ಮಾಗಿಯಲ್ಲಿ ಚಳಿಯೊಂದಿಗೆ ಉಚಿತವಾಗಿ ದೊರೆಯುವುದೆಂದರೆ ಸೀನು, ಸೋರುವ ಮೂಗು, ಕೆರೆಯುವ ಗಂಟಲು, ಕೆಮ್ಮು, ಆಗೀಗ ಬೆಚ್ಚಗಾಗುವ ಮೈ. ಇಂಥ ದಿನಗಳಲ್ಲೇ ಬಿಸಿಬಿಸಿ ಚಹಾ ಹೀರುವ ಮನಸ್ಸಾಗುವುದು. ಹೊಟ್ಟೆಯೊಳಗಿಂದ ತಲೆಯೆತ್ತುವ ನಡುಕದ ಹೆಡೆ ಮಡಿಸುವುದಕ್ಕೆ ಒಂದು ಖಡಕ್ ಚಹಾ ಎಂಬ ಅಸ್ತ್ರ ಸಾಕಾಗುತ್ತದೆ. ಬಿಸಿ ಚಹಾ ಎಂದರೆ ಹಾಲಿನೊಂದಿಗಿನ ಇಂಗ್ಲಿಷ್ ಚಹಾನೇ ಆಗಬೇಕೆಂದಿಲ್ಲ. ಯಾವುದೋ ಹರ್ಬಲ್ ಟೀ, ಗ್ರೀನ್ ಟೀ, ಲೆಮೆನ್ ಟೀ ಮುಂತಾದ ಎಂಥದ್ದೂ ಆಗಬಹುದು. ಘಮಿಸುವ ಬಿಸಿ ಚಹಾ ಹೀರುವುದು ಚಳಿ ಓಡಿಸುವುದಕ್ಕೆ ಮಾತ್ರವಲ್ಲ, ಆರೋಗ್ಯಕ್ಕೆ ಲಾಭಗಳನ್ನು (Tea For Winter) ತರುವುದಕ್ಕೂ ಬೇಕು. ಏನಂಥ ಪ್ರಯೋಜನಗಳಿವೆ ಇದರಿಂದ?
ನಮ್ಮ ಪ್ರತಿರೋಧಕ ಶಕ್ತಿ ಮತ್ತು ಚಹಾ ನಡುವಿನ ಬಾಂಧವ್ಯದ ಬಗ್ಗೆ ತಿಳಿಯದಿದ್ದರೆ ನಮ್ಮ ಮಾಹಿತಿ ಅಪೂರ್ಣ. ಹೆಚ್ಚುವ ಚಳಿಯು ಫ್ಲೂ ವೈರಸ್‌ಗಳಿಗೆ ಆಹ್ವಾನ ನೀಡುತ್ತಿದ್ದರೆ, ಹೊಟ್ಟೆ ಸೇರುವ ಚಹಾ ಪ್ರತಿರೋಧಕ ಶಕ್ತಿಯನ್ನು ಸಜ್ಜು ಮಾಡುತ್ತಿರುತ್ತದೆ. ಹಾಗಾಗಿ ಸೋಂಕುಗಳಿಗೆ ಮತ್ತು ಬಿಸಿ ಚಹಾಗೆ ಒಂಥರಾ ಎಣ್ಣೆ-ಸೀಗೆಕಾಯಿ ನಂಟು. ಹಾಗಾಗಿ ದೇಹದೊಳಗಿನ ತಪ್ತ ಕೋಶಗಳಿಗೆಲ್ಲಾ ಪುಟ್ಟದೊಂದು ಬೆಚ್ಚನೆಯ ಸ್ವೆಟರ್ ಹಾಕಿದಂತೆ ಈ ಬಿಸಿ ಚಹಾ ಹೀರುವುದು.
ಗ್ರೀನ್ ಟೀ
ಉಳಿದೆಲ್ಲಾ ಚಹಾಗಳಿಗೆ ಹೋಲಿಸಿದರೆ ದೇಹಕ್ಕೆ ಲಾಭ ತರುವುದರಲ್ಲಿ ಗ್ರೀನ್ ಟೀ ಅಗ್ರಗಣ್ಯ. ಹಲವರು ರೀತಿಯ ಉತ್ಕರ್ಷಣ ನಿರೋಧಕಗಳು ತುಂಬಿ ತುಳುಕುವ ಗ್ರೀನ್ ಟೀಯನ್ನು ಮೂಗು ಸೋರುವ ದಿನಗಳಲ್ಲಿ ಗುಟುಕರಿಸುವುದೆಂದರೆ, ಪ್ರವಾಹ ಪೀಡಿತ ಪ್ರದೇಶಗಳಿಗೆ ವಿಶೇಷ ಕಾರ್ಯಪಡೆಯನ್ನು ರವಾನಿಸಿದಂತೆ. ದೇಹದ ಚಯಾಪಚಯವನ್ನು ಹೆಚ್ಚಿಸಿ, ತೂಕ ಇಳಿಸುವವರ ಸಂಗಾತಿ ಎನಿಸಿದೆ. ಜೊತೆಗೆ, ಮಾಮೂಲಿ ಚಹಾಗೆ ಹೋಲಿಸಿದರೆ ಅತಿ ಕಡಿಮೆ ಪ್ರಮಾಣದ ಕೆಫೇನ್ ಇದರಲ್ಲಿ ಇರುವುದು. ಹಾಗಾಗಿ ಗ್ರೀನ್ ಟೀ ಗುಟುಕರಿಸುವುದಕ್ಕೆ ಹಿಂಜರಿಯಬೇಡಿ.
ಮಸಾಲೆ ಚಹಾ
ಭಾರತೀಯರೆಂದರೆ ಮಸಾಲೆಯಲ್ಲೇ ಹುಟ್ಟಿ, ಬೆಳೆದು, ಮುದುಕರಾಗಿ, ಮಣ್ಣು ಸೇರುವವರು! ಹಾಗಿರುವಾಗ ಮಸಾಲೆಯಿಲ್ಲದ ಚಹಾ ನಮ್ಮ ರಸನೆಗಳಿಗೆ ರುಚಿಸೀತು ಹೇಗೆ? ಇದು ರುಚಿಯ ವಿಷಯ ಮಾತ್ರವಲ್ಲ, ಆರೋಗ್ಯಕ್ಕೆ ಪ್ರಯೋಜನದ ವಿಚಾರವೂ ಹೌದು. ಖಡಕ್ ಆದ ಶುಂಠಿ ಅಥವಾ ಪರಿಮಳಯುಕ್ತ ದಾಲ್ಚಿನ್ನಿ, ಏಲಕ್ಕಿ ಮುಂತಾದವು ಚಹಾದೊಂದಿಗೆ ಮಿಳಿತವಾದಾಗ ಉಂಟಾಗುವ ಸ್ವಾದವು ನಾಲಿಗೆಯನ್ನೂ ದಾಟಿ ಜಠರಕ್ಕಿಳಿದು ಪರಿಣಾಮ ಬೀರುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ; ಜೀರ್ಣಾಂಗಗಳ ಕೆಲಸವನ್ನು ಚುರುಕಾಗಿಸುತ್ತದೆ. ಗಟ್ಟಿಮುಟ್ಟಾದ ಜೀರ್ಣಾಂಗಗಳಿದ್ದರೆ ಜಟ್ಟಿಯಂಥ ಆರೋಗ್ಯ ಲಭಿಸದಿದ್ದೀತೆ? ಹಾಗಾಗಿ ಚಳಿಯಲ್ಲೊಂದು ಮಸಾಲೆ ಚಹಾ ಹೊಟ್ಟೆಗಿಳಿಸಿ, ಸೋಂಕುಗಳ ವಿರುದ್ಧ ರಟ್ಟೆ ತಟ್ಟಿ!
ಹರ್ಬಲ್ ಚಹಾ
ಘಮಿಸುವ ಪುದೀನಾ, ರೋಸ್‌ಮೆರಿ, ಬೆಸಿಲ್ ಮುಂತಾದ ಯಾವುದೇ ಚಹಾಗಳನ್ನು ಡಿಪ್ ಮಾಡಿ, ಬಿಸಿ ಹಬೆಯನ್ನು ಆಘ್ರಾಣಿಸುತ್ತಲೇ ತುಟಿಗಿಟ್ಟರೆ… ಸ್ವರ್ಗಕ್ಕೆ ಕಿಚ್ಚು! ಇಂಥ ಚಹಾಗಳು ಜಿಹ್ವೆಯನ್ನು ಚುರುಕಾಗಿಸುವುದು ಮಾತ್ರವಲ್ಲ, ದೇಹದೊಳಗಿನ ಸೈನಿಕರನ್ನೂ ಪ್ರಚೋದಿಸುತ್ತವೆ. ದೇಹವನ್ನು ನೈಸರ್ಗಿಕವಾಗಿಯೇ ಬೆಚ್ಚಗಿರಿಸುತ್ತವೆ. ಇವೆಲ್ಲವುಗಳ ಫಲವಾಗಿ ಚಳಿಯಲ್ಲಿ ಆರಾಮದ ಭಾವವನ್ನು ಬಡಿದೆಬ್ಬಿಸಿ, ಮೂಡ್ ಸುಧಾರಿಸಿ, ಭಾವನಾತ್ಮಕವಾಗಿಯೂ ಮದ್ದರೆಯುತ್ತವೆ.
ಪಟ್ಟಿ ದೊಡ್ಡದಿದೆ
ಇದಲ್ಲದೆ, ಅನಾರೋಗ್ಯದ ದಿನಗಳಲ್ಲಿ ದೇಹಕ್ಕೆ ನೀರು ಹೆಚ್ಚಾಗಿಯೇ ಬೇಕು. ಹಾಗೆಂದು ಸುಮ್ಮನೆ ತಣ್ಣೀರು ಕುಡಿಯಲಾಗದು. ಬಿಸಿ ನೀರು ಕೆಲವೊಮ್ಮೆ ಗಂಟಲಲ್ಲಿ ಇಳಿಯುವುದಿಲ್ಲ. ಇಂಥ ಸಂದರ್ಭದಲ್ಲಿ ಗ್ರೀನ್ ಟೀ, ಹರ್ಬಲ್ ಟೀಗಳು ದೇಹಕ್ಕೆ ಅಗತ್ಯವಾದ ನೀರುಣಿಸುತ್ತವೆ. ಇವುಗಳಿಂದ ಹೊರಡುವ ಘಮಿಸುವ ಆವಿಯು ಕಟ್ಟಿದ ಮೂಗಿಗೆ ಆರಾಮ ನೀಡುತ್ತದೆ.
ಶುಂಠಿ, ಪುದೀನಾ, ನಿಂಬೆಹುಲ್ಲು, ತುಳಸಿ, ಜೇನುತುಪ್ಪ, ನಿಂಬೆಹಣ್ಣು ಮುಂತಾದವುಗಳ ಚಹಾಗಳು ಬಿಗಿದ ಕಫ ಸಡಿಲ ಮಾಡುವುದಕ್ಕೆ ನೆರವಾಗುತ್ತವೆ. ಕಟ್ಟಿದ ಮೂಗು, ಉರಿಯುವ ಗಂಟಲಿಗೆ ಆರಾಮ ನೀಡುತ್ತವೆ. ಅಜೀರ್ಣ, ಹೊಟ್ಟೆಯುಬ್ಬರ ಮುಂತಾದ ಜೀರ್ಣಸಂಬಂಧಿ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತವೆ. ತೂಕ ಇಳಿಸುವವರಿಗೆ ಅನುಕೂಲವಾಗುವಂತೆ ದೇಹದ ಚಯಾಪಚಯ ಹೆಚ್ಚಿಸುತ್ತವೆ. ಹಾಗಾಗಿ ಚಳಿಯೆಂದು ಮುದುರಿ ಕೂರುವ ಬದಲು ಬಿಸಿಯಾದ ಚಹಾ ಗುಟುಕರಿಸಿ, ಚೈತನ್ಯ ಬಡಿದೆಬ್ಬಿಸಿ.
ಇದನ್ನೂ ಓದಿ: Quick Weight Loss Hazards: ತೂಕ ಇಳಿಸುವ ಗಡಿಬಿಡಿಯಲ್ಲಿದ್ದೀರಾ? ನಿಧಾನಿಸಿ!