ನಮ್ಮ ಬದುಕಿನ ಮೂರನೇ ಒಂದು ಭಾಗವನ್ನು ನಾವು ನಿದ್ದೆಯಲ್ಲೇ (sleep awareness week) ಕಳೆಯುತ್ತೇವೆ. ಶಿಶುಗಳು ದಿನಕ್ಕೆ ಸರಾಸರಿ 17 ತಾಸುಗಳನ್ನು ನಿದ್ದೆಯಲ್ಲಿ ಕಳೆಯುತ್ತವೆ. ಬೆಳೆಯುತ್ತಾ ಬಂದಂತೆ ನಿದ್ದೆಯ ಅಗತ್ಯವೂ ಕಡಿಮೆಯಾಗಿ, ವಯಸ್ಕರಿಗೆ ದಿನಕ್ಕೆ 7 ತಾಸುಗಳ ನಿದ್ದೆ ಸಾಕಾಗುತ್ತದೆ. ಪ್ರಾಣಿಗಳಲ್ಲಿ ಎಲ್ಲಕ್ಕಿಂತ ಹೆಚ್ಚಿನ ನಿದ್ದೆಬಡುಕನೆಂದರೆ ಕ್ವಾಲ ಕರಡಿಗಳು. ದಿನಕ್ಕೆ 22 ತಾಸುಗಳವರೆಗೆ ನಿದ್ದೆ ಮಾಡುವ ಸಾಮರ್ಥ್ಯ ಅದರದ್ದು. ಕಂದು ಬಾವಲಿಗಳು, ಆರ್ಮಡಿಲ್ಲೊ ಮತ್ತು ಹೆಬ್ಬಾವುಗಳ ಸಹ ಮಾನವ ಶಿಶುಗಳಿಗಿಂತ ಹೆಚ್ಚಿನ ಹೊತ್ತು ನಿದ್ದೆ ಮಾಡುತ್ತವೆ.
ಪ್ರಾಣಿಗಳದ್ದು ಈ ಕಥೆಯಾದರೆ, ಹಕ್ಕಿಗಳದ್ದು ಸ್ವಲ್ಪ ವಿಚಿತ್ರ. ಅವು ಹಾರುತ್ತಲೇ ನಿದ್ದೆ ಮಾಡಬಲ್ಲವು! ದೂರ ವಲಸೆಯ ದಾರಿಗಳಲ್ಲಿ ಹಾರುತ್ತಲೇ ಅವು ತೂಕಡಿಸುತ್ತವೆ. ಮಾತ್ರವಲ್ಲ, ತಮ್ಮ ಮೆದುಳಿನ ಒಂದು ಭಾಗವನ್ನು ಸಕ್ರಿಯವಾಗಿ ಇರಿಸಿಕೊಂಡೇ ಅವು ನಿದ್ದೆ ಮಾಡಬಲ್ಲವು. ವೇಲ್‌ಗಳೂ ಸಹ ಮೆದುಳಿನ ಒಂದು ಭಾಗವನ್ನು ಎಚ್ಚರವಾಗಿ ಇರಿಸಿಕೊಂಡು ನಿದ್ರಿಸುತ್ತವೆ. ಮೀನುಗಳು ಕೂಡಾ ತೇಲಿಕೊಂಡೇ ನಿದ್ದೆ ಮಾಡುತ್ತವೆ.
ನಿದ್ದೆಯ ವಿಷಯದಲ್ಲಿ ಪ್ರಾಣಿಗಳೇ ಇಷ್ಟೊಂದು ಪ್ರತಾಪ ತೋರುವಾಗ, ಮನುಷ್ಯರಾದ ನಾವು ನಿದ್ದೆಗೆಟ್ಟರೆ ಹೇಗೆ? ಇದೀಗ ಮರ್ಯಾದೆ ಹೋಗುವ ಮಾತಾಯಿತು (ಯಾರೆದುರು ಎಂದು ಕೇಳಬೇಡಿ!). ಹಾಗಾಗಿ ರಾತ್ರಿ ಕಣ್ತುಂಬಾ ನಿದ್ದೆ ಬರಿಸುವಂಥ ಕೆಲವು ಪೇಯಗಳು ಇಲ್ಲಿವೆ. ಅಯ್ಯೋ, ಕೆಲಸವಿಲ್ಲ! ಎರಡು ಪೆಗ್ ಹಾಕಿದರೆ ಸಾಕು ಎನ್ನಬೇಡಿ. ಇವುಗಳನ್ನೊಮ್ಮೆ ಪ್ರಯತ್ನಿಸಿ.
ಕ್ಯಾಮೊಮೈಲ್ ಚಹಾ
ಪಚನ ಸರಾಗ ಮಾಡಿ, ನಿದ್ದೆಯನ್ನು ಉತ್ತೇಜಿಸಿ, ಕಟ್ಟಿದ ಮೂಗನ್ನು ಸ್ವಚ್ಚಗೊಳಿಸುವ ಪರಿಣಾಮಕಾರಿ ಪೇಯವಿದು. ಮನಸ್ಸನ್ನು ಶಾಂತಗೊಳಿಸಿ, ಗಾಢವಾಗಿ ನಿದ್ದೆ ತರುವಂಥ ಇದಕ್ಕೆ ಇನ್ನಿತರ ಆರೋಗ್ಯಕಾರಿ ಪರಿಣಾಮಗಳೂ ಇವೆ.
ಚೆರ್ರಿ ಜ್ಯೂಸ್
ಇದರಲ್ಲಿರುವ ಟ್ರಿಪ್ಟೋಫ್ಯಾನ್ ನಿಂದಾಗಿ ಗಡದ್ದಾಗಿ ನಿದ್ದೆ ತರಿಸುತ್ತದೆ ಚೆರ್ರಿ ಜ್ಯೂಸ್. ದೇಹದ ನಿದ್ದೆಯ ಲಯವನ್ನು ಹಿಡಿತದಲ್ಲಿಡುವ ಮೆಲಟೋನಿನ್ ಚೋದಕವನ್ನು ಉತ್ಪತ್ತಿ ಮಾಡಲು ಈ ಟ್ರಿಪ್ಟೊಫ್ಯಾನ್ ಎಂಬ ಅಮೈನೋ ಆಮ್ಲ ಅಗತ್ಯ. ನಿದ್ದೆ ತೀರಾ ಕೈಕೊಡುತ್ತಿದ್ದರೆ ದಿನಕ್ಕೊಂದು ಕಪ್ ಚೆರ್ರಿ ಜ್ಯೂಸ್ ಹೀರಿ ನೋಡಿ.
ಅಶ್ವಗಂಧ ಕಷಾಯ
ಇದರ ಪುಡಿಯನ್ನು ಬೆಚ್ಚಗಿನ ಹಾಲಿಗೆ ಹಾಕಿ ಕುಡಿಯಬಹುದು. ಆದರೆ ದಿನವೂ ಅಶ್ವಗಂಧ ಸೇವಿಸುವ ಮುನ್ನ, ನಿಮ್ಮ ಆರೋಗ್ಯಕ್ಕೆ ಇದು ಸೂಕ್ತವೇ ಎಂಬುದನ್ನು ವೈದ್ಯರನ್ನೊಮ್ಮೆ ಕೇಳಿ ನೋಡಿ.
ಪೆಪ್ಪರ್‌ಮಿಂಟ್ ಚಹಾ
ಜೀರ್ಣಾಂಗದ ಸಮಸ್ಯೆಗಳಿಗೆ ಪೆಪ್ಪರ್‌ಮಿಂಟ್ ಒಳ್ಳೆಯ ಉಪಶಮನ. ಹಾಗಾಗಿ ರಾತ್ರಿ ಹೊಟ್ಟೆಯುಬ್ಬರ, ಅಜೀರ್ಣ, ಆಸಿಡಿಟಿಯಂಥವು ತೊಂದರೆ ಕೊಟ್ಟು ಹಾಸಿಗೆಯಲ್ಲಿ ಹೊರಳಾಡುವಂತೆ ಮಾಡುತ್ತಿದ್ದರೆ, ಈ ಪೇಯ ಉಪಕಾರಿ.
ಬೆಚ್ಚಗಿನ ಹಾಲು
ಬಹಳಷ್ಟು ಮನೆಗಳಲ್ಲಿ ಮಲಗುವ ಮುನ್ನ ಉಗುರುಬಿಸಿ ಹಾಲು ಕುಡಿಯುವ ಕ್ರಮ ಇಂದಿಗೂ ಇರಬಹುದು. ದೇಹದಲ್ಲಿ ಸೆರೊಟೋನಿನ್ ಹೆಚ್ಚಿಸುವ ಈ ಪೇಯ, ನಿದ್ದೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: Winter Sleep: ಚಳಿಗಾಲದಲ್ಲಿ ನಿದ್ದೆ ಹೆಚ್ಚೇ? ಕಾರಣವಿದೆ!