Site icon Vistara News

Pregnancy tips | ಗರ್ಭಿಣಿಯಾಗಲು ಬೇಕೇ ಬೇಕು ಈ ಪೋಷಕಾಂಶಗಳು!

beauty pregnancy

ಗರ್ಭಿಣಿಯಾಗುವುದು ಎಲ್ಲರಿಗೂ ಸುಲಭವಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಬದಲಾದ ಜೀವನಕ್ರಮ, ಅಭ್ಯಾಸಗಳು ದೇಹದ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಿದ್ದು, ಮಹಿಳೆಯರಿಗೆ ತಾಯ್ತನದ ವಿಷಯದಲ್ಲಿ ಸಾಕಷ್ಟು ಅಡ್ಡ ಪರಿಣಾಮ ಬೀರುತ್ತಿರುವುದು ಹೆಚ್ಚಾಗಿದೆ. ತೂಕ ಹೆಚ್ಚಿರುವುದರಿಂದ, ಸರಿಯಾದ ಆಹಾರ ಕ್ರಮ ಇಲ್ಲದಿರುವುದರಿಂದ ಸೇರಿದಂತೆ ಹಲವಾರು ಸಮಸ್ಯೆಗಳ ಕಾರಣದಿಂದ ಇಂದು ಬಯಸಿದರೂ ಕೆಲವು ಮಹಿಳೆಯರಿಗೆ ಗರ್ಭ ಧರಿಸುವುದು ಸಾಧ್ಯವಾಗುತ್ತಿಲ್ಲ. ಹಾಗಾದರೆ, ಸಮಸ್ಯೆಯಾಗುತ್ತಿರುವುದು ಮುಖ್ಯವಾಗಿ ಎಲ್ಲಿ ಎಂಬ ಕಾರಣ ಹುಡುಕಿದರೆ, ಸರಿಯಾದ ಆಹಾರಕ್ರಮದ ಕೊರತೆ ಹಾಗೂ ಇದರಿಂದ ದೇಹಕ್ಕೆ ಪೋಷಕಾಂಶಗಳ ಕೊರತೆಯೇ ಎಲ್ಲಕ್ಕಿಂತ ಮುಖ್ಯವಾಗಿ ಕಾಣುತ್ತದೆ. ಮಗು ಬೇಕೆಂದು ಬಯಸುವ, ಹಾಗೂ ಆ ವಿಚಾರದಲ್ಲಿ ಕಷ್ಟವಾಗುವ ಪ್ರತಿಯೊಬ್ಬ ಮಹಿಳೆಯೂ ತನ್ನ ನಿತ್ಯದ ಅಭ್ಯಾಸಗಳಲ್ಲಿ ಮಾರ್ಪಾಡುಗಳನ್ನು ಮಾಡಿಕೊಂಡು ಜೀವನಕ್ರಮ ಬದಲಾವಣೆ ಹಾಗ ಉತ್ತಮ ಆಹಾರಾಭ್ಯಾಸಗಳನ್ನು ರೂಢಿಸಿಕೊಳ್ಳುವುದು ಉತ್ತಮ. ಹಾಗಾದರೆ, ಇಂಥವರು ತಮ್ಮ ಆಹಾರಾಭ್ಯಾಸದಲ್ಲಿ ಯಾವೆಲ್ಲ ಅಂಶಗಳು ಮುಖ್ಯವಾಗಿ ಇರಬೇಕು ಎಂಬುದನ್ನು ನೋಡೋಣ.

೧. ಕಬ್ಬಿಣಾಂಶ: ಕಬ್ಬಿಣಾಂಶದ ಕೊರತೆ ಇಲ್ಲದಂತೆ ಕಾಯುವುದು ಬಹಳ ಮುಖ್ಯ. ದೇಹದಲ್ಲಿ ಆಮ್ಲಜನಕ ಹೊತ್ತು ಸಾಗುವ ಕೆಂಪು ರಕ್ತಕಣಗಳಿಗೆ ಬಹಳ ಮುಖ್ಯವಾಗಿ ಬೇಕಾವುದು ಕಬ್ಬಿಣಾಂಶ. ಇದು ಸಂತಾನೋತ್ಪತ್ತಿಯ ಸಾಧ್ಯತೆಗಳನ್ನು ಹೆಚ್ಚು ಮಾಡುವುದಷ್ಟೇ ಅಲ್ಲ, ಇದು ಶಕ್ತಿವರ್ಧಕವೂ ಹೌದು. ಪ್ರತಿ ವಯಸ್ಕ ಮಹಿಳೆಗೂ ಆರೋಗ್ಯ ಕಾಪಾಡಲು ದಿನವೂ ೧೮ ಮಿಲಿಗ್ರಾಂ ಕಬ್ಬಿಣಾಂಶದ ಅಗತ್ಯವಿದ್ದರೆ, ಗರ್ಭಿಣಿ ಮಹಿಳೆಗೆ ಇದು ೨೭ ಮಿಲಿಗ್ರಾಂ ಅಗತ್ಯವಿದೆ. ಹಾಗಾಗಿ ಆಗಾಗ ರಕ್ತ ಪರೀಕ್ಷೆ ಮಾಡಿಕೊಂಡು ವೈದ್ಯರ ಸಲಹೆ ಪಡೆಯುತ್ತಿರುವುದು ಅಗತ್ಯ. ಮೊಟ್ಟೆ, ಮಾಂಸ, ಬೇಳೆಗಳು, ಬೀನ್ಸ್‌, ಬೀಜಗಳು, ಒಣಹಣ್ಣುಗಳು, ಧಾನ್ಯಗಳು, ಕೆಂಪಕ್ಕಿ ಮತ್ತಿತರ ಆಹಾರಗಳಲ್ಲಿ ಕಬ್ಬಿಣಾಂಶವಿದೆ.

೨. ಪ್ರೊಬಯೋಟಿಕ್ಸ್:‌ ಪ್ರೊಬಯೋಟಿಕ್‌ನಲ್ಲಿರುವುದು ಒಳ್ಳೆಯ ಬ್ಯಾಕ್ಟೀರಿಯಾ. ಇದು ದೇಹಕ್ಕೆ ಅಗತ್ಯ ಬೇಕಾಗಿರುವುದರಿಂದ ಮಹಿಳೆಯ ಹೊಟ್ಟೆಗೆ ಇವು ಪ್ರತಿದಿನ ಸೇರುತ್ತಲೇ ಇರಬೇಕು. ಇವು ದೇಹದಲ್ಲಿ ಒಳ್ಳೆಯ ಬ್ಯಾಕ್ಟೀರಿಯಾವನ್ನು ಸಮತೋಲನದಲ್ಲಿಡಲು ನೆರವಾಗುತ್ತದೆ. ಇದು ಹೃದಯವನ್ನು ಆರೋಗ್ಯವಾಗಿಯೂ, ಚರ್ಮರೋಗಗಳಿಂದಲೂ ದೂರವಿರಿಸುತ್ತದೆ.

೩. ಝಿಂಕ್:‌ ಕಬ್ಬಿಣಾಂಶದಂತೆಯೇ, ಮಹಿಳೆಗೆ ಅತ್ಯಂತ ಅಗತ್ಯವಾಗಿ ಬೇಕಾಗುವುದು ಝಿಂಕ್.‌ ಇದು ಮಹಿಳೆ ಗರ್ಭಿಣಿಯಾಗಲು ಬೇಕಾದ ಅಗತ್ಯ ಪೋಷಕಾಂಶ. ಝಿಂಕ್‌ ಗರ್ಭಿಣಿ ಸ್ತ್ರೀಯರಲ್ಲಿ ಭ್ರೂಣದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಡಾರ್ಕ್‌ ಚಾಕೋಲೇಟ್‌, ಬೀಜಗಳು, ಸಿಹಿಕುಂಬಳದ ಬೀಜ, ಚಿಕನ್‌, ಬೀನ್ಸ್‌, ಅಣಬೆ, ಗೋಧಿ ಹುಲ್ಲು, ಬಸಳೆ ಮತ್ತಿತರ ಅಹಾರಗಳಲ್ಲಿ ಝಿಂಕ್‌ ಇದೆ. ಇವುಗಳ ಬಳಗೆ ಅಗತ್ಯ. ಹಾಲುಣಿಸುವ ತಾಯಂದಿರಿಗೂ ಇದು ಬಹಳ ಅಗತ್ಯವಾದುದು.

ಇದನ್ನೂ ಓದಿ | Woman health tips | ಹೀಗಾದಲ್ಲಿ ಮಹಿಳೆ ತನ್ನ ಆರೋಗ್ಯಕ್ಕೆ ಗಮನ ಕೊಡುವುದು ಯಾವಾಗ?

೪. ಒಮೆಗಾ ೩ ಫ್ಯಾಟಿ ಆಸಿಡ್‌: ಭ್ರೂಣದಲ್ಲಿ ಮಗುವಿನ ಕಣ್ಣಿನ ಬೆಳವಣಿಗೆಗೆ ಡಿಹೆಚ್‌ಎ ಬಹಳ ಅಗತ್ಯವಾದುದು. ಇದರ ಪ್ರಮುಖ ಮೂಲ ಮಗುವಿಗೆ ಅಮ್ಮನ ಹಾಲೇ ಆಗಿದೆ. ಆದರೆ, ಹೊಟ್ಟೆಯೊಳಗೆ ಬೆಳೆಯುವ ಸಂಧರ್ಭವೇ ಒಮೆಗಾ ೩ ಫ್ಯಾಟಿ ಆಸಿಡ್‌ ಪ್ರಮಾಣ ದೇಹಕ್ಕೆ ಹೋದರೆ, ಅಸ್ತಮಾ, ಹಾಗೂ ಶ್ವಾಸಕೋಶದಂತಹ ಕಾಯಿಲೆಗಳಿಂದ ಹುಟ್ಟುವ ಮಗುವನ್ನು ರಕ್ಷಿಸುತ್ತದೆ. ೭೦೦ ಮಿಲಿಗ್ರಾಂ ಒಮೆಗಾ ೩ ಫ್ಯಾಟಿ ಆಸಿಡ್‌ ಸೇವನೆ ಗರ್ಭಿಣಿ ಸ್ತ್ರೀಗೆ ಬೇಕು.

೫. ಕೋಲಿನ್:‌ ಕೋಲಿನ್‌ ಎಂಬುದು ಖನಿಜಾಂಶ. ಇದು ಕೇವಲ ಗರ್ಭಿಣಿಯಾಗಿರುವಾಗ ಮಾತ್ರವಲ್ಲ, ಎಲ್ಲ ಕಾಲದಲ್ಲೂ ಅಗತ್ಯವಿದೆ. ಇದು ಇದುಳಿನ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಮೊಟ್ಟೆಯ ಹಳದಿ ಭಾಗ, ಲಿವರ್‌, ಸೊಪ್ಪು ತರಕಾರಿಳಲ್ಲಿ ಇದಿರುತ್ತದೆ. ೫೫೦ ಮಿಲಿಗ್ರಾಂ ಕೋಲಿನ್‌ನ ಅಗತ್ಯ ದೇಹಕ್ಕಿದೆ.

ಆಸಕ್ತಿಯಿದ್ದೂ, ಪ್ರಯತ್ನವಿದ್ದೂ ಗರ್ಭಿಣಿಯಾಗುವುದು ಸಾಧ್ಯವಾಗುತ್ತಿಲ್ಲವೆಂದರೆ, ಖಂಡಿತವಾಗಿ ವೈದ್ಯರ ಸಲಹೆ ಮಾರ್ಗದರ್ಶನ ಅಗತ್ಯ. ಸಂಕೋಚಪಡದೆ, ವೈದ್ಯರ ಜೊತೆ ಮಾತುಕತೆ ನಡೆಸಿ, ಅವರ ನುಡಿಯಂತೆ ನಡೆಯಬಹುದು. ರಕ್ತ ತಪಾಸಣೆ ನಡೆಸಿ ಅಗತ್ಯ ಪೋಷಕಾಂಶಗಳನ್ನೂ ವೈದ್ಯರ ಸಲಹೆಯ ಮೇರೆಗೆ ಪಡೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ | Saffron benefits | ಆರೋಗ್ಯಕರ ಜೀವನಕ್ಕೆ ಬೇಕೇ ಬೇಕು ಕೇಸರಿಯ ರಂಗು!

Exit mobile version