ಬೇಸಿಗೆಯಲ್ಲಿ ಚರ್ಮದ ಆಯ್ಕೆ ಕಷ್ಟ. ಹೊರಗೆ ತಿರುಗಾಡಿಕೊಂಡು ಬಂದ ಮೇಳೆ ಚರ್ಮಕ್ಕೆ ಸರಿಯಾದ ಕಾಳಜಿ ಆರೈಕೆ ಬೇಕು. ಬಿಸಿಲಿನ ಝಳಕ್ಕೆ, ಧೂಳು, ಬೆವರಿಗೆ ಚರ್ಮ ಅನುಭವಿಸುವ ಸಮಸ್ಯೆಗಳು ಒಂದೆರಡಲ್ಲ. ಹಾಗಾದರೆ, ಬನ್ನಿ, ಈ ಕೆಳಗಿನ ಪಂಚಸೂತ್ರಗಳ ಮೂಲಕ ಬೇಸಿಗೆಯಲ್ಲಿ ಚರ್ಮವನ್ನು ಆರೋಗ್ಯಕರವಾಗಿ ಹೇಗಿಟ್ಟುಕೊಳ್ಳಬಹುದು (Skin Care) ಎಂಬುದನ್ನು ನೋಡೋಣ.
1. ನಿಮ್ಮ ಮುಖವನ್ನು ಆಗಾಗ ತಣ್ಣೀರಿನಿಂದ ತೊಳೆದುಕೊಳ್ಳಿ. ಬೇಸಿಗೆಯಲ್ಲಿ ಧೂಳು, ಬೆವರು ಇತ್ಯಾದಿಗಳಿಂದ ಮುಖ ಕೊಳೆಯಾಗುವುದು ಹೆಚ್ಚು. ಆಗುವುದಿದ್ದರೆ, ತಣ್ಣಗಿನ ಹಾಲಿನಲ್ಲಿ ಹತ್ತಿಯ ಉಂಡೆಯನ್ನು ಅದ್ದಿ ಮುಖವನ್ನು ಮೃದುವಾಗಿ ಉಜ್ಜಿ ಕೊಳೆಯನ್ನು ತೆಗೆಯಿರಿ. ಸೂರ್ಯನ ಯುವಿ ಕಿರಣಗಳಿಂದ ನಿಮ್ಮ ಚರ್ಮವನ್ನು ರಕ್ಷಿಸುವ ಕ್ರೀಮನ್ನು ಮುಖಕ್ಕೆ ಬಳಸಿ. ಮನೆಯಿಂದ ಹೊರ ಕಾಲಿಡುವ ಸ್ವಲ್ಪ ಹೊತ್ತಿಗೆ ಮುಂಚೆ, ಕಡಿಮೆಯೆಂದರೆ 30 ಎಸ್‌ಪಿಎಫ್ ಗಿಂತ ಹೆಚ್ಚಿರುವ ಸನ್‌ಸ್ಕ್ರೀನ್ ಲೋಶನ್ ಅನ್ನು ಮುಖಕ್ಕೆ ಹಚ್ಚಿಕೊಳ್ಳುವುದನ್ನು ಮರೆಯಬೇಡಿ.
2. ವಾರಕ್ಕೆರಡು ಬಾರಿ ಚರ್ಮಕ್ಕೆ ಸರಿಯಾದ ಮಸಾಜ್‌ಯುಕ್ತ ಆರೈಕೆ ಬೇಕು. ಕಡಲೇ ಹಿಟ್ಟು ಹಾಗೂ ಹಾಲನ್ನು ಬೆರೆಸಿ ಪೇಸ್ಟ್ ಮಾಡಿಟ್ಟುಕೊಂಡು ವಾರಕ್ಕೆರಡು ಬಾರಿ ಮುಖ ಹಾಗೂ ಕುತ್ತಿಗೆಗೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ. ಈ ಪೇಸ್ಟ್‌ಗೆ ಓಟ್‌ಮೀಲ್, ನಿಂಬೆರಸ ಹಾಗೂ ಅರಿಶಿನ ಪುಡಿಯನ್ನೂ ಸ್ವಲ್ಪ ಸೇರಿಸಿಕೊಳ್ಳಬಹುದು. ತೊಳೆಯುವಾಗ ಒಣಗಿದ ಮುಖಕ್ಕೆ ನೀರು ಚುಮುಕಿಸಿ, ಪೇಸ್ಟ್‌ನಿಂದ ವರ್ತುಲಾಕಾರದಲ್ಲಿ ಮುಖಕ್ಕೆ ಮಸಾಜ್ ಮಾಡಿ ಆಮೇಲೆ ತೊಳೆಯಿರಿ. ಮುಲ್ತಾನಿ ಮಿಟ್ಟಿ, ಗುಲಾಬಿ ನೀರು ಹಾಗೂ ಗಂಧದ ಪುಡಿಯನ್ನು ಮಿಶ್ರಣ ಮಾಡಿ ಅದಕ್ಕೆ ಚಿಟಿಕೆ ಅರಿಶಿನ ಸೇರಿಸಿ ಪೇಸ್ಟ್ ಮಾಡಿ, ಮೊಡವೆಯುಕ್ತ ಚರ್ಮದವರು ಲೇಪಿಸಿಕೊಳ್ಳಬಹುದು. ವಾರಕ್ಕೆರಡು ಬಾರಿಯಾದರೂ ಹೀಗೆ ಮಾಡಿಕೊಳ್ಳಬಹುದು.
3. ಮುಖವನ್ನು ಶುಭ್ರವಾಗಿ ಇರಿಸಿಕೊಳ್ಳುವುದು ಬಹಳ ಮುಖ್ಯ. ಮೊಸರು ಹಾಗೂ ಜೇನುತುಪ್ಪ ಕಲಸಿಕೊಂಡು ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಹೊತ್ತು ಬಿಟ್ಟು ತೊಳೆದುಕೊಳ್ಳಬಹುದು. ಇದು ಮುಖಕ್ಕೆ ಅತ್ಯುತ್ತಮ ಕ್ಲೆನ್ಸಿಂಗ್. ದಿನವೂ ಕ್ಲೆನ್ಸ್ ಮಾಡಿಕೊಂಡು ಮಾಯ್‌ಶ್ಚರೈಸರ್ ಹಚ್ಚಿಕೊಳ್ಳುವುದನ್ನು ಮಾತ್ರ ಮರೆಯಬಾರದು. ಮುಖದಲ್ಲಿ ನೀರಿನಂಶ ಉಳಿಸಿಕೊಳ್ಳಲು, ಬಿರುಕಾಗದೆ ನಯವಾಗಿರಲು ಯಾವುದೇ ಕಾಲವಿದ್ದರೂ ಮುಖಕ್ಕೆ ಮಾಯ್‌ಶ್ಚರೈಸರ್ ಬೇಕೇ ಬೇಕು. ನಿಮ್ಮದು ಜಿಡ್ಡಿನ ಚರ್ಮವಾಗಿದ್ದರೆ ಜೆಲ್ ಬೇಸ್ ಮಾಯ್‌ಶ್ಚರೈಸರ್ ಹಾಗೂ ಸಾಮಾನ್ಯ ಚರ್ಮವಾಗಿದ್ದರೆ ವಾಟರ್ ಬೇಸ್ ಇರುವ ಮಾಯ್‌ಶ್ಚರೈಸರ್ ಬಳಸುವುದು ಸೂಕ್ತ. ನಿಮ್ಮ ಚರ್ಮಕ್ಕೆ ಹೊಂದುವ ಆಯ್ಕೆ ನಿಮ್ಮದು.
ಇದನ್ನೂ ಓದಿ: Skin Care: ಋತುಬಂಧದ ನಂತರ ಚರ್ಮದ ಆರೈಕೆ ಹೇಗಿರಬೇಕು?
4. ಬೇಸಿಗೆಯಲ್ಲಿ ಕಾಡುವ ಇನ್ನೊಂದು ತೊಂದರೆ ಎಂದರೆ ಚರ್ಮ ಸೂರ್ಯನ ಬಿಸಿಲಿಗೆ ಟ್ಯಾನ್ ಆಗುವುದು. ಸೂರ್ಯನ ಬಿಸಿಲಿನ ಝಳಕ್ಕೆ ಚರ್ಮ ಕಪ್ಪಾಗೊಬಿಡುವ ಈ ಸಮಸ್ಯೆಗೆ ಸಾಕಷ್ಟು ಕಾಳಜಿ ಬೇಕಾಗುತ್ತದೆ. ಇದಕ್ಕೆ ಬೆಸ್ಟ್ ಉಪಾಯ ಎಂದರೆ ಟೊಮೇಟೋ ರಸ. ಟೊಮೇಟೋ ರಸ ಹಾಗೂ ನಿಂಬೆರಸವನ್ನು ಸೇರಿಸಿ ಮುಖಕ್ಕೆ ಹಚ್ಚಬಹುದು. ನಿಮ್ಮ ಚರ್ಮ ತೀರ ಒಣ ಚರ್ಮವಾಗಿದ್ದರೆ ಈ ರಸದ ಮಿಶ್ರಣಕ್ಕೆ ಸ್ವಲ್ಪ ಗಂಧದ ಪುಡಿ ಸೇರಿಸಿ ಪೇಸ್ಟ್ ಮಾಡಿ ಹಚ್ಚಿ. ನಿಮ್ಮದು ಜಿಡ್ಡಿನ ಹಾಗೂ ಮೊಡವೆಯುಕ್ತ ಚರ್ಮವಾಗಿದ್ದರೆ ಮುಲ್ತಾನಿ ಮಿಟ್ಟಿ ಸೇರಿಸಿ ಹಚ್ಚಿ. 10 ನಿಮಿಷ ಬಿಟ್ಟು ತೊಳೆಯಿರಿ. ಅಥವಾ ಜೇನುತುಪ್ಪಕ್ಕೆ ನಿಂಬೆರಸ ಸೇರಿಸಿಯೂ ಹಚ್ಚಬಹುದು. ಸೂರ್ಯನ ಬಿಸಿಲಿಗೆ ಬಾಡಿದ ಚರ್ಮಕ್ಕೆ ಚೈತನ್ಯದಾಯಕ ಉಪಾಯ ಇನ್ನೊಂದಿದೆ. ಹಸಿ ಹಾಲಿಗೆ ಸ್ವಲ್ಪ ಕಡಲೆಹಿಟ್ಟು ಸೇರಿಸಿ ಅದಕ್ಕೆ ಮೂರ್ನಾಲ್ಕು ಹನಿ ನಿಂಬೆರಸ ಸೇರಿಸಿ ಹಚ್ಚಿಕೊಂಡು ವರ್ತುಲಾಕಾರದಲ್ಲಿ ಮಸಾಜ್ ಮಾಡಿಕೊಳ್ಳಿ. ನಂತರ ಅದನ್ನು ಒಣಗಲು ಬಿಡಿ. 10 ನಿಮಿಷ ಬಿಟ್ಟು ತೊಳೆಯಿರಿ. ನಿಂಬೆರಸ ನೈಸರ್ಗಿಕ ಬ್ಲೀಚ್ ಆಗಿ ಕೆಲಸ ಮಾಡುವುದರಿಂದ ಇದು ಟ್ಯಾನ್ ತೆಗೆಯಲು ಅತ್ಯುತ್ತಮ. ಆದರೆ ನೇರವಾಗಿ ನಿಂಬೆರಸ ಹಚ್ಚಿಕೊಳ್ಳಬೇಡಿ. ಜೊತೆಗೆ ಮುಖ ತೊಳೆದುಕೊಂಡಾದ ಮೇಲೆ ಮಾಯ್‌ಶ್ಚರೈಸರ್ ಹಚ್ಚಿಕೊಳ್ಳುವುದನ್ನು ಮರೆಯಬೇಡಿ.
5. ಇವಕ್ಕೆಲ್ಲ ಸಮಯವಿಲ್ಲದಿದ್ದರೆ, ಟ್ಯಾನ್ ತೆಗೆಯಲು ನಿತ್ಯವೂ ಅಲೊವಿರಾ ಅಥವಾ ಲೋಳೆಸರ ಅತ್ಯುತ್ತಮ ಪರಿಹಾರ. ಮನೆಯಲ್ಲಿ ಅಲೊವೆರಾ ಗಿಡವಿದ್ದರೆ ಅದರಿಂದ ಜೆಲ್ ತೆಗೆದು ಅದನ್ನು ಮಿಕ್ಸಿಯಲ್ಲಿ ಸ್ವಲ್ಪ ನೀರು ಹಾಕಿ ರುಬ್ಬಿಕೊಂಡು ಐಸ್ ಟ್ರೇಯಲ್ಲಿ ಹಾಕಿಟ್ಟು ಕ್ಯೂಬ್‌ಗಳಾಗಿ ಮಾಡಿಟ್ಟುಕೊಂಡಿರಿ. ನಿತ್ಯವೂ ಇದನ್ನು ಮುಖಕ್ಕೆ ಉಜ್ಜಿಕೊಳ್ಳುದರಿಂದ ಉತ್ತಮ ಪರಿಹಾರ ಕಾಣಬಹುದು. ಮಾರುಕಟ್ಟೆಯಲ್ಲಿ ಲಭ್ಯವಿರುವ ಅಲೊವೆರಾ ಜೆಲ್ ಕೂಡಾ ಟ್ಯಾನ್ ತೆಗೆಯಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Skin Care: ಕೊಲಾಜೆನ್‌ಯುಕ್ತ ಆಹಾರ ಸೇವಿಸಿ: ಸಹಜ ಸೌಂದರ್ಯದಿಂದ ಕಂಗೊಳಿಸಿ!