ನಿಮಗೆ ಆರೋಗ್ಯದ ಬಗ್ಗೆ ಕಾಳಜಿಯಿದ್ದರೆ, ಖಂಡಿತಾ ಸಬ್ಜಾ, ಚಿಯಾ, ಕುಂಬಳಕಾಯಿ ಬೀಜಗಳಂತಹ ಇತ್ತೀಚೆಗೆ ಹೆಚ್ಚು ಚಾಲ್ತಿಗೆ ಬಂದ ಬೀಜಗಳ ಸೇವನೆ ಮಾಡಿರಬಹುದು. ಇವೆಲ್ಲವೂ ನೈಸರ್ಗಿಕವಾಗಿ ಲಭ್ಯವಿರುವ ಪೋಷಕಾಂಶಗಳ ಪವರ್‌ಹೌಸ್‌ಗಳು. ಇದರಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು, ಕೆಲವು ನಿಮಿಷಗಳ ಕಾಲ ನೆನೆಸಿಟ್ಟು ನಂತರ ತಿನ್ನುವುದರಿಂದ ಸಾಕಷ್ಟು ಆರೋಗ್ಯದ ಲಾಭಗಳಿವೆ. ಕಡಿಮೆ ಕ್ಯಾಲರಿಯಿರುವ ಇವುಗಳನ್ನು ತೂಕ ಇಳಿಸುವ ಪಯಣದಲ್ಲಿರುವ ಪ್ರತಿಯೊಬ್ಬರೂ ಈ ಸಬ್ಜಾ ಹಾಗೂ ಚಿಯಾ ಬೀಜಗಳನ್ನು ಬಳಕೆ ಮಾಡುತ್ತಿರಬಹುದು. ಆದರೆ, ಇವನ್ನು ನೆನೆ ಹಾಕಿಯೇ ಬಳಸಬೇಕು ಯಾಕೆ ಎಂಬ ಒಂದು ಪ್ರಶ್ನೆ ನಿಮ್ಮನ್ನು ಕಾಡಿರಬಹುದು. ಅಂತಹ ಗೊಂದಲವಿದ್ದರೆ (Sabja Seeds Benefits) ಅದಕ್ಕೆ ಉತ್ತರ ಇಲ್ಲಿದೆ. ಸಬ್ಜಾ ಬೀಜಗಳನ್ನು ಹಾಗೆಯೇ ಹಸಿಯಾಗಿ ನೆನೆಸದೆ ಯಾಕೆ ತಿನ್ನಬಾರದು ಎಂಬುದಕ್ಕೆ ಮೊದಲು ಸಬ್ಜಾ ಹಾಗೂ ಚಿಯಾ ಬೀಜಗಳ ನಡುವಿನ ವ್ಯತ್ಯಾಸ ತಿಳಿದುಕೊಳ್ಳೋಣ.ಬಹಳಷ್ಟು ಮಂದಿ ಚಿಯಾ ಬೀಜಗಳು ಹಾಗೂ ಸಬ್ಜಾ ಬೀಜಗಳ ನಡುವೆ ಗೊಂದಲಕ್ಕೆ ಬೀಳುವುದುಂಟು. ಎರಡನ್ನೂ ಒಂದೇ ಎಂದು ತಿಳಿದುಕೊಳ್ಳುವುದುಂಟು. ಆದರೆ, ಇವೆರಡೂ ಬೇರೆ ಬೇರೆ. ಇವೆರಡನ್ನೂ ಸರಿಯಾಗಿ ಗಮನಿಸಿ ನೋಡಿದರೆ ಬೇರೆ ಬೇರೆ ಎಂದು ತಿಳಿಯುತ್ತದೆ. ಸಬ್ಜಾ ಬೀಜ ಕಡು ಕಪ್ಪಗಿದ್ದರೆ, ಚಿಯಾ ಬೀಜ ಕಪ್ಪು, ಬೂದು, ಬಿಳಿ ಹಾಗೂ ಕಂದು ಬಣ್ಣಗಳಿಂದ ಮಿಶ್ರಿತವಾಗಿರುತ್ತದೆ. ಸಬ್ಜಾಕ್ಕೆ ಅದರದ್ದೇ ಆದ ರುಚಿಯಿದ್ದರೆ, ಚಿಯಾ ಬೀಜಕ್ಕೆ ಹೇಳಿಕೊಳ್ಳುವ ರುಚಿಯೇನೂ ಇಲ್ಲ. ಆದರೆ, ಇವೆರಡೂ ಬೀಜಗಳನ್ನು ಸಲಾಡ್ ಹಾಗೂ ಇತರ ಆಹಾರಗಳ ಜೊತೆ ಸೇರಿಸಿ ತಿನ್ನುವುದರಿಂದ ನಮ್ಮ ದೇಹಕ್ಕೆ ಸೇರ್ಪಡೆಯಾಗುವ ಪೋಷಕಾಂಶಗಳ ಪ್ರಮಾಣ ಹೆಚ್ಚು.
ಸಬ್ಜಾ ಬೀಜಗಳನ್ನು ಯಾಕೆ ನೀರಿನಲ್ಲಿ ನೆನೆಸದೆ ತಿನ್ನಬೇಕು ಗೊತ್ತೇ? ಸಬ್ಜಾ ಬೀಜಗಳು ತೀರಾ ಚಿಕ್ಕದಾದ ಕಪ್ಪಗಿನ ಬೀಜಗಳಾಗಿದ್ದು, ನೀರಿನಲ್ಲಿ ಅಥವಾ ಯಾವುದೇ ದ್ರವದಲ್ಲಿ ಹಾಕಿದ ಕೂಡಲೇ ಊದಿಕೊಳ್ಳುತ್ತವೆ. ಆದರೆ ಊದಿಕೊಳ್ಳುವ ಮೊದಲೇ ಹಾಗೆಯೇ ಹಸಿಯಾಗಿಯೇ ತಿಂದರೆ ಇದು ದೇಹ ಪ್ರವೇಶಿಸಿದ ಮೇಲೆ ಎಲ್ಲಿ ಬೇಕಾದರೂ ಹೀಗೆ ಊದಿಕೊಂಡು ಕೆಲವೊಮ್ಮೆ ಸಿಕ್ಕಿಹಾಕಿಕೊಂಡ ಅನುಭವ ಕೊಡಬಹುದು.ಹೀಗಾಗಿ ಇದನ್ನು ಯಾವಾಗಲೂ ನೀರಿನಲ್ಲಿ ನೆನೆ ಹಾಕಿಯೇ ತಿನ್ನಬೇಕು. ಒಂದು ಚಮಚ ಸಬ್ಜಾ ಬೀಜಗಳನ್ನು ನೀರಿನಲ್ಲಿ ನೆನೆಸಿ ಊಟದ ನಂತರ ಸೇವಿಸುವುದು ಒಳ್ಳೆಯದು. ಸಬ್ಜಾ ಬೀಜಗಳಿಂದ ಹಲವಾರು ಆರೋಗ್ಯಕರ ಲಾಭಗಳಿವೆ. ಅದಕ್ಕಾಗಿಯೇ ಇತ್ತೀಚೆಗಿನ ದಿನಗಳಲ್ಲಿ ಹಲವರು ಇದನ್ನು ತಮ್ಮ ನಿತ್ಯ ಆಹಾರದಲ್ಲಿ ಇದನ್ನು ಸೇರಿಸಿಕೊಂಡಿದ್ದಾರೆ.
- ನಿಮ್ಮ ದೇಹ ಉಷ್ಣ ಪ್ರಕೃತಿಯದಾಗಿದ್ದರೆ, ಸಬ್ಜಾ ಬೀಜ ಬಹಳ ಒಳ್ಳೆಯದು. ಇದು ದೇಹವನ್ನು ತಂಪು ಮಾಡುವ ಗುಣವನ್ನು ಹೊಂದಿದೆ.
- ಮದುಮೇಹಿಗಳಿಗೆ ಸಬ್ಜಾ ಬೀಜ ಒಳ್ಳೆಯದು. ದೇಹದ ಸಕ್ಕರೆಯ ಮಟ್ಟವನ್ನು ಇದು ಸಮತೋಲನದಲ್ಲಿ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.
- ಮಲಬದ್ಧತೆಯ ಸಮಸ್ಯೆ ಇರುವ ಮಂದಿಗೂ ಸಬ್ಜಾ ಬೀಜಗಳು ಅತ್ಯುತ್ತಮ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಬೆಳಗ್ಗೆ ಸರಿಯಾಗಿ ಸುಲಭವಾಗಿ ಮಲವಿಸರ್ಜನೆಯಾಗುತ್ತದೆ.
- ತೂಕ ಇಳಿಸುವ ಮಂದಿಗೂ ಸಬ್ಜಾ ಬೀಜ ಅತ್ಯುತ್ತಮ. ಎರಡು ಚಮಚ ಸಬ್ಜಾ ಬೀಜವನ್ನು ಒಂದು ಲೋಟ ನೀರಿನಲ್ಲಿ ಮೊದಲೇ ನೆನೆಸಿಟ್ಟು ಸೇವಿಸಿದರೆ, ಇದು ಜೀರ್ಣಕಾರಿ ಕಿಣ್ವಗಳನ್ನು ಬಿಡುಗಡೆ ಮಾಡುವ ಮೂಲಕ ಜೀರ್ಣಕ್ರಿಯೆ ಸರಾಗವಾಗಿ ಆಗಿ ತೂಕ ಇಳಿಕೆಗೆ ಸಹಾಯವಾಗುತ್ತದೆ. ಸಬ್ಜಾ ಬೀಜಕ್ಕೆ ತನ್ನದೇ ಆದ ರುಚಿ ಇಲ್ಲದೇ ಇರುವುದರಿಂದ ಅನೇಕ ತಿನಿಸುಗಳಿಗೆ ಹಾಗೂ ಪೇಯಗಳಿಗೆ ಬಳಸುವ ಮೂಲಕ ನಿತಯವೂ ನಿಮ್ಮ ಹೊಟ್ಟೆ ಸೇರುವಂತೆ ಮಾಡಬಹುದು. ಮಿಲ್ಕ್ ಶೇಕ್ಗಳಲಲಿ, ಸ್ಮೂದಿಗಳಲ್ಲಿ, ಲೆಮನೇಡ್ಗಳಲ್ಲಿ, ಸಲಾಡ್ ಹಾಗೂ ಡೆಸರ್ಟ್ಗಳಲ್ಲೂ ಇದನ್ನು ಬಳಸಬಹುದು.
ಇದನ್ನೂ ಓದಿ: Swim Benefits: ನಿತ್ಯವೂ ಈಜಿದರೆ ಸಾಕು; ಇದಕ್ಕಿಂತ ದೊಡ್ಡ ಬೇರೆ ವ್ಯಾಯಾಮ ಇನ್ನೊಂದು ಬೇಡ!