ವಯಸ್ಸಾದಂತೆ ಎಲ್ಲರಿಗೂ ಮುಖ್ಯವಾಗಿ ಚಿಂತೆ ಕಾಡುವುದು ತನ್ನ ಚರ್ಮ ಮೊದಲಿನ ಕಳೆಯನ್ನು ಕಳೆದುಕೊಳ್ಳುತ್ತಿದೆ ಎಂಬುದು. ವಯಸ್ಸಾದಂತೆ ನಮ್ಮ ಚರ್ಮ ಮೊದಲಿನ ಬಿಗಿತನ ಕಳೆದುಕೊಂಡು ಸುಕ್ಕು (wrinkles) ಕಾಣಲಾರಂಭಿಸುತ್ತದೆ. ಅಲ್ಲಲ್ಲಿ ಕಪ್ಪುಚುಕ್ಕೆಗಳು ಗೋಚರಿಸಲಾರಂಭಿಸುತ್ತದೆ. ಮೊದಲ ಕಳೆ, ಲವಲವಿಕೆ, ಫ್ರೆಶ್ ಫೀಲ್ ಕಾಣೆಯಾಗಿದೆ ಅನಿಸತೊಡಗುತ್ತದೆ. ಮುಖ್ಯವಾಗಿ ಮಹಿಳೆಯರು, ಮತ್ತೆ ತಮ್ಮ ಚರ್ಮಕ್ಕೆ ಹಳೆಯ ತಾಜಾತನ ಬರಲಿ ಎಂದು ಹಳಹಳಿಸುತ್ತಾರೆ. ಬ್ಯೂಟಿ ಪಾರ್ಲರುಗಳಿಗೆ ಎಡತಾಕುತ್ತಾ, ನೂರಾರು ಪ್ರಯೋಗಗಳು ಚರ್ಮದ ಮೇಲೆ ನಡೆಯುತ್ತವೆ. ಆದರೆ ಇವೆಲ್ಲವಕ್ಕೂ ನಮ್ಮ ಮನೆಯೊಳಗೇ ಹಲವು ಪರಿಹಾರಗಳಿವೆ (Skin Care Tips) ಎಂಬುದನ್ನು ಮರೆತುಬಿಡುತ್ತೇವೆ.
ವಯಸ್ಸಾಗುತ್ತಿದ್ದಂತೆ ಚರ್ಮ ಬಿಗಿತನವನ್ನು ಕಳೆದುಕೊಂಡು ಸಡಿಲಾಗುವುದು ಸಾಮಾನ್ಯ. ಸುಕ್ಕುಗಟ್ಟುವುದು ಕೂಡಾ ಸಾಮಾನ್ಯ. ಎಂಥ ವಿಶ್ವ ಸುಂದರಿಯೂ ಮುದುಕಿಯಾಗದೆ ಚಿರಯವ್ವನದಿಂದ ಕಂಗೊಳಿಸಲಾರಳು. 50ರ ಸುಕ್ಕುಗಟ್ಟುವ ಚರ್ಮವನ್ನು ಇದ್ದಕ್ಕಿದ್ದಂತೆ 18ರ ಚರ್ಮದಂತೆ ಕಾಣುವಂತೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಸತ್ಯವನ್ನು ಮೊದಲು ಮನಗಾಣಬೇಕು. ಎಲ್ಲ ವಯಸ್ಸಿಗೂ ಅದರದ್ದೇ ಆದ ಸೌಂದರ್ಯವಿದೆ ಎಂಬುದನ್ನು ಮೊದಲು ಒಪ್ಪಿಕೊಂಡು ಅಪ್ಪಿಕೊಂಡು, ಚರ್ಮದ ಕಾಳಜಿ ವಹಿಸುವುದರಲ್ಲಿ ತಪ್ಪೇನಿಲ್ಲ. ದಿನ ಬೆಳಗಾಗುವುದರೊಳಗೆ ಸುಕ್ಕು ಚರ್ಮವನ್ನು ಮತ್ತೆ ನಯಗೊಳಿಸಿ ಬಿಗಿಯಾಗಿಸಲು ಸಾಧ್ಯವಿಲ್ಲದಿದ್ದರೂ, ಕೆಲವೊಂದು ಕಾಳಜಿಗಳು, ಚರ್ಮಕ್ಕೆ ತಾಜಾತನ ನೀಡಬಲ್ಲುದು ಹಾಗೂ, ಸುಕ್ಕುಗಟ್ಟುವಿಕೆ ಪ್ರಕ್ರಿಯೆಯನ್ನು ನಿಧಾನಗೊಳಿಸುವ ತಾಕತ್ತನ್ನು ಹೊಂದಿರುವುದೂ ನಿಜ. ಅವುಗಳಲ್ಲಿ ಒಂದು ಎಣ್ಣೆ ಮಸಾಜ್ (Oil massage).
1. ತೆಂಗಿನೆಣ್ಣೆ: ರಾತ್ರಿ ಮಲಗುವ ಮುನ್ನ ಐದಾರು ಹನಿ ತೆಂಗಿನೆಣ್ಣೆಯನ್ನು ಮುಖಕ್ಕೆ ಹಾಕಿ ಮೇಲ್ಮುಖವಾಗಿ ಸುಮಾರು ಐದರಿಂದ ಹತ್ತು ನಿಮಿಷಗಳ ಕಾಲ ಮಸಾಜ್ ಮಾಡಿ ಹಾಗೆಯೇ ಮಲಗುವುದು ಒಳ್ಳೆಯದು. ಇದರಿಂದ ಎಣ್ಣೆ ಚರ್ಮದ ಒಳಪದರಗಳಿಗೆ ಹರಿದು ಚರ್ಮಕ್ಕೆ ಬೇಕಾದ ಎಣ್ಣೆಯಂಶವನ್ನು ನೀಡಿ ಚರ್ಮಕ್ಕೆ ಹಾನಿಮಾಡುವ ಅಂಶಗಳನ್ನು ಹೊರಹಾಕುತ್ತದೆ.
2. ಸಾಸಿವೆ ಎಣ್ಣೆ: ಸಾಸಿವೆ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಸುಕ್ಕುಗಟ್ಟುತ್ತಿದೆ ಎಂದು ಅನಿಸುವ ಜಾಗಗಳಿಗೆ ಮೇಲ್ಮುಖವಾಗಿ ಮಸಾಜ್ ಮಾಡಿಕೊಂಡು ಒಂದರ್ಧ ಗಂಟೆ ಹಾಗೇ ಬಿಟ್ಟು ಸ್ನಾನ ಮಾಡಿ. ವಾರದಲ್ಲಿ ಮೂರ್ನಾಲ್ಕು ಬಾರಿ ಹೀಗೆ ಮಾಡುವುದರಿಂದ ಚರ್ಮ ಬಿಗಿಯಾಗುವುದಲ್ಲದೆ, ಹೊಳಪು ಬರುತ್ತದೆ. ದೇಹದಲ್ಲಿ ರಕ್ತ ಸಂಚಾರ ಹೆಚ್ಚಿ, ಎಣ್ಣೆಯಲ್ಲಿರುವ ವಿಟಮಿನ್ ಇ ಸುಕ್ಕನ್ನು ತಡೆಯುತ್ತದೆ. ಸಾಸಿವೆ ಎಣ್ಣೆ ಉಪಯೋಗಿಸುವ ಮೊದಲು ಅದು ನಿಮ್ಮ ಚರ್ಮಕ್ಕೆ ಹೊಂದಿಕೊಳ್ಳುತ್ತದೋ ನೋಡಿಕೊಂಡು ಬಳಸುವುದು ಒಳ್ಳೆಯದು.
3. ರೋಸ್‌ಮೆರಿ ತೈಲ: ಅರ್ಧ ಸೌತೆಕಾಯಿಯನ್ನು ಸಿಪ್ಪೆತೆಗೆದು ಮಿಕ್ಸಿಯಲ್ಲಿ ರುಬ್ಬಿ. ಇದಕ್ಕೆ ರೋಸ್‌ಮೆರಿ ತೈಲ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ ಎಲ್ಲೆಲ್ಲಿ ಸುಕ್ಕುಗಟ್ಟುತ್ತಿದೆ ಅನಿಸುತ್ತದೆಯೋ ಅಲ್ಲಲ್ಲಿ ಹಚ್ಚಿ ೧೫-೨೦ ನಿಮಿಷ ಬಿಟ್ಟು ತೊಳೆಯಿರಿ. ವಾರಕ್ಕೆ ಮೂರು ಬಾರಿ ಹೀಗೆ ಮಾಡಿಕೊಳ್ಳಬಹುದು. ಇದು ಬಿಗಿತನ ಕಳೆದುಕೊಂಡ ಚರ್ಮವನ್ನು ಟೋನ್ ಮಾಡಿ ಚರ್ಮಕ್ಕೆ ಹೊಳಪು ನೀಡುತ್ತದೆ. ಚರ್ಮದ ವಯಸ್ಸಾಗುವಿಕೆಯನ್ನು ನಿಧಾನಗೊಳಿಸುತ್ತದೆ.
4. ಬಾದಾಮಿ ಎಣ್ಣೆ: ಸ್ನಾನಕ್ಕೆ 20 ನಿಮಿಷಗಳಿಗೂ ಮುನ್ನ ಬಾದಾಮಿ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳಿ. ಪ್ರತಿದಿನವೂ ಸಾಧ್ಯವಾದರೆ ಉತ್ತಮ. ಎರಡು ದಿನಗಳಿಗೊಮ್ಮೆಯೂ ಮಾಡಬಹುದು. ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಇ ಹೇರಳವಾಗಿದ್ದು, ಇದು ಚರ್ಮವನ್ನು ಬಿಗಿಗೊಳಿಸುತ್ತದೆ.
5. ಅವಕಾಡೋ ತೈಲ: ಅವಕಾಡೋ (ಬೆಣ್ಣೆಹಣ್ಣು) ತೈಲದಿಂದ ಮಸಾಜ್ ಮಾಡಿಕೊಂಡು ಒಂದು ಗಂಟೆ ಬಿಟ್ಟು ತೊಳೆದುಕೊಳ್ಳಬಹುದು. ಇದಕ್ಕೂ ಚರ್ಮವನ್ನು ಬಿಗಿಯಾಗಿಸುವ ತಾಕತ್ತಿದೆ.
6. ವಿಟಮಿನ್ ಇ ಕ್ಯಾಪ್ಸುಲ್: ಇದ್ಯಾವುದೂ ಸಾಧ್ಯವಾಗದಿದ್ದರೆ, ನೇರವಾಗಿ ವಿಟಮಿನ್ ಇ ಕ್ಯಾಪ್ಸೂಲ್‌ಗಳನ್ನೂ ಬಳಸಬಹುದು. ಮೆಡಿಕಲ್ ಶಾಪ್‌ಗಳಲ್ಲಿ ಸಿಗುವ ವಿಟಮಿನ್ ಆಯಿಲ್ ಕ್ಯಾಪ್ಸುಲ್ ತೆಗೆದುಕೊಂಡು ಒಂದು ಕ್ಯಾಪ್ಸುಲ್‌ಗೆ ಪಿನ್‌ನಿಂದ ಚುಚ್ಚಿ ತೂತು ಮಾಡಿ 10- 15 ನಿಮಿಷ ಮುಖಕ್ಕೆ ಮೇಲ್ಮುಖವಾಗಿ ಮಸಾಜ್ ಮಾಡಿ. ಇದನ್ನು ರಾತ್ರಿ ಮಲಗುವ ಮುಂಚೆ ಹಚ್ಚಿ ಬೆಳಗ್ಗೆ ತೊಳೆಯಬಹುದು. ಚರ್ಮವನ್ನು ಇದು ಆರೋಗ್ಯವಾಗಿರಿಸುವುದಲ್ಲದೆ, ತಾಜಾ ಆಗಿರಿಸಿ ಟೋನ್ಡ್ ಲುಕ್ ನೀಡುತ್ತದೆ. ಕಪ್ಪು ಕಲೆಗಳನ್ನೂ ಕಡಿಮೆಗೊಳಿಸುತ್ತದೆ.
7. ಮೀನೆಣ್ಣೆ: ಫಿಶ್ ಆಯಿಲ್ ಕ್ಯಾಪ್ಸುಲ್‌ಗಳನ್ನು ಮೆಡಿಕಲ್ ಶಾಪ್‌ನಲ್ಲಿ ಖರೀದಿಸಿ, ದಿನಕ್ಕೊಂದು ಕ್ಯಾಪ್ಸುಲ್‌ನೊಳಗಿನ ಎಣ್ಣೆಯನ್ನು ತೆಗೆದು ಮುಖಕ್ಕೆ ಮಸಾಜ್ ಮಾಡುವುದರಿಂದ ಉತ್ತಮ ಫಲಿತಾಂಶ ಕಾಣಬಹುದು.
8. ಆಲಿವ್ ಹಾಗೂ ಆರ್ಗಾನ್ ಎಣ್ಣೆ: ಆಲಿವ್ ಹಾಗೂ ಆರ್ಗಾನ್ ಎರಡೂ ಎಣ್ಣೆಗಳು ಚರ್ಮದ ಆರೋಗ್ಯಕ್ಕೆ ಅತ್ಯುತ್ತಮ. ಮುಖವನ್ನು ಚೆನ್ನಾಗಿ ತೊಳೆದುಕೊಂಡು ಕೆಲವು ಹನಿ ಆಲಿವ್ ಎಣ್ಣೆಯಿಂದ ಮಸಾಜ್ ಮಾಡಿಕೊಂಡು ಸ್ವಲ್ಪ ಹೊತ್ತು ಬಿಟ್ಟು ತೊಳೆದುಕೊಳ್ಳಬಹುದು. ಅಥವಾ, ಸ್ನಾನದ ನಂತರ ಹಚ್ಚಿಕೊಳ್ಳುವ ಮಾಯ್‌ಶ್ಚರೈಸರ್ ಲೋಶನ್‌ಗೆ ಕೆಲವು ಹನಿ ಅರ್ಗಾನ್ ಎಣ್ಣೆ ಹಾಕಿ ಹಚ್ಚಿಕೊಳ್ಳಬಹುದು.
ತೈಲಗಳು ಚರ್ಮಕ್ಕೆ ಒಳ್ಳೆಯದೆಂದು ಅನಾದಿ ಕಾಲದಿಂದಲೂ ಸಾಬೀತಾಗಿದೆ. ಹಿರಿಯರು ಅದನ್ನು ಉಪಯೋಗಿಸಿ ಸತ್ಯ ಕಂಡುಕೊಂಡಿದ್ದಾರೆ. ದಿನ ಬೆಳಗಾದರೆ ಬದಲಾವಣೆ ಕಾಣದಿದ್ದರೂ, ಚರ್ಮದ ಕಾಳಜಿ ಖಂಡಿತ ಒಳ್ಳೆಯ ಫಲಿತಾಂಶವನ್ನೇ ನೀಡುತ್ತದೆ.
ಇದನ್ನೂ ಓದಿ: Skin Care Tips: ಹೊಳಪಿನ ಚರ್ಮಕ್ಕೆ ಈ ಐದು ಬೀಜಗಳನ್ನು ಸೇವಿಸಿ!