Site icon Vistara News

Rice Calories: ಅಕ್ಕಿಗಳಲ್ಲಿ ಯಾವುದು ಒಳ್ಳೆಯದು?

Rice Calories

Rice Calories

ಅನ್ನದೇವರ ಮುಂದೆ ಇನ್ನು ದೇವರಿಲ್ಲ ಎಂಬುದು ಅನುಭಾವಿಕರ ಮಾತಷ್ಟೇ ಅಲ್ಲ, ಊಟ ಮಾಡುವ ಎಲ್ಲರ ನುಡಿಯೂ ಹೌದು. ವಿಶ್ವದ ಹಲವೆಡೆಗಳಲ್ಲಿ, ಅದರಲ್ಲೂ ಏಷ್ಯಾ ಖಂಡದಲ್ಲಿ ಅಕ್ಕಿಯನ್ನು ಮುಖ್ಯ ಆಹಾರವಾಗಿ ಬಳಸುವವರ ಸಂಖ್ಯೆ ಬಹುದೊಡ್ಡದು. ಆದರೂ ಅಕ್ಕಿ ಹೆಚ್ಚು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೇ ಎಂಬ ಬಗ್ಗೆ ಚರ್ಚೆ ಮುಗಿಯದಂತೆ ಜಾರಿಯಲ್ಲಿದೆ. ಮಾತ್ರವಲ್ಲ, ಬಿಳಿ ಅಕ್ಕಿ, ಕೆಂಪು ಅಕ್ಕಿ, ಕುಚ್ಚಲಕ್ಕಿ ಮತ್ತು ಕಪ್ಪು ಅಕ್ಕಿಗಳಲ್ಲಿ ಯಾವುದು ಒಳ್ಳೆಯದು ಎನ್ನುವುದೂ ಈ ಚರ್ಚೆಯ ಭಾಗವಾಗಿರುತ್ತದೆ. ಯಾವ ಅಕ್ಕಿಯ ಗುಣಾವಗುಣಗಳು ಏನೇನು ಎಂಬುದನ್ನು ನೋಡಬಹುದಲ್ಲವೇ?

ಬಿಳಿ ಅಕ್ಕಿ

ವಿಶ್ವದ ಹೆಚ್ಚಿನೆಡೆಗಳಲ್ಲಿ ಬಳಕೆಯಾಗುವ ಅಕ್ಕಿಯಿದು. ಅತಿಹೆಚ್ಚಿನ ಪ್ರಮಾಣದ ಪಿಷ್ಟ ಇದರಲ್ಲಿ ಇರುವುದರಿಂದ ತೂಕ ಇಳಿಸುವ ಉದ್ದೇಶವಿದ್ದವರು ಇದನ್ನು ಕಡಿಮೆ ಬಳಸುವುದು ಒಳ್ಳೆಯದು ಎನ್ನುತ್ತಾರೆ ಆಹಾರ ತಜ್ಞರು. ಅಕ್ಕಿಯ ಮೇಲ್ಪದರದಲ್ಲಿರುವ ಸಿಪ್ಪೆ, ತೌಡುಗಳನ್ನು ತೆಗೆದು ಹಾಕಿ, ಧಾನ್ಯದ ಬಿಳಿಯ ಭಾಗವನ್ನು ಮಾತ್ರ ಉಳಿಸಿಕೊಳ್ಳುವುದರಿಂದ ಅಕ್ಕಿಗೆ ಮಲ್ಲಿಗೆಯಂಥ ಬಿಳಿಯ ಬಣ್ಣ ಬರುತ್ತದೆ. ಈ ಅಕ್ಕಿಯಲ್ಲಿರುವ ನಾರಿನಂಶವೂ ಬಹಳ ಕಡಿಮೆ.

Rice Calories

ಕೆಂಪಕ್ಕಿ

ಭತ್ತದ ಹೊಟ್ಟನ್ನು ಮಾತ್ರವೇ ತೆಗೆದು ಧಾನ್ಯದ ತೌಡನ್ನು ತೆಗೆಯದೆ ಹಾಗೆಯೇ ಉಳಿಸಿಕೊಂಡಾಗ ದೊರೆಯುವ ಅಕ್ಕಿಯಿದು. ಇದರಲ್ಲಿ ನಾರಿನಂಶ ಹೇರಳವಾಗಿರುತ್ತದೆ. ಮೆಗ್ನೀಶಿಯಂ, ಸೆಲೆನಿಯಂ, ಥಿಯಾಮಿನ್‌, ನಯಾಸಿನ್‌, ವಿಟಮಿನ್‌ ಬಿ6, ಫಾಸ್ಫರಸ್, ಪೊಟಾಶಿಯಂ ಮುಂತಾದ ಖನಿಜಗಳೂ ಇದರಲ್ಲಿ ಇರುತ್ತವೆ. ಎಪಿಗೆನಿನ್‌ನಂಥ ಉತ್ಕರ್ಷಣ ನಿರೋಧಕಗಳೂ ಇದರಿಂದ ದೊರೆಯುತ್ತವೆ. ಮಾತ್ರವಲ್ಲ, ಬಿಳಿಯಕ್ಕಿಗೆ ಹೋಲಿಸಿದಲ್ಲಿ ಕೆಂಪಕ್ಕಿಯ ಗ್ಲೈಸೆಮಿಕ್‌ ಇಂಡೆಕ್ಸ್‌ ಸಹ ಕಡಿಮೆ ಇದ್ದು, ಮಧುಮೇಹಿಗಳು ಸೇವಿಸಬಹುದು.

ಕುಚ್ಚಲಕ್ಕಿ

ಈ ಅಕ್ಕಿಯೂ ಸಹ ತೌಡು ಸೇರಿದ್ದೇ. ಇದರಲ್ಲಿ ಮ್ಯಾಂಗನೀಸ್‌, ಕಬ್ಬಿಣ, ಸತು. ಕ್ಯಾಲ್ಶಿಯಂ, ಸೆಲೆನಿಯಂ, ಮೆಗ್ನೀಶಿಯಂ, ಪೊಟಾಶಿಯಂ ಮುಂತಾದ ತರಹೇವಾರಿ ಪೋಷಕಾಂಶಗಳಿವೆ. ನಾರಿನಂಶವೂ ಭರಪೂರ. ಗ್ಲೈಸೆಮಿಕ್‌ ಇಂಡೆಕ್ಸ್‌ ಸಹ ಕಡಿಮೆಯಿದೆ. ಬಿಳಿಯಕ್ಕಿಗಿಂತ ಆರೋಗ್ಯಕರ ಆಯ್ಕೆಯಿದು.

ಕಪ್ಪು ಅಕ್ಕಿ

ನೋಡುವುದಕ್ಕೆ ಕಪ್ಪಾಗಿದ್ದು, ಬೇಯಿಸಿದಾಗ ನೇರಳೆ ಬಣ್ಣಕ್ಕೆ ತಿರುಗುವಂಥ ತಳಿಯಿದು. ನವಿರಾದ ಮಣ್ಣಿನ ಘಮವೂ ಕೆಲವೊಮ್ಮೆ ಈ ಅಕ್ಕಿಗೆ ಇರುತ್ತದೆ. ಉಳಿದೆಲ್ಲಾ ಅಕ್ಕಿಗಳಿಗಿಂತ ಹೆಚ್ಚಿನ ಪ್ರಮಾಣದ ವಿಟಮಿನ್‌, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಈ ಅಕ್ಕಿ ಹೊಂದಿದೆ. ಆಂಥೋಸಯನಿನ್‌ ಎಂಬ ಉತ್ಕರ್ಷಣ ನಿರೋಧಕಗಳು ಹೆಚ್ಚಿನ ಪ್ರಮಾಣದಲ್ಲಿ ಇದರಲ್ಲಿ ಇರುವುದರಿಂದಲೇ ಈ ಅಕ್ಕಿಯ ಬಣ್ಣ ಕಪ್ಪು. ವಿಟಮಿನ್‌ ಇ, ಪ್ರೊಟೀನ್‌, ನಾರು ಮತ್ತು ಕಬ್ಬಿಣದ ಅಂಶವೂ ಇದರಲ್ಲಿ ಹೇರಳ. ಪೌಷ್ಟಿಕತೆಯಲ್ಲಿ ಉಳಿದೆಲ್ಲಾ ಅಕ್ಕಿಗಳಿಗಿಂತ ಇದು ಒಂದು ತೂಕ ಹೆಚ್ಚು ಎನ್ನುತ್ತಾರೆ ಆಹಾರ ತಜ್ಞರು.

ನಮ್ಮ ದೇಹದ ಅಗತ್ಯವೇನು ಎಂಬುದನ್ನು ಅರಿತು ಆಹಾರ ಸೇವಿಸುವುದರಲ್ಲಿ ಜಾಣತನವಿದೆ. ಮಧುಮೇಹ, ಅತಿತೂಕದಂಥ ಸಮಸ್ಯೆಯಿದ್ದರೆ ಬಿಳಿ ಅಕ್ಕಿಯ ಬದಲು ಇನ್ನೂ ಆರೋಗ್ಯಕರ ಆಯ್ಕೆಗಳತ್ತ ಗಮನ ಹರಿಸುವುದು ಕ್ಷೇಮ. ಅತಿಯಾಗಿ ಸಂಸ್ಕರಿಸಿದ ಯಾವುದೂ ಆರೋಗ್ಯಕ್ಕೆ ಸೂಕ್ತವಲ್ಲ.

ಇದನ್ನೂ ಓದಿ: Mental Health: ಪರೀಕ್ಷೆ ತಯಾರಿಯಲ್ಲಿ ಬುದ್ಧಿಗೊಂದೇ ಅಲ್ಲ, ದೇಹಕ್ಕೂ ಬೇಕು ಸರಿಯಾದ ಗ್ರಾಸ!

Exit mobile version