Site icon Vistara News

Smell and Health: ವಾಸನೆಗಳಿಂದ ಆರೋಗ್ಯ ಏರುಪೇರಾಗುವುದೆ?

Smell and Health

Smell and Health

ಕೆಲವು ವಾಸನೆಗಳಿಗೆ ನಿಮ್ಮ ಸಂವೇದನೆ ಸೂಕ್ಷ್ಮವಾಗಿದೆಯೇ ಅಂದರೆ, ಹೊಟ್ಟೆ ತೊಳೆಸುವುದು, ಮೂಗು-ಗಂಟಲು ಉರಿಯುವ ಅನುಭವ, ಉಸಿರುಗಟ್ಟಿದಂತೆ ಅನಿಸುವುದು- ಇಂಥದ್ದೆಲ್ಲಾ ಅನುಭವಕ್ಕೆ ಬಂದಿದೆಯೇ? ಹೌದು ಎಂದಾದರೆ ನಿಮಗೊಬ್ಬರಿಗೇ ಅಲ್ಲ, ವಾಸನೆಗಳಿಗೆ ಸಂವೇದನೆ ತೋರುವವರು ಇನ್ನೂ ಬಹಳಷ್ಟು ಮಂದಿ ಇದ್ದಾರೆ. ಅದರಲ್ಲೂ ರಾಸಾಯನಿಕಗಳ ಘಾಟಿಗೆ ತಲೆನೋವು, ಉಸಿರಾಟದ ತೊಂದರೆ, ಕಣ್ಣುರಿ ಮುಂತಾದ ಹಲವಾರು ಸಮಸ್ಯೆಗಳನ್ನು ಅನುಭವಿಸುವವರ ಸಂಖ್ಯೆ ದೊಡ್ಡದು. ಹಾಗೆಂದು ಯಾವುದೇ ಪ್ರತಿಕ್ರಿಯೆ ತೋರದವರು ಬಹಳಷ್ಟು ಮಂದಿ ಇದ್ದಾರೆ. ಇತ್ತೀಚೆಗೆ ಲಖನೌ-ವಾರಾಣಸಿ ಕೃಷಕ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ದುರ್ನಾತ ಬೀರುವ ಹಾಸಿಗೆ ಮತ್ತು ಹೊದಿಕೆಯನ್ನು ನೀಡಲಾಗಿದ್ದ ಮೂವರು ಪ್ರಯಾಣಿಕರಿಗೆ ವೈದ್ಯಕೀಯ ನೆರವು ಅಗತ್ಯಬಿದ್ದು, ರೈಲನ್ನು ಕೆಲಕಾಲ ನಿಲ್ಲಿಸಲಾಗಿತ್ತು.

ಸಾಮಾನ್ಯವಾಗಿ ಆಯಾ ವ್ಯಕ್ತಿಗಳ ರೋಗ ನಿರೋಧಕತೆಯನ್ನು ಅವಲಂಬಿಸಿ, ವಾಸನೆಗಳಿಗೆ ಅವರೆಷ್ಟು ಸ್ಪಂದಿಸುತ್ತಾರೆ ಎಂಬುದು ನಿರ್ಧಾರವಾಗುತ್ತದೆ. ಅಪಾಯಕಾರಿ ಹೊಗೆಯನ್ನು ಉಸಿರಾಡಿ, ಶ್ವಾಸಕೋಶಕ್ಕೆ ಹಾನಿಯಾದ ಉದಾಹರಣೆಗಳೂ ಇಲ್ಲದಿಲ್ಲ. ಒಂದೊಮ್ಮೆ ಅಷ್ಟೇನು ಅಪಾಯಕಾರಿ ಅಲ್ಲದಿದ್ದ ವಾಸನೆಗಳಾದರೂ, ತೀಕ್ಷ್ಣ ಪ್ರತಿಕ್ರಿಯೆ ನೀಡುತ್ತಿರುವ ವ್ಯಕ್ತಿಗದು ತೊಂದರೆಯೇ ಹೌದು. ಅದು ಆತನ ಮೂಡ್‌, ಆತಂಕ ಮತ್ತು ಒತ್ತಡದ ಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮವನ್ನೇ ಬೀರುತ್ತದೆ.

ಇನ್ನೂ ಹೇಳುವುದಾದರೆ, ರೋಗ ನಿರೋಧಕತೆ ಕಡಿಮೆಯಿರುವ ವ್ಯಕ್ತಿಯ ಮೇಲೆ ಕೇವಲ ವಾಸನೆಯೊಂದು ವಿಪರೀತ ಪರಿಣಾಮ ಬೀರಬಲ್ಲದು. ತಲೆನೋವು, ವಾಂತಿ, ಕೆಮ್ಮು, ಅಸ್ತಮಾ, ಎಚ್ಚರ ತಪ್ಪುವುದು, ಜ್ವರದಂಥ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಕಣ್ಣು, ಮೂಗು, ಗಂಟಲು ಮತ್ತು ಶ್ವಾಸಕೋಶದಲ್ಲಿ ನಾನಾ ರೀತಿಯ ಅಲರ್ಜಿಗಳು ಉಂಟಾಗಬಹುದು. ಕೇವಲ ವಾಸನೆಯಿಂದ ಇಷ್ಟೆಲ್ಲಾ ಆಗುವುದುಂಟೇ ಎಂದರೆ, ಹೌದು.

ಎಂಥಾ ವಾಸನೆ?

ಬಳಕೆಯಲ್ಲಿಲ್ಲದ, ಕತ್ತಲೆಯ ಜಾಗದಿಂದ ಕೊಳಕು ವಾಸನೆ ಬರುತ್ತಿದ್ದರೆ, ಅದು ಶಿಲೀಂಧ್ರಗಳಿಂದ ಆಗಿರಬಹುದು. ಜೌಗು ಜಾಗಗಳಲ್ಲಿ ಏನಾದರೂ ಕೊಳೆತು ಹೋಗಿದ್ದರೆ, ಅದು ಸಹ ಶಿಲೀಂಧ್ರ ಅಥವಾ ಬ್ಯಾಕ್ಟೀರಿಯಾಗಳಿಂದ ಬರುವ ಕೊಳಕು ವಾಸನೆಯೇ ಆಗಿರುತ್ತದೆ. ಕೆಲವು ರಾಸಾಯನಿಕ ಮತ್ತು ಅವುಗಳು ಒಂದಕ್ಕೊಂದು ಪ್ರತಿಕ್ರಿಯಿಸಿದಾಗಲೂ ಭಯಂಕರ ಘಾಟುವಾಸನೆ ಬರುವ ಸಾಧ್ಯತೆಯಿದೆ. ಇಂಥ ಬಹಳಷ್ಟು ವಾಸನೆಗಳು ಹಲವರಲ್ಲಿ ಅಲರ್ಜಿಯಂಥ ಪ್ರತಿಕ್ರಿಯೆ ಉಂಟುಮಾಡಬಲ್ಲದು.

ಏನು ಮಾಡಬಹುದು?

ವಾಸನೆಗಳಿಂದ ತೊಂದರೆಯಾಗುತ್ತಿದ್ದರೆ ತಕ್ಷಣವೇ ಜಾಗ ಖಾಲಿ ಮಾಡುವುದು ಸೂಕ್ತ. ಸ್ವಚ್ಛ ಶುದ್ಧ ಗಾಳಿಯನ್ನು ಉಸಿರಾಡುತ್ತಿದ್ದಂತೆಯೇ ಆರೋಗ್ಯ ಸುಧಾರಿಸುತ್ತದೆ. ಅದಾಗದಿದ್ದರೆ ಆ ವಸ್ತುವನ್ನು ಅಲ್ಲಿಂದ ಬೇರೆಡೆ ರವಾನೆ ಸಾಧ್ಯವೇ ಎಂಬುದನ್ನೂ ಪರಿಶೀಲಿಸಬಹುದು. ಕಿಟಕಿ, ಬಾಗಿಲುಗಳನ್ನು ತೆರೆದು ಇರುವ ಜಾಗಕ್ಕೆ ಶುದ್ಧ ಗಾಳಿಯ ಸಂಚಾರ ಸಾಧ್ಯವೇ ಎಂಬುದನ್ನೂ ಪ್ರಯತ್ನಿಸಬಹುದು. ಒಂದೊಮ್ಮೆ ಅಂಥ ಜಾಗಕ್ಕೆ ಹೋಗಲೇಬೇಕಾದ್ದು ಅನಿವಾರ್ಯ ಎಂದಾದರೆ ಮಾಸ್ಕ್‌ ಹಾಕುವುದು ಒಳಿತು. ಈ ಎಲ್ಲಾ ಪ್ರಯತ್ನಗಳ ನಂತರವೂ ಆ ವ್ಯಕ್ತಿಯ ಆರೋಗ್ಯದಲ್ಲಿ ಸ್ವಲ್ಪವೂ ಚೇತರಿಕೆ ಕಾಣದಿದ್ದರೆ, ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. ಅಲರ್ಜಿ ತೀವ್ರವಾದರೆ ಆಮ್ಲಜನಕ ಕೊಡುವ ಅಗತ್ಯವೂ ಬಂದೀತು.

ಇದನ್ನೂ ಓದಿ: Mental Health: ನಿಮ್ಮ ಪ್ರೀತಿಪಾತ್ರರು ಮಾನಸಿಕವಾಗಿ ಕುಗ್ಗಿದಾಗ ಜೊತೆಯಾಗಿರುವುದೆಂದರೆ ಹೀಗೆ!

Exit mobile version