Site icon Vistara News

Skin Health Tips: ಚರ್ಮದ ಆರೋಗ್ಯಕ್ಕೂ ಕಾರ್ಬೋನೇಟೆಡ್‌ ಪೇಯಗಳಿಗೂ ಏನು ಸಂಬಂಧ ಗೊತ್ತೇ?

carbonated drink

ನಮ್ಮ ಚರ್ಮದ ಆರೋಗ್ಯದ (skin care) ಮೇಲೆ ಹತ್ತು ಹಲವು ಅಂಶಗಳು ಪರಿಣಾಮ ಬೀರುವುದರಿಂದ ಚರ್ಮ ಹಲವು ಸಮಸ್ಯೆಗಳನ್ನು ಕಾಲಕಾಲಕ್ಕೆ ಎದುರಿಸಬೇಕಾಗುತ್ತದೆ. ಮೇಲ್ನೋಟಕ್ಕೆ ವಿಷಯ ತೀರಾ ಸಣ್ಣದೆನಿಸಿದರೂ, ಬೇರೆ ಅನಾರೋಗ್ಯದ ಸಮಸ್ಯೆಗಳಂತೆ ಇದು ತೀರಾ ತಲೆಕೆಡಿಸುವಷ್ಟು ಗಂಭೀರವಲ್ಲದಿದ್ದರೂ ಮಾನಸಿಕವಾಗಿ, ನಮ್ಮ ಒಟ್ಟು ಮನಸ್ಥಿತಿಯ ಮೇಲೆ ಬೀರುವ ಪರಿಣಾಮ ದೊಡ್ಡದು. ಚರ್ಮದ ಸೌಂದರ್ಯ ಅಥವಾ ಆರೋಗ್ಯ ಬಹುತೇಕರಿಗೆ ಆತ್ಮವಿಶ್ವಾಸ ಹಾಗೂ ಒಟ್ಟು ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುವುದರಿಂದ ಇದು ಬಹಳ ಮುಖ್ಯವೂ ಆಗುತ್ತದೆ. ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರುವ ಅಂಶಗಳ ಪೈಕಿ ಬಹುಮುಖ್ಯವಾದುದು ನಾವು ಸೇವಿಸುವ ಆಹಾರ. ಇಂದು ಬದಲಾದ ಆಹಾರ ಪದ್ಧತಿ ಸೇರಿದಂತೆ ನಾನಾ ಕಾರಣಗಳು ನಮ್ಮ ಚರ್ಮದ ಆರೋಗ್ಯ ಹದಗೆಡಲು ಕಾರಣವಾಗುತ್ತದೆ. ಕಾರ್ಬೋನೇಟೆಡ್‌ ಪೇಯಗಳ ಸೇವನೆಯೂ ನಮ್ಮ ಚರ್ಮದ ಆರೋಗ್ಯದ ಮೇಲೆ (Skin Health Tips) ಸಾಕಷ್ಟು ಕೆಟ್ಟ ಪರಿಣಾಮ ಬೀರುತ್ತದೆ. ಚರ್ಮ ಆರೋಗ್ಯದಿಂದ ಕಂಗೊಳಿಸಲು ಇವುಗಳಿಂದ ದೂರವಿರುವುದೂ ಮುಖ್ಯವಾಗುತ್ತದೆ. ಹಾಗಾದರೆ ಬನ್ನಿ, ಚರ್ಮದ ಮೇಲೆ ಕಾಳಜಿ ಇರುವ ಮಂದಿ ಯಾಕೆ ಕಾರ್ಬೋನೇಟೆಡ್‌ ಪೇಯಗಳನ್ನು ಕುಡಿಯುವುದನ್ನು ಕಡಿಮೆ ಮಾಡಬೇಕು ಎಂಬುದಕ್ಕೆ ಕಾರಣಗಳನ್ನು ನೋಡೋಣ.

1. ಅತಿ ಹೆಚ್ಚು ಸಕ್ಕರೆ ಇರುತ್ತದೆ: ಫ್ಲೇವರ್ಡ್‌ ಡ್ರಿಂಕ್‌ಗಳು ಹಾಗೂ ಕಾರ್ಬೋನೇಟೆಡ್‌ ಪೇಯಗಳಲ್ಲಿ ಅತ್ಯಂತ ಹೆಚ್ಚು ಸಕ್ಕರೆ ಇರುವುದರಿಂದ ಇದು ಚರ್ಮಕ್ಕೆ ಖಂಡಿತಾ ಒಳ್ಲೇಯದು ಮಾಡುವುದಿಲ್ಲ. ಹೆಚ್ಚು ಸಕ್ಕರೆಯ ಪ್ರಮಾಣ ಚರ್ಮದ ಒಟ್ಟಾರೆ ಲುಕ್‌ ಮೇಲೆ ಅಡ್ಡ ಪರಿಣಾಮಗಳನ್ನು ಬೀರುವುದರಿಂದ ಚರ್ಮ ಊದಿಕೊಂಡಂತೆ, ಹಾಗೂ ಪೇಲವವಾಗಿ ಕಾಣುವಂತೆ ಮಾಡುತ್ತದೆ. ಹಾಗಾಗಿ ದಿನವೂ ಕೋಲಾ, ಸೋಡಾದಂತಹ ಪೇಯಗಳಿಗೆ ಮೊರೆ ಹೋಗುವ ಮಂದಿ ಮತ್ತೊಮ್ಮೆ ಯೋಚಿಸಿ.

2. ಇದು ಚರ್ಮವನ್ನು ಒಣಗಿಸುತ್ತದೆ: ಚರ್ಮದ ಆರೋಗ್ಯದಲ್ಲಿ ಬಹಳ ಮುಖ್ಯವಾದದ್ದು ಎಂದರೆ ಚರ್ಮಕ್ಕೆ ಸಿಗಬೇಕಾದ ನೀರಿನಂಶ ಸಿಗಲೇಬೇಕು. ಸಿಗದಿದ್ದರೆ ಹಲವು ಸಮಸ್ಯೆಗಳು ಚರ್ಮದ ಮೂಲಕ ಕಾಣತೊಡಗುತ್ತದೆ. ಚರ್ಮ ಒಣಗಿದಂತಾಗುವುದೂ ಕೂಡಾ ಚರ್ಮ ಅನುಭವಿಸುವ ನೀರಿನ ಕೊರತೆಯೇ ಆಗಿದೆ. ಇದರಲ್ಲಿರುವ ಸಕ್ಕರೆ ಹಾಗೂ ಕೆಫಿನ್‌ ಅಂಶ ಚರ್ಮವನ್ನು ಒಣಗಿಸುವುದರಿಂದ ಚರ್ಮ ನಿಸ್ತೇಜವಾಗಿ, ಕಳಾಹೀನವಾಗಿ ಕಾಣಲಾರಂಭಿಸುತ್ತದೆ.

3. ಮೊಡವೆಗಳುಂಟಾಗಬಹುದು: ಕಾರ್ಬೋನೇಟೆಡ್‌ ಪೇಯಗಳು ಹಾರ್ಮೋನಿನ ವೈಪರೀತ್ಯಕ್ಕೂ ಕಾರಣವಾಗುವುದರಿಂದ ಚರ್ಮದಲ್ಲಿ ಮೊಡವೆಗಳು ಏಳಲೂ ಕಾರಣವಾಗಬಹುದು. ಹಾರ್ಮೋನ್‌ ಏರುಪೇರು ಮೊಡವೆಗೆ ಇರುವ ಬಹುದೊಡ್ಡ ಕಾರಣಗಳಲ್ಲಿ ಒಂದು. ಇಂತಹ ಪೇಯಗಳು ಸೆಬಮ್‌ ಉತ್ಪತ್ತಿಯನ್ನು ಪ್ರೇರೇಪಿಸುವ ಮೂಲಕವೂ ಮೊಡವೆ ಹೆಚ್ಚಲು ಕಾರಣೀಭೂತವಾಗುತ್ತದೆ. ಇದರಲ್ಲಿರುವ ಕೆಫಿನ್‌ ಕಾರಣದಿಂದಲೂ ಮೊಡವೆ ಹೆಚ್ಚಾಗಬಹುದು.

ಇದನ್ನೂ ಓದಿ: Health Tips: ತೇಗುವುದೇ ನಿಮ್ಮ ಸಮಸ್ಯೆಯೇ? ಹಾಗಾದರೆ ಇಲ್ಲಿದೆ ನಿಮಗೆ ಉತ್ತರ!

4. ಚರ್ಮದಲ್ಲಿ ಸುಕ್ಕು ಬಹುಬೇಗನೆ ಆಗಬಹುದು: ವಯಸ್ಸಾಗುತ್ತಿದ್ದಂತೆ ಚರ್ಮ ಸುಕ್ಕಾಗುವುದು ಸಹಜ. ಆದರೆ, ಕಾರ್ಬೋನೇಟೆಡ್‌ ಪೇಯಗಳ ಸೇವನೆ ಹೆಚ್ಚಾದರೆ ಚರ್ಮದ ಸುಕ್ಕಾಗುವಿಕೆ ಪ್ರಕ್ರಿಯೆ ಬೇಗನೆ ಆಗಬಹುದು. ಪರಿಣಾಮ ಚರ್ಮಕ್ಕೆ ಬಿಗಿತನ ಕಡಿಮೆಯಾಗಿ ಸಣ್ಣ ವಯಸ್ಸಿನಲ್ಲಿಯೇ ವಯಸ್ಸಾದವರಂತೆ ಕಾಣಬಹುದು. ಹಾಗಾಘಿ ನಿಮಗೆ ಸುಕ್ಕುರಹಿತ ನುಣುಪಾದ ಚರ್ಮ ಬೇಕಿದ್ದರೆ, ಇಂತಹ ಡ್ರಿಂಕ್‌ಗಳಿಂದ ದೂರವಿರಿ.

5. ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ: ಇಂತಹ ಪೇಯಗಳ ಸೇವನೆ ಒಟ್ಟಾರೆ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ದೇಹದಲ್ಲಿರುವ ವಿಷಕಾರಕಗಳು ಅಥವಾ ಕಲ್ಮಶಗಳು ಹೊರಹೋಗದೆ, ಅವುಗಳ ಪರಿಣಾಮ ಚರ್ಮದ ಆರೋಗ್ಯವೂ ಹದಗೆಡುತ್ತದೆ. ಪೋಷಕಾಂಶಗಳ ಹೀರಿಕೆಯೂ ಸರಿಯಾಗಿ ಆಗದು. ಇದರಿಂದಾಗಿ ಮೊಡವೆ, ಕಜ್ಜಿ, ಕಪ್ಪುಕಲೆಗಳಂತಹ ಸಮಸ್ಯೆಗಳು, ಸುಕ್ಕು, ಕುಳಿಗಳು ಇತ್ಯಾದಿಗಳೂ ಕೂಡಾ ಕಾಣಿಸಿಕೊಳ್ಳುತ್ತವೆ.

ಇದನ್ನೂ ಓದಿ: Health Tips: ಏರ್‌ ಫ್ರೈಯರ್‌ನಲ್ಲಿ ಯಾವೆಲ್ಲ ಆಹಾರವನ್ನು ತಯಾರಿಸಬಾರದು ಗೊತ್ತಾ?

Exit mobile version