ಯಾವುದೋ ಕೆಲಸ ಮಾಡುತ್ತಿದ್ದೀರಿ ಅಥವಾ ಪುಸ್ತಕ ಓದುತ್ತಿದ್ದೀರಿ ಇಲ್ಲವೇ ಟಿವಿ ನೋಡುತ್ತಿದ್ದೀರಿ- ಅಂತೂ ಏನೋ ಮಾಡುತ್ತಿದ್ದೀರಿ. ನಿಮ್ಮಷ್ಟಕ್ಕೆ ನೀವು ವ್ಯಸ್ತರಾಗಿದ್ದರೂ ಒಂದೇ ಸಮನೆ (oscitation) ಆಕಳಿಸುತ್ತಿದ್ದೀರೇ? ಬ್ರಹ್ಮಾಂಡವೆಲ್ಲಾ ಕಾಣುವಂತೆ ಬಾಯಿ ಕಳೆದು, ಲೋಕದ ಗಾಳಿಯನ್ನೆಲ್ಲಾ ನೀವೇ ಒಳಗೆಳೆದುಕೊಂಡಂತೆ ಉಸಿರಾಡಿ, ಕಣ್ಣಾಲಿಗಳೆಲ್ಲಾ ತುಂಬಿಸಿಕೊಳ್ಳುತ್ತಿದ್ದೀರಿ. ಇಷ್ಟಾದರೂ ಆಕಳಿಕೆ ನಿಲ್ಲುತ್ತಲೇ ಇಲ್ಲ; ಮಾತ್ರವಲ್ಲ, ಸಾಂಕ್ರಾಮಿಕ ಜಾಡ್ಯದಂತೆ ನಿಮ್ಮ ಸುತ್ತಮುತ್ತಲಿನವರಿಗೂ ಇದನ್ನು ಅಂಟಿಸಿ, ಅವರಿಂದ ಬೈಗುಳದ ಪ್ರಸಾದ ಪಡೆಯುತ್ತಿದ್ದೀರಿ. ಪ್ರತಿಯೊಬ್ಬರ ಅನುಭವದಲ್ಲಿ ಇಂಥವು ಹಲವಾರು ಬಾರಿ ಆಗಿರಲೇಬೇಕು. ಹೀಗೇಕಾಗುತ್ತದೆ?
ಆಕಳಿಕೆ ಬರುವುದಕ್ಕೆ ʻಇಂಥದ್ದೇʼ ಎಂಬ ನಿಖರ ಕಾರಣ ಹೇಳಲಾಗದು. ಯಾವುದಾದರೂ ರೀತಿಯ (ಅಂದರೆ ದೈಹಿಕ, ಮಾನಸಿಕ, ಭಾವನಾತ್ಮಕ) ಆಯಾಸಕ್ಕೆ ನಮ್ಮ ದೇಹ ತೋರಿಸುವ ನೈಸರ್ಗಿಕ ಪ್ರತಿಕ್ರಿಯೆಯಿದು ಎನ್ನುತ್ತಾರೆ ತಜ್ಞರು. ನಿದ್ದೆ ಬರುತ್ತಿದ್ದರೆ, ಸುಸ್ತು-ಆಯಾಸವಾಗಿದ್ದರೆ, ಆತಂಕದಲ್ಲಿದ್ದರೆ, ಕುಳಿತಿರುವ ಮೀಟಿಂಗು ವರ್ಷಾನುಗಟ್ಟಳೆಯಿಂದ ನಡೆಯುತ್ತಿದೆ ಎನ್ನುವಷ್ಟು ಬೋರಾಗಿದ್ದರೆ, ಅಖಂಡ ಒಂದು ತಾಸಿನ ಕ್ಲಾಸು ಮುಗಿದರೆ ಸಾಕು ಎಂಬ ಒತ್ತಡದಲ್ಲಿದ್ದರೆ- ಇಂಥ ಹಲವಾರು ಸನ್ನಿವೇಶಗಳಲ್ಲಿ ಸರಣಿ ಆಕಳಿಕೆ ಆರಂಭವಾಗುತ್ತದೆ. ಕಡೆಗೆ, ಪಟಾಕಿ ಸರಕ್ಕೆ ಬೆಂಕಿ ಹಚ್ಚಿದಂತೆ ಅಕ್ಕಪಕ್ಕದವರಿಗೂ ಅಂಟುತ್ತದೆ.
ಕೆಲವೊಮ್ಮೆ ಚುಟುಕಾಗಿ ಬರುವ ಆಕಳಿಕೆಗಳು ಕೆಲವೊಮ್ಮೆ ದೀರ್ಘವಾಗಿ ಬಂದು, ಸಾರ್ವಜನಿಕ ಸ್ಥಳಗಳಲ್ಲಿ ಇದ್ದರೆ ಮುಜುಗರ ತರಿಸುತ್ತವೆ. ಆಕಳಿಕೆಗಳ ಜೊತೆಗೆ ನುಗ್ಗಿ ಬರುವ ದೀರ್ಘ ಸಶಬ್ದ ನಿಟ್ಟುಸಿರುಗಳಂತೂ ನಿಶ್ಶಬ್ದ ಸಭೆಗಳಲ್ಲಿ ನಮ್ಮನ್ನು ನೇರ ಅಪರಾಧಿ ಸ್ಥಾನದಲ್ಲೇ ನಿಲ್ಲಿಸಿಬಿಡುತ್ತವೆ. ಆಚೀಚಿನವರು ಬೀರುವ ಬಿರು ನೋಟಕ್ಕೆ ಬೆದರಿ, ಬಾಯಿಗೆ ಕೈ ಅಡ್ಡ ಇಟ್ಟು, ಬಾಯೊಳಗೆ ಕರವಸ್ತ್ರ, ದುಪಟ್ಟಾ ತುರುಕಿದರೂ ಆಕಳಿಕೆ ಮಾತ್ರ ನಿಲ್ಲುವುದಿಲ್ಲ. ಹಾಗೆಂದು ಆ ಸ್ಥಳದಿಂದ ಎದ್ದುಬಂದು, ಕೆಲವು ನಿಮಿಷಗಳ ಕಾಲ ನಡೆದಾಡುತ್ತಿದ್ದರೆ, ಆಕಳಿಕೆ ತಾನಾಗಿ ಕಡಿಮೆಯಾಗುತ್ತದೆ.
ಆಕಳಿಕೆ ಅತೀ ಹೆಚ್ಚಾದರೆ?
ಒಮ್ಮೆಮ್ಮೊ ಹೀಗಾದರೆ, ಅದು ಸಾಮಾನ್ಯ. ಆದರೆ ಅತಿಯಾಗಿ ದಿನವಿಡೀ ಆಕಳಿಕೆ ಬರುತ್ತಿದ್ದರೆ ಬೇರೆ ಕಾರಣಗಳೂ ಇರಬಹುದು ಅದಕ್ಕೆ. ದಿನಗಟ್ಟಲೆ ನಿದ್ದೆಗೆಟ್ಟಿದ್ದರೆ, ನಿದ್ರಾಹೀನತೆಯ ಸಮಸ್ಯೆಯಿದ್ದರೆ, ಯಾವುದಾದರೂ ಔಷಧಿಯ ಅಡ್ಡ ಪರಿಣಾಮವಿದ್ದರೆ, ಕುಡಿಯುವ ನೀರು ದೇಹಕ್ಕೆ ಕಡಿಮೆಯಾದರೆ, ಮೈ-ಕೈ ನೋವಿದ್ದರೆ ಅಥವಾ ಶ್ವಾಸಕೋಶಕ್ಕೇನಾದರೂ ತೊಂದರೆ ಆದರೆ, ಹೀಗೆ ಅತಿಯಾದ ಆಕಳಿಕೆ ಕಾಣಿಸಿಕೊಳ್ಳಬಹುದು.
ಯಾವುದಾದರೂ ಔಷಧಗಳು ಹೀಗೆ ಮಂಪರು ಬರಿಸಿ, ಆಕಳಿಕೆ ತರಿಸುತ್ತಿದ್ದರೆ ಈ ಬಗ್ಗೆ ವೈದ್ಯರಲ್ಲಿ ಸಮಾಲೋಚನೆ ಅಗತ್ಯ. ಆ ಔಷಧಿಗಳ ಪ್ರಮಾಣ ಕಡಿತ ಮಾಡುವ ಬಗ್ಗೆಯೂ ವೈದ್ಯರು ಸೂಚಿಸಬಹುದು. ಕೆಲವೊಮ್ಮೆ ಯಕೃತ್ತಿನ ತೊಂದರೆ ಮತ್ತು ನರಗಳ ಸಮಸ್ಯೆಯಿಂದಲೂ ವಿಪರೀತ ಎನ್ನುವಷ್ಟು ಆಕಳಿಕೆ ಬರಬಹುದು. ಹಾಗಾಗಿ, ಸಾಮಾನ್ಯ ಮಟ್ಟಕ್ಕಿಂತ ಅತಿ ಹೆಚ್ಚು ಎನ್ನುವಷ್ಟು ಆಕಳಿಕೆ ಬರುತ್ತಿದ್ದರೆ, ನಮಗೇನೋ ಹೇಳುವುದಕ್ಕೆ ನಮ್ಮ ದೇಹ ಪ್ರಯತ್ನಿಸುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಏನು ಹೇಳುತ್ತಿದೆ ಎಂಬುದನ್ನು ತಿಳಿಯಲು ವೈದ್ಯರ ನೆರವು ಬೇಕಾಗಬಹುದು.
ಇದನ್ನೂ ಓದಿ| Winter Health Care | ಚಳಿಗಾಲದಲ್ಲಿ ಅಜೀರ್ಣ? ಇವು ನೆರವಾಗಬಹುದು!