Site icon Vistara News

Pre Diabetic | ಮಧುಮೇಹ ಪೂರ್ವ ಸ್ಥಿತಿಯಲ್ಲಿ ಆರೋಗ್ಯಪೂರ್ಣವಾಗಿ ಬದುಕುವುದು ಹೇಗೆ?

Pre Diabetic

ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಿದೆ ಎಂದಾಗ ಅದು ಪೂರ್ಣ ಪ್ರಮಾಣದಲ್ಲಿ ಟೈಪ್-‌2 ಮಧುಮೇಹ ಆಗದಿರಬಹುದು. ಕೆಲವೊಮ್ಮೆ ರಕ್ತದಲ್ಲಿನ ಸಕ್ಕರೆಯಂಶ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಿದ್ದರೂ ಮಧುಮೇಹ ಎಂದು ಹೇಳುವಷ್ಟು ಹೆಚ್ಚಿರುವುದಿಲ್ಲ. ಇದನ್ನು ಪ್ರಿ-ಡಯಾಬಿಟಿಕ್‌ ಅಥವಾ ಮಧುಮೇಹ ಪೂರ್ವದ ಸ್ಥಿತಿ ಎನ್ನಲಾಗುತ್ತದೆ. ಇನ್ಸುಲಿನ್‌ ತಡೆಯಿಂದಲೇ ಈ ಸ್ಥಿತಿ ಉಂಟಾಗುವುದು ಹೌದಾದರೂ, ಬದುಕಿನಲ್ಲಿ ಕೆಲವು ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಆರೋಗ್ಯಪೂರ್ಣವಾಗಿ ಜೀವನ ಕಳೆಯಬಹುದು.

ಪಿಷ್ಟದ ಆಯ್ಕೆ
ಆರೋಗ್ಯಪೂರ್ಣ ಜೀವನಕ್ಕೆ ಸೂಕ್ತವಾದ ಪಿಷ್ಟದ ಆಹಾರ ಅಗತ್ಯ. ಆದರೆ ಪ್ರಿ-ಡಯಾಬಿಟಿಕ್‌ ಇರುವವರಿಗೆ ಎಂಥ ಕಾರ್ಬ್‌ ಅಗತ್ಯ ಎಂಬುದನ್ನು ಮನಗಾಣಬೇಕು. ತೌಡು ತೆಗೆಯದ ಕಂದು ಅಕ್ಕಿ, ಹುರುಳಿ ಕಾಳು, ಇಡಿಯಾದ ಓಟ್‌, ಕಡಲೆ ಹೆಸರಿನಂಥ ಮೊಳಕೆ ಬರಿಸಿದ ಇಡಿಗಾಳುಗಳು, ಹಾಲು-ಮೊಸರಿನಿಂದ ದೊರೆಯುವ ಕಾರ್ಬ್‌ ಒಳ್ಳೆಯದು. ಇವುಗಳನ್ನೂ ಅತಿಯಾಗಿ ತಿನ್ನುವ ಬದಲು ಪ್ರಮಾಣಕ್ಕೆ ಕಡಿವಾಣ ಹಾಕಿ. ಊಟದಲ್ಲಿ ನಾರಿನಂಶವೂ ಸರಿಯಾದ ಪ್ರಮಾಣದಲ್ಲಿರಲಿ.

ತೂಕ ನಿಯಂತ್ರಣ
ಒಮ್ಮೆ ಮಧುಮೇಹ ಪೂರ್ವದ ಸ್ಥಿತಿಯನ್ನು ತಲುಪಿದರೆ, ದೇಹದ ಶೇ. 5ರಿಂದ 10ರಷ್ಟು ತೂಕವನ್ನು ಇಳಿಸಲು ಸಾಧ್ಯವೋ ಎಂಬುದನ್ನು ಪರಿಶೀಲಿಸಿ. ಈ ಬಗ್ಗೆ ವೈದ್ಯರಲ್ಲಿ ಮಾತನಾಡಿ. ಅದರಲ್ಲೂ ಮುಖ್ಯವಾಗಿ ಹೊಟ್ಟೆಯ ತೂಕ ಇಳಿಸುವುದು ಅಗತ್ಯ. ಅಗತ್ಯವಿದ್ದರೆ ಸರಿಯಾದ ಟ್ರೇನರ್‌ ಮಾರ್ಗದರ್ಶನ ಪಡೆಯಿರಿ. ಇದರಿಂದ ಮಧುಮೇಹದ ಸ್ಥಿತಿಗೆ ದಾಟುವುದನ್ನು ವಿಲಂಬಿಸಬಹುದು. ಕೆಲವು ಸಂದರ್ಭಗಳಲ್ಲಿ ಇಂಥ ಕ್ರಮಗಳು ದೇಹವನ್ನು ಸಾಮಾನ್ಯ ಸ್ಥಿತಿಗೆ ಮರಳಿ ಒಯ್ದ ಉದಾಹರಣೆಗಳೂ ಇವೆ.

ಸಂಸ್ಕರಿತ ಆಹಾರ ಬೇಡ
ಊಟದಲ್ಲಿ ಕಾರ್ಬ್‌ ಪ್ರಮಾಣ ಕಡಿತ ಮಾಡಿದ ಮೇಲೆ, ಆ ಶಕ್ತಿಯನ್ನು ತುಂಬಿಕೊಳ್ಳುವುದಕ್ಕೆ ಪ್ರೊಟೀನ್‌ ಮೊರೆಹೋಗುವುದು ಸಾಮಾನ್ಯ. ಇದರಲ್ಲಿ ತಪ್ಪಿಲ್ಲ. ಆದರೆ ಎಂಥ ಆಹಾರಗಳನ್ನು ತಿನ್ನಬೇಕು ಎನ್ನುವತ್ತ ಗಮನ ಅಗತ್ಯ. ಯಾವುದೇ ರೀತಿಯ ಸಂಸ್ಕರಿತ ಆಹಾರಗಳು, ಕೆಲ ಬಗೆಯ ಮಾಂಸ(ಹ್ಯಾಮ್‌, ಬೀಫ್‌ ಮುಂತಾದವು)ಗಳಿಂದ ದೂರವಿದ್ದರೆ ಕ್ಷೇಮ. ಹೆಚ್ಚು ಕೊಬ್ಬಿನ ಮಾಂಸಾಹಾರಗಳಿಂದ ಹೃದಯದ ಸಮಸ್ಯೆಯೂ ಅಂಟೀತು, ಎಚ್ಚರ! ಬದಲಿಗೆ, ಮೊಟ್ಟೆ, ಮೀನು, ಉಪ್ಪುರಹಿತ ಬೀಜಗಳು ಒಳ್ಳೆಯ ಆಯ್ಕೆ.

ಸಿಹಿ ಬೇಡ
ಸಿಹಿ ಪ್ರಿಯರ ಪಾಲಿಗೆ ಇದು ನಿಜಕ್ಕೂ ಕಷ್ಟದ ಆಯ್ಕೆ, ಆದರೆ ಒಳ್ಳೆಯ ಆಯ್ಕೆ. ಸೋಡಾ, ಹಣ್ಣಿನ ಜ್ಯೂಸ್‌ಗಳು, ಎನರ್ಜಿ ಡ್ರಿಂಕ್‌ಗಳ ಬದಲಿಗೆ ಹಾಲು-ನೀರಿನಂಥವು ಸಾಕು. ಅಪರೂಪಕ್ಕೆ ಒಂದಿಷ್ಟು ಬಾಯಿ ಸಿಹಿ ಮಾಡಿಕೊಳ್ಳುವುದು ಬಿಟ್ಟರೆ, ಸಿಹಿ ತಿನಿಸುಗಳನ್ನು ದೂರ ಮಾಡುವುದು ಒಳ್ಳೆಯದು.

Pre Diabetic

ವ್ಯಾಯಾಮ ಬೇಕೇಬೇಕು
ದೇವರ ತಲೆ ಮೇಲೆ ಹೂ ತಪ್ಪಿದರೂ, ದಿನಕ್ಕೊಮ್ಮೆ ವ್ಯಾಯಾಮ ತಪ್ಪದಿದ್ದರಾಯಿತು. ಆರೋಗ್ಯಕರ ಆಹಾರದ ಜೊತೆಗೆ ಇದು ಸಹ ಅತಿಮುಖ್ಯ.

ಇದನ್ನೂ ಓದಿ | Health Tips | ಈ ಕಾಂಬಿನೇಷನ್‌ ಆಹಾರಗಳು ತೊಂದರೆ ತರಬಹುದು, ಜಾಗ್ರತೆ!

Exit mobile version