ಫಿಟ್ನೆಸ್ ಪ್ರಿಯರಲ್ಲಿ ನಾನಾ ರೀತಿಯ ವರ್ಕೌಟ್‌ಗಳು ಎಷ್ಟು ಜನಪ್ರಿಯತೆ ಪಡೆಯುತ್ತಿವೆಯೋ ಅಷ್ಟೇ ಜನಪ್ರಿಯವಾಗಿರುವುದು ಪೂರಕ ಪ್ರೊಟೀನ್‌ಗಳು- ಅದು ಪ್ರೊಟೀನ್ (protein side effects) ಪುಡಿ, ಬಾರ್, ಮಾತ್ರೆ, ಪೇಯ ಇತ್ಯಾದಿ ಯಾವುದೇ ರೂಪದಲ್ಲಿ ಇರಬಹುದು. ಅದರಲ್ಲೂ ದೇಹ ಹುರಿಗಟ್ಟಿಸುವ ಉತ್ಸಾಹದಲ್ಲಿದ್ದವರಿಗೆ ಇದು ಸುಲಭವಾಗಿ ಕೈಗೆಟುಕುತ್ತದೆ. ಇವುಗಳನ್ನು ದೇಹ ತೂಕ ಇಳಿಸುವುದಕ್ಕೆ, ಮಾಂಸಖಂಡಗಳ ಬೆಳವಣಿಗೆಗೆ ಮತ್ತು ಒಟ್ಟಾರೆ ಆರೋಗ್ಯಕ್ಕೆ ಪೂರಕ ಎನ್ನುವಂಥ ಹಲವಾರು ಹಣೆಪಟ್ಟಿಗಳ ಅಡಿಯಲ್ಲೇ ಮಾರಾಟ ಮಾಡಲಾಗುತ್ತದೆ. ಹಾಗಾದರೆ ಪೂರಕ ಪ್ರೊಟೀನ್ ಸೇವನೆಯ ಅಡ್ಡ ಪರಿಣಾಮಗಳು ಏನೂ ಇಲ್ಲವೇ?
ಖಂಡಿತಾ ಇದೆ!
ಪೌಷ್ಟಿಕಾಂಶಗಳು ನಮ್ಮ ದೇಹವನ್ನು ಸೇರಬೇಕಾಗಿದ್ದು ನೈಸರ್ಗಿಕವಾಗಿ, ಆಹಾರದ ಮೂಲಕ. ಅದೂ ಸಹ ಸಮತೋಲನೆಯಲ್ಲೇ ದೇಹವನ್ನು ತಲುಪಬೇಕು. ಒಂದೊಮ್ಮೆ ಲಭ್ಯತೆ, ಆಹಾರಶೈಲಿ, ಅನಾರೋಗ್ಯ ಅಥವಾ ಇನ್ನಾವುದೋ ಕಾರಣಗಳಿಗಾಗಿ ಪೋಷಕತತ್ವಗಳು ಸರಿಯಾದ ಪ್ರಮಾಣದಲ್ಲಿ ನಮ್ಮ ದೇಹವನ್ನು ಸೇರದೇ ಇದ್ದಾಗ, ತಾತ್ಕಾಲಿಕವಾಗಿ ವೈದ್ಯರು ಸಪ್ಲೆಮೆಂಟ್‌ಗಳನ್ನು ನೀಡುವುದಿದೆ. ಆದರೆ ಇದು ಕೊರತೆಯನ್ನು ನೀಗಿಸುವಷ್ಟು ಅಲ್ಪಕಾಲಕ್ಕೆ ಮಾತ್ರ. ಇವುಗಳನ್ನು ಮನಬಂದಂತೆ ಸೇವಿಸುವುದು ಖಂಡಿತಾ ಅಪೇಕ್ಷಣೀಯವಲ್ಲ.
ಆಹಾರದ ಮೂಲಕ ಪ್ರೊಟೀನ್ ದೇಹಕ್ಕೆ ದೊರೆಯುವುದಕ್ಕೂ, ಪೂರಕಗಳ ಮೂಲಕ ದೇಹವನ್ನು ಸೇರುವುದಕ್ಕೂ ಖಂಡಿತ ವ್ಯತ್ಯಾಸವಿದೆ. ತಜ್ಞರಿಂದ ಸರಿಯಾದ ಮಾರ್ಗದರ್ಶನವಿಲ್ಲದೇ ಪ್ರೊಟೀನ್ ಸಪ್ಲಿಮೆಂಟ್‌ಗಳನ್ನು ಸೇವಿಸುವುದು ಆಪಾಯಕ್ಕೆ ಎಡೆ ಮಾಡಬಹುದು. ಮಾತ್ರವಲ್ಲ, ಆರೋಗ್ಯಕ್ಕೆ ಲಾಭವಾಗುವುದಕ್ಕಿಂತ ಹಾನಿಯೇ ಹೆಚ್ಚಾಗಬಹುದು. ಇದರ ಅಡ್ಡ ಪರಿಣಾಮಗಳ ಬಗ್ಗೆ ಹೇಳುವುದಾದರೆ-
ಜೀರ್ಣಾಂಗಕ್ಕೆ ತೊಂದರೆ
ಅತಿಯಾದ ಪ್ರೊಟೀನ್ ಸೇವನೆಯ ಮೊದಲ ಫಲಾನುಭವಿ ನಮ್ಮ ಜಠರ. ಹಾಗಾಗಿ ಹೊಟ್ಟೆ ಉಬ್ಬರ, ನೋವು, ಅಜೀರ್ಣ, ಮಲಬದ್ಧತೆ ಮುಂತಾದವು ಕಾಣಿಸಿಕೊಳ್ಳಬಹುದು. ಪ್ರೊಟೀನ್ ಪ್ರಮಾಣಕ್ಕೆ ಪೂರಕವಾಗಿ ನಾರಿನಂಶ ದೇಹಕ್ಕೆ ದೊರೆಯುವುದೂ ಮುಖ್ಯವಾಗುತ್ತದೆ. ಅದಿಲ್ಲದಿದ್ದರೆ ಮಲಬದ್ಧತೆ ಬೆಂಬಿಡುವುದಿಲ್ಲ. ಅದರಲ್ಲೂ ಕಡಿಮೆ ಸಮಯದಲ್ಲಿ ಹೆಚ್ಚಿನ ಪ್ರೊಟೀನ್ ಹೊಟ್ಟೆ ಸೇರಿದಾಗ, ಹೊಟ್ಟೆ ಬುಡಮೇಲಾಗುವ ಸಾಧ್ಯತೆ ಹಲವರಲ್ಲಿ ಕಂಡುಬಂದಿದೆ.
ನಿರ್ಜಲೀಕರಣ
ದೇಹಕ್ಕೆ ಹೆಚ್ಚು ಪ್ರೊಟೀನ್ ದೊರೆತರೆ, ಅದನ್ನು ನುಚ್ಚುನುರಿ ಮಾಡಲು ಹೆಚ್ಚಿನ ನೀರು ಬೇಕಾಗುತ್ತದೆ. ಅದರಲ್ಲೂ, ವ್ಯಾಯಾಮದ ಬೆವರಿನಿಂದ ಹೆಚ್ಚಿನ ನೀರು ದೇಹದಿಂದ ಹೋಗುತ್ತಿರುವಾಗ, ಪ್ರೊಟೀನ್ ಪೂರಕಗಳ ಸೇವನೆಯೆಂದರೆ, ನೀರಿನ ಪ್ರಮಾಣವನ್ನು ಸಿಕ್ಕಾಪಟ್ಟೆ ಹೆಚ್ಚಿಸಬೇಕಾಗುತ್ತದೆ. ಹಾಗಾಗಿ ಅನಗತ್ಯವಾಗಿ ಪೂರಕಗಳ ಸೇವನೆ ಮಾಡುವ ಮುನ್ನ ಹಲವು ಬಾರಿ ಯೋಚಿಸುವುದು ಒಳಿತು.
ಕಿಡ್ನಿ ಬೇಡವೇ?
ನಮ್ಮ ಜೀರ್ಣಾಂಗಗಳ ನಂತರ ಹೆಚ್ಚಿನ ಒತ್ತಡ ಬೀಳುವುದು ಮೂತ್ರಪಿಂಡಗಳ ಮೇಲೆ. ನಮ್ಮ ಆಹಾರದಲ್ಲಿನ ಬೇಡದ ವಸ್ತುಗಳನ್ನು, ದೇಹಕ್ಕೆ ಬೇಡದ ಕಶ್ಮಲಗಳನ್ನೆಲ್ಲಾ ಹೊರಹಾಕುವ ಸ್ವಚ್ಛತಾ ಕೆಲಸವಲ್ಲವೇ ಅವುಗಳದ್ದು? ಹಾಗಾಗಿ ದೀರ್ಘ ಕಾಲದವರೆಗೆ ಹೆಚ್ಚಿನ ಹೊರೆಯನ್ನು ಅವುಗಳ ಮೇಲೆ ಹೊರಿಸಿದರೆ, ಕ್ರಮೇಣ ಮೂತ್ರಪಿಂಡಗಳ ಕ್ಷಮತೆ ಕುಂದಿ ರೋಗಗ್ರಸ್ತವಾಗಬಹುದು.
ಮೂಳೆ ಸಾಂದ್ರತೆ ಕುಸಿತ
ಹೌದು, ಸದಾ ಪ್ರೊಟೀನ್ ಪೂರಕಗಳ ಸೇವನೆ ಮಾಡುತ್ತಿದ್ದರೆ ಆಸ್ಟಿಯೊಪೊರೊಸಿಸ್‌ನ ಅಪಾಯ ಹೆಚ್ಚುತ್ತದೆ ಎನ್ನುತ್ತವೆ ಅಧ್ಯಯನಗಳು. ಅಂದರೆ, ಅಗತ್ಯಕ್ಕಿಂತ ಹೆಚ್ಚಿನ ಪ್ರೊಟೀನನ್ನು ದೇಹಕ್ಕೆ ಒದಗಿಸುತ್ತಲೇ ಇದ್ದರೆ, ಮೂತ್ರದ ಮೂಲಕ ಹೆಚ್ಚಿನ ಕ್ಯಾಲ್ಸಿಯಂ ವಿಸರ್ಜನೆಗೊಳ್ಳುತ್ತದೆ ಎಂಬುದು ತಜ್ಞರ ಅಭಿಮತ. ಇದರಿಂದ ಮೂಳೆಗಳ ಸಾಂದ್ರತೆ ಕುಸಿಯಬಹುದು.
ತೂಕ ಹೆಚ್ಚಳ!
ತೂಕ ಇಳಿಕೆಗೆ ಪ್ರೊಟೀನ್ ತಿನ್ನುವವರು ಈ ಬಗ್ಗೆ ಜಾಗ್ರತೆ ವಹಿಸುವುದು ಅಗತ್ಯ. ಕಾರಣ, ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಪ್ರೊಟೀನ್ ದೊರೆಯುತ್ತಿದ್ದರೆ, ಅದು ಕೊಬ್ಬಾಗಿ ಪರಿವರ್ತನೆಯಾಗಬಹುದು. ಆ ಕೊಬ್ಬು ಕರಗಿಸುವುದಕ್ಕೆ ಇನ್ನೆಷ್ಟು ಒದ್ದಾಡಬೇಕೋ, ದೇವರೇ!
ಸತ್ವಗಳ ಕೊರತೆ
ಆಹಾರದ ಮೂಲಕ ದೊರೆಯುವ ಸತ್ವಗಳನ್ನು ಸಮತೋಲನದಲ್ಲಿ ಇರಿಸಿಕೊಳ್ಳುವುದಕ್ಕೆ ಸಾಧ್ಯ. ಅವುಗಳನ್ನು ಪೂರಕಗಳಿಗೆ ಬದಲು ಮಾಡುವುದು ಖಂಡಿತಾ ಸೂಕ್ತವಲ್ಲ. ಕಾರಣ, ಬಹಳಷ್ಟು ಅಗತ್ಯ ಸೂಕ್ಷ್ಮ ಪೋಷಕಾಂಶಗಳು ಆಹಾರದಲ್ಲಿ ದೊರೆಯುವ ಹಾಗೆ ಯಾವ ಮಾತ್ರೆ, ಪುಡಿಗಳಿಂದಲೂ ದೊರೆಯುವುದಿಲ್ಲ. ಒಂದು ಸಂಪೂರ್ಣ, ಸಮತೋಲಿತ ಆಹಾರಕ್ಕೆ ಪುಡಿ, ಪೇಯಗಳು ಸಮವಲ್ಲ. ಇದರಿಂದ ಪೋಷಕಾಂಶಗಳ ಕೊರತೆ ಕಾಡಬಹುದು.
ಇದನ್ನೂ ಓದಿ: Health Tips: ಪ್ರತಿ ಮಹಿಳೆಯನ್ನೂ ಮೌನವಾಗಿ ಕಾಡುವ ಆರೋಗ್ಯ ಸಮಸ್ಯೆಗಳಿವು! ನಿರ್ಲಕ್ಷ್ಯ ಬೇಡ