ಮಗು ಮತ್ತು ಅಮ್ಮನ ಸಂಬಂಧಕ್ಕೆ ಯಾವ ಹೋಲಿಕೆಯೂ ಇಲ್ಲ. ಅಂಥದ್ದೊಂದು ದಿವ್ಯ ಸಂಬಂಧ ಬೇರೆಲ್ಲೂ ಸಿಗುವುದೂ ಕಷ್ಟವೇ. ಅದಕ್ಕೇ ಅಮ್ಮನೆಂದರೆ ಕಣ್ಣಿಗೆ ಕಾಣುವ ದೇವರು ಎಂಬ ಹೋಲಿಕೆಯೂ ಬಂದದ್ದು. ಇಂಥ ಅಮ್ಮ ಮಗುವಿನ ಸಂಬಂಧ ಮಗು ಹುಟ್ಟಿದ ಮೇಲೆ ಶುರುವಾಗುವಂಥದ್ದಷ್ಟೇ ಅಲ್ಲ. ಹುಟ್ಟುವುದಕ್ಕೋ ಮೊದಲೇ ಗರ್ಭದಲ್ಲಿರುವಾಗಲೇ ಅಂಕುರಿಸುವಂಥದ್ದು. ಮಗುವನ್ನು ಹೊಟ್ಟೆಯಲ್ಲಿಟ್ಟುಕೊಂಡಿರುವಾಗಲೇ ಅಮ್ಮನಾಗಲಿರುವ ಹುಡುಗಿಗೆ ಎಷ್ಟೇ ಕಷ್ಟಗಳಾದರೂ, ಅದರಲ್ಲೊಂದು ನವಿರು ಅನುಭೂತಿಯಿರುತ್ತದೆ. ಅಮ್ಮ ಮಾಡುವ ಬಹಳಷ್ಟು ಕೆಲಸಗಳು, ಅಮ್ಮನ ದಿನನಿತ್ಯದ ಚಟುವಟಿಕೆಗಳ ಆಧಾರದಲ್ಲಿ ಹೊಟ್ಟೆಯೊಳಗಿನ ಮಗು ಸ್ಪಂದಿಸುತ್ತಿರುತ್ತದೆ. ಹೊಟ್ಟೆಯೊಳಗಿನ ಮಗುವಿನ ಬಹಳಷ್ಟು ಕೆಲಸಗಳಿಗೆ ಅಮ್ಮ ಸ್ಪಂದಿಸುತ್ತಿರುತ್ತಾಳೆ.
೧. ಸಿಹಿತಿಂಡಿ: ಗರ್ಭ ಧರಿಸಿರುವಾಗ ಬಯಕೆಗಳು ಸಹಜ. ಏನಾದರೊಂದು ತಿನ್ನಬೇಕೆಂಬ ಬಾಯಿ ಚಪಲ ಈ ಸಂದರ್ಭ ಹೆಚ್ಚಾಗುತ್ತದೆ. ಕೆಲವರಿಗೆ ಸಿಹಿಸಿಹಿಯಾಗಿ ಏನಾದರೂ ತಿನ್ನಬೇಕು ಎನ್ನುವ ಬಯಕೆ ಹೆಚ್ಚಾಗುತ್ತದೆ. ಮೆದುವಾದ, ಸಿಹಿಯಾದ, ಕೇಕ್, ಸಿಹಿತಿನಿಸು ಹೀಗೆ ಹೆಚ್ಚು ಸಿಹಿಯಾದ ತಿನಿಸುಗಳೆಡೆಗೆ ಗರ್ಭಿಣಿಯರು ಆಸಕ್ತಿ ಹೊಂದುವುದು ಹೆಚ್ಚು. ಖಾರ, ಹೆಚ್ಚು ಮಸಾಲೆಯುಕ್ತ ತಿನಿಸನ್ನು ಬಯಸುವುದು ಕಡಿಮೆ. ಹೊಟ್ಟೆಯಲ್ಲಿರುವ ಮಗುವಿಗೆ ಅಮ್ಮನ ದೇಹದಿಂದ ಆಹಾರವು ಸಣ್ಣ ಸಣ್ಣ ಕಣಗಳಾಗಿ ಸಾಗುವಾಗ ಈ ರುಚಿಗಳನ್ನೂ ನಿಧಾನವಾಗಿ ಗ್ರಹಿಸುವ ಸಾಮರ್ಥ್ಯ ಪಡೆಯುತ್ತಾ ಹೋಗುತ್ತದೆ. ಒಳಗಿನ ಮಗುವೂ ಬಯಸುವ ಆಹಾರದ ಚಪಲ ಅಮ್ಮನಾಗುವ ಹುಡುಗಿಗೆ ಹೆಚ್ಚಾಗುತ್ತದೆ.
೨. ಬಿಸಿನೀರಿನ ಸ್ನಾನ: ಮಗುವನ್ನು ಹೊಟ್ಟೆಯಲ್ಲಿ ಹೊತ್ತಿರುವುದು ಎಂದರೆ ಸುಲಭದ ಕೆಲಸವಲ್ಲ. ಹೆರಿಗೆ ಮೊದಲಿನ ಒಂಭತ್ತು ತಿಂಗಳುಗಳಲ್ಲಿ ಒಂದೊಂದು ತಿಂಗಳ ಅನುಭವವೂ ಒಬ್ಬೊಬ್ಬರಿಗೆ ಒಂದೊಂದು. ಆದರೆ ಯಾರಿಗೂ ಹೂವಿನ ಹಾಸಿಗೆಯಲ್ಲ. ದರೆ, ಈಸಮಯದ ಸ್ನಾನ ಮಾತ್ರ ಹಿತವಾದ ಅನುಭವ ನೀಡಬಲ್ಲದು. ಉಗುರು ಬೆಚ್ಚಗೆ ನೀರಿನಲ್ಲಿ ಸ್ನಾನ ಮಾಡುವುದು ಬಹಳ ಸಾರಿ ಮನಸ್ಸಿಗೆ ಉಲ್ಲಾಸ, ಬದಲಾಗುವ ಮೂಡ್‌ಗೆ ಚೈತನ್ಯ ನೀಡಬಲ್ಲದು. ಹೊಟ್ಟೆಯೊಳಗಿನ ಮಗುವಿಗೂ ಸಹ ಅಮ್ಮ ಸ್ನಾನ ಮಾಡುತ್ತಿದ್ದರೆ ಉಲ್ಲಾಸ, ಸಂತೋಷ ಆಗುತ್ತದಂತೆ.
ಇದನ್ನೂ ಓದಿ | Single mother: ನಿಮಗೆ ಗೊತ್ತಾ, ಇವು ಅಪ್ಪನೂ ಆಗಬೇಕಾದ ಅಮ್ಮನ ಚಾಲೆಂಜ್‌ಗಳು
೩. ಮೃದುವಾದ ಸ್ಪರ್ಶ: ಗರ್ಭಿಣಿಯಾಗಿದ್ದಾಗ ಹೊಟ್ಟೆಯ ಮೇಲಿನ ಮೃದುವಾದ ಸ್ಪರ್ಶ ಹಿತವಾದ ಅನುಭವ ನೀಡುತ್ತದೆ. ಹೊಟ್ಟೆಯೊಳಗಿನ ಮಗು ತಿಂಗಳಾಗುತ್ತಾ ಬಂದಂತೆ ಪುಟಾಣಿ ಕಾಲುಗಳಿಂದ ಒಳಗಿನಿಂದ ಒದೆಯುವುದು, ಜೋರಾಗಿ ತಳ್ಳುವುದು ಇತ್ಯಾದಿಗಳ ಅನುಭವ ಕೆಲವು ಸಮಯಗಳಲ್ಲಿ ತೀವ್ರವಾಗುತ್ತಾ ಹೋಗುತ್ತದೆ. ಅಂಥ ಸಮಯದಲ್ಲಿ ಹೊಟ್ಟೆಯ ಮೇಲಿನ ಸ್ಪರ್ಶ ಒಂದು ಅನೂಹ್ಯ ಜಗತ್ತನ್ನೇ ತೆರೆದಿಡುತ್ತದೆ. ನೀವು, ನಿಮ್ಮ ಸಂಗಾತಿ ಜೊತೆಗೆ ಕೂತು ಹೊಟ್ಟೆಯ ಮೇಲೆ ಕೈಯಾಡಿಸುತ್ತಾ ಇದ್ದರೆ ಅದು ನೀಡುವ ಸಾಂತ್ವನ, ಕಾಳಜಿ ಎಂದೂ ಕಾಣದ ಜಗತ್ತನ್ನು ತೆರೆದಿಡಬಹುದು.
೪. ಅಮ್ಮನ ದನಿ: ೧೮ನೇ ವಾರದ ನಂತರ ಮಗುವಿನ ಕಿವಿಯ ಬೆಳವಣಿಗೆ ಆರಂಭವಾಗುತ್ತದೆ. ಒಳಗಿನ ಮಗುವಿಗೆ ಕೇಳಲು ಆರಂಭವಾಗುತ್ತದೆ. ಅದಕ್ಕೆ ಮೊದಲು ಕೇಳುವುದು ಅಮ್ಮನ ದನಿ. ಅಮ್ಮ ಮಾತನಾಡುವುದಕ್ಕೆ ಹೊಟ್ಟೆಯೊಳಗಿನ ಮಗು ಪ್ರತಿಕ್ರಿಯಿಸಲಾರಂಭಿಸುವುದೂ ಆಗಲೇ. ಹೆರಿಗೆಯ ದಿನ ಹತ್ತಿರವಾಗುತ್ತಿದ್ದಂತೆ ಮಗು ಪ್ರತಿಕ್ರಿಯಿಸುವುದು ಹೆಚ್ಚಾಗುತ್ತದೆ. ಮಗುವಿಗೆ ಅಮ್ಮನ ಸ್ವರ, ಅಮ್ಮನ ನಗು ಕೇಳುವುದು ಹಿತವಾಗಿರುತ್ತದೆ.
೫. ಮಧುರವಾದ ಸಂಗೀತ: ಗರ್ಭಿಣಿಯಾಗಿದ್ದಾಗ ಉತ್ತಮ ಹಾಡುಗಳನ್ನು ಕೇಳಿ ಎಂದು ಹೇಳುವುದು ಇದಕ್ಕೇ. ಮಗು ಮಧುರವಾದ ಸಂಗೀತವನ್ನು ಹೊಟ್ಟೆಯೊಳಗಿನಿಂದಲೇ ಕೇಳಲು ಆರಂಭಿಸುತ್ತದೆ. ಮಧುರವಾದ ಸಂಗೀತಕ್ಕೆ ಪ್ರತಿಕ್ರಿಯಿಸುವುದನ್ನು ಕಲಿಯುತ್ತದೆ. ಕಿವಿಗಡಚಿಕ್ಕುವ ಕರ್ಕಶ ಧ್ವನಿಯ ಸಂಗೀತಕ್ಕಿಂತ, ಗದ್ದಲದಂತಹ ಸಂಗೀತಕ್ಕಿಂತ ಶಾಂತಿಯುತವಾದ ಮಧುರ ಹಾಡುಗಳನ್ನು ಒಳಗಿನ ಮಗು ಬಯಸುತ್ತದೆ. ಆದರೆ, ಇದು ದೊಡ್ಡ ಸ್ವರದಲ್ಲಿರದೆ, ಮೆದುವಾಗಿರಲಿ.
ಇದನ್ನೂ ಓದಿ | Parenting tips | ಮಕ್ಕಳನ್ನು ಕಲಿಕೆಗೆ ಪ್ರೇರೇಪಿಸಲು 6 ವೈಜ್ಞಾನಿಕ ದಾರಿಗಳು!