವ ಎಣ್ಣೆಗಳು ನಿಮ್ಮ ಹೊಟ್ಟೆಗೆ ಸಹಾಯ ಮಾಡಬಲ್ಲವು. ಭೇದಿ,‌ ಮಲಬದ್ಧತೆ, ಅತಿಯಾದ ಗ್ಯಾಸ್ ಸಮಸ್ಯೆಗಳಿಂದ ಬಳಲುತ್ತಿದ್ದರೆ ಜಾಯಿಕಾಯಿ ಮನೆಮದ್ದು. ಜ್ಯೂಸ್ ಅಥವಾ ಸೂಪ್‌ಗೆ ಒಂದು ಚಿಟಿಕೆ ಜಾಯಿಕಾಯಿ ಪುಡಿಯನ್ನು ಬೆರೆಸಿ ಕುಡಿಯಿರಿ. ಇದು ನಿಮ್ಮ ಹೊಟ್ಟೆಯ ಸಮಸ್ಯೆಗಳನ್ನು ಪರಿಹರಿಸಿ ಆರಾಮ ನೀಡಬಲ್ಲದು. ಇದರಲ್ಲಿರುವ ನಾರಿನಂಶ ನಿಮ್ಮ ಮಲಬದ್ಧತೆಗೂ ಸಹಾಯ ಮಾಡುತ್ತದೆ. ನಿಮ್ಮ ಜೀರ್ಣಕ್ರಿಯೆಯಲ್ಲಿ ಅತಿಯಾದ ಗ್ಯಾಸ್ ಇದ್ದರೆ ಅದನ್ನೂ ತೆಗೆದುಹಾಕುತ್ತದೆ.

​ಮೆದುಳಿನ ಆರೋಗ್ಯ

ಜಾಯಿಕಾಯಿ ಕಾಮೋತ್ತೇಜಕ. ಇದು ಮೆದುಳಿನಲ್ಲಿರುವ ನರಗಳನ್ನು ಉತ್ತೇಜಿಸುತ್ತದೆ. ಗ್ರೀಕ್ ಹಾಗೂ ರೋಮನರ ಕಾಲದಲ್ಲಿ ಇದನ್ನು ಮೆದುಳಿನ ಔಷಧಿಯಾಗಿಯೇ ಉಪಯೋಗಿಸುತ್ತಿದ್ದರು. ಏಕೆಂದರೆ ಇದು ಡಿಪ್ರೆಶನ್, ಆತಂಕಗಳಂತಹ ಸಮಸ್ಯೆಗಳಿಗೆ ಪರಿಹಾರವಾಗಿತ್ತು. ಅತಿಯಾದ ಸುಸ್ತು, ಸಂಕಟಗಳನ್ನು ಸರಿ ಮಾಡಬಲ್ಲದು. ತುಂಬಾ ಆತಂಕವಾಗಿರುವ ಸಮಯಗಳಲ್ಲಿ ಇದು ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಬಲ್ಲದು. ಈಗ ತಾನೇ ಯಾವುದಾದರೂ ಕಾಯಿಲೆಯಿಂದ ಗುಣ ಹೊಂದಿದ್ದರೆ ನಿಮ್ಮ ದೇಹಕ್ಕೆ ಉತ್ತೇಜನ ನೀಡುವಲ್ಲಿ ಜಾಯಿಕಾಯಿ ಸಹಾಯಕಾರಿಯಾಗಿದೆ.

ಉಸಿರಿನ ವಾಸನೆ ನಿವಾರಣೆ

ಕೆಟ್ಟ ಉಸಿರು ನಿಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳ ಫಲಿತಾಂಶ. ಒಳ್ಳೆಯ ಆಹಾರ ಪದ್ಧತಿ ಇಲ್ಲದಿರುವುದು ನಿಮ್ಮ ದೇಹದಲ್ಲಿ ವಿಷಕಾರಿ ಅಂಶಗಳನ್ನು ಹೊರಸೂಸಬಹುದು. ಜಾಯಿಕಾಯಿ ನಿಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ತೆಗೆದು ಹಾಕುವುದಲ್ಲದೆ ಯಕೃತ್ತು ಹಾಗೂ ಮೂತ್ರಪಿಂಡಗಳ ಕಾರ್ಯ ನಿರ್ವಹಣೆಗೆ ಸಹಾಯಕಾರಿ. ಬ್ಯಾಕ್ಟೀರಿಯಾ ವಿರೋಧಿ ಗುಣಗಳಿರುವ ಜಾಯಿಕಾಯಿ ಕೆಟ್ಟ ಉಸಿರನ್ನು ನಿಯಂತ್ರಿಸುತ್ತದೆ ಹಾಗಾಗಿ ಹಲವು ಟೂತ್‌ಪೇಸ್ಟ್‌ಗಳಲ್ಲಿ ಇದು ಸಾಮಾನ್ಯ ವಸ್ತು. ಇದರಲ್ಲಿರುವ ಯುಗೇನಾಲ್ ಎಂಬ ಅಂಶವು ಹಲ್ಲು ನೋವು ನಿವಾರಕ.

ಇದನ್ನೂ ಓದಿ: Clove Health Benefits: ಲವಂಗದಲ್ಲಿ ನಿಮ್ಮ ದೇಹದ ಪ್ರತಿ ಅಂಗಕ್ಕೂ ಆರೋಗ್ಯವಿದೆ!

​ಚರ್ಮದ ಆರೋಗ್ಯ

ಜಾಯಿಕಾಯಿಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣವು ನಿಮ್ಮ ಚರ್ಮಕ್ಕೂ ಸಹಾಯಕಾರಿ. ಇದು ನಿಮ್ಮ ಚರ್ಮದಲ್ಲಿರುವ ಕಪ್ಪು ಕಲೆಗಳು, ಮೊಡವೆಗಳನ್ನು ಪರಿಹರಿಸುವಲ್ಲಿ ಯಶಸ್ವಿಯಾಗುತ್ತದೆ. ಜಾಯಿಕಾಯಿ ಪುಡಿ ಹಾಗೂ ಜೇನುತುಪ್ಪವನ್ನು ಸಮಪ್ರಮಾಣದಲ್ಲಿ ಬೆರೆಸಿ ನಿಮ್ಮ ಮೊಡವೆಗಳ ಮೇಲೆ ಹಚ್ಚಿ 20 ನಿಮಿಷದ ನಂತರ ತಣ್ಣೀರಿನಿಂದ ತೊಳೆಯಿರಿ ಅಥವಾ ಜಾಯಿಕಾಯಿಯ ಪುಡಿಗೆ ಕೆಲವು ಹಾಲಿನ ಹನಿಗಳಿಂದ ಮಿಶ್ರಣಮಾಡಿ ನಿಮ್ಮ ಚರ್ಮದ ಮೇಲೆ ಹಚ್ಚಬಹುದು. ಕಿತ್ತಳೆ ಹಣ್ಣಿನ ಸಿಪ್ಪೆಯ ಜೊತೆಗೂ ಬಳಸಬಹುದು.

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

ಜಾಯಿಕಾಯಿಯಲ್ಲಿರುವ ಕ್ಯಾಲ್ಸಿಯಂ, ಕಬ್ಬಿಣಾಂಶ, ಪೊಟ್ಯಾಶಿಯಂ, ಮ್ಯಾಂಗನೀಸ್ ಅಂಶಗಳು ನಿಮ್ಮ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಇದರಿಂದ ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

ಇದನ್ನೂ ಓದಿ: Heath Tips For Weight Loss: ತೂಕ ಇಳಿಸುವ ಪ್ರಯತ್ನವೇ? ಹೀಗೆ ಮಾಡಿ

Exit mobile version