ನಮ್ಮ ಚರ್ಮದ ಕಾಂತಿ ಹೆಚ್ಚಿಸುವ ವಿಷಯ ಬಂದರೆ, ಮಾರುಕಟ್ಟೆಯಲ್ಲಿ ಲಭ್ಯವಿರುವ ದುಬಾರಿ ಬೆಲೆಯ ಕ್ರೀಮುಗಳು, ಸ್ಕ್ರಬ್‌ಗಳು, ಸೀರಂಗಳು, ಫೇಸ್‌ಪ್ಯಾಕ್‌ನಂಥ ಎಲ್ಲವನ್ನೂ ಖರೀದಿಸುತ್ತೇವೆ. ಆದರೆ ಹಿತ್ತಲಲ್ಲಿ ಸುಲಭಕ್ಕೆ ಸಿಗುವ ಮದ್ದಿನ ಬಗ್ಗೆ ಮರೆಯುತ್ತೇವೆ. ಅಂದರೆ ನಮ್ಮ ಅಡುಗೆ ಮನೆಯನ್ನು ಒಮ್ಮೆ ಜಾಲಾಡಿದರೆ, ಬಹಳಷ್ಟು ಸಮಸ್ಯೆಗಳಿಗೆ ಉಪಶಮನ ದೊರೆಯಬಹುದು. ಕೆಲವೊಮ್ಮೆ ಹೀಗೂ ಆಗುತ್ತದೆ- ಒಂದು ವಸ್ತುವಿನ ಕೆಲವು ಗುಣಗಳು ನಮಗೆ ಗೊತ್ತಿರುತ್ತದೆ, ಕೆಲವು ಗೊತ್ತಿರುವುದಿಲ್ಲ. ಉದಾ, ಪಪ್ಪಾಯಿ ತಿನ್ನುವುದಕ್ಕೆ ರುಚಿಕರವಾದ, ಪೌಷ್ಟಿಕವಾದ ಹಣ್ಣು ಎಂಬುದು ಎಲ್ಲರಿಗೂ ಗೊತ್ತು. ಆದರೆ ಅದನ್ನು (Papaya Face Pack) ತ್ವಚೆಯ ಅಂದ ಹೆಚ್ಚಿಸುವುದಕ್ಕೂ ಬಳಸಬಹುದು ಎಂಬುದು ಹೆಚ್ಚಿನವರಿಗೆ ತಿಳಿದಿರುವುದಿಲ್ಲ.
ಹೌದು, ಮೊಡವೆಗಳಿಂದ ಹಿಡಿದು ಪಿಗ್ಮೆಂಟ್‌ಗಳವರೆಗೆ ಹಲವು ಸಮಸ್ಯೆಗಳನ್ನು ಪಪ್ಪಾಯಿ ಹಣ್ಣು ನಿವಾರಿಸಬಲ್ಲದು. ಪಪ್ಪಾಯಿಯನ್ನ ಸಾಧ್ಯವಾದಷ್ಟೂ ತಿಂದು, ಉಳಿದಿದ್ದನ್ನು ಮುಖಕ್ಕೆ ಲೇಪಿಸಿದರೂ ಸಾಕು- ಒಂದೇ ಕಲ್ಲಿಗೆ ಎರಡು ಹಕ್ಕಿ! ಅಂದರೆ, ದೇಹದ ಆರೋಗ್ಯಕ್ಕೆ ಮತ್ತು ಚರ್ಮಕ್ಕೆ ಒಟ್ಟಿಗೇ ಲಾಭ.
ನಿಸ್ಸಾರ ಚರ್ಮ ತೆಗೆಯುತ್ತದೆ: ತ್ವಚೆಯ ಮೇಲ್ಮೈಯಲ್ಲಿರುವ ನಿಸ್ಸಾರ ಕೋಶಗಳನ್ನು ತೆಗೆಯಲು ಪಪ್ಪಾಯಿ ಫೇಸ್‌ಪ್ಯಾಕ್ ಸಹಕಾರಿ. ಚರ್ಮದ ಮೇಲಿರುವ ಸತ್ತ ಕೋಶಗಳನ್ನು ತೆಗೆದರೆ, ಹೊಸ ಕೋಶಗಳು ತಾನೇತಾನಾಗಿ ಬೆಳೆಯುತ್ತವೆ. ಈ ಮೂಲಕ ಮುಖಕ್ಕೆ ಹೊಸ ಹೊಳಪು ದೊರೆಯುತ್ತದೆ.
ಮೊಡವೆ ನಿರ್ಮೂಲನೆ: ನಾಳೆಯೆಂದರೆ ಪಾರ್ಟಿಗೋ, ಮದುವೆ ಮನೆಗೋ ಹೋಗಬೇಕೆಂದು ಸಿದ್ಧವಾಗುತ್ತಿರುವಾಗಲೇ ಧುತ್ತನೆ ಎದ್ದುಬರುತ್ತವೆ ಹಾಳು ಮೊಡವೆಗಳು ಬೇರೆ ಒಡವೆಗಳೇ ಬೇಡ ಎಂಬಂತೆ! ಕೆಂಪಾಗಿ ಊದಿಕೊಂಡಂತಿರುವ ಚರ್ಮಕ್ಕೆ ತಂಪೆರೆಯುವ ಪಪ್ಪಾಯಿ, ಚರ್ಮದ ಸೂಕ್ಷ್ಮ ರಂಧ್ರಗಳು ಕಟ್ಟಿಕೊಂಡಿದ್ದರೆ ಸ್ವಚ್ಛ ಮಾಡುತ್ತದೆ.
ವಿಟಮಿನ್ ಸಿ: ಚರ್ಮವನ್ನು ಕಾಂತಿಯುಕ್ತಗೊಳಿಸಲು ಪ್ರತ್ಯೇಕ ವಿಟಮಿನ್ ಸಿ ಸೀರಂ ಖರೀದಿಸುವುದೇ ಬೇಡ. ಚರ್ಮದ ಮೇಲಿನ ಕಲೆಗಳನ್ನು ನಿವಾರಿಸಿ, ತ್ವಚೆಯನ್ನು ಸ್ವಚ್ಛ-ಸುಂದರಗೊಳಿಸಲು ಪಪ್ಪಾಯ ಫೇಸ್‌ಪ್ಯಾಕ್ ಸಾಕಾಗುತ್ತದೆ. ಈ ಎಲ್ಲಾ ಸಂದರ್ಭಗಳಲ್ಲಿ ಪಪ್ಪಾಯಿ ಮುಖಕ್ಕೆ ಲೇಪಿಸುವುದರ ಜೊತೆಗೆ, ಹೊಟ್ಟೆಗಿಳಿಸುವುದೂ ಒಳ್ಳೆಯದು
ಹಾನಿ ಸರಿಪಡಿಸುತ್ತದೆ: ಲೈಕೋಪೇನ್‌ನಂಥ ಆಂಟಿ ಆಕ್ಸಿಡೆಂಟ್‌ಗಳು ಪಪ್ಪಾಯಿಯಲ್ಲಿ ಭರಪೂರ ಇವೆ. ಇವು ಚರ್ಮಕ್ಕೆ ಆಗಿರುವ ಹಾನಿಯನ್ನು ತುಂಬಬಲ್ಲ ಸಾಮರ್ಥ್ಯ ಉಳ್ಳವು. ಕಣ್ಣಿನ ಸುತ್ತಲಿನ ಕಪ್ಪು ವರ್ತುಲ, ಸೂಕ್ಷ್ಮ ನೆರಿಗೆಗಳು ಇಂಥವುಗಳನ್ನು ಹತ್ತಿಕ್ಕಿ, ಮುಖದ ಮೇಲಿನ ಮಾಗುವಿಕೆಯ ಚಿಹ್ನೆಗಳನ್ನು ನಿಯಂತ್ರಿಸುತ್ತವೆ.
ಚರ್ಮದ ಡಿಟಾಕ್ಸ್: ನಮ್ಮ ಶರೀರದಿಂದ ಕಾಲಕಾಲಕ್ಕೆ ಟಾಕ್ಸಿನ್‌ಗಳನ್ನು ಹೊರಹಾಕುವ ಪ್ರಕ್ರಿಯೆಯಂತೆ, ಚರ್ಮಕ್ಕೂ ಡಿಟಾಕ್ಸ್ ಅಗತ್ಯ. ಧೂಳು, ಬಿಸಿಲು, ಬೆವರುಗಳಿಗೆ ಒಡ್ಡಿಕೊಳ್ಳುವ ಚರ್ಮವನ್ನು ವಿಷಮುಕ್ತ ಮಾಡಿದಷ್ಟೂ ನಳನಳಿಸುತ್ತದೆ.
ಇದನ್ನೂ ಓದಿ| Healthy oil | ಕೊಲೆಸ್ಟೆರಾಲ್ ಸಮಸ್ಯೆಯೇ? ಈ ಎಣ್ಣೆಗಳು ನಿತ್ಯ ಬಳಕೆಗೆ ಒಳ್ಳೆಯದು!