Site icon Vistara News

Sleep Awareness Week: ನಿದ್ದೆಯ ಹೊತ್ತಿನಲ್ಲಿ ಜಾಗೃತರಾಗಿ ಇರಬೇಡಿ!

Sleep Awareness Week

ಮಹಾಭಾರತದ ಅರ್ಜುನನ ಕಥೆ ಹೇಳುವಾಗ, ಆತ ನಿದ್ದೆಯನ್ನು (Sleep Awareness Week) ನಿಯಂತ್ರಿಸಿಕೊಳ್ಳಬಲ್ಲವನಾಗಿದ್ದ ಎಂಬಂತೆ ಚಿತ್ರಿಸಲಾಗುತ್ತದೆ. ಅರ್ಜುನನದ್ದೇನು ಮಹಾ! ಯುದ್ಧ ಅಥವಾ ಇನ್ಯಾವುದೋ ಅಗತ್ಯ ಸಂದರ್ಭಗಳಲ್ಲಿ ಮಾತ್ರವೇ ಆತನಿಗೆ ನಿದ್ದೆಯನ್ನು ಗೆಲ್ಲುವ ಅಗತ್ಯ ಇರುತ್ತಿತ್ತು. ಈಗಿನ ಜನರನ್ನು ನೋಡಿ, ಅವರಿಗೆ 365 ದಿನಗಳೂ ಒಂದಿಲ್ಲೊಂದು ಯುದ್ಧವೇ. ಹಾಗಾಗಿ ದಿನಾ ನಿದ್ದೆ ಬಿಡುತ್ತಾರೆ; ಅಥವಾ ನಿದ್ದೆಯೇ ಅವರ ಬಳಿ ಸುಳಿಯುವುದಿಲ್ಲ. ಆ ಮಟ್ಟಿಗೆ ಈಗಿನವರೆಲ್ಲಾ ವಿಜಯರೇ! ಆದರೆ ನಿದ್ದೆಯಿಲ್ಲದೆ ಕಿರಿಯ ವಯೋಮಾನದಲ್ಲೇ ಸಾವಿಗೀಡಾಗುತ್ತಿರುವುದನ್ನು ನೋಡಿದಾಗ ವಿಜಯ ಯಾರದ್ದು ಎಂಬ ಪ್ರಶ್ನೆ ಏಳುತ್ತದೆ.

ಪ್ರತಿ ವರ್ಷ ಮಾರ್ಚ್‌ ತಿಂಗಳ 12ನೇ ತಾರೀಖಿನಿಂದ 18ರವರೆಗೆ ನಿದ್ದೆ ಜಾಗೃತಿ ಸಪ್ತಾಹವಿದು. ಅಂದರೆ, ನಿದ್ದೆ ಬಿಟ್ಟು ಜಾಗೃತರಾಗಿರುವಂತಿಲ್ಲ ಎಂಬ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಇದನ್ನು ಆಚರಿಸಲಾಗುತ್ತದೆ. ನಿದ್ದೆ ತಾನೇ? ಯಾವಾಗಲಾದರೂ, ಎಷ್ಟೊತ್ತಿಗಾದರೂ ಮಾಡಿದರಾಯಿತು ಎನ್ನುವಂತಿಲ್ಲ. ಕಾರಣ, ನಮ್ಮ ದೇಹಕ್ಕೆ ವಿಶ್ರಾಂತಿಗೆಂದೇ ಒಂದು ಲಯವಿದ್ದು, ಸರ್ಕಾಡಿಯನ್‌ ರಿದಂ ಎಂದು ಅದನ್ನು ಕರೆಯಲಾಗುತ್ತದೆ. ಅದೇ ಲಯವಾಗಿಬಿಟ್ಟರೆ ಆರೋಗ್ಯವೇ ಏರುಪೇರು. ತಜ್ಞರು ಹೇಳುವ ಪ್ರಕಾರ, ಆಹಾರದ ಕೊರತೆಯಿಂದ ಸಾಯುವುದಕ್ಕಿಂತ ಕ್ಷಿಪ್ರವಾಗಿ ನಿದ್ದೆಯ ಕೊರತೆಯಿಂದ ಸಾವು ಬರುತ್ತದಂತೆ. ಹಾಗಾಗಿ ನಿದ್ದೆಯ ಬಗ್ಗೆ ಅರಿವಿನ ಸಪ್ತಾಹಕ್ಕೆ ಮಹತ್ವ ಒದಗಿದೆ.

ನಿದ್ದೆ ಸಮೀಕ್ಷೆ

ಫಿಟ್‌ನೆಸ್‌ ಸಂಸ್ಥೆಯೊಂದು ಇತ್ತೀಚಿನ ವರ್ಷಗಳಲ್ಲಿ ವಿಸ್ತೃತವಾಗಿ ನಿದ್ದೆಯ ಬಗ್ಗೆ ಸಮೀಕ್ಷೆ ನಡೆಸಿದೆ. ಇದರಲ್ಲಿ ನಿದ್ದೆಯ ಬಗ್ಗೆ ಜನರಲ್ಲಿರುವ ಕೆಲವು ಆತಂಕಕಾರಿ ಪ್ರವೃತ್ತಿಗಳು ಬೆಳಕಿಗೆ ಬಂದಿದ್ದು, ಇತ್ತೀಚಿನ ವರ್ಷಗಳಲ್ಲಿ ಆರೋಗ್ಯಗಳು ಕುಸಿಯುತ್ತಿರುವುದೇಕೆ ಎಂಬ ಪ್ರಶ್ನೆಗೆ ಪರೋಕ್ಷ ಉತ್ತರ ದೊರೆತಂತಿದೆ. ಶೇ. 38ರಷ್ಟು ಭಾರತೀಯರು ತಮ್ಮ ಭವಿಷ್ಯದ ಬಗ್ಗೆ ಚಿಂತೆ ಮಾಡಿಕೊಂಡೇ ನಿದ್ದೆಗೆಡುತ್ತಾರಂತೆ. ಹಾಗೆಯೇ, ಶೇ. 87 ಮಂದಿಗೆ ಮಲಗುವ ಮೊದಲು ತಮ್ಮ ಫೋನ್‌ ನೋಡುವುದು ಮಾಮೂಲಿ. ನಿದ್ದೆಗೆ ಜಾರುವ ಮುನ್ನ ಅಥವಾ ಹಾಸಿಗೆಯಲ್ಲಿ ಫೋನ್‌ ಹಿಡಿಯುವುದು ಸರಿಯಲ್ಲ ಎಂಬುದನ್ನು ತಾತ್ವಿಕವಾಗಿ ಎಲ್ಲರೂ ಒಪ್ಪಿದರೂ, ಪಾಲಿಸುವವರು ನಿಜಕ್ಕೂ ವಿರಳ.

ಕಳೆದ ಆರು ವರ್ಷಗಳಿಂದ ನಡೆಸಲಾದ ಈ ಸಮೀಕ್ಷೆಯಲ್ಲಿ 2.5 ಲಕ್ಷ ಮಂದಿಯನ್ನು ಮಾತಾಡಿಸಲಾಗಿತ್ತು. ಅದರಲ್ಲೂ ಕಳೆದೊಂದು ವರ್ಷದಲ್ಲಿ ಸುಮಾರು 10,000 ಮಂದಿ ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಭಾರತದ ಎಲ್ಲಾ ನಗರಗಳು ಮತ್ತು ಎಲ್ಲಾ ವಯೋಮಾನ, ಲಿಂಗ ಇತ್ಯಾದಿಗಳನ್ನು ಈ ಸಮೀಕ್ಷೆ ಒಳಗೊಂಡಿತ್ತು. ಈ ಸಮೀಕ್ಷೆಯ ಪ್ರಕಾರ, ರಾತ್ರಿ 11 ಗಂಟೆಯ ಒಳಗೆ ನಿದ್ದೆ ಮಾಡುವವರು ಶೇ. 45ರಷ್ಟು ಜನ ಮಾತ್ರ. ಆದರೆ ಕಳೆದ ಸಾಲಿನಲ್ಲಿ ಈ ಪ್ರಮಾಣ ಮತ್ತೂ ಕಡಿಮೆಯಿದ್ದು, ಶೇ. 34ರಷ್ಟು ಮಂದಿಯಷ್ಟೇ ಬೇಗ ಮಲಗುವವರಾಗಿದ್ದರು. ಬೇಗ ಮಲಗುವವರ ಪ್ರಮಾಣ ಈ ವರ್ಷಕ್ಕೆ ಸುಧಾರಿಸಿದರೂ, ಏಳುವಾಗ ದೇಹ-ಮನಸ್ಸುಗಳು ಉಲ್ಲಾಸದಿಂದ ಇರುತ್ತವೆ ಎಂದವರ ಸಂಖ್ಯೆ ಇನ್ನಷ್ಟು ಕುಸಿದಿದೆ.

ನಿದ್ದೆ ಮತ್ತು ಅದರ ಸುತ್ತಮುತ್ತಲಿನ ಅಭ್ಯಾಸಗಳು ಆರೋಗ್ಯಕರವಾಗಿ ಉಳಿದಿಲ್ಲ ಎಂಬ ಬಗ್ಗೆ ಸಮೀಕ್ಷೆಯ ವರದಿ ತೀವ್ರ ಕಳವಳ ವ್ಯಕ್ತಪಡಿಸಿದೆ. ಮಹಿಳೆಯರಿಗಿಂತ ಪುರುಷರು ಏಳುವಾಗ ಹೆಚ್ಚು ಉಲ್ಲಾಸದ ಅನುಭವವಾಗುವ ಬಗ್ಗೆ ಹೇಳಿಕೊಂಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ, ಈ ವರ್ಷದಲ್ಲಿ ಆಫೀಸುಗಳಲ್ಲಿ ಜನರಿಗೆ ನಿದ್ದೆ ಬರುವ ಪ್ರಮಾಣ ಶೇ. 21ರಷ್ಟು ಹೆಚ್ಚಾಗಿದೆಯಂತೆ. ಕೆಲಸದ ವೇಳೆಯಲ್ಲಿ ಆಯಾಸದಿಂದ ನಿದ್ದೆ ಬರುತ್ತದೆ ಎಂದು ಶೇ. 59 ಪುರುಷರು ಹೇಳಿದರೆ, ಮಹಿಳೆಯರಲ್ಲಿ ಈ ಪ್ರಮಾಣ ಶೇ. 67ರಷ್ಟು. ಅಂದರೆ, ಪುರುಷರಿಗಿಂತ ಮಹಿಳೆಯರೇ ಹೆಚ್ಚು ನಿದ್ದೆಗೆಡುತ್ತಿದ್ದಾರೆ ಎನ್ನಬಹುದೇನೊ.

ಒಂದು ಭರವಸೆಯ ಅಂಶವೆಂದರೆ, ಯುವಜನತೆ, ಅಂದರೆ 18ಕ್ಕಿಂತ ಮೇಲ್ಪಟ್ಟವರಲ್ಲಿ ನಿದ್ದೆಯ ಅಗತ್ಯದ ಬಗ್ಗೆ ಜಾಗೃತಿ ಹೆಚ್ಚಿದೆ. ಈ ವಯೋಮಾನದವರಲ್ಲಿ ರಾತ್ರಿ 10 ಗಂಟೆಗೆ ಮೊದಲು ಮಲಗುವ ಅಭ್ಯಾಸವು ಕಳೆದ ವರ್ಷಕ್ಕಿಂತ ಈ ವರ್ಷ ಶೇ. 65ರಷ್ಟು ಹೆಚ್ಚಿದೆಯಂತೆ. ಅದರಲ್ಲೂ 18ಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಬೇಗ ಮಲಗುವ ಅಭ್ಯಾಸ ಶೇ. 200ರಷ್ಟು ವೃದ್ಧಿಸಿದೆಯಂತೆ. ರಾತ್ರಿ ವೇಳೆ ಸಾಮಾಜಿಕ ಮಾಧ್ಯಮಗಳನ್ನು ಬಳಸುವ ಸಂಖ್ಯೆ ಹೆಚ್ಚುತ್ತಿದ್ದು, ಸ್ಮಾರ್ಟ್‌ ಫೋನುಗಳು ಬೀರುವ ಕಿರಣಗಳು ಮತ್ತು ಜಾಲತಾಣಗಳಲ್ಲಿ ನೋಡುವ ವಿಷಯಗಳಿಂದಾಗಿ ಜನ ಇನ್ನಷ್ಟು ಮತ್ತಷ್ಟು ನಿದ್ರಾಹೀನರಾಗುತ್ತಿದ್ದಾರೆ.

ಇದನ್ನೂ ಓದಿ: Good Sleep Benefits: ಒಳ್ಳೆಯ ನಿದ್ದೆಯ ಲಾಭಗಳೇನು ಗೊತ್ತೇ?

Exit mobile version