Site icon Vistara News

Roasted Gram Benefits: ಟೈಂಪಾಸ್‌ ಕಡ್ಲೆಕಾಯ್‌ ತಿಂತೀರಾ? ಹಾಗಾದ್ರೆ ಹುರಿಗಡಲೆ ತಿನ್ನಿ! ತೂಕ ಇಳಿಕೆಗೆ ಬೆಸ್ಟ್‌!

roasted gram

ಬಹಳಷ್ಟು ಮಂದಿಗೆ ಊಟದ ಮಧ್ಯೆ ಇರುವ ಸಮಯದಲ್ಲಿ ಏನಾದರೊಂದು ತಿನ್ನುವ ಚಟ. ಈ ಚಟದಿಂದಾಗಿಯೇ, ಒಳ್ಳೆಯ ಆರೋಗ್ಯಪೂರ್ಣ ಆಹಾರ ಉಣ್ಣುತ್ತಿದ್ದರೂ ಮಧ್ಯದಲ್ಲಿ ಮಾಡುವ ಈ ಅವಾಂತರದಿಂದ ಏನಾದರೊಂದು ಜಂಕ್‌ (Junk food) ಹೊಟ್ಟೆ ಸೇರುತ್ತಿರುತ್ತದೆ. ಚಿಪ್ಸ್‌ ಸೇರಿದಂತೆ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವ ಕರುಕುರುಂ ಕುರುಕಲುಗಳು ಸಾಕಷ್ಟು ಬೇಡದ ಕೊಬ್ಬನ್ನೂ (Saturated fat), ಕ್ಯಾಲರಿಯನ್ನೂ ಹೊಟ್ಟೆ ಸೇರುವಂತೆ ಮಾಡುತ್ತದೆ. ಹಾಗಾದರೆ ಆರೋಗ್ಯಕರ ಕುರುಕಲು (Healthy snacks) ತರುವುದಾದರೂ ಎಲ್ಲಿಂದ ಎಂಬ ಪ್ರಶ್ನೆ ನಿಮ್ಮ ಮುಂದೆ ಸದಾ ಎದುರಾಗಬಹುದು. ಈ ಪ್ರಶ್ನೆಗೆ ಒಂದು ಹುರಿಗಡಲೆಯೂ (roasted gram benefits) ಕೂಡಾ ಉತ್ತರವಾಗಬಲ್ಲುದು ಎಂಬುದು ನಿಮಗೆ ಗೊತ್ತೇ?

ಹೌದು, ಹುರಿಗಡಲೆ ಎಂಬ ಟೈಂಪಾಸ್‌ ಕಡ್ಲೆಕಾಯಿ ಎಷ್ಟೆಲ್ಲ ಪೋಷಕಾಂಶಗಳನ್ನು (Nutrients) ತನ್ನಲ್ಲಿ ಅಡಗಿಸಿಟ್ಟುಕೊಂಡಿದೆ ಎಂದರೆ ನಾವು ನಿತ್ಯವೂ ಇವನ್ನು ಒಳ್ಳೆಯ ಪ್ರೊಟೀನ್‌ ಮೂಲವಾಗಿ ತಿನ್ನಬಹುದು. ತೂಕ ಇಳಿಸಲು, ಆರೋಗ್ಯ ಹೊಂದಲು ಬೇಕಾಗುವ ಪೋಷಕಾಂಶಗಳ ಪೈಕಿ ಪ್ರೊಟೀನ್‌ ಕೂಡಾ ಬಹಳ ಮುಖ್ಯ ಎಂಬ ಸಂಗತಿ, ಬಹುತೇಕ ಎಲ್ಲರಿಗೂ ತಿಳಿದಿರುತ್ತದೆ. ಆದರೆ, ನೈಸರ್ಗಿಕವಾಗಿ ಸಿಗುವ ಪ್ರೊಟೀನ್‌ನ ಮೂಲ ಹುಡುಕುವ ಕೆಲಸವನ್ನು ಬಹುತೇಕರು ಮಾಡುವುದಿಲ್ಲ. ನಿತ್ಯವೂ ಪ್ರೊಟೀನ್‌ಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ರೊಟೀನ್‌ ಪುಡಿಯನ್ನು ತೆಗೆದುಕೊಳ್ಳುವುದು ಬಹುತೇಕರ ನಿತ್ಯದ ಅಭ್ಯಾಸ. ಆದರೆ, ಮನಸ್ಸು ಮಾಡಿದರೆ ನಾವು ನಮ್ಮ ನಿತ್ಯಾಹಾರದಲ್ಲೇ ಪ್ರೊಟೀನ್‌ ಇರುವ ಆಹಾರಗಳನ್ನು ಆಯ್ಕೆ ಮಾಡಿಕೊಂಡು ದೇಹಕ್ಕೆ ಪೋಷಕಾಂಶದ ಕೊರತೆಯಾಗದಂತೆ ನೋಡಿಕೊಳ್ಳಬಹುದು. ಅವುಗಳ ಪೈಕಿ ನಾವು ಸುಲಭವಾಗಿ ಆಯ್ಕೆ ಮಾಡಬಹುದಾದ ಸ್ನ್ಯಾಕ್‌ಗಳ ಪೈಕಿ ಹುರಿಗಡಲೆಯೂ ಒಂದು.

ಹುರಿಗಡಲೆ, ಭಾರತದ ಸಾಂಪ್ರದಾಯಿಕ ಸ್ನ್ಯಾಕ್‌ಗಳ ಪೈಕಿ ಒಂದು. ಹಿಂದಿನಿಂದಲೂ ಈ ಹುರಿಗಡಲೆಯನ್ನು ನಮ್ಮ ಹಿರಿಯರು ಸಾಕಷ್ಟು ಆಹಾರಗಳಲ್ಲಿ ಹಾಗೂ ಸುಮ್ಮನೆ ತಿನ್ನಲು ಬಳಸುತ್ತಲೇ ಬಂದಿದ್ದಾರೆ. ಆದರೆ, ಇತ್ತೀಚೆಗಿನ ದಿನಗಳಲ್ಲಿ ನಾವು ಮರೆಯುತ್ತಿದ್ದೇವೆ ಅಷ್ಟೇ.

ಹಾಗಾದರೆ, ಊಟದ ಮಧ್ಯೆ, ಸ್ನ್ಯಾಕ್‌ ಟೈಂನಲ್ಲಿ ಈ ಹುರಿಗಡಲೆಯನ್ನು ಎಷ್ಟು ತಿನ್ನಬಹುದು ಎನ್ನುತ್ತೀರಾ? ಒಬ್ಬಾತ ಒಂದು ದಿನಕ್ಕೆ ನೂರು ಗ್ರಾಂನಷ್ಟು ಹುರಿಗಡಲೆ ತಿನ್ನಬಹುದಂತೆ. ಅಂದರೆ ನಿತ್ಯವೂ ಇದನ್ನು ತಿನ್ನುವ ಅಭ್ಯಾಸ ರೂಢಿಸಿಕೊಂಡಿದ್ದರೆ ನೂರು ಗ್ರಾಂನಷ್ಟು ದಿನವೂ ತಿನ್ನಬಹುದು.

ಹುರಿಗಡಲೆಯಲ್ಲಿ ಕೇವಲ ಪ್ರೊಟೀನ್‌ ಅಷ್ಟೇ ಅಲ್ಲ, ಸಾಕಷ್ಟು ಕಾರ್ಬೋಹೈಡ್ರೇಟ್‌, ತೇವಾಂಶ, ಕ್ಯಾಲ್ಶಿಯಂ, ಕಬ್ಬಿಣಾಂಶವೂ ಇವೆ. ಹೀಗಾಗಿ ಅತಿಯಾಗಿ ತಿನ್ನುವುದೂ ಕೂಡಾ ತೂಕ ಹೆಚ್ಚಳದಂತಹ ಸಮಸ್ಯೆ ತಂದೊಡ್ಡಬಹುದು. ಇದರ ಆರೋಗ್ಯಕರ ಲಾಭ ಪಡೆಯುವುದಾದರೆ, ಒಂದು ಮಿತವಾದ ಶಿಸ್ತುಬದ್ಧ ಸೇವನೆಯೂ ಅಗತ್ಯ.

ಹುರಿಗಡಲೆಯಲ್ಲಿರುವ ಪ್ರೊಟೀನ್‌ ಹೊಸ ಅಂಗಾಂಶಗಳ ಬೆಳವಣಿಗೆಗೆ ಹಾಗೂ ಅವುಗಳನ್ನು ಸರಿಪಡಿಸುವ ಕಾರ್ಯಕ್ಕೆ ಪೂರಕವಾಗಿದೆ. ಅಷ್ಟೇ ಅಲ್ಲ, ಇದರಲ್ಲಿರುವ ಪೋಷಕಾಂಶಗಳು ಮಾನಸಿಕ ಆರೋಗ್ಯವನ್ನೂ (mental health) ಹೆಚ್ಚಿಸುತ್ತದೆ. ಇದರಲ್ಲಿ ಸಾಕಷ್ಟು ನಾರಿನಂಶವೂ ಇದೆ. ಹೀಗಾಗಿ, ತೂಕ ಇಳಿಕೆಯಲ್ಲಿಯೂ ಇದು ಮಹತ್ತರ ಪಾತ್ರ ವಹಿಸುತ್ತದೆ. ವ್ಯಾಯಾಮ (Exercise), ನಡಿಗೆ (walking) ಇತ್ಯಾದಿಗಳನ್ನು ಮಾಡುವವರು ಅವಶ್ಯವಾಗಿ ಪ್ರೊಟೀನ್‌ ಮೂಲಕ್ಕಾಗಿ ಇದನ್ನು ಸೇವಿಸಬಹುದು. ಇದರ ಸೇವನೆಯಿಂದ ಬೇಗನೆ ಹೊಟ್ಟೆ ತುಂಬಿದ ಅನುಭವವಾಗುವುದರಿಂದ ಹಸಿವಿಗೂ ಇದು ಉತ್ತಮ ಆಯ್ಕೆ. ಹಸಿವು ಕಡಿಮೆಗೊಳಿಸುವುದಲ್ಲದೆ, ಬಹಳ ಹೊತ್ತಿನ ಕಾಲ ಹೊಟ್ಟೆ ತುಂಬಿದ ಭಾವ ಇದು ಮೂಡಿಸುವುದರಿಂದ ಸಹಜವಾಗಿಯೇ ಕಡಿಮೆ ತಿನ್ನುವಂತೆ ಮಾಡುತ್ತದೆ. ಹೀಗಾಗಿ ಅತಿಯಾಗಿ, ತಿನ್ನುವ ಚಟವೂ ಇದರಿಂದ ಹತೋಟಿಗೆ ಬಂದು, ಹಿತಮಿತವಾಗಿ ಉಣ್ಣುವ ಅಭ್ಯಾಸವನ್ನು ಪರೋಕ್ಷವಾಗಿ ಇದು ಬೆಂಬಲಿಸುತ್ತದೆ. ಇದರಿಂದ ತೂಕವೂ ಇಳಿಯುತ್ತದೆ.

ಇದನ್ನೂ ಓದಿ: Cashew Health Tips: ಗೋಡಂಬಿ ತಿಂದರೆ ಏನಾಗುತ್ತದೆ?

Exit mobile version