ಬೇಸಿಗೆ ಬಂದ ತಕ್ಷಣ ತಂಪು ತಂಪು ಏನಾದರೂ ತಿನ್ನುವ ಅನಿಸುವುದು ಸಹಜ. ಮನೆಯಿಂದ ಕಾಲು ಹೊರಗಿಟ್ಟರೆ ಧಾರಾಕಾರವಾಗಿ ಬೆವರು ಹರಿಯುವಾ ತಂಪು ತಂಪು ತಿಂದರೆ ಕುಡಿದರೆ ದೇಹ ತಣ್ಣಗಿರುತ್ತದೆ. ಇದಕ್ಕಾಗಿ ಮಾರುಕಟ್ಟೆ ತುಂಬ ತರಕಾರಿ ಹಣ್ಣುಗಳು ನಮ್ಮನ್ನು ಸೆಳೆಯುತ್ತದೆ. ಇವು ಕೇವಲ ನಾಲಿಗೆಗಷ್ಟೇ ರುಚಿಯಲ್ಲ, ದೇಹಕ್ಕೂ ರುಚಿಯೇ. ಕಲ್ಲಂಗಡಿ, ಸೌತೆಕಾಯಿ, ಖರ್ಬೂಜ, ಸೇರಿದಂತೆ ದೇಹವನ್ನು ತಂಪಾಗಿಡುವ ಹತ್ತು ಹಲವು ಬಗೆಯ ಹಣ್ಣು ತರಕಾರಿಗಳು ಲಭ್ಯವಿವೆ ಕೂಡಾ. ಪ್ರಕೃತಿಯೇ ನಮಗಾಗಿ ಕರೆಕ್ಟಾಗಿ ಬೇಸಿಗೆಯ ಸಮಯದಲ್ಲೇ ಕೊಡುವ ಹಣ್ಣುಗಳು ಆಯಾ ಕಾಲಕ್ಕೆ ತಕ್ಕನಾಗಿಯೇ ದೇಹಕ್ಕೆ ಬೇಕಾದಂತವೇ ಆಗಿರುವುದು ವಿಸ್ಮಯ. ಇಂತಹ ಹಣ್ಣುಗಳೆಲ್ಲವೂ ಕೊಬ್ಬುರಹಿತವಾಗಿದ್ದು ವಿಟಮಿನ್ ಎ, ಬಿ೬, ಹಾಗೂ ಸಿ ಯಿಂದ ಸಮೃದ್ಧವಾಗಿರುವುದಲ್ಲದೆ ಸಾಕಷ್ಟು ನಾರಿನಂಶವನ್ನೂ ಹೊಂದಿರುತ್ತದೆ. ಹಾಗಾದರೆ, ಇವು ದೇಹಕ್ಕೆ ಒಳ್ಳೆಯದೆಂದು ಇವನ್ನೇ ತಿನ್ನಬಹುದೇ? ಖಂಡಿತಾ ಇಲ್ಲ. ಅತಿಯಾದರೆ ಅಮೃತವೂ ವಿಷವೇ ಎಂದು ಹಿರಿಯರು ಹೇಳಿದ್ದು ಸುಮ್ಮನೆ ಅಲ್ಲ. ಅದು ಎಲ್ಲ ವಿಚಾರಗಳಿಗೂ ಅನ್ವಯಿಸುತ್ತದೆ.
ಹಾಗಾದರೆ ಕಲ್ಲಂಗಡಿ ಹಣ್ಣನ್ನು ಅತಿಯಾಗಿ ತಿಂದರೆ ಏನಾಗುತ್ತದೆ ಎಂದು ಹಲವರು ಕೇಳಬಹುದು. ಬೇಸಿಗೆಯಲ್ಲಿ ದೇಹಕ್ಕೆ ತಂಪು ಎಂದು ಒಂದು ನಿರ್ದಿಷ್ಟ ಪ್ರಮಾಣಕ್ಕಿಂತ ಹೆಚ್ಚು ಕಲ್ಲಂಗಡಿ ಹಣ್ಣನ್ನು ತಿಂದರೆ ಖಂಡಿತವಾಗಿಯೂ ಅಡ್ಡ ಪರಿಣಾಮಗಳು ಇದ್ದೇ ಇವೆ. ಇದರಿಂದ ದೇಹಕ್ಕೆ ಸಾಕಷ್ಟು ಆರೋಗ್ಯಕರ ಲಾಭಗಳು ಇದ್ದೇ ಇವೆಯಾದರೂ, ಅತಿಯಾಗಿ ತಿಂದರೆ ಆಗುವ ಅಡ್ಡ ಪರಿಣಾಮಗಳು ಇವು.
1. ಬೇಧಿ ಅಥವಾ ಜೀರ್ಣಕ್ರಿಯೆಯ ಸಮಸ್ಯೆಗಳು ಬರಬಹುದು: ಕಲ್ಲಂಗಡಿ ಹಣ್ಣಿನಲ್ಲಿ ನೀರಿನಂಶ ಹೆಚ್ಚಿದ್ದು, ನಾರಿನಂಶವೂ ಹೆಚ್ಚಿದೆ. ಈ ಕಾರಣದಿಂದ ಅತಿಯಾಗಿ ತಿನ್ನುವುದರಿಂದ ಬೇದಿ, ಜೀರ್ಣದ ತೊಂದರೆGಳು ಕಾಣಿಸಬಹುದು. ಹೊಟ್ಟೆಯುಬ್ಬರಿಸಿದಂತಾಗುವುದು, ಗ್ಯಾಸ್ ಇತ್ಯಾದಿ ತೊಂದರೆಗಳೂ ಬರಬಹುದು. ಇದರಲ್ಲಿ ಸೋರ್ಬಿಟೋಲ್ ಎಂಬ ಸಕ್ಕರೆಯ ಅಂಶ ಇರುವುದರಿಂದ ಇದು ಹೆಚ್ಚಾದರೆ ಬೇದಿಯನ್ನು ಹಾಗೂ ಗ್ಯಾಸ್ ತೊಂದರೆಯನ್ನೂ ತರಿಸುತ್ತದೆ.
2. ಗ್ಲುಕೋಸ್ ಮಟ್ಟವನ್ನು ಹೆಚ್ಚಿಸುತ್ತದೆ: ನೀವು ಮಧುಮೇಹಿಗಳಾಗಿದ್ದರೆ ಅತಿಯಾಗಿ ಕಲ್ಲಂಗಡಿ ತಿನ್ನುವುದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣದಲ್ಲಿ ಇದ್ದಕ್ಕಿದ್ದಂತೆ ಏರಿಕೆಯಾಗಬಹುದು. ಇದು ಆರೋಗ್ಯಕರವಾದ ಹಣ್ಣೇ ಆದರೂ ಇದರಲ್ಲಿ ಹೆಚ್ಚಿನ ಗ್ಲಿಸೆಮಿಕ್ ಇಂಡೆಕ್ಸ್ ಇರುವುದರಿಂದ ಮಧುಮೇಹಿಗಳು ಜಾಗ್ರತೆ ವಹಿಸಬೇಕು. ತಿನ್ನುವ ಮೊದಲು ವೈದ್ಯರನ್ನು ಸಂಪರ್ಕಿಸಿ.
3. ಮದ್ಯಪಾನಿಗಳಿಗೆ ಒಳ್ಳೆಯದಲ್ಲ: ಆಲ್ಕೋಹಾಲ್ ಯಾವಾಗಲೂ ಸೇವಿಸುವ ಮಂದಿ ಕಲ್ಲಂಗಡಿ ಹೆಚ್ಚು ತಿನ್ನುವುದರಿಂದ ದೂರವಿರುವುದು ಒಳ್ಳೆಯದು. ಕಲ್ಲಂಗಡಿಯಲ್ಲಿ ಲೈಕೋಪೀನ್ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಇದು ಆಲ್ಕೋಹಾಲ್ ಜೊತೆ ವರ್ತಿಸಿ ಪಿತ್ತಕೋಶಕ್ಕೆ ಹಾನಿ ಮಾಡುವ ಸಂಭವವಿದೆ.
ಇದನ್ನೂ ಓದಿ: Health Tips: ಮದುವೆಗಳ ಕಾಲ; ಭರ್ಜರಿ ತಿಂದು ಬಂದ ಮೇಲೆ ಹೀಗೆ ಕಾಳಜಿ ವಹಿಸಿ!
4. ಅತಿಯಾಗಿ ನೀರು ತುಂಬಬಹುದು: ಕಲ್ಲಂಗಡಿಯಲ್ಲಿ ನೀರಿನ ಪ್ರಮಾಣ ಹೆಚ್ಚು ಇರುವುದರಿಂದ ಅತಿಯಾಗಿ ಕಲ್ಲಂಗಡಿ ತಿನ್ನುವುದರಿಂದ ಕೆಲವೊಮ್ಮೆ ಅತಿಯಾದ ನೀರು ಸಂಗ್ರಹಣೆಯ ತೊಂದರೆಯೂ ಇದರಿಂದ ಉಂಟಾಗಬಹುದು. ಇದರಿಂದ ಸೋಡಿಯಂನ ಮಟ್ಟ ದೇಹದಲ್ಲಿ ಕಡಿಮೆಯಾಗಬಹುದು. ನೀರು ದೇಹದಿಂದ ಹೊರಹೋಗದಿದ್ದರೆ ಮೈಕೈ ಊದಿಕೊಂಡು, ಕಿಡ್ನಿಯ ತೊಂದರೆಗಳೂ ಕಾಣಿಸಿಕೊಳ್ಳಬಹುದು.
5. ಹೃದಯದ ತೊಂದರೆಗಳೂ ಕಾಣಿಸಬಹುದು: ಕಲ್ಲಂಗಡಿ ಹಣ್ಣಿನಲ್ಲಿ ಪೊಟಾಶಿಯಂ ಹೆಚ್ಚಿದೆ. ಇದು ದೇಹಕ್ಕೆ ಅತ್ಯಂತ ಅಗತ್ಯವಾಗಿ ಬೇಕಾದ ಪೋಷಕಾಂಶ. ಎಲುಬನ್ನು ಗಟ್ಟಿಗೊಳಿಸಿ, ಹೃದಯವನ್ನು ಇದು ಆರೋಗ್ಯವಾಗಿರಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಆದರೆ, ಪೊಟಾಶಿಯಂ ಅತ್ಯಂತ ಹೆಚ್ಚಾದರೆ ಹೃದಯಬಡಿತದಲ್ಲಿ ಏರಿಳಿತ, ದುರ್ಬಲ ನಾಡಿಮಿಡಿತ, ಹಾಘೂ ಹೃದಯ ಸಂಬಂಧೀ ತೊಂದರೆಗಳು ಉಂಟಾಗಬಹುದು.
ಇದನ್ನೂ ಓದಿ: Health Tips: ಬಾಯಿಹುಣ್ಣು ಬೇಗ ಗುಣವಾಗಬೇಕೇ? ಈ ಆಹಾರಗಳನ್ನು ಬಿಡಿ!