ಮುಖವನ್ನು ಮನಸ್ಸಿನ ಕನ್ನಡಿ ಎನ್ನಲಾಗುತ್ತದೆ. ಹಾಗೆಯೇ ಬಾಯನ್ನು ನಮ್ಮ ದೇಹಾರೋಗ್ಯದ ಬೆಳಕಿಂಡಿ ಎನ್ನಬಹುದೇ? ಹೌದೆನ್ನುತ್ತಾರೆ ದಂತವೈದ್ಯರು. ಕಾರಣ, ದೇಹದ ಈಗಿನ ಆರೋಗ್ಯ ಮತ್ತು ಮುಂದೆ ಒದಗಬಹುದಾದ ಆರೋಗ್ಯದ ಸ್ಥಿತಿಗತಿಗಳನ್ನು ದಂತ, ಒಸಡು ಸೇರಿದಂತೆ ಬಾಯಿಯ ಸೂಕ್ಷ್ಮ ಅವಲೋಕನದ ಮೂಲಕ ಅರಿಯಬಹುದು ಎನ್ನುತ್ತಾರೆ ಪರಿಣಿತರು. ಅದರಲ್ಲೂ ಬಾಯಿಯ ಆರೋಗ್ಯ (oral health) ಚೆನ್ನಾಗಿಲ್ಲ ಎಂಬುದು ಮುಂದಿನ ಹಲವು ಆರೋಗ್ಯ ಸಮಸ್ಯೆಗಳ ಮುನ್ಸೂಚನೆ ಎನ್ನಲಾಗುತ್ತದೆ. ಉದಾ, ಒಸಡುಗಳು ಪದೇಪದೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ ಅಥವಾ ಪೆರಿಯೊಡಾಂಟೈಟಿಸ್ ಬಾಧಿಸುತ್ತಿದ್ದರೆ ಟೈಪ್-2 ಮಧುಮೇಹದ ಬಗ್ಗೆ ಜಾಗೃತರಾಗಿರುವುದು ಒಳ್ಳೆಯದು. ಕೆಲವು ವಿಟಮಿನ್ಗಳ ಕೊರತೆಯನ್ನು ದಂತ, ಒಸಡುಗಳು ಸ್ಪಷ್ಟವಾಗಿ ತಿಳಿಸುತ್ತವೆ.
ಗರ್ಭಾವಸ್ಥೆಯ ಸೂಚನೆ
ದೇಹದ ಆರೋಗ್ಯವೆಲ್ಲಾ ಚೆನ್ನಾಗಿದೆ. ಹಲ್ಲುಗಳಲ್ಲೂ ಯಾವುದೇ ಸಮಸ್ಯೆಯಿಲ್ಲ ಎನ್ನುವಾಗ ಇದ್ದಕ್ಕಿದ್ದಂತೆ ಒಸಡುಗಳಿಂದ ರಕ್ತಸ್ರಾವ, ಹಲ್ಲುಗಳ ಬುಡ ಊದಿಕೊಳ್ಳುವಂಥ ತೊಂದರೆ ಆರಂಭವಾಗಿದೆಯೇ? ಗರ್ಭಾವಸ್ಥೆಯಲ್ಲಿ ಬಾಧಿಸುವ ಜಿಂಜವೈಟಿಸ್ ಇದಕ್ಕೆ ಕಾರಣವಾಗಿರಬಹುದು. ಗರ್ಭಿಣಿಯಲ್ಲಿ ಆಗುವ ಹಲವು ರೀತಿ ಹಾರ್ಮೋನ್ ಬದಲಾವಣೆಗಳಿಂದ ಮತ್ತು ಆಗಾಗ ಮೆಲ್ಲುವುದರಿಂದ ಒಸಡುಗಳ ಸಮಸ್ಯೆ ಬಾಧಿಸುವುದು ಸಾಮಾನ್ಯ
ಪೋಷಕಾಂಶಗಳ ಕೊರತೆ
ಕೆಲವು ಪೋಷಕಸತ್ವಗಳ ಕೊರತೆಯನ್ನೂ ಬಾಯಿಯ ಮೂಲಕ ತಿಳಿಯಬಹುದು. ಉದಾ, ವಿಟಮಿನ್ ಬಿ ಕೊರತೆಯಿದ್ದರೆ ಹಲ್ಲುಗಳ ಎನಾಮಲ್ ಕವಚ ಬಲಹೀನವಾಗಿರುತ್ತದೆ. ಮಾತ್ರವಲ್ಲ, ತುಟಿ ಮತ್ತು ಕೆನ್ನೆಯ ಒಳಭಾಗದಲ್ಲಿ ಬಿರುಕುಗಳು ಇರಬಹುದು. ಬಾಯಲ್ಲಿ ಪದೇಪದೆ ಹುಣ್ಣಾಗುವುದು ಸಹ ಇಂಥದ್ದನ್ನೇ ಸೂಚಿಸುತ್ತದೆ. ವಿಟಮಿನ್ ಡಿ ಕೊರತೆಯಿದ್ದರೆ ಹಲ್ಲುಗಳು ಸೊಟ್ಟಾಗಿರುವುದು, ಹುಳುಕು ಮತ್ತು ಒಸಡುಗಳ ಸಮಸ್ಯೆಗೆ ಕಾರಣವಾಗಬಹುದು.
ಆಸ್ಟಿಯೊಪೊರೋಸಿಸ್
ಈ ರೋಗ ಮೂಳೆಗಳನ್ನು ಮಾತ್ರವಲ್ಲ, ಹಲ್ಲುಗಳನ್ನೂ ಬಾಧಿಸುತ್ತದೆ. ಅಂದರೆ ಹಲ್ಲುಗಳ ಆಧಾರವಾದ ಮೂಳೆಗಳು ಶಕ್ತಿಗುಂದುತ್ತಿದ್ದಂತೆಯೇ ಆ ಹಲ್ಲುಗಳು ಶಕ್ತಿಹೀನವಾಗಿ ಉದುರಿಹೋಗಬಹುದು. ಹಾಗಾಗಿ ಹಲ್ಲುಗಳ ಬಲ ಕುಂದುವುದು ಮತ್ತು ದೇಹದ ಮೂಳೆಗಳ ಬಲ ಕುಂದುವುದರ ನಡುವೆ ನೇರ ನಂಟನ್ನು ತಜ್ಞರು ಗುರುತಿಸಿದ್ದಾರೆ.
ಹೃದಯವನ್ನು ಭದ್ರಮಾಡಿ
ಹಲ್ಲು ಉದುರುವುದು, ಒಸಡುಗಳ ರೋಗಗಳು ಮತ್ತು ಹೃದ್ರೋಗಗಳ ನಡುವೆಯೂ ನಂಟಿದೆ ಎನ್ನುತ್ತದೆ ವೈದ್ಯ ವಿಜ್ಞಾನ. ಹಲ್ಲುಗಳ ಮೇಲೆ ಪದೇಪದೆ ಪ್ಲೇಕ್ ಅಂದರೆ ಪದರದಂತೆ ಕಟ್ಟಿಕೊಳ್ಳುವುದು ಮತ್ತು ಒಸಡುಗಳ ಅನಾರೋಗ್ಯ ಕಾಡುತ್ತಿದ್ದರೆ ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ಭೀತಿ ಅಂಥವರಿಗೆ ಹೆಚ್ಚು. ಹಾಗಾಗಿ ಈ ರೋಗಗಳನ್ನು ದೂರವಿಡುವಂಥ ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವುದು ಅಗತ್ಯ.
ಹಲ್ಲು ಕಡಿಯುತ್ತೀರೇ?
ಇದನ್ನು ಕೋಪದ ಲಕ್ಷಣ ಎಂಬಂತೆ ಸಾಮಾನ್ಯವಾಗಿ ಬಿಂಬಿಸಲಾಗುತ್ತದೆ. ಆದರೆ ಇದು ಬದುಕಿನಲ್ಲಿ ಕಾಡುತ್ತಿರುವ ಅತಿ ಒತ್ತಡದ ಚಿಹ್ನೆಯೂ ಆಗಿರಬಹುದು. ಅದರಲ್ಲೂ ಬಿಗಿದುಕೊಂಡಂಥ ಬಾಯಿ ಖಂಡಿತವಾಗಿ ನಮ್ಮ ಮಾನಸಿಕ ಸ್ಥಿತಿಯ ಸಂಕೇತ. ಒತ್ತಡವನ್ನು ಮೊದಲು ಇಳಿಸಿಕೊಳ್ಳಿ.
ತಿನ್ನುವ ಕಾಯಿಲೆ
ಬುಲಿಮಿಯದಂಥ ರೋಗವನ್ನು ತಿನ್ನದಿರುವ ಕಾಯಿಲೆ ಎಂದರೂ ತಪ್ಪೇನಿಲ್ಲ! ಅತಿಯಾಗಿ ತಿನ್ನುವುದು ಮತ್ತು ದೇಹ ತೂಕವನ್ನು ನಿಯಂತ್ರಿಸುವ ಭರದಲ್ಲಿ ಎಲ್ಲವನ್ನೂ ವಾಂತಿ ಮಾಡಿಕೊಳ್ಳುವ ಇದೊಂದು ಮಾನಸಿಕ ಸಮಸ್ಯೆಯೂ ಹೌದು. ಈ ತೊಂದರೆ ಇರುವವರಿಗೆ ಎನಾಮಲ್ ಕವಚಕ್ಕೆ ಸಾಕಷ್ಟು ಹಾನಿಯಾಗಿರುತ್ತದೆ. ವಾಂತಿ ಮೂಲಕ ಹೊಟ್ಟೆಯಲ್ಲಿರುವ ಪಿತ್ತರಸ ಬಾಯಿಗೆ ಬಂದು, ಹಲ್ಲುಗಳಿಗೆ ಸೋಕಿದಾಗ, ಅದರಲ್ಲಿರುವ ಆಮ್ಲೀಯ ಗುಣದಿಂದಾಗಿ ಎನಾಮಲ್ ಹಾಳಾಗಲು ಪ್ರಾರಂಭಿಸುತ್ತದೆ. ಇದರಿಂದ ಹಲ್ಲುಗಳ ಬಣ್ಣ ಮತ್ತು ಆಕಾರದಲ್ಲಿ ವ್ಯತ್ಯಾಸ ಕಂಡುಬರುತ್ತದೆ.
ನರರೋಗಗಳಿಗೂ ದಿಕ್ಸೂಚಿ
ಜೀವನವಿಡೀ ಮತ್ತೆಮತ್ತೆ ಒಸಡು ಮತ್ತು ಹಲ್ಲುಗಳ ಸೋಂಕುಗಳಿಂದ ಬಳಲಿದ ವೃದ್ಧರಲ್ಲಿ ಡಿಮೆನ್ಶಿಯ ಅಥವಾ ಅಲ್ಜೈಮರ್ಸ್ನಂಥ ನರರೋಗಗಳು ಅಮರಿಕೊಳ್ಳುವುದು, ಆರೋಗ್ಯವಂತ ಹಲ್ಲುಗಳಿರುವವರಿಗಿಂತ ಅಧಿಕ ಎನ್ನುತ್ತವೆ ಅಧ್ಯಯನಗಳು. ಹಾಗಾಗಿ ಬಾಯಿಯ ಆರೋಗ್ಯವನ್ನು ಶುಚಿಯಾಗಿ ಇಟ್ಟುಕೊಳ್ಳುವುದರಿಂದ ವೃದ್ಧಾಪ್ಯದಲ್ಲಿ ಬರಬಹುದಾದ ಘೋರ ಕಾಯಿಲೆಗಳನ್ನೂ ದೂರ ಇರಿಸಬಹುದು.
ಅಲರ್ಜಿ
ಬಿಟ್ಟೂಬಿಡದೆ ಕಾಡುವ ನೆಗಡಿ, ಮೂಗು ಕಟ್ಟುವಂಥ ಅಲರ್ಜಿಯ ಸಮಸ್ಯೆಯಿಂದಾಗಿ ಹಲ್ಲುನೋವು ಬರುವ ಸಾಧ್ಯತೆಯೂ ಇಲ್ಲದಿಲ್ಲ. ಕಟ್ಟಿದ ಮೂಗಿನ ಉಪಟಳದಿಂದ ಸದಾ ಕಾಲ ಬಾಯಿಯಿಂದಲೇ ಉಸಿರಾಡು ಅವಸ್ಥೆಯಲ್ಲಿದ್ದರೆ, ಬಾಯಿಯ ಜೊಲ್ಲು ಒಣಗುವುದು ಸಹಜ. ಬಾಯಿಯಲ್ಲಿ ಉಳಿಯುವ ಆಹಾರದ ಕಣಗಳು, ಆಮ್ಲೀಯ ರಸಗಳನ್ನೆಲ್ಲಾ ಸ್ಚಚ್ಛಮಾಡಲು ಲಾಲಾ ರಸ ಇಲ್ಲದಿದ್ದರೆ, ಅದರಿಂದಲೂ ಹಲ್ಲು ಹುಳುಕಾಗುತ್ತದೆ.
ನಮ್ಮ ಹಲ್ಲುಗಳು ಸಹ ನಮ್ಮ ಬೆರಳಚ್ಚಿನಂತೆಯೇ ಅನನ್ಯ, ಒಬ್ಬರದ್ದಿರುವಂತೆ ಇನ್ನೊಬ್ಬರದ್ದು ಇರುವುದಿಲ್ಲ. ಅವಳ-ಜವಳಿ ಮಕ್ಕಳ ಹಲ್ಲುಗಳೂ ಸಹ ಒಂದೇ ರೀತಿ ಇರುವುದಿಲ್ಲ. ಬಾಯಿಯ ಶುಚಿತ್ವವನ್ನು ಕಾಪಾಡಿಕೊಂಡು, ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದರಿಂದ ಮುಂದೆ ಬರಬಹುದಾದ ಒಂದಿಷ್ಟು ರೋಗಗಳನ್ನು ಮುಂದೂಡಬಹುದು.
ಇದನ್ನೂ ಓದಿ: Tips to Keep Joints Healthy: ಹೀಗೆ ಮಾಡಿ, ಕೀಲುಗಳ ಸ್ವಾಸ್ಥ್ಯ ಕಾಪಾಡಿ