ಇರಾನ್ ಜನರ ಪಾಲಿಗೆ ಇವು ʻಹಸನ್ಮುಖಿ ಬೀಜʼಗಳಾದರೆ, ಚೀನಾದವರಿಗೆ ಇವು ʻಹರ್ಷದ ಬೀಜʼಗಳು; ಫಿಟ್‌ನೆಟ್ ಪ್ರಿಯರಿಗೆ ʻಸ್ಕಿನ್ನಿ ನಟ್ʼ- ಇವೆಲ್ಲದಕ್ಕೂ ಒಂದೇ ಉತ್ತರ ಎನ್ನುತ್ತಾ, ಒಗಟು ಕೇಳುವ ಉದ್ದೇಶವಿಲ್ಲ. ಇವೆಲ್ಲವೂ ಪಿಸ್ತಾ ಬೀಜಗಳ (Pista Seeds Benefits) ಬಗ್ಗೆಯೇ ಹೇಳಿದ್ದು. ಬಾದಾಮಿ, ಗೋಡಂಬಿ, ಪಿಸ್ತಾ ಮುಂತಾದ ಎಲ್ಲಾ ಬೀಜಗಳೂ ಪ್ರೊಟೀನ್, ವಿಟಮಿನ್, ನಾರು, ಖನಿಜಗಳು ಮತ್ತು ಉತ್ತಮ ಕೊಬ್ಬುಗಳ ಗೋದಾಮಿದ್ದಂತೆ. ಹಾಗೆಂದು ಎಲ್ಲಾ ಬೀಜಗಳಲ್ಲೂ ಒಂದೇ ಪೋಷಕಾಂಶಗಳನ್ನು ಹೊತ್ತು ಬರುವುದಿಲ್ಲ. ಒಂದೊಂದೂ ಅನನ್ಯವಾದ ಸತ್ವಗಳನ್ನು ಅಡಕವಾಗಿಸಿಕೊಂಡಿವೆ. ಹಾಗಾದರೆ ಪಿಸ್ತಾದಲ್ಲಿರುವ ಗುಣಾಂಶಗಳು ಯಾವುವು?
ಉತ್ತಮ ಸಸ್ಯಜನ್ಯ ಪ್ರೋಟೀನ್
ನಮ್ಮ ದೇಹಕ್ಕೆ ಅಗತ್ಯವಾದ ಎಲ್ಲಾ ಒಂಬತ್ತು ಅಮೈನೋ ಆಮ್ಲಗಳನ್ನು ಸರಿಯಾದ ಪ್ರಮಾಣದಲ್ಲಿ ಹೊಂದಿರುವ ಅತ್ಯುತ್ತಮವಾದ ಸಸ್ಯಜನ್ಯ ಪ್ರೊಟೀನ್ ಪಿಸ್ತಾದಿಂದ ದೊರೆಯುತ್ತದೆ. ಮೊಟ್ಟೆಯಲ್ಲಿರುವಂತೆಯೇ ಘನ ಸತ್ವಗಳನ್ನು ಪಿಸ್ತಾ ಸಹ ಹೊಂದಿದೆ
ಕಡಿಮೆ ಕ್ಯಾಲೊರಿ
ಒಳ್ಳೆಯ ಪೋಷಕಾಂಶಗಳನ್ನು ಹೊಂದಿವೆ ಎಂದ ಮಾತ್ರಕ್ಕೆ ನಮ್ಮ ದೇಹಕ್ಕೆ ಇದು ಸಿಕ್ಕಾಪಟ್ಟೆ ಕ್ಯಾಲರಿಗಳನ್ನು ಸೇರಿಸುವುದಿಲ್ಲ. ಒಂದು ಸರ್ವಿಂಗ್‌ನಲ್ಲಿ, ಅಂದರೆ ಸುಮಾರು 30 ಪಿಸ್ತಾಗಳನ್ನು ತಿಂದರೆ 100ಕ್ಕಿಂತ ಕಡಿಮೆ ಕ್ಯಾಲರಿ ನಮ್ಮ ದೇಹಕ್ಕೆ ದೊರೆಯುತ್ತದೆ. ಆದರೆ ಗುಣಮಟ್ಟದ ಪೋಷಕಸತ್ವಗಳು ದೇಹ ಸೇರುತ್ತವೆ.
ಹಸಿವು ತಣಿಸುತ್ತದೆ
ಈ ಬೀಜಗಳಲ್ಲಿ ನಾರು ಮತ್ತು ಉತ್ತಮವಾದ ಕೊಬ್ಬಿನಂಶವೂ ಅಧಿಕ ಪ್ರಮಾಣದಲ್ಲಿದೆ. ಇಷ್ಟು ಸಣ್ಣ ಬೀಜಗಳನ್ನು ಬರೀ 30 ತಿಂದರೆ… ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಾದೀತು ಎಂದೆಣಿಸಬೇಡಿ! ನಿಜಕ್ಕೂ ಹಸಿವನ್ನು ತಣಿಸುತ್ತದೆ ಪಿಸ್ತಾ. ಇದರಲ್ಲಿರುವ ಪ್ರೊಟೀನ್-ಕೊಬ್ಬು-ನಾರಿನ ಸಮತೋಲನವು ತೂಕ ಇಳಿಸುವುದಕ್ಕೂ ಸಹಕಾರಿ. ಈ ನಾರಿನಂಶದಿಂದ ಹೊಟ್ಟೆಯ ಆರೋಗ್ಯವೂ ಸುಧಾರಿಸಿ, ಮಲಬದ್ಧತೆಯಂಥ ಸಮಸ್ಯೆ ಶಮನವಾಗುತ್ತದೆ.
ಆಂಟಿ ಆಕ್ಸಿಡೆಂಟ್
ಪಿಸ್ತಾ ಬಣ್ಣವೇಕೆ ನೇರಳೆಯಾಗಿರುತ್ತದೆ ಎಂಬ ಪ್ರಶ್ನೆ ಕೆಲವರಿಗಾದರೂ ಬಂದಿರಬಹುದು. ಆಂಥೋಸಯನಿನ್ಸ್ ಎಂಬ ಆಂಟಿ ಆಕ್ಸಿಡೆಂಟ್‌ಗಳೇ ಇದಕ್ಕೆ ಕಾರಣ. ಇದೇ ಕಾರಣದಿಂದಾಗಿಯೇ ಬ್ಲೂಬೆರ್ರಿಗಳಿಗೂ ನೇರಳೆ ಬಣ್ಣ ಇರುವುದು. ನಮ್ಮ ದೇಹದ ಕೋಶಗಳು ಹಾನಿಯಾಗದಂತೆ ತಡೆದು, ಕ್ಯಾನ್ಸರ್‌ನಂಥ ರೋಗಗಳು ಬರದಂತೆ ಕಾಪಾಡಿ, ಒಟ್ಟಾರೆಯಾಗಿ ದೇಹವನ್ನು ಸುಸ್ಥಿತಿಯಲ್ಲಿ ಇಡುವ ಸಾಮರ್ಥ್ಯ ಆಂಟಿ ಆಕ್ಸಿಡೆಂಟ್‌ಗಳಿಗೆ ಇರುತ್ತದೆ.
ಕಣ್ಣಿಗೂ ಒಳ್ಳೆಯದು
ಪಿಸ್ತಾದಲ್ಲಿರುವ ಕೆರೋಟಿನಾಯ್ಡ್ ಮತ್ತು ಜೆಕ್ಸಾಂಥಿನ್‌ಗಳು ನಮ್ಮ ದೃಷ್ಟಿಯನ್ನು ಜೋಪಾನ ಮಾಡುತ್ತವೆ. ಕ್ಯಾಟರಾಕ್ಟ್, ವಯಸ್ಸಾದಂತೆ ದೃಷ್ಟಿ ಕ್ಷೀಣಿಸುವುದು ಮುಂತಾದ ಹಲವು ರೀತಿಯ ಕಣ್ಣಿನ ದೋಷಗಳು ಬಾರದಂತೆ ಕಡೆಯುವ ಸಾಮರ್ಥ್ಯ ಈ ಪೋಷಕಾಂಶಗಳಿಗಿದೆ.
ಕಣ್ತುಂಬಾ ನಿದ್ದೆ
ಮೆಲಟೋನಿನ್ ಎಂಬ ಆಂಟಿ ಆಕ್ಸಿಡೆಂಟ್ ಹೇರಳವಾಗಿರುವ ಕೆಲವೇ ಆಹಾರಗಳ ಪೈಕಿ ಪಿಸ್ತಾ ಸಹ ಒಂದು. ಈ ಮೆಲಟೋನಿನ್ ನಮ್ಮ ದೇಹದ ಸರ್ಕಾರ್ಡಿಯನ್ ರಿದಂ ಸರಿಪಡಿಸುವ ಸಾಮರ್ಥ್ಯ ಹೊಂದಿದೆ. ಅಂದರೆ ರಾತ್ರಿಯ ವೇಳೆಯಲ್ಲಿ ನಿದ್ರಿಸುವಂತೆ, ಹಗಲಿನಲ್ಲಿ ಜಾಗೃತವಾಗಿರುವಂತೆ ಮಾಡುತ್ತದೆ.
ಹಾಗೆಂದು ಯಾವುದೋ ಒಂದು ಆಹಾರದಿಂದ ನಮ್ಮ ಬದುಕನ್ನೇ ಬದಲಿಸಲು ಯಾವ ಮಾಯೆಯೂ ಸಂಭವಿಸುವುದಿಲ್ಲ. ನಮ್ಮ ಆಹಾರ-ನಿದ್ದೆ-ವ್ಯಾಯಾಮ ಮುಂತಾದ ಎಲ್ಲಾ ವಿಭಾಗಗಳ ಬಗ್ಗೆಯೂ ನಾವು ಗಮನ ಕೊಡಲೇಬೇಕು. ಆದರೆ ಪಿಸ್ತಾದಂಥ ಕೆಲವು ಆಹಾರಗಳು ನಮ್ಮ ಶ್ರಮವನ್ನು ಹಗರು ಮಾಡುವುದು ಖಂಡಿತಾ ಹೌದು.
ಇದನ್ನೂ ಓದಿ| Health Tips | ಈ ಕಾಂಬಿನೇಷನ್ ಆಹಾರಗಳು ತೊಂದರೆ ತರಬಹುದು, ಜಾಗ್ರತೆ!