ಋತುಮಾನದ ಹಣ್ಣುಗಳಿಗೆ ಪ್ರಾಶಸ್ತ್ಯ ನೀಡಬೇಕೆಂಬ ಮಾತನ್ನು ಕೇಳಿಯೇ ಇರುತ್ತೇವೆ. ಈ ದಿನಗಳಲ್ಲಿ ಮಾರುಕಟ್ಟೆಯ ತುಂಬೆಲ್ಲ ನಳನಳಿಸುತ್ತಿರುವ ಕಿತ್ತಳೆ ಹಣ್ಣುಗಳು ಚಳಿಗಾಲದ ಸೂಪರ್ ಫುಡ್ ಎನಿಸಿಕೊಂಡಂಥವು. ಸಿಹಿ ಮತ್ತು ಹುಳಿ ಮಿಶ್ರಿತ ರುಚಿಯ ಘಮಘಮಿಸುವ ಈ ಹಣ್ಣುಗಳು ಮಧುಮೇಹಿಗಳಿಗೂ ಸೇವನೆಗೆ ಯೋಗ್ಯವೇ? ಈ ಕಾಲಕ್ಕೆ ಕಿತ್ತಳೆ ಹಣ್ಣಿನ ಸೇವನೆ ಅಗತ್ಯ ಎನ್ನುವಾಗ, ಸಕ್ಕರೆ ಕಾಯಿಲೆ ಇರುವವರನ್ನೂ ಸೇರಿಸಿಯೇ ಹೇಳಲಾಗುತ್ತದೆಯೇ ಎಂಬೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಮಧುಮೇಹಿಗಳೂ ಈ ಹಣ್ಣನ್ನು ಸೇವಿಸಬಹುದು ಎಂಬುದನ್ನು ಅಧ್ಯಯನಗಳಿಂದ ದೃಢಪಡಿಸಲಾಗಿದೆ. ಹೇಗೆ ಏನು ಎಂಬುದನ್ನು ಈಗ ತಿಳಿಯೋಣ. ಪ್ರತಿ ಬಾರಿ ನಾವು ಏನನ್ನೇ ತಿಂದಾಗಲೂ ರಕ್ತದಲ್ಲಿನ ನಮ್ಮ ಸಕ್ಕರೆ ಪ್ರಮಾಣ ಒಮ್ಮೆ ಏರುತ್ತದೆ. ಕೆಲ ಸಮಯದ ನಂತರ ಅದು ಕೆಳಗಿಳಿಯುತ್ತದೆ. ಆದರೆ ಈ ಪ್ರಕ್ರಿಯೆ ನಿಧಾನಕ್ಕೆ ನಡೆಯಬೇಕೇ ಹೊರತು ದಿಢೀರನೇ ಸಕ್ಕರೆಯ ಪ್ರಮಾಣ ಏರಿಳಿಯುವಂತಿಲ್ಲ. ಹಾಗಾಗಿಯೇ ಗ್ಲೈಸೆಮಿಕ್ ಇಂಡೆಕ್ಸ್ (ಜಿಐ) ಕಡಿಮೆ ಇರುವಂಥ ಆಹಾರಗಳಿಗೆ ಹೆಚ್ಚಿನ ಮಹತ್ವ ಇರುವುದು. ಒಂದು ದೊಡ್ಡ ಗಾತ್ರದ ಕಿತ್ತಳೆ ಹಣ್ಣಿನ ಕ್ಯಾಲರಿ ಅಜಮಾಸು ೧೪೦ ಗ್ರಾಂ ನಷ್ಟು. ಇದರಲ್ಲಿ ಹೇರಳವಾಗಿರುವ ನಾರಿನಂಶವು ಕಿತ್ತಳೆಯಲ್ಲಿರುವ ಸಕ್ಕರೆಯ ಅಂಶ ನಿಧಾನವಾಗಿ ರಕ್ತವನ್ನು ಸೇರುವಂತೆ ಕೆಲಸ ಮಾಡುತ್ತದೆ. ಹಾಗಾಗಿ ಮಧ್ಯಮ ಪ್ರಮಾಣದಲ್ಲಿ ಕಿತ್ತಳೆ ಹಣ್ಣುಗಳನ್ನು ಮಧುಮೇಹಿಗಳು ಸೇವಿಸಬಹುದು ಎನ್ನುತ್ತಾರೆ ತಜ್ಞರು.
ಕಿತ್ತಳೆಯ ಗುಣಗಳು: ಫ್ಲೆವೊನಾಯ್ಡ್‌ಗಳ ಗೋದಾಮಿನಂತಿವೆ ಕಿತ್ತಳೆಗಳು. ಈ ಉಪಕಾರಿ ಆಂಟಿಆಕ್ಸಿಡೆಂಟ್ ಗಳು ದೇಹದಲ್ಲಿರುವ ಉರಿಯೂತವನ್ನು ಮತ್ತು ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುತ್ತವೆ. ಹಾಗಾಗಿ ಮಧುಮೇಹಿಗಳಿಗಿದು ಪ್ರಯೋಜನಕಾರಿ.
ವಿಟಮಿನ್ ಸಿ: ಪ್ರತಿದಿನ ಸೇವಿಸಬೇಕಾಗಿರುವ ವಿಟಮಿನ್ ಸಿ ಜೀವಸತ್ವದ ಸುಮಾರು ಶೇ.೯೨ರಷ್ಟು ಒಂದು ದೊಡ್ಡ ಕಿತ್ತಳೆ ಹಣ್ಣಿನಲ್ಲಿ ದೊರೆಯುತ್ತದೆ. ಹಾಗಾಗಿಯೇ ಮಧುಮೇಹಿಗಳಿಗೆ ಮಾತ್ರವಲ್ಲ, ಹೃದ್ರೋಗಿಗಳು ಮತ್ತು ಚಿಕಿತ್ಸೆ ಪಡೆಯುತ್ತಿರುವ ಕ್ಯಾನ್ಸರ್ ರೋಗಿಗಳಿಗೂ ಇದು ಪೂರಕ. ಕ್ಯಾನ್ಸರ್‌ಗೆ ಕಾರಣವಾಗುವ ಮುಕ್ತ ರ್ಯಾಡಿಕಲ್‌ಗಳನ್ನು ಪ್ರತಿಬಂಧಿಸುವ ಸಾಮರ್ಥ್ಯ ಕಿತ್ತಳೆಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳಿಗಿದೆ.
ಇದನ್ನೂ ಓದಿ | Diabetes Diet | ಮಧುಮೇಹ ನಿಯಂತ್ರಣಕ್ಕೆ ಇದೊಂದು ಸೂತ್ರ ನೆನಪಿಟ್ಟುಕೊಳ್ಳಿ
ಪೋಷಕಾಂಶಗಳು: ಇದರಲ್ಲಿ ಸೋಡಿಯಂ ಅಂಶ ಇಲ್ಲದೆ ನಾರು ಮತ್ತು ಪೊಟಾಶಿಯಂ ಸಾಕಷ್ಟಿರುವುದರಿಂದ ಹೃದ್ರೋಗಿಗಳ ಸೇವನೆಗೆ ತಕ್ಕುದಾಗಿದೆ. ಮಾತ್ರವಲ್ಲ, ರಕ್ತದೊತ್ತಡ ಕಡಿಮೆ ಮಾಡುವಲ್ಲಿಯೂ ಈ ಅಂಶಗಳು ನೆರವು ನೀಡುತ್ತದೆ.
ರೋಗ ನಿರೋಧಕ ಶಕ್ತಿ: ಸಿ ಜೀವಸತ್ವ ವಿಫುಲವಾಗಿರುವ ಈ ಹಣ್ಣುಗಳ ಸೇವನೆಯಿಂದ ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಫ್ಲೂನಂಥ ಲಕ್ಷಣಗಳಿಂದ ಬಿಡುಗಡೆ ಪಡೆಯುವುದಕ್ಕೆ ಕಿತ್ತಳೆ ಹಣ್ಣುಗಳ ಸೇವನೆ ಒಳ್ಳೆಯ ಮಾರ್ಗ.
ಚರ್ಮದ ಆರೋಗ್ಯ: ಸಿ, ಡಿ, ಎ ನಂಥ ಜೀವಸತ್ವಗಳು ಹೆಚ್ಚಿರುವ ಈ ಹಣ್ಣುಗಳಿಂದ ದೇಹದಲ್ಲಿ ಕೊಲಾಜಿನ್ ಪ್ರಮಾಣ ವೃದ್ಧಿಸುತ್ತದೆ. ಇದರಿಂದ ಚರ್ಮದ ಆರೋಗ್ಯ ಸುಧಾರಿಸುತ್ತದೆ.
ಸೇವನೆ ಹೇಗೆ?: ಈ ಹಣ್ಣನ್ನು ಪಲ್ಪ್ ಅಥವಾ ಜ್ಯೂಸ್ ಮಾಡದೆಯೇ ಇಡಿಯಾಗಿ ಸೇವಿಸುವುದು ಸರಿಯಾದ ಕ್ರಮ. ಅದರ ರಸವನ್ನಷ್ಟೇ ಸೇವಿಸಿದರೆ, ಹಣ್ಣಿನಲ್ಲಿರುವ ನಾರಿನಂಶ ದೊರೆಯದೆ ಹೋಗುತ್ತದೆ. ಹಾಗೊಮ್ಮೆ ಜ್ಯೂಸ್ ಮಾಡಲೇಬೇಕೆಂದಿದ್ದರೆ ಹೆಚ್ಚುವರಿ ಸಿಹಿಯನ್ನು ಸೇರಿಸಲೇಕೂಡದು. ಇದರಿಂದ ಕಿತ್ತಳೆಯ ಉತ್ತಮ ಗುಣಗಳ ಮೇಲೆ ದೃಷ್ಟಿಬೊಟ್ಟು ಇಟ್ಟಂತಾಗುತ್ತದೆ. ಉಳಿದ ಹಣ್ಣುಗಳ ಜೊತೆಗೆ ಸಾಲಡ್‌ಗಳಲ್ಲಿ ಸೇರಿಸಿಯೂ ತಿನ್ನಬಹುದು. ಇಷ್ಟೆಲ್ಲಾ ಒಳ್ಳೆಯ ಅಂಶಗಳಿವೆ ಎಂಬ ಕಾರಣಕ್ಕೆ ಕಿತ್ತಳೆ ಹಣ್ಣುಗಳನ್ನು ಸಿಕ್ಕಾಪಟ್ಟೆ ತಿನ್ನುವುದೂ ಸೂಕ್ತವಲ್ಲ. ಅತಿಯಾದರೆ ಅಮೃತವೂ ವಿಷವಾಗುವುದಂತೆ! ಹಾಗಾಗಿ ಮಿತಿಯಲ್ಲಿ ತಿನ್ನುವುದು ಒಳ್ಳೆಯದು.
ಇದನ್ನೂ ಓದಿ | Avocado benefits | ಹಲವು ಕ್ಯಾನ್ಸರ್‌ಗಳಿಗೆ ಮದ್ದು ಈ ಬೆಣ್ಣೆ ಹಣ್ಣು