Site icon Vistara News

Remedies for Foot Odor: ಪಾದಗಳಿಂದ ದುರ್ನಾತವೇ? ಇಲ್ಲಿವೆ ನಿಮ್ಮ ಸಮಸ್ಯೆಗೆ ಪರಿಹಾರ!

foot care

ಪಾದಗಳೂ ಕೂಡಾ ಬೆವರುತ್ತವೆ. ಕೆಲವರಿಗೆ ಇದು ಸಮಸ್ಯೆಯಲ್ಲದಿದ್ದರೂ ಇನ್ನೂ ಕೆಲವರಿಗೆ ಪಾದ ಬೆವರುವುದೇ ಒಂದು ಸಮಸ್ಯೆ. ಪಾದ ಬೆವರುವುದಷ್ಟೇ ಆಗಿದ್ದರೆ ತೊಂದರೆಯಿಲ್ಲ, ಆದರೆ, ಬೆವರಿದ ಪಾದಗಳಿಂದ ಬರುವ ಕೆಟ್ಟ ವಾಸನೆ (Foot odor) ಕೆಲವರ ಜೀವನವನ್ನು ಹೈರಾಣಾಗಿಸುತ್ತದೆ. ಕಚೇರಿ ಸೇರಿದಂತೆ ಸಾರ್ವಜನಿಕವಾಗಿ ಬೆರೆಯುವಾಗ ಈ ಕೆಟ್ಟ ವಾಸನೆಯ ಪಾದಗಳಿಂದಾಗಿ (smelly feet) ಮುಜುಗರಕ್ಕೊಳಗಾಗುವ ಸಂದರ್ಭ ಬರುತ್ತದೆ. ಬೆವರುವ ಪಾದಗಳನ್ನು ಶೂಗಳಿಂದ ಹೊರತೆಗೆದರೆ ಎಲ್ಲಿ ಇನ್ನೂ ಹೆಚ್ಚು ಮುಜುಗರಕ್ಕೊಳಗಾಗಬೇಕಾದೀತೋ ಎಂಬ ಭಯದಿಂದ ಶೂಗಳೊಳಗೇ ಇಡೀ ದಿನ ಪಾದಗಳನ್ನು ಬಿಟ್ಟು ಶೂಗಳೂ ಕೂಡಾ ದುರ್ನಾತದಿಂದ ನಾರಲಾರಂಭಿಸುತ್ತದೆ. ಶೂಗಳನ್ನು ಎಷ್ಟು ಶುಚಿಯಾಗಿ ಇಟ್ಟುಕೊಂಡರೂ, ತೊಳೆದು ಒಣಗಿಸಿದರೂ ಮತ್ತೆ ಮತ್ತೆ ಕಾಡುವ ಸಮಸ್ಯೆಯಿದು. ಇಂತಹ ಇಕ್ಕಟ್ಟಿನ ಪರಿಸ್ಥಿತಿ ಎಲ್ಲರ ಜೀವನದಲ್ಲೂ ಒಮ್ಮೆಯಾದರೂ ಬಂದಿರಬಹುದು. ಕೆಲವರಿಗೆ ಈ ಸಮಸ್ಯೆ ಯಾವಾಗಲೂ ಇರಬಹುದು. ದುರ್ವಾಸನೆ ಬೀರುವ ಪಾದಗಳಿಗೆ ಸಾಮಾನ್ಯವಾಗಿ ಬ್ಯಾಕ್ಟೀರಿಯಾ ಹಾಗೂ ತೇವಾಂಶ (foot care) ಇವೆರಡೂ ಕಾರಣ. ಹಾಗಾದರೆ ಬನ್ನಿ, ಈ ಸಮಸ್ಯೆಯಿಂದ ಯಾವೆಲ್ಲ ಬಗೆಯಿಂದ ಮುಕ್ತಿ ಪಡೆಯಬಹುದು (Remedies for Foot Odor) ಎಂಬುದನ್ನು ನೋಡೋಣ.

1. ಮುಖ್ಯವಾಗಿ ನಿಮ್ಮ ಪಾದಗಳನ್ನು ಆಂಟಿ ಬ್ಯಾಕ್ಟೀರಿಯಲ್‌ ಸೋಪು ಬಳಸಿ ದಿನಕ್ಕೆ ಕನಿಷ್ಟವೆಂದರೆ ಎರಡು ಬಾರಿ ತೊಳೆಯಿರಿ. ತೊಳೆದ ಕಾಲುಗಳನ್ನು ಚೆನ್ನಾಗಿ ಮೆದುವಾಗಿ ಒರೆಸಿಕೊಳ್ಳಿ. ಕಾಲಿನಿಂದ ತೇವಾಂಶ ಹೋಗಲಿ. ಆಮೇಲೆ ಗಾಳಿಯಾಡಲು ಹಾಗೆಯೇ ಬಿಡಿ.

2. ಶೂ ಹಾಕುವ ಮೊದಲು ಪಾದಕ್ಕೆ ಪೌಡರ್‌ ಹಾಕಿ ಆಮೇಲೆ ಶೂಗಳನ್ನು ಹಾಕಿ. ಆಗ ಬೆವರಿನ ಸಮಸ್ಯೆಗೆ ಕೊಂಚ ಮಟ್ಟಿನ ಪರಿಹಾರ ಸಿಗಬಹುದು.

3. ಈ ಸಮಸ್ಯೆಯಿರುವ ಮಂದಿ ಶೂಗಳನ್ನು ಖರೀದಿಸುವಾಗ ಎಚ್ಚರ ವಹಿಸಿ. ಶೂಗಳು ಗಾಳಿಯಾಡುವಂತಿರಲಿ. ಶೂಗಳಲ್ಲಿ ಗಾಳಿ ಸಂಚಾರವಾಗಲು ಜಾಗವಿರಲಿ. ಸಂಪೂರ್ಣ ಮುಚ್ಚಿರುವ ಅಥವಾ ಯಾವುದೇ ಗಾಳಿಯಾಡುವ ಮಾರ್ಗಗಳಿಲ್ಲದೆ ಇರುವ ಶೂಗಳು ಇಂಥವರಿಗೆ ಹೊಂದಿಕೆಯಾಗದು. ಗಾಳಿಯಾಡಲು ಸಣ್ಣ ಸಣ್ಣ ರಂಧ್ರಗಳಿರುವ, ಬೆರಳಿರುವ ಜಾಗಗಳಲ್ಲಿ ಕಿಟಕಿಯಂತಹ ರಚನೆಯಿರುವ ಶೂಗಳನ್ನು ಆಯ್ಕೆ ಮಾಡಿ.

4. ಆಗಾಗ ಶೂಗಳನ್ನು ಬದಲಿಸುತ್ತಿರಿ. ಬಹಳ ಹೊತ್ತು ಕೂರಬೇಕಾಗಿ ಬರುವಾಗ, ಶೂಗಳನ್ನು ಕಾಲಿನಿಂದ ಕಳಚಿ ಅವುಗಳನ್ನು ಚೆನ್ನಾಗಿ ಗಾಳಿಯಾಡಲು ಬಿಡಿ.

5. ಪ್ಲಾಸ್ಟಿಕ್‌ನಿಂದ ಮಾಡಿರುವ ಶೂಗಳಿಂದ ದೂರವಿರಿ.

6. ಶೂಗಳ ಅಗತ್ಯ ಅಥವಾ ಅನಿವಾರ್ಯತೆ ಇಲ್ಲದೆ ಇರುವ ಸಂದರ್ಭಗಳಲ್ಲಿ ಆದಷ್ಟೂ ಚಪ್ಪಲಿಗಳನ್ನೇ ಬಳಸಿ.

7. ಮನೆಯಲ್ಲಿ ಚಪ್ಪಲಿ ಹಾಕದೆ ಹಾಗೆಯೇ ಬರಿಗಾಲಲ್ಲಿ ಓಡಾಡಿಕೊಂಡಿರಿ. ಆಗ ಗಾಳಿ ನಿಮ್ಮ ಚರ್ಮಕ್ಕೆ ತಾಗಲು ಅನುಕೂಲವಾಗುತ್ತದೆ.

8. ಶೂಗಳೊಳಗೆ ಯಾವಾಗಲೂ ತೇವಾಂಶವನ್ನು ಹೀರಿಕೊಳ್ಳುವ ಸಾಕ್ಸ್‌ಗಳನ್ನು ಬಳಸಿ. ಸಾಕ್ಸ್‌ ಹಾಕುವಾಗ ಪಾದಕ್ಕೆ ಪೌಡರ್‌ ಅಥವಾ ಕಾರ್ನ್‌ ಸ್ಟಾರ್ಚ್‌ ಚುಮುಕಿಸಿ ಸಾಕ್ಸ್‌ಗಳು ಒದ್ದೆಯಾದಂತೆ ಅನಿಸಿದರೆ ಅವುಗಳನ್ನು ಬದಲಿಸಿ. ಹೊರಗೆ ಹೋಗುವಾಗ ಯಾವಾಗಲೂ ಒಂದು ಎಕ್ಸ್‌ಟ್ರಾ ಸಾಕ್ಸ್‌ ಇಟ್ಟುಕೊಂಡಿರಿ.

foot

ಇದನ್ನೂ ಓದಿ: Hair And Skin Care Tips For Monsoon: ಮಳೆಗಾಲದಲ್ಲಿ ಕೂದಲು ಮತ್ತು ತ್ವಚೆಯ ಆರೈಕೆ ಹೇಗೆ?

9. ಕಾಲಿನ ಬೆರಳುಗಳ ನಡುವೆ ಬೆವರು ಆಗದಂತೆ ಆಲ್ಕೋಹಾಲ್‌ನಿಂದ ಒರೆಸಿಕೊಳ್ಳಿ.

10. ಪಾದಗಳನ್ನು ಉಗುರು ಬೆಚ್ಚಗಿನ ಉಪ್ಪುನೀರಿನಲ್ಲಿ ಅಥವಾ ಬೇಕಿಂಗ್‌ ಸೋಡಾ ಹಾಕಿದ ನೀರಿನಲ್ಲಿ ಕೆಲಕಾಲ ಅದ್ದಿಟ್ಟು, ನಂತರ ತೊಳೆದುಕೊಳ್ಳಿ. ಪ್ಯೂಮಿಸ್‌ ಸ್ಟೋನ್‌ನಿಂದ ಸ್ಕ್ರಬ್‌ ಕೂಡಾ ಮಾಡಬಹುದು.

11. ವಿನೆಗರ್‌ ಅಥವಾ ನಿಂಬೆರಸವನ್ನು ಪಾದಗಳಿಗೆ ಹಚ್ಚಿ ಹತ್ತು ನಿಮಿಷ ಬಿಟ್ಟು ತೊಳೆದುಕೊಳ್ಳುವ ಮೂಲಕವೂ ಪಾದದ ವಾಸನೆಯ ಸಮಸ್ಯೆಯಿಂದ ಪಾರಾಗಬಹುದು. ತಿಂಗಳಿಗೊಮ್ಮೆಯಾದರೂ ಪೆಡಿಕ್ಯೂರ್‌ ಮಾಡಿಸಿಕೊಳ್ಳಲೂಬಹುದು.

ಪಾದಗಳನ್ನು ನಿಯಮಿತವಾಗಿ ಸರಿಯಾಗಿ ಕಾಳಜಿ ಮಾಡಿದಲ್ಲಿ ಈ ಸಮಸ್ಯೆಯಿಂದ ಹೊರಬರಬಹುದು. ಪಾದದ ಶುಚಿತ್ವ ಹಾಗೂ ಬೆವರು ಕೂರದಂತೆ ಜಾಗ್ರತೆ ವಹಿಸುತ್ತಾ ಬಂದಲ್ಲಿ ಕ್ರಮೇಣ ಈ ಸಮಸ್ಯೆಯಿಂದ ಪಾರಾಗಬಹುದು.

ಇದನ್ನೂ ಓದಿ: ದೇಹವೆಂಬ ದೇಗುಲ ಹೊತ್ತು ನಡೆಯುವ ಕಾಲುಗಳಿಗೆ ಎಂಥಾ ಪಾದರಕ್ಷೆಗಳನ್ನು ಧರಿಸಬೇಕು? ಅಳತೆ ನೋಡೋದು ಹೇಗೆ?

Exit mobile version