ಹೊರಗೆ ತಿರುಗಾಡಲು ಹೋದಾಗ, ಬಾಯಾರಿದಾಗ, ಸಿನೆಮಾ ಥೇಟರಿನಲ್ಲಿ ಕೂತಾಗ ಮಾಲ್ ಸುತ್ತಾಡಿದಾಗ ಅಥವಾ ಇನ್ನೆಲ್ಲೋ ಪ್ರವಾಸ ಹೋದಾಗ ಟೆಟ್ರಾಪ್ಯಾಕುಗಳು, ಬಾಟಲಿಗಳಲ್ಲಿರುವ ಸಿಹಿಯಾದ ಪಾನೀಯಗಳನ್ನೋ, ಕಾರ್ಬೋನೇಟೆಡ್ (Carbonated drinks) ಕೋಲಾಗಳನ್ನೋ, ಸೋಡಾಸಹಿತ ಡ್ರಿಂಕ್‌ಗಳನ್ನೋ ಹೊಟ್ಟೆಗಿಳಿಸುತ್ತೇವೆ. ಆದರೆ ಇದರಲ್ಲಿರುವ ಅತ್ಯಂತ ಹೆಚ್ಚು ಸಕ್ಕರೆಯ ಅಂಶ (sugar content) ದೇಹ ಸೇರಿ ಒಮ್ಮೆಲೇ ಹಸಿವನ್ನೂ ಬಾಯಾರಿಕೆಯನ್ನೂ ಕ್ಷಣ ಮಾತ್ರದಲ್ಲಿ ನಿವಾಳಿಸಿ ಎಸೆಯುತ್ತದೆ. ಆದರೆ ನಿಮಗೆ ಗೊತ್ತೇ? ಇದು ಕೇವಲ ಕ್ಷಣಿಕ ಮಾತ್ರ. ಇದು ಶಾಶ್ವತ ಪರಿಹಾರವಂತೂ ಅಲ್ಲ. ನಮಗೆ ಒಮ್ಮೆ ಹಸಿವು ಬಾಯಾರಿಕೆ ನಿಂತ ಅನುಭವವಾದರೂ ಇದರಿಂದ ನಮ್ಮ ದೇಹದ ಆರೋಗ್ಯದ ಮೇಲಾಗುವ ತೊಂದರೆಗಳೇ ಹೆಚ್ಚು. ಒಂದೇ ಒಂದು ಲೋಟ ಸೋಡಾದ ನಿತ್ಯಸೇವನೆಯಿಂದಲೂ ಹೃದಯದ ಕಾಯಿಲೆ (heart problems), ಮಧುಮೇಹ (Diabetes), ತೂಕದಲ್ಲಿ ಹೆಚ್ಚಳ (Weight gain), ಬೊಜ್ಜು (Fat) ಸೇರಿದಂತೆ ಹಲವು ತೊಂದರೆಗಳು ಬರಬಹುದು. ಅಷ್ಟೇ ಅಲ್ಲ, ನಿಮ್ಮ ಗಾಲ್ ಬ್ಲಾಡರ್ (Gallbladder Health) ಅಂದರೆ ಪಿತ್ತಕೋಶದ (Gallbladder problmes) ಮೇಲೆ ಇದರಿಂದಾಗುವ ದುಷ್ಪರಿಣಾಮ ಹೆಚ್ಚು.
ಪಿತ್ತಕೋಶ ಸಂಬಂಧೀ ಸಮಸ್ಯೆಗಳಿಂದ ತೊಂದರೆ ಅನುಭವಿಸುತ್ತಿರುವ ಹಾಗೂ ಪ್ರಾಣ ಕಳೆದುಕೊಂಡವರ ಪೈಕಿ ಬಹುತೇಕರಿಗೆ ನಿತ್ಯವೂ ಒಂದು ಅಥವಾ ಒಂದಕ್ಕಿಂತ ಹೆಚ್ಚು ಲೋಟ ಇಂತಹ ಡ್ರಿಂಕ್‌ಗಳನ್ನು ಸೇವಿಸುವ ಅಭ್ಯಾಸವಿತ್ತು ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ. ಕಳೆದ 20 ವರ್ಷಗಳಿಂದ ಸುಮಾರು 98 ಸಾವಿರಕ್ಕೂ ಹೆಚ್ಚು ಮಂದಿಯ ಮೇಲೆ ಈ ಅಧ್ಯಯನ ನಡೆಸಲಾಗಿದೆ.
ಹಾಗಾಗಿ, ನಿಮ್ಮ ಪಿತ್ತಕೋಶವನ್ನು ಆರೋಗ್ಯವಾಗಿ ಇಡಬೇಕಾದರೆ, ಇಂತಹ ಪೇಯಗಳಿಂದ ದೂರ ಉಳಿಯುವುದೊಂದೇ ದಾರಿ. ಹಾಗಾದರೆ ಬನ್ನಿ, ಇಂತಹ ಪೇಯಗಳನ್ನು ಕುಡಿಯುವ ಬದಲಾಗಿ ಯಾವ ಆರೋಗ್ಯಕರ ಪೇಯಗಳನ್ನು ಪರ್ಯಾಯವಾಗಿ ಕುಡಿಯುವ ಮೂಲಕ ಬಾಯಾರಿಕೆಯನ್ನು ನೀಗಿಸಿ ಪಿತ್ತಕೋಶಕ್ಕೂ ಒಳ್ಳೆಯದನ್ನೇ ಮಾಡಬಹುದು ಎಂಬುದನ್ನು ನೋಡೋಣ ಬನ್ನಿ.
1. ದ್ರಾಕ್ಷಿ ಜ್ಯೂಸ್: ದ್ರಾಕ್ಷಿ ಹಣ್ಣಿನಲ್ಲಿ ಹೆಚ್ಚಿನ ಸಕ್ಕರೆ ಇದೆ. ಹಾಗಾಗಿ ಇದು ಮಧುಮೇಹಿಗಳಿಗೆ ಒಳ್ಳೆಯದಲ್ಲ ನಿಜ. ಇದರಲ್ಲಿ ನೈಸರ್ಗಿಕ ಸಕ್ಕರೆಯ ಜೊತೆಗೆ ಸಾಕಷ್ಟು ಪ್ರಮಾಣದಲ್ಲಿ ಪೋಷಕಾಂಶಗಳೂ ಇವೆ. ಆಂಟಿ ಆಕ್ಸಿಡೆಂಟ್‌ಗಳೂ ಹೇರಳವಾಗಿವೆ. ಇದರಿಂದ ದೇಹದಲ್ಲಿರುವ ವಿಷಕಾರಕಗಳು, ಕಶ್ಮಲಗಳು ಪಿತ್ತಕೋಶದಿಂದ ಹೊರಕ್ಕೆ ಕಳಿಸಲ್ಪಡುತ್ತದೆ.
2. ಗ್ರೀನ್ ಟೀ: ಗ್ರೀನ್ ಟೀಯಲ್ಲಿ ಪಾಲಿ ಫಿನಾಲ್ ಎಂಬ ಆಂಟಿ ಆಕ್ಸಿಡೆಂಟ್ ಹೇರಳವಾಗಿರುವುದರಿಂದ ಆಲ್ಕೋಹಾಲ್ ಸೇವಿಸದಿದ್ದರೂ ಫ್ಯಾಟಿ ಲಿವರ್ ಸಮಸ್ಯೆಯಿಂದ ಬಳಲುವ ಮಂದಿಗೆ ಇದು ಸಮಸ್ಯೆಯಿಂದ ಹೊರಬರಲು ಸಹಾಯ ಮಾಡುತ್ತದೆ. ಹಾಗಾಗಿ ತಜ್ಞರು ಫ್ಯಾಟಿ ಲಿವರ್ ಸಮಸ್ಯೆಯಿರುವ ಮಂದಿಗೆ ಗ್ರೀನ್ ಟೀ ಕುಡಿಯಲು ಸಲಹೆ ಮಾಡುತ್ತಾರೆ.
3. ಕಾಫಿ: ಪಿತ್ತಕೋಶದ ಸಮಸ್ಯೆಯಿರುವ ಮಂದಿಗೆ ಹಾಗೂ ಪಿತ್ತಕೋಶದ ಆರೋಗ್ಯಕ್ಕೆ ಕಾಫಿ ಅತ್ಯಂತ ಉತ್ತಮ ಪೇಯ. ಯಾಕೆಂದರೆ ಕಾಫಿಯಲ್ಲಿ ಗ್ಲುಟಥಿಯಾನ್ ಎಂಬ ಆಂಟಿ ಆಕ್ಸಿಡೆಂಟ್ ಇದ್ದು, ಇದು ತೊಂದರೆ ಕೊಡುವ ಫ್ರೀ ರ್ಯಾಡಿಕಲ್ಸ್ ವಿರುದ್ಧ ಕಾರ್ಯ ನಿರ್ವಹಿಸಿ ಅದರಿಂದ ಮುಕ್ತಿ ನೀಡಲು ಸಹಾಯ ಮಾಡುತ್ತದೆ.
4. ಬೀಟ್‌ರೂಟ್ ಜ್ಯೂಸ್: ಬೀಟ್‌ರೂಟ್ ಎಂಬ ಸೂಪರ್‌ಫುಡ್‌ನ ಎಲ್ಲ ಬಗೆಯ ಉಪಯೋಗಗಳನ್ನೂ ನಾವು ಪಡೆಯಬೇಕಾದರೆ ಅದನ್ನು ಸಮರ್ಪಕವಾಗಿ ಬಳಸಲು ಕಲಿಯಬೇಕು. ಬೀಟ್‌ರೂಟ್‌ನ ಜ್ಯೂಸ್ ಸೇವನೆಯಿಂದ ಇದರಲ್ಲಿರುವ ನೈಟ್ರೇಟ್ ಹಾಗೂ ಬೀಟಾಲೈನ್ ಎಂಬ ಆಂಟಿ ಆಕ್ಸಿಡೆಂಟ್‌ಗಳು ಪಿತ್ತಕೋಶದ ಸಮಸ್ಯೆಗಳಿಗೆ ಪರಿಹಾರ ನೀಡುತ್ತವೆ.
5. ನಿಂಬೆ ಜ್ಯೂಸ್: ನಿಂಬೆಹಣ್ಣಿನ ಪಾನಕ ದೇಹದಿಂದ ಕಲ್ಮಶಗಳನ್ನು ಹೊರಕ್ಕೆ ಕಳಿಸುವಲ್ಲಿ ಮುಖ್ಯ ಪಾತ್ರ ವಹಿಸುವ ಪಾನೀಯ. ಇದರಲ್ಲಿರುವ ವಿಟಮಿನ್ ಸಿ ಹಾಗೂ ಆಂಟಿ ಆಕ್ಸಿಡೆಂಟ್‌ಗಳು ಹಲವು ಬಗೆಯ ಪಿತ್ತಕೋಶ ಸಮಸ್ಯೆಗಳನ್ನು ಬರದಂತೆ ತಡೆಯುತ್ತದೆ.
ಇದನ್ನೂ ಓದಿ: Fatty Liver Disease Foods: ಫ್ಯಾಟಿ ಲಿವರ್ ಸಮಸ್ಯೆಯೇ? ಆಹಾರ ಹೀಗಿರಲಿ