Site icon Vistara News

Sleep Tips: ರಾತ್ರಿ ಸೊಂಪಾದ ನಿದ್ದೆ ಬೇಕಾದರೆ ಆ ಪಾನೀಯವಲ್ಲ, ಈ ಪಾನೀಯಗಳನ್ನು ಸೇವಿಸಿ!

deep sleep and turmeric milk

ರಾತ್ರಿಯ ಚಂದದ ನಿದ್ದೆ ಎಷ್ಟು ಮುಖ್ಯ ಎಂಬುದು ಎಲ್ಲರಿಗೂ ಅರಿವಿದೆ. ಬೆಳಗಿನ ಕೆಲಸ ಚುರುಕಾಗಿ ನಡೆಯಲು, ನಾವು ಆರೋಗ್ಯವಂತರಂತೆ ಎಲ್ಲ ಕೆಲಸಗಳನ್ನೂ ಮಾಡಲು ನೆರವಾಗುವುದು ಹಿಂದಿನ ರಾತ್ರಿ ಮಾಡಿದ ಉತ್ತಮ ನಿದ್ದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ನಿದ್ದೆ ಎಂಬುದು ಹಲವರಿಗೆ ದುಸ್ವಪ್ನ. ವಿಪರೀತ ಗ್ಯಾಜೆಟ್‌ಗಳ ಬಳಕೆ, ಬದಲಾದ ಜೀವನ ಶೈಲಿ, ಒತ್ತಡದ ನಗರದ ಬದುಕು ಇವೆಲ್ಲವೂ ಇದಕ್ಕೆ ಕಾರಣ. ಆದರೆ, ಚಂದನೆಯ ನಿದ್ದೆ ಮಾಡಲು ನಮ್ಮ ಬದುಕಿನ ಶೈಲಿ ಹಾಗೂ ಅಭ್ಯಾಸಗಳ ಬದಲಾವಣೆಯ ಜೊತೆಗೆ ಕೆಲವು ಬಿಸಿ ಪೇಯಗಳೂ (Sleep Tips) ನೆರವಾಗುತ್ತವೆ. ಹಾಗಾದರೆ ಬನ್ನಿ, ಯಾವೆಲ್ಲ ಪೇಯಗಳನ್ನು ಮಲಗುವ ಮುನ್ನ ಕುಡಿದರೆ ಒಳ್ಳೆಯ ನಿದ್ದೆ ಬರುತ್ತದೆ (health tips) ಎಂಬುದನ್ನು ನೋಡೋಣ.

1. ಅರಿಶಿನ ಹಾಲು: ಅರಿಶಿನ ಹಾಲಿನ ಆರೋಗ್ಯಕರ ಲಾಭದ ಬಗ್ಗೆ ಎರಡು ಮಾತಿಲ್ಲ. ಇದಕ್ಕೆ ಪ್ರತ್ಯೇಕವಾಗಿ ವಿವರಿಸಿ ಹೇಳುವ ಅಗತ್ಯವೂ ಇಲ್ಲ. ಇದರಲ್ಲಿರುವ ಪೋಷಕಾಂಶಗಳು ಮಾಂಸಖಂಡಗಳ ಬಲವರ್ಧನೆಗೆ ನೋವು ಶಮನಕಾರಿಯಾಗಿ, ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸೇರಿದಂತೆ ಹಲವು ಪ್ರಯೋಜನಗಳಿರುವುದು ಗೊತ್ತೇ ಇದೆ. ಅಷ್ಟೇ ಅಲ್ಲ, ರಾತ್ರಿ ಮಲಗುವ ಮೊದಲು ಬಿಸಿಯಾದ ಅರಿಶಿನ ಹಾಲನ್ನು ಕುಡಿದು ಮಲಗುವುದರಿಂದ ನಿದ್ದೆ ಚೆನ್ನಾಗಿ ಬರುತ್ತದೆ. ಬಿಸಿ ಹಾಲಿನಲ್ಲಿರುವ ಟ್ರಿಪಟೋಪನ್‌ ಎಂಬ ಅಮೈನೋ ಆಸಿಡ್‌ ಅನ್ನು ಸೆರೆಟೋನಿನ್‌ ಆಗಿ ಪರಿವರ್ತಿಸಿ ಮನಸ್ಸನ್ನು ಶಾಂತಗೊಳಿಸಿ ನಿದ್ದೆಗೆ ದೂಡುತ್ತದೆ. ಅರಿಶಿನದಲ್ಲಿ ಒತ್ತಡ ನಿವಾರಿಸುವ ಗುಣವೂ ಇದ್ದು ಇದು ಒತ್ತಡ ಕಡಿಮೆ ಮಾಡಿ ಒಳ್ಳೆಯ ನಿದ್ದೆ ಬರುವಂತೆ ಮಾಡುತ್ತದೆ.

2. ಬಾದಾಮಿ ಹಾಲು: ಮೊದಲೇ ಹೇಳಿದಂತೆ ಬಿಸಿ ಹಾಲು ಸೆರೆಟೋನಿನ್‌ ಉತ್ಪಾದನೆಯಲ್ಲಿ ಸಹಾಯ ಮಾಡುವುದರಿಂದ ಹಾಗೂ ಇದು ಒತ್ತಡ ನಿವಾರಣೆ ಮಾಡುವುದರಿಂದ ಇದಕ್ಕೆ ಬಾದಾಮಿಯೂ ಸೇರಿ ಇದರ ಲಾಭದ ಮಟ್ಟ ಏರುತ್ತದೆ. ಬಾದಾಮಿಯಲ್ಲಿರುವ ಟ್ರಿಪ್ಟೋಪನ್‌ ಹಾಗೂ ಮೆಗ್ನೀಶಿಯಂ ಹೃದಯದ ಬಡಿತವನ್ನು ಸಮತೋಲನಗೊಳಿಸಿ, ಮಿದುಳು ಹಾಗೂ  ದೇಹವನ್ನು ಶಾಂತವಾಗಿರುವಂತೆ ನೋಡಿಕೊಳ್ಳುತ್ತದೆ. ಹಾಗಾಗಿ ಇದು ಒಳ್ಳೆಯ ನಿದ್ದೆಯನ್ನೂ ದಯಪಾಲಿಸುತ್ತದೆ.

3. ಅಶ್ವಗಂಧ ಚಹಾ: ಅಶ್ವಗಂಧದಲ್ಲಿ ಟ್ರೈಮಿಥೈಲೀನ್‌ ಗ್ಲೈಕಾಲ್‌ ಇರುವುದಿಂದ ಇದು ನಿಮ್ಮ ನಿದ್ದೆಯನ್ನು ಸಮತೂಕಗೊಳಿಸುತ್ತದೆ. ಹೀಗಾಗಿ ಬಹಳಷ್ಟು ಮಂದಿ ಉತ್ತಮ ನಿದ್ದೆಗೆ ಚಿಟಿಕೆಯಷ್ಟು ಅಶ್ವಗಂಧದ ಪುಡಿಯನ್ನು ಚಹಾದ ರೂಪದಲ್ಲೋ, ಹಾಲಿಗೆ ಬೆರೆಸಿ ಸೇವಿಸುವ ಮೂಲಕವೋ ನಿದ್ದೆಯನ್ನು ಉತ್ತಮಗೊಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ.

#image_title

4. ಕೇಸರಿ ನೀರು: ಅತ್ಯಂತ ದುಬಾರಿ ಮಸಾಲೆಗಳ ಪೈಕಿ ಕೇಸರಿ ಪ್ರಮುಖವಾದುದು. ಇದರ ಒಂದೋ ಎರಡೋ ಎಳೆಯನ್ನು ಬಿಸಿ ನೀರಿನಲ್ಲೋ ಅಥವಾ ಹಾಲಿನಲ್ಲೋ ಹಾಕಿ ಕುಡಿಯುವುದರಿಂದ ಉತ್ತಮ ನಿದ್ದೆ ಸೇರಿದಂತೆ ಹಲವು ಪ್ರಯೋಜನಗಳಿವೆ. ನಿದ್ರಾಹೀನತೆಗೆ ಇದು ಉತ್ತಮ ಪರಿಹಾರ ನೀಡಿದರೆ, ನಿದ್ದೆಯ ಗುಣಮಟ್ಟವನ್ನೂ ಇದು ಹೆಚ್ಚಿಸುತ್ತದೆ.

5. ಜಾಯಿಕಾಯಿ ನೀರು: ಆಯುರ್ವೇದದ ಪ್ರಕಾರ ಜಾಯಿಕಾಯಿಯನ್ನು ಸ್ವಲ್ಪವೇ ಬಳಸಿದರೆ ಅದಕ್ಕೆ ನಮ್ಮನ್ನು ಶಾಂತಗೊಳಿಸಿ ನಿದ್ದೆ ಬರಿಸುವ ಗುಣವಿದೆ. ಸ್ವಲ್ಪವೇ ಸ್ವಲ್ಪ ಅಂದರೆ ಚಿಟಿಕೆಯಷ್ಟು ಜಾಯಿಕಾಯಿಯನ್ನು ತೇಯ್ದು ಬಿಸಿನೀರಿನ ಜೊತೆಗೆ ಸೇರಿಸಿ ಮಲಗುವ ಮೊದಲು ಕುಡಿಯುವುದರಿಂದ ಒತ್ತಡ ನಿವಾರಣೆಯಾಗಿ ಸೊಂಪಾದ ನಿದ್ದೆ ಬರುತ್ತದೆ.

ಇವುಗಳೆಲ್ಲವುಗಳ ಅತಿಯಾದ ಸೇವನೆ ಒಳ್ಳೆಯದಲ್ಲ. ಹಿತಮಿತವಾಗಿ ಬಳಕೆ ಮಾಡಿದಲ್ಲಿ ಉತ್ತಮ ಪರಿಣಾಮ ಕಾಣಬಹುದು. ವೈದ್ಯರ ಬಳಿಯೂ ಈ ಬಗ್ಗೆ ಸಲಹೆ ಕೇಳಿ ಮುಂದುವರಿಯಬಹುದು.

ಇದನ್ನೂ ಓದಿ: ಹೃದಯ ಆರೋಗ್ಯ ಚೆನ್ನಾಗಿರಬೇಕಾ? ಸಾಕಷ್ಟು ನಿದ್ರೆ ಮಾಡಿ!

Exit mobile version