ಹಿತ್ತಲ ಗಿಡ ಮದ್ದಲ್ಲ ಎಂಬ ಮಾತನ್ನು ನಾವೆಲ್ಲರೂ ಕೇಳಿಯೇ ಇದ್ದೇವೆ. ಅಂದರೆ ಸುಲಭವಾಗಿ, ಮನೆಯೆಂಬಲ್ಲಿ ದೊರೆಯುವ ವಸ್ತುಗಳ ಮೌಲ್ಯ ನಮಗೆ ತಿಳಿಯದೇ ಇರುವುದಂತೂ ಹೌದು. ಎಷ್ಟೋ ಮನೆಗಳ ಅಂಗಳ, ಬಾಲ್ಕನಿ, ಟೆರೆಸ್‌ನಲ್ಲಿ ಬೆಳೆಸಲಾಗುವ ಈ ಬಳ್ಳಿಯಲ್ಲಿ ನೇರಳೆ ಬಣ್ಣದ ಹೂವುಗಳನ್ನು ಕಾಣುವುದು ಅಪರೂಪವೇನಲ್ಲ. ಕೆಲವೊಮ್ಮೆ ಒಂದೇ ಎಸಳು ಸುತ್ತಿದಂಥ ಹೂವು, ಕೆಲವೊಮ್ಮೆ ಹಲವು ಎಸಳುಗಳು ಸುರುಳಿಯಾದಂಥ ಹೂವುಗಳನ್ನು ಶಂಖಪುಷ್ಪ, ವಿಷ್ಣುಕ್ರಾಂತ, ಗಿರಿಕರ್ಣಿ ಮುಂತಾದ ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ದೇವರ ಮುಡಿಗೆ ಏರಿಸಲು ಮಾತ್ರವಲ್ಲದೆ, ಬಹೂಪಯೋಗಿಯಾಗಿರುವ ಈ ಗಿಡದ ಪ್ರವರಗಳೇನು ನೋಡೋಣ.
ಇಂಗ್ಲಿಷ್‌ನಲ್ಲಿ ಬಟರ್‌ಫ್ಲೈ ಪೀ (Butterfly Pea) ಎಂದೇ ಕರೆಸಿಕೊಳ್ಳುವ ಈ ಸಸ್ಯದ ವೈಜ್ಞಾನಿಕ ಹೆಸರು Clitoria Ternatea. ಮೂಲತ ಏಷ್ಯಾ ಖಂಡವೇ ಇದರ ತವರುಮನೆ. ಭಾರತೀಯ ಪ್ರಾಚೀನ ವೈದ್ಯ ಪದ್ಧತಿ ಮತ್ತು ಚೀನಾದ ವೈದ್ಯ ಪದ್ಧತಿಗಳಲ್ಲಿ ಇದರ ಬಳಕೆ ವ್ಯಾಪಕವಾಗಿದೆ. ಇತ್ತೀಚಿನ ದಿನಗಳಲ್ಲಿ ಬ್ಲೂ ಫ್ಲವರ್ ಟೀ (Blue flower tea) ಎಂದೇ ಪ್ರಚಲಿತದಲ್ಲಿರುವ ಶಂಖಪುಷ್ಪ ಹೂವಿನ ಚಹಾ ಬಹಳಷ್ಟು ಸದ್ಗುಣಗಳಿಂದ ಕೂಡಿದೆ. ನೋಡುವುದಕ್ಕೆ ಕಣ್ತಣಿಸುವ ನೀಲಿ ಬಣ್ಣದ ಈ ಆರೋಗ್ಯಕರ ಚಹಾ ಯಾರನ್ನೂ ಆಕರ್ಷಿಸುವಂತಿರುತ್ತದೆ. ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಚುರುಕುಗೊಳಿಸಿ, ಚಳಿಗಾಲದ ಆನಾರೋಗ್ಯಗಳನ್ನೆಲ್ಲಾ ಹೊಡೆದೋಡಿಸುವ ಸಾಮರ್ಥ್ಯವುಳ್ಳ ಪೇಯವಿದು.
ಮೆದುಳಿನ ಚೋದಕ: ಮೆದುಳಿನ ಶಕ್ತಿಯನ್ನು ಹೆಚ್ಚಿಸುವಲ್ಲಿ ಇದರ ಸಾಮರ್ಥ್ಯ ಅಪಾರ. ನೆನಪಿನ ಶಕ್ತಿ ವೃದ್ಧಿಸಿ, ಮೂಡ್ ಸುಧಾರಿಸಿ, ಒತ್ತಡ ನಿವಾರಿಸಿ, ಖಿನ್ನತೆಯನ್ನು ಶಮನಗೊಳಿಸುತ್ತದೆ ಎನ್ನುವುದು ಆಯುರ್ವೇದ ಪರಿಣಿತರ ಮಾತು. ಅಲ್‌ಜೈಮರ್ಸ್ ರೋಗಿಗಳ ಮೇಲೆ ಇದರ ಪರಿಣಾಮದ ಬಗ್ಗೆ ಸಂಶೋಧನೆ ಪ್ರಗತಿಯಲ್ಲಿದೆ.
ರೋಗನಿರೋಧಕ ಶಕ್ತಿ ಹೆಚ್ಚಳ: ಇದರಲ್ಲಿರುವ ಆಂಥೋಸಯನಿನ್ ಎಂಬ ಆಂಟಿ ಆಕ್ಸಿಡೆಂಟ್‌ಗಳು ಪ್ರಬಲವಾದ ರೋಗನಿರೋಧಕಗಳು. ಮಾತ್ರವಲ್ಲ, ದೇಹದಲ್ಲಿನ ಉರಿಯೂತ, ಕೀಲುಗಳಲ್ಲಿನ ನೋವುಗಳನ್ನು ಶಮನ ಮಾಡುವ ಸಾಮರ್ಥ್ಯ ಹೊಂದಿವೆ. ಇದರಲ್ಲಿರುವ ಅಪಾರ ಪ್ರಮಾಣದ ಆಂಟಿ ಆಕ್ಸಿಡೆಂಟ್‌ಗಳಿಂದ ಇದಕ್ಕೆ ಕ್ಯಾನ್ಸರ್ ನಿರೋಧಕ ಗುಣವೂ ಇದೆ ಎನ್ನುತ್ತಾರೆ ವಿಜ್ಞಾನಿಗಳು. ಈ ಬಗ್ಗೆ ಪ್ರಾಣಿಗಳ ಮೇಲೆ ನಡೆಸಲಾದ ಪ್ರಯೋಗಗಳಲ್ಲಿ ಈ ಅಂಶ ದೃಢಪಟ್ಟಿದೆ
ಮಧುಮೇಹಿಗಳ ಮಿತ್ರ: ಇದರ ಹೈಪೋಗ್ಲೈಸೆಮಿಕ್ ಸತ್ವದಿಂದಾಗಿ ಮಧುಮೇಹಿಗಳಿಗೂ ಇದು ಉತ್ತಮ ಆಯ್ಕೆ. ಯಕೃತ್ತಿನ ಮೇಲೂ ಇದರ ಪರಿಣಾಮ ಧನಾತ್ಮಕವಾಗಿದೆ. ಜೊತೆಗೆ, ದೇಹದಲ್ಲಿ ಇರುವ ಸೋಂಕುಗಳ ನಿವಾರಣೆ ಮಾಡುವಂಥ ಗುಣಗಳೂ ಇದರ ಪಟ್ಟಿಯಲ್ಲಿವೆ.
ಶ್ವಾಸಕೋಶಕ್ಕೆ ಬಲ: ನೀಲಿ ಅಥವಾ ನೇರಳೆ ಹೂವಿನಲ್ಲಿ ಶ್ವಾಸಕೋಶಗಳನ್ನು ಸಬಲಗೊಳಿಸುವ ಸಾಮರ್ಥ್ಯವಿದೆ. ಅದರಲ್ಲೂ ಚಳಿಗಾಲದಲ್ಲಿ ಕಾಡುವ ಅಸ್ತಮಾ, ನೆಗಡಿ, ಕೆಮ್ಮು ಮುಂತಾದ ಸಮಸ್ಯೆಗಳಿಗೆ ನೀಲಿ ಚಹಾ ತೀಕ್ಷ್ಣ ಪರಿಹಾರ. ಮಾತ್ರವಲ್ಲ, ದೇಹದಲ್ಲಿರುವ ನಿಶ್ಶಕ್ತಿಯನ್ನು ಹೋಗಲಾಡಿಸುವುದಕ್ಕೂ ಇದನ್ನು ಬಳಸಲಾಗುತ್ತದೆ.
ದೃಷ್ಟಿಗೆ ಉತ್ತಮ: ಇದರಲ್ಲಿರುವ ಆಂಥೋಸಯನಿನ್‌ಗಳು ಕಣ್ಣಿನ ಭಾಗಕ್ಕೆ ರಕ್ತಸಂಚಾರ ಹೆಚ್ಚುವಂತೆ ಮಾಡುತ್ತವೆ. ಇದರಿಂದ ಕಣ್ಣುಗಳ ಆಯಾಸ, ದೃಷ್ಟಿ ಮಂದವಾಗುವುದು, ರೆಟಿನಾಗೆ ಹಾನಿಯಾದಂಥ ಸಂದರ್ಭಗಳಲ್ಲಿ ಇವು ಪ್ರಯೋಜನ ನೀಡಬಲ್ಲವು.
ನೋವು- ಜ್ವರ ನಿವಾರಣೆ: ಇದೊಂದು ನೈಸರ್ಗಿಕ ಪ್ಯಾರಸೆಟಮಾಲ್. ಹಾಗಾಗಿ ಜ್ವರ-ಮೈಕೈ ನೋವು ಇದ್ದಾಗ ಈ ಚಹಾ ಉಪಯೋಗವಾಗುತ್ತದೆ. ದೇಹದ ರಕ್ತ ಪರಿಚಲನೆಯನ್ನು ಉತ್ತಮಗೊಳಿಸುವ ಮೂಲಕ ಹಲವಾರು ಇಂಥ ಸಮಸ್ಯೆಗಳಿಗೆ ಈ ಸಸ್ಯ ಮತ್ತಿದರ ಚಹಾ ಉಮಶಮನ ನೀಡಬಲ್ಲದು. ಆದರೆ ಈ ಬಗ್ಗೆ ಇನ್ನಷ್ಟು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ.
ಇದನ್ನೂ ಓದಿ| Health Tips | ಹೊಸ ವರ್ಷದ ಕನಸು ಗುರಿಗಳ ಪೈಕಿ ಇವಿಷ್ಟು ವರ್ಷಪೂರ್ತಿ ಮುಖ್ಯವಾಗಿರಲಿ!